ರಾಮ ಲಕ್ಷ್ಮಣರು ಈಗಿನ ಉತ್ತರ ಭಾರತದ ಅಯೋಧ್ಯೆಯಲ್ಲಿ ಜನಿಸಿದರೆ, ಲವಕುಶರು ದಕ್ಷಿಣ ಭಾರತದ ಇಂದಿನ ಆವನಿ ಕ್ಷೇತ್ರದಲ್ಲಿ ಜನಿಸಿದ್ದಾರೆ. ಹಾಗಾಗಿ ಉತ್ತರ ಭಾರತದ ಅಯೋಧ್ಯೆ ರೀತಿಯಲ್ಲಿ ಕೇಂದ್ರ ಸರ್ಕಾರ ಈ ಕ್ಷೇತ್ರವನ್ನು ಅಭಿವೃದ್ದಿ ಮಾಡಬೇಕು ಅನ್ನೋ ಕೂಗು ಜಿಲ್ಲೆಯ ಜನರಲ್ಲಿ ಕೇಳಿಬರುತ್ತಿದೆ.
ರಾಮ-ಲಕ್ಷ್ಮಣರು ಜನಿಸಿದ ಸ್ಥಳ ಉತ್ತರ ಭಾರತದ ಅಯೋಧ್ಯೆಯಾದರೆ, ಲವ ಕುಶರು ಜನಿಸಿದ ದಕ್ಷಿಣ ಭಾರತದ ಸ್ಥಳ ಅದು ಆವಂತಿಕಾ ಕ್ಷೇತ್ರ. ಸದ್ಯ ಉತ್ತರದಲ್ಲಿ ಅಯೋಧ್ಯೆಗೆ ಎಷ್ಟು ಮಹತ್ವ ಸಿಗುತ್ತಿದೆಯೋ ಅದೇ ರೀತಿ ದಕ್ಷಿಣದ ಈ ಆವಂತಿಕಾ ಕ್ಷೇತ್ರಕ್ಕೂ ಮಹತ್ವ ಸಿಗಬೇಕು ಅಭಿವೃದ್ದಿ ಮಾಡಬೇಕು ಅನ್ನೋ ಮಾತು ಹೇಳಿ ಬರುತ್ತಿದೆ. ಅದರ ಜೊತೆಗೆ ಆವಂತಿಕಾ ಕ್ಷೇತ್ರ ಇಂದಿಗೂ ತನ್ನೊಡಲಲ್ಲಿ ಹತ್ತಾರು ರಾಮಯಾಣ ಕಾಲದ ಕುರುಹಗಳನ್ನಿಟ್ಟುಕೊಂಡು ಜೀವಂತಿಕೆ ಉಳಿಸಿಕೊಂಡಿದೆ.. ಹೇಗಿದೆ ಇವತ್ತಿನ ಆವಂತಿಕಾ ಕ್ಷೇತ್ರ.
ಅಯೋಧ್ಯೆಯ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನ ದೇವಾಲಯದ ನಿರ್ಮಾಣ ಹಾಗೂ ಶ್ರೀರಾಮಚಂದ್ರ ಮೂರ್ತಿಯ ಪ್ರತಿಷ್ಠಾಪನೆ ಕಾರ್ಯಕ್ಕೆ ಇನ್ನೇನು ದಿನಗಣನೆ ಆರಂಭವಾಗಿದೆ. ಈ ನಡುವೆ ರಾಮಾಯಣದ ಚರಿತ್ರೆಯನ್ನು ಸಾರುವ ಸ್ಥಳಗಳಲ್ಲೂ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ತ್ರೇತಾಯುಗ ಕಾಲದ ಆವಂತಿಕಾ ಕ್ಷೇತ್ರ ಇಂದಿನ ಆವನಿ ಗ್ರಾಮ ಸೀತಾಮಾತೆಯ ಮತ್ತು ಶ್ರೀರಾಮನ ಪಾದ ಸ್ಪರ್ಷದಿಂದಾಗಿ ಇಂದಿಗೂ ಸಾಕಷ್ಟು ಪವಾಡಗಳನ್ನು ಪ್ರದರ್ಶಿಸುತ್ತಿದೆ.
ತನ್ನೊಡಲಲ್ಲಿ ಹತ್ತಾರು ರಾಮಾಯಣದ ಕಾಲದ ಕುರುಹುಗಳನ್ನು ಹೊಂದಿದೆ. ಆವನಿ ಎಂದರೆ ಪುಣ್ಯ ಭೂಮಿ, ಸೀತೆಯ ಮತ್ತೊಂದು ಹೆಸರು ಆವನಿ ಅಂದ್ರೆ ಭೂಮಿಯ ಒಡಲಿಂದ ಜನಿಸಿದವಳು. ಇಲ್ಲಿ ರಾಮ ಮತ್ತು ಸೀತಾ ಮಾತೆಯ ಕೆಲವು ಕುರುಹುಗಳು ಇಂದಿಗೂ ಕಾಣಬಹುದು. ಆವಣಿ ಗ್ರಾಮಕ್ಕೆ ಹೊಂದಿಕೊಂಡಿರುವ ಈ ಬೆಟ್ಟದಲ್ಲಿ ಸೀತಾಮಾತೆ ವನವಾಸಕ್ಕೆ ಬಂದಾಗ ವಾಲ್ಮೀಕಿ ಆಶ್ರಮವಾಗಿದ್ದ ಈ ಬೆಟ್ಟದಲ್ಲಿ ವಾಸವಿದ್ದರು ಅನ್ನೋ ಕಾರಣಕ್ಕೆ ಈ ಬೆಟ್ಟವನ್ನು ಸೀತಮ್ಮ ಬೆಟ್ಟ ಎಂದೇ ಕರೆಯಲಾಗುತ್ತದೆ.
ಬೆಟ್ಟದ ಮೇಲೆ ನಾವು ಇಂದಿಗೂ ವಾಲ್ಮಿಕಿ ಆಶ್ರಮದ ಹತ್ತಾರು ಕುರುಹುಗಳನ್ನು ಕಾಣಬಹುದು. ಆವನಿ ಗ್ರಾಮಕ್ಕೆ ಬಂದ ಕೂಡಲೇ ನಿಮಗೆ ಬೆಟ್ಟದ ಆರಂಭದಲ್ಲೇ ಇಲ್ಲಿ ವಾಲ್ಮೀಕಿ ಆಶ್ರಮ ಅನ್ನೋ ಬೋರ್ಡ್ ಕಾಣುತ್ತದೆ. ಅದರಿಂದ ನೀವು ಮುಂದೆ ಸಾಗುತ್ತಾ ಹೋದಂತೆ ಬೃಹತ್ತಾದ ಬೆಟ್ಟದ ಮೇಲೆ ವಾಲ್ಮಿಕಿ ಆಶ್ರಮದ ಕುರುಹುಗಳು ನಿಮಗೆ ಕಾಣುತ್ತವೆ.
ವಾಲ್ಮಿಕಿ ಆಶ್ರಮ, ಲವ ಕುಶರು ಜನಿಸಿದ ಸ್ಥಳ ಹಾಗೂ ಸೀತಾ ಮಾತೆ ವಾಸವಿದ್ದ ಸಣ್ಣದೊಂದು ಮನೆಯೂ ಸಹ ಇಂದಿಗೂ ಕಾಣಬಹುದು. ಇನ್ನು ಇಲ್ಲಿರುವ ಧನುಷ್ಕೋಟೆ ಅನ್ನೋ ಸ್ಥಳ ಸೀತಾಮಾತೆಯನ್ನು ಲಕ್ಷ್ಮಣ ದಂಡಕಾರಣ್ಯದಲ್ಲಿ ಕರೆದುಕೊಂಡು ವನವಾಸಕ್ಕೆ ಬಿಡಲು ಬಂದಾಗ ಸೀತಾಮಾತೆ ಪ್ರಜ್ಞೆ ತಪ್ಪಿ ಬೀಳುತ್ತಾಳೆ. ಆಗ ಲಕ್ಷ್ಮಣ ತನ್ನ ಧನಸ್ಸನ್ನು ಹೂಡಿ ಗಂಗೆಯನ್ನು ತರುತ್ತಾನೆ. ಈ ಸ್ಥಳದಲ್ಲಿ ಅಂದು ಉತ್ಪತ್ತಿಯಾದ ಗಂಗೆಯನ್ನು ಇಂದಿಗೂ ಧನುಷ್ಕೋಟೆಯಲ್ಲಿ ಪಾತಾಳಗಂಗೆಯಾಗಿ ನಾವು ನೋಡಬಹುದು.
ಅದು ವರ್ಷದ 365 ದಿನಗಳ ಕಾಲವೂ ಬತ್ತದೆ, ನೀರು ಇರುತ್ತದೆ. ಇದೇ ಬೆಟ್ಟದ ಮೇಲೆ ಸೀತಾ ಮಾತೆಗೆ ಹೆರಿಗೆ ನೋವು ಬಂದಾಗ ನೋವಿನಿಂದ ಹೊರಳಿದ ಬಂಡೆಯನ್ನು ಹೊರಳುಗುಂಡು ಎಂದು ಕರೆಯಲಾಗುತ್ತದೆ. ಇಂದಿಗೂ ಈ ಸ್ಥಳದಲ್ಲಿ ಮಕ್ಕಳಾಗದವರು, ವಾಮಾಚಾರಕ್ಕೆ ಒಳಗಾದವರು ಈ ಬಂಡೆಯ ಕೆಳಗೆ ಹೊರಳಿದರೆ ಒಳಿತಾಗುತ್ತದೆ ಅನ್ನೋ ನಂಬಿಕೆ ಇದೆ.
ಇನ್ನು ಇದೇ ವಾಲ್ಮಿಕಿ ಆಶ್ರಮದಲ್ಲಿ ಲವಕುಶ ಇಬ್ಬರೂ ವಾಲ್ಮಿಕಿ ಮಹರ್ಷಿಗಳಿಂದ ವಿದ್ಯಾಭ್ಯಾಸ ಕಲಿತು, ಇದೇ ಒಂದು ಬೆಟ್ಟದಲ್ಲಿ ಆಟವಾಡಿ ಬೆಳೆದ ಸ್ಥಳವಾಗಿದೆ. ಇದೇ ಆವಂತಿಕಾ ಕ್ಷೇತ್ರದಲ್ಲಿ ರಾಮ ಲಕ್ಷ್ಮಣ ಮತ್ತು ಲವಕುಶರ ನಡುವೆ ಒಂದು ದೊಡ್ಡ ಕಾಳಗ ಕೂಡಾ ನಡೆದಿದೆ. ಶ್ರೀರಾಮಚಂದ್ರ ಅಶ್ವಮೇಧಯಾಗ ಮಾಡಿದ ಸಂದರ್ಭದಲ್ಲಿ ಲವಕುಶರು ಅಶ್ವದ ಕುದುರೆಯನ್ನು ಕಟ್ಟಿಹಾಕುತ್ತಾರೆ.
ಈ ವೇಳೆ ತಂದೆ ಮಕ್ಕಳ ನಡುವೆಯೇ ಯುದ್ದ ನಡೆದ ಸ್ಥಳ ಕೂಡಾ ಇದೇ ಎಂದು ಹೇಳಲಾಗುತ್ತದೆ. ಇನ್ನು ಬೆಟ್ಟದ ಮೇಲೆ ಸೀತಾ ಮಾತೆ ಪೂಜೆ ಮಾಡುತ್ತಿದ್ದ ಪಾರ್ವತಿ ದೇವಸ್ಥಾನ ಇದೆ, ಈ ದೇವಾಲಯವನ್ನು ಸೀತಾಪಾರ್ವತಿ ದೇವಸ್ಥಾನ ಎಂದು ಕರೆಯಲಾಗುತ್ತದೆ.ಇದೇ ಸ್ಥಳದಲ್ಲಿ ಸೀತಾಮಾತೆಯನ್ನು ಶ್ರೀರಾಮಚಂದ್ರ ಬಂದು ಕರೆದಾಗ ಸೀತಾಮಾತೆ ನಿರಾಕರಿಸಿ, ಲವಕುಶರನ್ನು ಶ್ರೀರಾಮಚಂದ್ರನಿಗೆ ಒಪ್ಪಿಸಿ ಭೂಮಿಗೆ ಒಳಗೆ ಅಂತರ್ಮುಖಿಯಾದ ಸ್ಥಳವೆಂದು ಹೇಳಲಾಗುತ್ತದೆ.
ಇನ್ನು ಇದಿಷ್ಟು ವಾಲ್ಮಿಕಿ ಆಶ್ರಮದಲ್ಲಿ ಸೀತಾಮಾತೆ ವನವಾಸಕ್ಕೆ ಹೋದಾಗ ಸಿಗುವ ಕುರುಹುಗಳಾದರೆ, ಶ್ರೀರಾಮಚಂದ್ರನ ಅಶ್ವ ಮೇಧದ ಕುದುರೆಯನ್ನು ಕಟ್ಟಿಹಾಕಿದ್ದ ಲವಕುಶರ ನಡುವೆ ನಡೆದ ಯುದ್ದದ ನಂತರ ರಾಮ, ಲಕ್ಷ್ಮಣ, ಭರತ, ಶತ್ರುಜ್ಞ ಹಾಗೂ ವಾಲಿ ಸುಗ್ರೀವರು ಶಿವಲಿಂಗಗಳನ್ನು ಪ್ರತಿಷ್ಠಾಪನೆ ಮಾಡಿದ್ರು ಅನ್ನೋ ಪ್ರತೀತಿ ಇದೆ.
ಅದಕ್ಕೆ ತಕ್ಕಂತೆ ಇಂದಿಗೂ ಅವರು ಪ್ರತಿಷ್ಠಾಪನೆ ಮಾಡಿರುವ ರಾಮಲಿಂಗೇಶ್ವರ, ಭರತ ಲಿಂಗೇಶ್ವರ, ಲಕ್ಷ್ಮಣ ಲಿಂಗೇಶ್ವರ, ಶತ್ರುಜ್ಞ ಲಿಂಗೇಶ್ವರ ಲಿಂಗಗಳು ನಮಗೆ ಕಾಣಸಿಗುತ್ತದೆ. ಇಂದಿಗೂ ರಾಮಾಯಣ ಕಾಲದ ಜೀವಂತಿಕೆಯನ್ನು ಉಳಿಸಿಕೊಂಡು ಈ ಕ್ಷೇತ್ರ ಸಹಸ್ರಾರು ಜನರ ಭಕ್ತಿಯ ಆರಾಧನೆಯ ಕೇಂದ್ರವಾಗಿ ನಿಂತಿದೆ.
ಹಾಗಾಗಿಯೇ ರಾಮ ಲಕ್ಷ್ಮಣರು ಈಗಿನ ಉತ್ತರ ಭಾರತದ ಅಯೋಧ್ಯೆಯಲ್ಲಿ ಜನಿಸಿದರೆ, ಲವಕುಶರು ದಕ್ಷಿಣ ಭಾರತದ ಇಂದಿನ ಆವನಿ ಕ್ಷೇತ್ರದಲ್ಲಿ ಜನಿಸಿದ್ದಾರೆ. ಹಾಗಾಗಿ ಉತ್ತರ ಭಾರತದ ಅಯೋಧ್ಯೆ ರೀತಿಯಲ್ಲಿ ಕೇಂದ್ರ ಸರ್ಕಾರ ಈ ಕ್ಷೇತ್ರವನ್ನು ಅಭಿವೃದ್ದಿ ಮಾಡಬೇಕು ಅನ್ನೋ ಕೂಗು ಜಿಲ್ಲೆಯ ಜನರಲ್ಲಿ ಕೇಳಿಬರುತ್ತಿದೆ.
ಒಟ್ಟಾರೆ ರಾಮಾಯಣ ನಡೆದು ಯುಗ ಯುಗಗಳೇ ಕಳೆದರೂ ಕೂಡಾ ರಾಮಾಯಣದ ಹತ್ತಾರು ಜೀವಂತ ನಿದರ್ಶನಗಳು ನಮಗೆ ಇಲ್ಲಿ ಕಾಣಸಿಗುತ್ತವೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಪ್ರತಿಷ್ಠಾಪನೆಗೆ ಇನ್ನೇನು ದಿನಗಣನೆ ಆರಂಭವಾಗಿರುವ ಈ ಸಂದರ್ಭದಲ್ಲಿ ಹಿಂದೂಗಳಿಗೆ ಹೆಮ್ಮೆಯ ವಿಚಾರ, ಇಂತಹ ಸಂದರ್ಭದಲ್ಲಿ ಮರ್ಯಾದಾಪುರುಷ ಶ್ರೀರಾಮಚಂದ್ರನ ಕುಟುಂಬ ಕೋಲಾರ ಜಿಲ್ಲೆಯ ಮಣ್ಣಿನಲ್ಲಿ ಪಾದಸ್ಪರ್ಶವಾಗಿದೆ ಅನ್ನೋದು ಜಿಲ್ಲೆಯ ಜನರಿಗೆ ಪುಣ್ಯದ ವಿಷಯ ಅಂದರೆ ತಪ್ಪಾಗೋದಿಲ್ಲ.