ಕಾರ್ಕಳ : ತಾಲೂಕು ಪಂಚಾಯತ್ ಸಭೆಗೆ ತಡವಾಗಿ ಬಂದ ಅಧಿಕಾರಿಯನ್ನು ಸಭೆಯ ಮಧ್ಯದಲ್ಲಿ ಹೊರಕ್ಕೆ ಕಳು ಹಿಸಿದ ಪ್ರಸಂಗ ಕಾರ್ಕಳದಲ್ಲಿ ನಡೆದಿದೆ.
ಕಾರ್ಕಳ ಮತ್ತು ಹೆಬ್ರಿ ತಾಲೂಕು ಪಂಚಾಯತ್ ಸಭೆ ಸೋಮವಾರ ಕಾರ್ಕಳ ತಾ.ಪಂ ಸಾಮರ್ಥ್ಯ ಸೌಧದಲ್ಲಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆ ಆರಂಭದ ವೇಳೆ ಜಲಜೀವನ್ ಮಿಷನ್ ಯೋಜನೆಗೆ ಸಂಬಂಧಿಸಿ ಸಚಿವರು ಮಾಹಿತಿ ಬಯಸಿ ಇಲಾಖೆಯಿಂದ ಮಾಹಿತಿ ನೀಡುವಂತೆ ಕೇಳಿದರು. ಆ ವೇಳೆ ಸಭೆಯಲ್ಲಿ ಆ ಇಲಾಖೆಗೆ ಸಂಬಂಧಿಸಿದ ಅಧಿಕಾರಿಯೆ ಇರಲಿಲ್ಲ. ಗೈರು ಹಾಜರಾದ ಬಗ್ಗೆ ಗರಂ ಆದ ಸಚಿವರು ಉಳಿದ ಇಲಾಖೆ ಮಾಹಿತಿ ಕೇಳಲಾರಂಭಿಸಿದರು.
ಸಭೆ ನಡೆದ ತುಂಬಾ ಹೊತ್ತಿನ ಬಳಿಕ ಇಲಾಖೆಗೆ ಸಂಬಂಧಿಸಿದ ಅಧಿಕಾರಿ ಸಭೆಗೆ ಆಗಮಿಸಿದ್ದರು . ಅವರು ಸಭಾಂಗಣ ಒಳಗೆ ಬರುವುದನ್ನು ಕಂಡ ಸಚಿವರು ಸಭೆಯಿಂದ ಹೊರಹೋಗುವಂತೆ ಸೂಚಿಸಿದರು.
ಸಭೆ ಮುಗಿದು ಹೊರಬರುವ ವೇಳೆಗೆ ಹೊರಗೆ ನಿಂತಿದ್ದ ಅಧಿಕಾರಿಯನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಬದ್ದತೆಯಿಂದ ಕೆಲಸ ಮಾಡುವಂತೆ ಸನ್ನಡತೆಯ ಪಾಠ ಭೋದಿಸಿದರು.
ಇಂಧನ ಖಾತೆ ಸಚಿವರಾದ ಬಳಿಕ ಮೊದಲ ಹೇಳಿಕೆ ಕೊಟ್ಟಿದ್ದ ಸುನಿಲ್ ಕುಮಾರ್ ಏನಂದಿದ್ರು?
ನಾನು ಯಾವತ್ತೂ ಪವರ್ ಫುಲ್. ಯಡಿಯೂರಪ್ಪ ಮಾತ್ರವಲ್ಲ ಡಿ.ಕೆ.ಶಿವಕುಮಾರ್, ಶೋಭಾ ಕರಂದ್ಲಾಜೆ ನಿಭಾಯಿಸಿದ ಇಂಧನ ಖಾತೆಯನ್ನು ನನಗೆ ನೀಡಲಾಗಿದೆ. ಬಹಳ ದೊಡ್ಡ ಸವಾಲು ಇದೆ. ಆದರೆ ಅದರ ನಿರ್ವಹಣೆ ನನಗೆ ಕಷ್ಟ ಆಗಲ್ಲ. ಅದನ್ನು ಸವಾಲಿನ ರೂಪದಲ್ಲಿ ಸ್ವೀಕರಿಸುತ್ತೇನೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷ ಸಚಿವನಾಗಿ ಹಾಗೂ ಮುಖ್ಯಮಂತ್ರಿಗಳು ಪ್ರಮುಖ ಇಲಾಖೆ ನೀಡುವ ಮೂಲಕ ಬಹಳ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ. ತಜ್ಞರ ಜೊತೆ ಮಾತುಕತೆ ನಡೆಸಿ ಇಲಾಖೆಯಲ್ಲಿ ಹೊಸತನ ಹಾಗೂ ಸುಧಾರಣೆಯನ್ನು ತರುವ ಕೆಲಸವನ್ನು ಮಾಡುತ್ತೇನೆ. ಪವರ್‌ನಲ್ಲಿ ಪವರನ್ನು ಹೇಗೆ ತೋರಿಸಿದ್ದೇನೆ ಎಂದು ಎರಡು ವರ್ಷ ಬಿಟ್ಟ ನಂತರ ಹೇಳುತ್ತೇನೆ ಎಂದರು.
ಆಡಳಿತದಲ್ಲಿ ಇನ್ನಷ್ಟು ಹೊಸತನ ಹಾಗೂ ಚುರುಕುತನ ಮೂಡಿಸುವ ನಿಟ್ಟಿನಲ್ಲಿ ಹೊಸ ಖಾತೆಯನ್ನು ಹೊಸ ಸಚಿವರಿಗೆ ನೀಡಲಾಗಿದೆ. ಆ ಮೂಲಕ ಮೋದಿ ಮಾದರಿಯ ಆಡಳಿತವನ್ನು ಇಲ್ಲಿ ಕೂಡ ವಿಜೃಂಭಿಸಬೇಕಾಗಿದೆ. ಅದರಂತೆ ಇನ್ನಷ್ಟು ಹೊಸತನ ನಿರ್ಮಾಣ ಮಾಡುವ ಪ್ರಯತ್ನವನ್ನು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಯಾವುದೇ ಒತ್ತಡ ಹೇರಿಲ್ಲ
ಖಾತೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ನಿರೀಕ್ಷೆ, ಬೇಡಿಕೆ, ಒತ್ತಾಯ, ಒತ್ತಡವನ್ನು ಮುಖ್ಯಮಂತ್ರಿಗೆ ಹಾಕಿಲ್ಲ. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಅವರಲ್ಲಿ ಯಾವುದೇ ಹೊಣೆಗಾರಿಕೆ ನೀಡಿದರೂ ನಿರ್ವಹಿಸುತ್ತೇನೆ ಹಾಗೂ ಪಕ್ಷ ಮತ್ತು ಸರಕಾರಕ್ಕೆ ಒಳ್ಳೆಯ ಹೆಸರು ತರುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದೇನೆ. ಪಕ್ಷದ ಹಿರಿಯರು ಮತ್ತು ಮುಖ್ಯಮಂತ್ರಿಗಳು ನನಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ದೊಡ್ಡ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ಅದಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದು ಅವರು ತಿಳಿಸಿದರು.
ನಿರೀಕ್ಷೆಗೆ ಮೀರಿದ ದೊಡ್ಡ ಹಾಗೂ ಜನರಿಗೆ ಅಗತ್ಯವಾದ ಇಂಧನ ಖಾತೆ ಯನ್ನು ನನಗೆ ನೀಡಿದ್ದಾರೆ. ಕರ್ನಾಟಕದಲ್ಲಿ ಪವರ್ ನಿರ್ಮಾಣ ಮಾಡುವುದು ಹಾಗೂ ಭಾಷೆ ಮತ್ತು ಸಂಸ್ಕೃತಿಯನ್ನು ಕಲಿಸುವಂತಹ ಎರಡು ಇಲಾಖೆಗಳು ನನ್ನ ಬಳಿ ಇವೆ. ಹಿರಿಯರ ಹಾಗೂ ತಜ್ಞರ ಸಹಕಾರ ಪಡೆದುಕೊಂಡು ಈ ಖಾತೆಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುತ್ತೇನೆ ಎಂದು ಅವರು ಹೇಳಿದರು.
ತುಳುವಿಗೆ ರಾಜ್ಯಭಾಷೆ ಸ್ಥಾನಮಾನಕ್ಕೆ ಪ್ರಯತ್ನ
ತುಳುವಿಗೆ ರಾಜ್ಯಭಾಷೆಯ ಸ್ಥಾನಮಾನ ನೀಡುವ ಬೇಡಿಕೆ ಹಲವು ವರ್ಷಗಳಿಂದ ಇದೆ. ಇದರ ತೊಡಕುಗಳನ್ನು ತಿಳಿದು ಇನ್ನು ಯಾವ ರೀತಿ ಒತ್ತಡ ತರಬೇಕು ಎಂದು ಚರ್ಚಿಸಿ ಸ್ಥಾನಮಾನ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು.
ನೆಲ, ಜಲ, ಭಾಷೆ ವಿಚಾರ ಬಂದಾಗ ನಾವು ಯಾವತ್ತೂ ರಾಜಿಯನ್ನು ಮಾಡಿಕೊಂಡಿಲ್ಲ. ತುಳು ಸಂಸ್ಕೃತಿಗೆ ವಿಶೇಷ ಒತ್ತನ್ನು ನೀಡುತ್ತೇವೆ. ಭಾಷೆ ಮತ್ತು ಸಂಸ್ಕೃತಿ ಎರಡೂ ಒಟ್ಟಾಗಿ ಸಾಗಬೇಕಾಗಿದೆ. ಭಾಷೆಯೊಳಗೆ ಸಂಸ್ಕೃತಿ ಹಾಗೂ ಸಂಸ್ಕೃತಿಯೊಳಗೆ ಭಾಷೆ ಅಡಗಿದೆ. ಇವು ಎರಡನ್ನು ಸಮಾತೋಲನ ಮಾಡುವ ಕಾರ್ಯವನ್ನು ಮಾಡಲಾಗುವುದು ಎಂದರು.
ಸಚಿವ ಸ್ಥಾನ ಸಿಕ್ಕ ಬೆನ್ನಲ್ಲೇ ಭರ್ಜರಿ ಪ್ರತಿಕ್ರಿಯೆ ನೀಡಿದ್ದ ಸುನಿಲ್ ಕುಮಾರ್
ಮೊಟ್ಟ ಮೊದಲ ಬಾರಿಗೆ ಸಚಿವರಾದ ಸುನಿಲ್ ಕುಮಾರ್ ಪತ್ರಕರ್ತರೊಂದಿಗೆ ಮಾತನಾಡುತ್ತ, “ನನಗೆ ಸಚಿವ ಸ್ಥಾನ ನೀಡಿದ್ದಕ್ಕೆ ಪಕ್ಷಕ್ಕೆ ಹಾಗು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ನನಗೆ ಯಾವುದೇ ಖಾತೆ ನೀಡಿದರೂ ಶೃದ್ಧೆಯಿಂದ ನಿಭಾಯಿಸುತ್ತೇನೆ” ಎಂದಿದ್ದರು. ಇದೇ ಸಂದರ್ಭದಲ್ಲಿ ಮುಂದೆ ಮಾತನಾಡಿದ ಅವರು, “ಹಿಂದುತ್ವ, ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಸಚಿವ ಸ್ಥಾನ, ಮಂತ್ರಿ ಸ್ಥಾನ ಬೇಕೋ ಹಿಂದುತ್ವ ಬೇಕೋ ಅನ್ನೋ ಆಯ್ಕೆ ಬಂದರೆ ನನ್ನ ಮೊದಲ ಆಯ್ಕೆ ಹಿಂದುತ್ವ, ಹಾಗಾಗಿ ಇದರಲ್ಲಿ ಯಾವುದೇ ರಾಜಿ ಇಲ್ಲ” ಎಂದಿದ್ದರು
ಇದೀಗ ಸುನಿಲ್ ಕುಮಾರ್ ರವರಿಗೆ ರಾಜ್ಯ ಇಂಧನ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜವಾಬ್ದಾರಿಯನ್ನ ನೀಡಲಾಗಿದ್ದು ಅದನ್ನ ತನ್ನ ಶಕ್ತಿ ಮೀರಿ ನಿಭಾಯಿಸುವುದಾಗಿ ಸುನಿಲ್ ಕುಮಾರ್ ಹೇಳಿದ್ದಾರೆ.