ಬಿಗ್ ಬ್ರೇಕಿಂಗ್: ಬಿವೈ ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ? ಹೈಕಮಾಂಡ್ ನಿಂದ ಮಹತ್ವದ ನಿರ್ಧಾರವೇನು ಗೊತ್ತಾ?

in Kannada News/News 729 views

ಬೆಂಗಳೂರು: ಜುಲೈ ತಿಂಗಳಿನಲ್ಲಿ ಕರ್ನಾಟಕ ಬಿಜೆಪಿಯಲ್ಲಿ ಭಾರೀ ಬದಲಾವಣೆ ನಡೆದಿದೆ. ಮುಖ್ಯಮಂತ್ರಿಯಾಗಿದ್ದ ಬಿ. ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ್ದು, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. ಸಂಪುಟ ರಚನೆ ಮಾಡಿ ಆಡಳಿತವನ್ನು ಆರಂಭಿಸಿದ್ದಾರೆ. ಈಗ ಹೈಕಮಾಂಡ್ ನಾಯಕರು ಪಕ್ಷ ಸಂಘಟನೆಯತ್ತ ಗಮನವನ್ನು ಹರಿಸಿದ್ದಾರೆ.

2023ರ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಹೈಕಮಾಂಡ್ ನಾಯಕರು ಪಕ್ಷದಲ್ಲಿಯೂ ಹಲವು ಬದಲಾವಣೆಗಳನ್ನು ಮಾಡಲು ಮುಂದಾಗಿದ್ದಾರೆ. ರಾಜ್ಯಾಧ್ಯಕ್ಷ ಸೇರಿದಂತೆ ಹಲವಾರು ಹುದ್ದೆಗಳು ಬದಲಾಗುವ ನಿರೀಕ್ಷೆ ಇದೆ. ಹಿರಿಯ ನಾಯಕರನ್ನು ಪಕ್ಷ ಸಂಘಟನೆಗೆ ತೊಡಗಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ.

120ಕ್ಕಿಂತಲೂ ಅಧಿಕ ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯಬೇಕು ಎಂಬುದು ಬಿಜೆಪಿಯ ಗುರಿಯಾಗಿದೆ. ಚುನಾವಣೆಗೆ 2 ವರ್ಷಗಳು ಬಾಕಿ ಇದೆ, ನಾಯಕತ್ವ ಬದಲಾವಣೆ ಮುಂದಿನ ಚುನಾವಣೆ ಮೇಲೆ ಪರಿಣಾಮ ಬೀರಬಾರದು ಎಂಬುದು ಹೈಕಮಾಂಡ್ ನಾಯಕರ ಲೆಕ್ಕಾಚಾರವಾಗಿದೆ.

ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಪಕ್ಷದಲ್ಲಿ ಸ್ಥಾನಮಾನ ನೀಡಲಾಗುತ್ತದೆಯೇ?, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಹುದ್ದೆ ಬದಲಾವಣೆಯಾಗಲಿದೆಯೇ? ಕಾದು ನೋಡಬೇಕು. ಬೆಂಗಳೂರಿನ ನಾಯಕನಿಗೆ ರಾಜ್ಯಾಧ್ಯಕ್ಷ ಪಟ್ಟ ಒಲಿಯಲಿದೆ ಎಂಬ ಮಾತು ಪಕ್ಷದ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿದೆ.

ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ

ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ, ಯಡಿಯೂರಪ್ಪ ಬೆಂಬಲಿಗರಾದ ಅನೇಕ ಶಾಸಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಪಕ್ಷದ ಪ್ರಮುಖ ಹುದ್ದೆಗಳಲ್ಲಿ ತಮ್ಮ ಬೆಂಬಲಿಗರಿಗೆ ಸ್ಥಾನ ಕೊಡಿಸಲು ಯಡಿಯೂರಪ್ಪ ಪ್ರಯತ್ನ ನಡೆಸಲಿದ್ದಾರೆ. ಚುನಾವಣೆ ಎದುರಾಗುವುದರಿಂದ ಪಕ್ಷ ಸಂಘಟನೆಗೆ ಸಕ್ರಿಯ ಪದಾಧಿಕಾರಿಗಳನ್ನು ನೇಮಿಸಲು ಹೈಕಮಾಂಡ್ ಚಿಂತನೆ ನಡೆಸಿದೆ.

ವಿಜಯೇಂದ್ರ ಸ್ಥಾನ ಬದಲಾಗಲಿದೆ?

ಪ್ರಸ್ತುತ ಬಿ. ವೈ. ವಿಜಯೇಂದ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ. ಇದು ರಾಜ್ಯಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಕೆಳಗಿನ ಹುದ್ದೆಯಾಗಿದೆ. ಪಕ್ಷದ ಮೂಲಗಳ ಮಾಹಿತಿ ಪ್ರಕಾರ ವಿಜಯೇಂದ್ರ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗುವ ಸಾಧ್ಯತೆ ಇದೆ. ಪ್ರಧಾನ ಕಾರ್ಯದರ್ಶಿಯಾದರೆ ಮುಂಬರುವ ಚುನಾವಣೆಯಲ್ಲಿ ಅವರು ಪ್ರಮುಖ ಪಾತ್ರವನ್ನು ನಿರ್ವಹಣೆ ಮಾಡಲಿದ್ದಾರೆ. ವಿಜಯೇಂದ್ರ ಹುದ್ದೆ ಬದಲಾವಣೆ ಮಾಡಿ ಯುವಕರನ್ನು ಪಕ್ಷದತ್ತ ಸೆಳೆಯುವುದು ಸಹ ಹೈಕಮಾಂಡ್ ಲೆಕ್ಕಾಚಾರವಾಗಿದೆ.

ನಳಿನ್ ಕುಮಾರ್ ಕಟೀಲ್ ಬದಲಾವಣೆ?

ಬಿ. ಎಸ್.‌ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಕೈ ಹಾಕಿತು. ಆಗ ಪ್ರಬಲವಾಗಿ ಕೇಳಿ ಬಂದ ಹೆಸರು ಸಿ. ಟಿ. ರವಿ ಮತ್ತು ಅರವಿಂದ ಲಿಂಬಾವಳಿ. ಆದರೆ ಅಚ್ಚರಿಯ ಸಂಗತಿ ಎಂಬಂತೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷರಾದರು. ಪ್ರಸ್ತುತ ರಾಜ್ಯಾಧ್ಯಕ್ಷರ ಬದಲಾವಣೆಯಾದರೆ ಬೆಂಗಳೂರಿನ ನಾಯಕರಿಗೆ ರಾಜ್ಯಾಧ್ಯಕ್ಷ ಪಟ್ಟ ಸಿಗಲಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.

ಅರವಿಂದ ಲಿಂಬಾವಳಿ ಪಕ್ಷ ಸಂಘಟನೆ

ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಬೆಂಗಳೂರಿನ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿಗೆ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ. ಕೇವಲ ಆರು ತಿಂಗಳು ಮಾತ್ರ ಅವರು ಸಚಿವರಾಗಿದ್ದರು. ಅವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಬಸವರಾಜ ಬೊಮ್ಮಯಿ ಸರ್ಕಾರ ಒಂದು ವರ್ಷ ಪೂರ್ಣಗೊಳಿಸುತ್ತಿದ್ದಂತೆಯೇ ಪಕ್ಷದಲ್ಲಿಯೂ ಹಲವು ಬದಲಾವಣೆಗಳನ್ನು ತರಲು ಕೇಂದ್ರ ನಾಯಕರು ಮುಂದಾಗಿದ್ದಾರೆ.

ಶೆಟ್ಟರ್, ಸದಾನಂದ ಗೌಡ, ಯೋಗೀಶ್ವರ್

ಸಂಪುಟ ಪುನಾರಚನೆ ಬಳಿಕ ಜಗದೀಶ್ ಶೆಟ್ಟರ್, ಸಿ. ಪಿ. ಯೋಗೀಶ್ವರ್ ಸೇರಿದಂತೆ ಹಲವು ನಾಯಕರಿಗೆ ಸಚಿವ ಸ್ಥಾನ ಕೈತಪ್ಪಿದೆ. ಈ ನಾಯಕರನ್ನು ಪಕ್ಷ ಸಂಘಟನೆಗೆ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಮಾಜಿ ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಸಹ ಕರ್ನಾಟಕದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗುವ ಸಾಧ್ಯತೆ ಇದೆ.

Advertisement
Share this on...