ಭಾರತ ಮತ್ತು ಇಂಡೋನೇಷ್ಯಾ ಎರಡು ಸಾವಿರ ವರ್ಷಗಳಷ್ಟು ಹಳೆಯ ನಿಕಟ ಸಾಂಸ್ಕೃತಿಕ ಮತ್ತು ವಾಣಿಜ್ಯ ಸಂಬಂಧಗಳನ್ನು (India Indonesia Relationship) ಹೊಂದಿವೆ. ಭಾರತದ ಹಿಂದೂ, ಬೌದ್ಧ ಧರ್ಮಗಳು ಇಂಡೋನೇಷ್ಯಾ ಜನಜೀವನ-ಸಂಸ್ಕೃತಿಯ ಮೇಲೆ ಗಾಢ ಪರಿಣಾಮ ಬೀರಿವೆ. ಇಂಡೋನೇಷಿಯಾದ ಜಾನಪದ ಕಲೆ ಮತ್ತು ನಾಟಕಗಳು ರಾಮಾಯಣ ಮತ್ತು ಮಹಾಭಾರತದ ಮಹಾಕಾವ್ಯಗಳ ಕಥೆಗಳನ್ನು ಆಧರಿಸಿವೆ. ಭರತ ಭೂಮಿಯ ಆಳವಾದ ಬೇರುಗಳು ಇಂದಿಗೂ ಇಂಡೋನೇಷ್ಯಾದ ಜನಮಾನಸದಲ್ಲಿ ಆಳವಾಗಿ ಬೇರೂರಿವೆ.
ಇಂಡೋನೇಷ್ಯಾದ ಜಾವಾದಲ್ಲಿ ಅಗಸ್ತ್ಯ ಮುನಿ ಮತ್ತು ನಂದಿ ಪ್ರತಿಮೆಗಳು ಪತ್ತೆಯಾಗಿದ್ದು, ಅಚ್ಚರಿ ಮೂಡಿಸಿದೆ. ಪುರಾತನ ಎರಡು ಪ್ರತಿಮೆಗಳು ಮತ್ತು ಇತರ ಪುರಾತತ್ತ್ವ ಶಾಸ್ತ್ರದ ವಸ್ತುಗಳು ಕಲ್ಲಿನ ದೇವಾಲಯಗಳ ರೂಪದಲ್ಲಿ ಕಂಡುಬಂದಿವೆ. ದೂರದ ಇಂಡೋನೇಷ್ಯಾದಲ್ಲಿ ಭಾರತ ಮೂಲದ ಹಿಂದೂ ದೇವರ ಪ್ರತಿಮೆಗಳು ದೊರೆತಿರುವುದು ಸಹಜವಾಗಿಯೇ ಕೌತುಕದ ಅಲೆಗಳನ್ನು ಎಬ್ಬಿಸಿವೆ.
ಮುಸ್ಲಿಂ ರಾಷ್ಟ್ರ ಹಿಂದೆ ಹಿಂದೂಗಳ ಪವಿತ್ರ ತಾಣವಾಗಿತ್ತಾ?
2022 ರ ವರದಿಗಳ ಪ್ರಕಾರ 87 ಪ್ರತಿಶತದಷ್ಟು ಇಂಡೋನೇಷಿಯನ್ನರು ತಮ್ಮನ್ನು ತಾವು ಮುಸ್ಲಿಮರು ಎಂದು ಘೋಷಿಸಿಕೊಂಡಿದ್ದಾರೆ. ಇಂಡೋನೇಷ್ಯಾವು ವಿಶ್ವದಲ್ಲೇ ಅತಿ ದೊಡ್ಡ ಇಸ್ಲಾಮಿಕ್ ಜನಸಂಖ್ಯೆಯನ್ನು ಹೊಂದಿದ ದೇಶಗಳಲ್ಲಿ ಪ್ರಮುಖ ಸ್ಥಾನ ಹೊಂದಿದೆ. ಮತ್ತು ಈ ಕಾರಣಕ್ಕಾಗಿ ಇದನ್ನು ಹೆಚ್ಚಾಗಿ ಮುಸ್ಲಿಂ ರಾಷ್ಟ್ರವೆಂದು ಗುರುತಿಸಲಾಗುತ್ತದೆ. ತನ್ನ ಸಂವಿಧಾನದ ಪ್ರಕಾರ ಮುಸ್ಲಿಂ ರಾಷ್ಟ್ರವಲ್ಲದಿದ್ದರೂ ಜನಸಂಖ್ಯೆಯ ಕಾರಣ ಈ ದೇಶವನ್ನು ಮುಸ್ಲಿಂ ರಾಷ್ಟ್ರ ಎಂದೇ ಪರಿಗಣಿಸಲಾಗುತ್ತದೆ.
ಇಂಡೋನೇಷ್ಯಾದದಲ್ಲಿ ಸಿದ್ಧ ಔಷಧಿಯ ಪಿತಾಮಹ!
ಮಹರ್ಷಿ ಅಗಸ್ತ್ಯರನ್ನು ಸಿದ್ಧ ಔಷಧಿಯ ಪಿತಾಮಹ ಎಂದು ಪರಿಗಣಿಸಲಾಗಿದೆ. ರಾಮಾಯಣ ಮತ್ತು ಮಹಾಭಾರತ ಸೇರಿದಂತೆ ಹಲವಾರು ಪುರಾಣಗಳಲ್ಲಿ ಅಗಸ್ತ್ಯರ ಉಲ್ಲೇಖವಿದೆ. ಹಿಂದೂ ಧರ್ಮದ ಸಪ್ತಋಷಿಗಳಲ್ಲಿ ಅಗಸ್ತ್ಯರೂ ಒಬ್ಬರು. ಶೈವ ಧರ್ಮದ ಸಂಪ್ರದಾಯದ ಪ್ರಕಾರ ತಮಿಳು ಸಿದ್ಧರಲ್ಲಿ ಅಗಸ್ತ್ಯರನ್ನು ಪೂಜಿಸಲಾಗುತ್ತದೆ.
ಮುಸ್ಲಿಂ ರಾಷ್ಟ್ರದಲ್ಲಿ ಹಿಂದೂ ದೇವರ-ಋಷಿಗಳ ಪುರಾತನ ಪ್ರತಿಮೆಗಳು ದೊರೆತಿರುವುದು ಸಹಜವಾಗಿ ಕುತೂಹಲ ಕೆರಳಿಸಿವೆ.