ಬಾಲಿವುಡ್ ಖ್ಯಾತ ನಟ ರಣಬೀರ್ ಕಪೂರ್ ಇದೇ ಮೊದಲ ಬಾರಿಗೆ ಪಾತ್ರವೊಂದಕ್ಕಾಗಿ ತರಬೇತಿ ಪಡೆಯುತ್ತಿದ್ದಾರಂತೆ. ರಾಮಯಾಣ ಸಿನಿಮಾದಲ್ಲಿ ಇವರು ರಾಮನ ಪಾತ್ರ ನಿರ್ವಹಿಸುತ್ತಿದ್ದು, ಈ ಪಾತ್ರಕ್ಕಾಗಿ ಹಲವು ಬಗೆಯ ತರಬೇತಿಯನ್ನು ರಣಬೀರ್ ಪಡೆದುಕೊಳ್ಳುತ್ತಿದ್ದಾರಂತೆ. ರಾಮನ ಪಾತ್ರವೆಂದರೆ, ಅದು ಸಾಮಾನ್ಯವಾದದ್ದಲ್ಲ. ಹಾಗಾಗಿ ಈ ತರಬೇತಿ ಅಗತ್ಯವಿದೆಯಂತೆ.
ಈ ರಾಮಾಯಣ ಸಿನಿಮಾ ಬಗ್ಗೆ ದಿನಕ್ಕೊಂದು ಮಾಹಿತಿ ಹೊರ ಬೀಳುತ್ತಿದೆ. ನಿರ್ದೇಶಕ ನಿತಿಶ್ ತಿವಾರಿ ದಕ್ಷಿಣದ ಹೀರೋಗಳ ಬಗ್ಗೆ ಒಲವು ತೋರಿ, ಇಲ್ಲಿನ ಕಲಾವಿದರನ್ನು ತಮ್ಮ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ತಮಿಳಿನ ಹೆಸರಾಂತ ನಟ ವಿಜಯ್ ಸೇತುಪತಿ ಕೂಡ ಈ ಸಿನಿಮಾದಲ್ಲಿ ರಾವಣನ ಸಹೋದರನಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ರಾವಣನ ಸಹೋದರನಾಗಿ ವಿಜಯ್ ಸೇತುಪತಿ ನಟಿಸಿದರೆ, ಈ ಹಿಂದೆ ರಾವಣನಾಗಿ ಕನ್ನಡದ ನಟ ಯಶ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ದೊಡ್ಡ ಸುದ್ದಿ ಆಗಿತ್ತು. ಸಾಕಷ್ಟು ಬಾರಿ ಈ ವಿಚಾರ ಮುನ್ನೆಲೆಗೆ ಬಂದರೂ, ಯಶ್ ಮಾತ್ರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೂ, ಈ ಸುದ್ದಿ ಹರಿದಾಡುವುದು ತಪ್ಪಿಲ್ಲ.
ಯಶ್ ಏನೂ ಹೇಳದೇ ಇದ್ದರೂ, ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಮಧು ಮಾಂಟೇನ್ ಅವರು ಯಶ್ ಈ ಸಿನಿಮಾದಲ್ಲಿ ಇರಲಿದ್ದಾರೆ ಎಂದು ಈ ಹಿಂದೆಯೇ ಹೇಳಿದ್ದರು. ಅವರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದೂ ಮಾತನಾಡಿದ್ದರು. ಅದು ಈಗ ನಿಜವಾದಂತೆ ಕಾಣುತ್ತಿದೆ. ಈಗಾಗಲೇ ಯಶ್ ಲುಕ್ ಟೆಸ್ಟ್ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಸಿಗುತ್ತಿದೆ. ಈ ಸಿನಿಮಾಗಾಗಿ ಅವರು 15 ದಿನಗಳ ಕಾಲ ಕಾಲ್ ಶೀಟ್ ಕೂಡ ನೀಡಿದ್ದಾರೆ ಎನ್ನುವುದು ತಾಜಾ ಮಾಹಿತಿ.
ನಿತಿಶ್ ತಿವಾರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಸತತ ಮೂರ್ನಾಲ್ಕು ವರ್ಷಗಳಿಂದ ಈ ಚಿತ್ರಕ್ಕಾಗಿ ತಿವಾರಿ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ 2024ರಲ್ಲಿ ಈ ಸಿನಿಮಾ ಸೆಟ್ಟೇರಬಹುದು ಎಂದು ಅಂದಾಜಿಸಲಾಗಿದೆ. ರಾವಣನಾಗಿ ಯಶ್ ನಟಿಸಿದರೆ, ಶ್ರೀರಾಮನ ಪಾತ್ರವನ್ನು ರಣಬೀರ್ ಕಪೂರ್ ನಿರ್ವಹಿಸಲಿದ್ದಾರೆ. ಸೀತೆ ಪಾತ್ರವು ಸಾಯಿ ಪಲ್ಲವಿ ಅವರ ಪಾಲಾಗಿದೆ.
ಸದ್ಯ ಯಶ್ ಹೊಸ ಸಿನಿಮಾದ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ. ಅಲ್ಲದೇ ದೇಶ ವಿದೇಶ ಸುತ್ತುತ್ತಿದ್ದಾರೆ. ಸದ್ಯದಲ್ಲೇ ಹೊಸ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆ. ರಾಮಾಯಣ ಸಿನಿಮಾ ಶುರುವಾಗುವ ಹೊತ್ತಿಗೆ ಹೊಸ ಸಿನಿಮಾದ ಬಹುತೇಕ ಕೆಲಸ ಮುಗಿಯುವ ಸಾಧ್ಯತೆ ಇದ್ದು, ಅದಕ್ಕಾಗಿ ಈ ಸಿನಿಮಾವನ್ನು ಯಶ್ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.