ನವದೆಹಲಿ: ದೇಶಾದ್ಯಂತ ರಾಮಮಂದಿರ (Ram Mandir) ಉದ್ಘಾಟನೆಯನ್ನು ಕಣ್ತುಂಬಿಕೊಂಡಿದ್ದಾರೆ. ಐದು ಶತಮಾನಗಳ ಕಾಲ ಭಾರತೀಯರು ಕಾಯುತ್ತಿದ್ದ ಶ್ರೀರಾಮನ ಮಂದಿರ ಇಂದು ಸಕಾರಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರಾಣ ಪ್ರತಿಷ್ಠಾನ (Pran Pratisthan) ಕಾರ್ಯವನ್ನು ನೆರವೇರಿಸಿದರು. ಈ ಮದುರ ಕ್ಷಣವನ್ನು ಕೋಟ್ಯಂತರ ಭಾರತೀಯರು, ಸಿನಿಮಾ ನಟರು, ಕ್ರಿಕೆಟಿಗರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಸ್ ಕನೇರಿಯಾ ಕೂಡ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯನ್ನು ಸಂಭ್ರಮವನ್ನು ಆಚರಿಸಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾನ ನೆರೆವೇರುತ್ತಿದ್ದಂತೆ ಕನೇರಿಯಾ ಹಣೆಗೆ ತಿಲಕವನ್ನಿಟ್ಟುಕೊಂಡು ನೃತ್ಯ ಮಾಡಿ, ಪ್ರಾರ್ಥನೆ ಸಲ್ಲಿಸಿ ಸಂಭ್ರಮಿಸಿರುವ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಮೆರಿಕಾದಲ್ಲಿ ದೇವಾಲಯಕ್ಕೆ ಭೇಟಿ
ಅಮೆರಿಕಾದ ಹಾಸ್ಟನ್ನಲ್ಲಿರುವ ಶ್ರೀರಾಮನ ದೇವಾಲಯದಲ್ಲಿ ಸಾವಿರಾರು ಹಿಂದೂಗಳ ಜೊತೆಗೂಡಿದ ಪಾಕಿಸ್ತಾನದ ಏಕೈಕ ಹಿಂದೂ ಕ್ರಿಕೆಟರ್ ಇತರೆ ಭಕ್ತರೊಂದಿಗೆ ಸೇರಿ ರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವನ್ನುಪಟಾಕಿ ಸಿಡಿಸಿ ಆಚರಿಸಿದರು. ತಮ್ಮ ಪತ್ನಿಯೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದ ಕನೇರಿಯಾ ಐತಿಹಾಸಿಕ ಸಂದರ್ಭವನ್ನು ಶ್ಲಾಘಿಸಿದರು. 500 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಅಯೋಧ್ಯೆಗೆ ರಾಮನ ಆಗಮನದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಪ್ರಾಣ್ ಪ್ರತಿಷ್ಠಾ ಸಮಾರಂಭಕ್ಕೆ ಶುಭ ಹಾರೈಸಿ ಸಂಭ್ರಮಿಸಿದ ಏಕೈಕ ಭಾರತೀಯೇತರ ಕ್ರಿಕೆಟಿಗ ಎನಿಸಿಕೊಂಡರು.
ಇನ್ನು ಭಾನುವಾರ, ಹಿಂದೂ ಧರ್ಮಕ್ಕೆ ಸೇರಿರುವ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಕೇಶವ್ ಮಹಾರಾಜ್ ಕೂಡ ಅಯೋಧ್ಯೆಯಲ್ಲಿ ರಾಮಮಂದಿರ ‘ಪ್ರಾಣ ಪ್ರತಿಷ್ಠಾ’ ಸಮಾರಂಭ ನಡೆಯುವುದರ ಕುರಿತು ಶುಭ ಹಾರೈಸಿದ್ದರು. ಪ್ರಸ್ತುತ ಡರ್ಬನ್ ಸೂಪರ್ ಜೈಂಟ್ಸ್ಗಾಗಿ SA20 ನಲ್ಲಿ ಆಡುತ್ತಿರುವ ಎಡಗೈ ಸ್ಪಿನ್ನರ್, ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ನಲ್ಲಿ ವಿಡಿಯೋ ಪೋಸ್ಟ್ ಮಾಡಿ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಹಾರೈಸಿದ್ದರು.
ಇನ್ನೂ ಭಾರತೀಯ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವೆಂಕಟೇಶ್ ಪ್ರಸಾದ್, ರವೀಂದ್ರ ಜಡೇಜಾ ಸೇರಿ ಹಲವು ಕ್ರಿಕೆಟಿಗರು ಅಯೋಧ್ಯೆಗೆ ಭೇಟಿ ನೀಡಿದ್ದರು.