ಸಂಕ್ರಾಂತಿ ಹಬ್ಬದ ದಿನವೇ ನಮ್ಮ ಕುಟುಂಬಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಕೆತ್ತನೆ ಶುರುಮಾಡಿದ ದಿನದಿಂದಲೇ ಯೋಗಿರಾಜ್ ಮೂರ್ತಿಯೆ ಆಯ್ಕೆಯಾಗಬಹುದು ಎಂಬುದಾಗಿ ಅನಿಸಿತ್ತು. ಅರುಣ್ ಕುಟುಂಬದ ಹೆಸರನ್ನು ಉಳಿಸಿದ್ದಾರೆ ಎಂದು ಅವರ ಪತ್ನಿ ವಿಜೇತ ತಿಳಿಸಿದ್ದಾರೆ.
ಅಯೋಧ್ಯೆಯ ರಾಮ ಮಂದಿರಕ್ಕಾಗಿ (Ayodhya Ram Mandir) ರಾಮಲಲ್ಲಾ ಮೂರ್ತಿ (Ram Lalla Idol) ಕೆತ್ತನೆ ಮಾಡುವ ಸಂದರ್ಭದಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಕಣ್ಣಿಗೆ ಗಾಯವಾಗಿ ಆಪರೇಷನ್ ಮಾಡಲಾಗಿತ್ತು. ಕಲ್ಲಿನ ಚೂರು ಕಣ್ಣಿಗೆ ಬಿದ್ದಿದ್ದರಿಂದ ಗಾಯವಾಗಿತ್ತು. ಆ ನೋವಿನಲ್ಲೂ ಅವರು ಕೆಲಸ ಮಾಡಿದ್ದರು ಎಂದು ಅವರ ಪತ್ನಿ ವಿಜೇತ (Vijetha) ಮಾಹಿತಿ ನೀಡಿದ್ದಾರೆ. ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿರುವ ಮೂರ್ತಿಯನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಂತಿಮಗೊಳಿಸಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ ಬಗ್ಗೆ ಮಾತನಾಡಿದ ಅವರು, ನಾನು ಮೂರ್ತಿ ಮಾಡಲಿಲ್ಲ ದೇವರೇ ಮೂರ್ತಿಯನ್ನು ಮಾಡಿಸಿದ್ದು ಎಂದು ಅರುಣ್ ಹೇಳುತ್ತಿದ್ದರು ಎಂಬುದಾಗಿ ತಿಳಿಸಿದ್ದಾರೆ.
ಸಂಕ್ರಾಂತಿ ದಿನವೇ ಸಿಹಿ ಸುದ್ದಿ ಸಿಕ್ಕಿತು : ವಿಜೇತ
ಸಂಕ್ರಾಂತಿ ಹಬ್ಬದ ದಿನವೇ ನಮ್ಮ ಕುಟುಂಬಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಕೆತ್ತನೆ ಶುರುಮಾಡಿದ ದಿನದಿಂದಲೇ ಯೋಗಿರಾಜ್ ಮೂರ್ತಿಯೆ ಆಯ್ಕೆಯಾಗಬಹುದು ಎಂಬುದಾಗಿ ಅನಿಸಿತ್ತು. ಅರುಣ್ ಕುಟುಂಬದ ಹೆಸರನ್ನು ಉಳಿಸಿದ್ದಾರೆ. ನಮಗೆ ಇದು ಹೆಮ್ಮೆಯ ವಿಚಾರ. ಅರುಣ್ ತಂದೆ ಹಾಗೂ ತಾತ ಇಬ್ಬರೂ ಶಿಲ್ಪಿಗಳೇ. ತಂದೆ ರಾಷ್ಟ್ರೀಯ ಪ್ರಶಸ್ತಿ ವಿಜೇತರು ಎಂದು ವಿಜೇತ ಹೇಳಿದ್ದಾರೆ.
ರಾಮಲಲ್ಲಾ ಮೂರ್ತಿ ಬಹಳ ಸುಂದರವಾಗಿ ಮೂಡಿ ಬಂದಿದೆ. ಐದು ವರ್ಷದ ಬಾಲಕನ ರೀತಿ ಭಾವ ಇದೆ. ಅದನ್ನು ಕೆತ್ತನೆ ಮಾಡುವ ಸಂದರ್ಭದಲ್ಲಿ ಅರುಣ್ ಸಾಕಷ್ಟು ಅಧ್ಯಯನ ಮಾಡಿದ್ದರು. ಮಕ್ಕಳ ಭಾವ, ದೇಹದ ರೂಪವನ್ನು ಗಮನಿಸುತ್ತಿದ್ದರು. ಮೂರ್ತಿ ಕೆತ್ತನೆ ಬಹಳ ಕಷ್ಟದ ಕೆಲಸವಾಗಿತ್ತು. ಕಾಲ್ಪನಿಕವಾಗಿದ್ದರಿಂದ ಹೇಗೆ ಮೂಡಿ ಬರಬಹುದು ಅಂತ ಗೊತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, ಅರುಣ್ ಯೋಗಿರಾಜ್ ಕೆತ್ತನೆ ಮಾಡಿರುವ ಮೂರ್ತಿ ಆಯ್ಕೆಯಾಗಿರುವುದಕ್ಕೆ ಅವರ ತಾಯಿ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ. ಕಳೆದ ಆರು ತಿಂಗಳು ಆತ ಏನು ಮಾಡಿದ್ದನೋ ಅದಕ್ಕೆ ಈಗ ಫಲಿತಾಂಶ ಬಂದಿದೆ. ನನಗೆ ತುಂಬಾ ಖುಷಿಯಾಗಿದೆ ಎಂದು ಅವರು ಹೇಳಿದ್ದಾರೆ.
ಅರುಣ್ ಯೋಗಿರಾಜ್ ಕೆತ್ತನೆ ಮಾಡಿರುವ ಮೂರ್ತಿಯೇ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗಲಿದೆ ಎಂಬುದು ಈ ಹಿಂದೆಯೇ ಬಹಿರಂಗಗೊಂಡಿತ್ತು. ಆದರೆ, ಅಧಿಕೃತ ಘೋಷಣೆಯಾಗಿರಲಿಲ್ಲ. ಈ ಬಗ್ಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸೋಮವಾರ ಅಧಿಕೃತ ಘೋಷಣೆ ಮಾಡಿತ್ತು.