ವಲಸೆ ಶಾಸಕರ ಬಾಯಿ ಮುಚ್ಚಿಸಲು ಖಡಕ್ ಹೇಳಿಕೆ ಕೊಟ್ಟ ಅವರದೇ ತಂಡದ ಸದಸ್ಯ ಮುನಿರತ್ನ: ವಲಸಿಗ ಶಾಸಕರಿಗೆ ಅವರು‌‌ ಕೊಟ್ಟ ಸಲಹೆಯೇನು ನೋಡಿ

in Kannada News/News 220 views

ತುಮಕೂರು: ‘ತ್ಯಾಗಮಾಡಿ ಬಂದಿದ್ದೇವೆ. ನಮ್ಮಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ’ ಎಂಬ ವಿಚಾರವನ್ನೇ ಎಷ್ಟು ದಿನಗಳ ಕಾಲ ಹೇಳಿಕೊಂಡು ಓಡಾಡುತ್ತೀರಿ ಎಂದು ತೋಟಗಾರಿಕೆ ಸಚಿವ ಮುನಿರತ್ನ ಅಸಮಾಧಾನ ವ್ಯಕ್ತಪಡಿಸಿದರು.

ತಮ್ಮ ಜತೆಯಲ್ಲಿ ಪಕ್ಷ ತೊರೆದು ಬಂದು ಬಿಜೆಪಿ ಸೇರಿದವರು ಸಚಿವರಾದ ನಂತರ ಇಂತಹುದೇ ಖಾತೆ ಕೊಡಬೇಕು ಎಂದು ಕ್ಯಾತೆ ತೆಗೆದಿರುವುದನ್ನು ವಿರೋಧಿಸಿದರು.

ಸಿದ್ಧಗಂಗಾ ಮಠಕ್ಕೆ ಭಾನುವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಆಗ ತ್ಯಾಗ ಮಾಡಿದ್ದೇವೆ. ಈಗ ದೊಡ್ಡ ಖಾತೆಯೇ ಬೇಕು ಎಂದು ಕೇಳುವುದು ತಪ್ಪು. ಬಿಜೆಪಿಗೆ ನಮ್ಮಗಳ ಕೊಡುಗೆ ಏನೂ ಇಲ್ಲ. ನಾವಿದ್ದ ಪಕ್ಷಕ್ಕೆ ರಾಜೀನಾಮೆ ನೀಡಿ, ಇಲ್ಲಿಗೆ ಬಂದಿದ್ದೇವೆ. ನಂತರ ಶಾಸಕರನ್ನು ಮಾಡಿ, ಈಗ ಸಚಿವ ಸ್ಥಾನ ಕೊಟ್ಟಿದ್ದಾರೆ. ಬಂದ ತಕ್ಷಣ ದೊಡ್ಡ ಹುದ್ದೆ ಕೇಳುವುದು ಸರಿಯಲ್ಲ’ ಎಂದು ಹೇಳಿದರು.

‘ಮೊದಲು ಪಕ್ಷಕ್ಕೆ ಕೆಲಸ ಮಾಡಬೇಕು. ನಾನು ಎರಡು ವರ್ಷ ಏನೂ ಇಲ್ಲದೆ ಸುಮ್ಮನೆ ಪಕ್ಷದ ಕೆಲಸ ಮಾಡಿಕೊಂಡಿದ್ದೆ. ಪಕ್ಷ ಈಗ ಗುರುತಿಸಿದೆ. ತಾಳ್ಮೆಯಿಂದ ಇರಬೇಕು. ಎಲ್ಲಾ ಇವತ್ತೇ ಆಗಬೇಕು ಎಂದರೆ, ನೀವು ಬಂದಿರುವ ಉದ್ದೇಶ ಏನು’ ಎಂದು ಪ್ರಶ್ನಿಸಿದರು. ‘ಇವತ್ತು ಏನು ಸಿಗುತ್ತದೆ ಅದನ್ನೆಲ್ಲಾ ಅನುಭವಿಸಿ, ಮತ್ತೆ ವಾಪಸ್ ಹೋಗಬೇಕೆಂಬ ಉದ್ದೇಶವಿದೆಯೆ?’ ಎಂದು ಕುಟುಕಿದರು.

ಬಿಜೆಪಿಯ 105 ಶಾಸಕರು ಇಲ್ಲದಿದ್ದರೆ ನಾವು ಮಂತ್ರಿಗಳಾಗುತ್ತಿರಲಿಲ್ಲ. ಪಕ್ಷ ನಮಗೆ ಏನು ಅನ್ಯಾಯ ಮಾಡಿದೆ. ಮೊದಲು ಪಕ್ಷದ ಕೆಲಸ ಮಾಡಿ. ನಂತರ ಅಧಿಕಾರ ಬರುತ್ತದೆ ಎಂದು ಸಲಹೆ ಮಾಡಿದರು.

ಎಲ್ಲರಿಗೂ ಅವರು ಬೇಡುವ ಖಾತೆಗಳು ನೀಡಲು ಸಾಧ್ಯವಿಲ್ಲ: ಸಿಎಂ ಬೊಮ್ಮಾಯಿ

ಸಂಪುಟ ರಚನೆ ಬೆನ್ನಲ್ಲೇ ಬಿಜೆಪಿಯಲ್ಲಿ ಭಿ ನ್ನ ಮ ತ ಸ್ಫೋ ಟ ಗೊಂಡ ಹಿನ್ನಲೆಯಲ್ಲಿ ಖಡಕ್ ತಿರುಗೇಟು ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು, ಎಲ್ಲರಿಗೂ ಅವರಿಗೆ ಬೇಕಾದ ಖಾತೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಸಚಿವ ಸ್ಥಾನ ನೀಡಲು ಮತ್ತು ಅವರು ಬಯಸಿದ ಖಾತೆಗಳನ್ನು ನೀಡಲು ಸಾಧ್ಯವಿಲ್ಲ. ಖಾತೆ ಬಗ್ಗೆ ಗೊಂದಲವಿದ್ದರೆ ಈ ಬಗ್ಗೆ ಸಚಿವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದರು.

ಈ ಹಿಂದೆ ಖಾತೆ ಹಂಚಿಕೆ ವಿಚಾರವಾಗಿ ಸಚಿವ ಆನಂದ್ ಸಿಂಗ್ ರ ಹೇಳಿಕೆ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ, ‘ಪ್ರತಿಯೊಬ್ಬರೂ ತಮಗೆ ಬೇಕಾದ ಖಾತೆಗಳನ್ನು ಪಡೆಯಲು ಸಾಧ್ಯವಿಲ್ಲ. ಸಚಿವ ಆನಂದ್ ಸಿಂಗ್ ನನಗೆ ಹತ್ತಿರವಾಗಿದ್ದಾರೆ. ಹಾಗಾಗಿ ಎಲ್ಲವೂ ಚೆನ್ನಾಗಿರುತ್ತದೆ. ನಾನು ಅವರನ್ನು ಕರೆದು ಮಾತನಾಡಿದೆ. ನಾನು ಅದನ್ನು ನಿಭಾಯಿಸುತ್ತೇನೆ ಎಂದು ಹೇಳಿದರು.

ಹೊಸದಾಗಿ ನೇಮಕಗೊಂಡ ಕರ್ನಾಟಕದ ಸಚಿವ ಆನಂದ್ ಸಿಂಗ್ ಅವರಿಗೆ ಅರಣ್ಯ, ಪರಿಸರ ಮತ್ತು ಪ್ರವಾಸೋದ್ಯಮ ಖಾತೆಯನ್ನು ನೀಡಲಾಗಿದೆ.  ಈ ಕುರಿತು ಮಾತನಾಡಿದ್ದ ಆನಂದ್ ಸಿಂಗ್ ಅವರು, “ನಾನು ಈ ಖಾತೆಯನ್ನು ಕೇಳಿಲ್ಲ. ಪಕ್ಷದ ವೇದಿಕೆಯಲ್ಲಿ ನಾನು ಮಾಡಿದ ಯಾವುದೇ ವಿನಂತಿಯನ್ನು ಪರಿಗಣಿಸಲಾಗಿಲ್ಲ. ಹೀಗಾಗಿ ಮುಖ್ಯಮಂತ್ರಿ ಭೇಟಿ ಮಾಡಲು ನಾನು ಯೋಜಿಸುತ್ತಿದ್ದೇನೆ . ನನ್ನ ವಿನಂತಿಯನ್ನು ಮರುಪರಿಶೀಲಿಸುವಂತೆ ನಾನು ವಿನಂತಿಸುತ್ತೇನೆ ಎಂದು ಹೇಳಿದ್ದರು.

Advertisement
Share this on...