ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಸಂಪುಟ ದರ್ಜೆ ಸ್ಥಾನಮಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದರು. ಶನಿವಾರ ಈ ಕುರಿತ ಸರ್ಕಾರದಿಂದ ಆದೇಶ ಪ್ರಕಟವಾಗಿತ್ತು.
ಭಾನುವಾರ ತಮಗೆ ನೀಡಿರುವ ಸಂಪುಟ ದರ್ಜೆ ಸ್ಥಾನಮಾನ ಹಿಂಪಡೆಯಬೇಕು ಎಂದು ಯಡಿಯೂರಪ್ಪ ಹೇಳಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರವನ್ನು ಸಹ ಬರೆದಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಿಗೆ ನೀಡಲಾಗುವ ಸರ್ಕಾರಿ ಸೌಲಭ್ಯಗಳನ್ನು ಮಾತ್ರ ತಮಗೆ ನೀಡಿ. ಸಂಪುಟ ದರ್ಜೆಯ ಸ್ಥಾನಮಾನವನ್ನು ನೀಡಿ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಕೋರುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರದಲ್ಲಿ ಏನಿದೆ?; ಬಿ. ಎಸ್. ಯಡಿಯೂರಪ್ಪ ನಿಕಟ ಪೂರ್ವ ಮುಖ್ಯಮಂತ್ರಿ ಲೆಟರ್ ಹೆಡ್‌ನಲ್ಲಿ 8/8/2021ರಂದು ಬಸವರಾಜ ಬೊಮ್ಮಾಯಿ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಇವರಿಗೆ ಪತ್ರವನ್ನು ಬರೆಯಲಾಗಿದೆ.
ಟಿಪ್ಪಣಿ ದಿನಾಂಕ 7/8/2021ರಲ್ಲಿ ಹೊರಡಿಸಿರುವ ಸರ್ಕಾರದ ಆದೇಶದಲ್ಲಿ ಶ್ರೀ ಬಿ. ಎಸ್. ಯಡಿಯೂರಪ್ಪ ಮಾನ್ಯ ನಿಕಟಪೂರ್ವ ಮುಖ್ಯಮಂತ್ರಿಗಳು ಇವರಿಗೆ ನೂತನವಾಗಿ ಪದಾರೋಹಣ ಮಾಡಿದ ಮುಖ್ಯಮಂತ್ರಿಗಳು ಪದವಿಯ ಅವಧಿ ಇರುವವರೆಗೆ ಸಂಪುಟ ದರ್ಜೆಯ ಸಚಿವರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ನೀಡಿ ಆದೇಶಿಸಿದೆ.
ಈ ಹಿಂದೆ ನಿಕಟಪೂರ್ವ ಮುಖ್ಯಮಂತ್ರಿಗಳಿಗೆ ಸರ್ಕಾರದಿಂದ ನೀಡುವ ಸೌಲಭ್ಯಗಳು ಮಾತ್ರ ನನಗೆ ನೀಡಬೇಕಾಗಿ ಹಾಗೂ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಈ ಮೂಲಕ ಕೋರುತ್ತೇನೆ.
ಯಡಿಯೂರಪ್ಪನವರಿಗೆ ಕ್ಯಾಬಿನೆಟ್ ಸ್ಥಾನಮಾನ ನೀಡಿದ್ದ ಬಗ್ಗೆ ಪ್ರತಿಕ್ರಿಯಿಸಿದ್ದ ಬಸವರಾಜ್ ಬೊಮ್ಮಾಯಿ
ಸಚಿವ ಸಂಪುಟ ದರ್ಜೆ ಸೌಲಭ್ಯವನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಾಪಸ್ ನೀಡಿದ್ದಾರೆ. ಯಡಿಯೂರಪ್ಪ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಾನೇ ಯಡಿಯೂರಪ್ಪನವರಿಗೆ ಹೇಳೋಣ ಅಂದುಕೊಂಡಿದ್ದೆ. ನಾನು ಹೇಳುವ ಮೊದಲೇ ಯಡಿಯೂರಪ್ಪ ವಾಪಸ್ ಮಾಡಿದ್ದಾರೆ. ಅದು ಒಳ್ಳೆಯ ನಿರ್ಧಾರವಾಗಿದೆ. ಸಂಪುಟ ದರ್ಜೆ ಸ್ಥಾನಮಾನವನ್ನೊಪ್ಪದೇ ಯಡಿಯೂರಪ್ಪ ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಈ ಮೂಲಕ ಯಡಿಯೂರಪ್ಪ ಸಂಪುಟ ದರ್ಜೆ ಸ್ಥಾನವನ್ನು ನಿರಾಕರಿಸಿರುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಯಡಿಯೂರಪ್ಪ ನಿರ್ಧಾರವನ್ನು ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ.