ಬೆಂಗಳೂರು: ‘ಅಫ್ಗಾನಿಸ್ತಾನದಿಂದ ಅಮೆರಿಕ ಸೇನೆ ವಾಪಸ್ ಕರೆಸಿಕೊಂಡರೆ ಮುಂದೆ ಏನಾಗುತ್ತದೆ ಎಂಬುದನ್ನು ಪರಾಮರ್ಶೆ ಮಾಡಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ತಮ್ಮ ಸೇನೆ ವಾಪಸ್ ಪಡೆಯಬೇಕಿತ್ತು. ಟ್ರಂಪ್ ಮತ್ತು ಬೈಡನ್ ನಡುವೆ ವ್ಯತ್ಯಾಸ ಇದೆ. ಬೈಡನ್ ಅವರು ದಿಢೀರ್ ನಿರ್ಧಾರ ಮಾಡಿದ್ದು ತಾಲಿಬಾನ್ನ ಇಂದಿನ ಆಟಾಟೋಪಕ್ಕೆ ಕಾರಣ‘ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.
‘ನಮ್ಮ ದೇಶದ ಹಿತದೃಷ್ಟಿಯಿಂದ ಮಾಜಿ ಪ್ರಧಾನಿಯಾಗಿ ನಾನು ಈ ಬಗ್ಗೆ ಹೆಚ್ಚು ಮಾತನಾಡೋಲ್ಲ. ಪಾಕಿಸ್ತಾನ, ಚೀನಾ, ರಷ್ಯಾ, ಟರ್ಕಿ ತಾಲಿಬಾನ್ ಪರ ಇದೆ ಹೇಳುತ್ತಾರೆ, ಮುಂದೆನಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕು‘ ಎಂದು ಭಾನುವಾರ ಸುದ್ದಿಗೋಷ್ಟಿಯಲ್ಲಿ ಹೇಳಿದರು.
‘ನನ್ನ ಕಾಲದಲ್ಲಿ ಅಫ್ಘಾನಿಸ್ತಾನದ ಅಂದಿನ ಪ್ರಧಾನಿಯನ್ನ ತಾಲಿಬಾನಿಗಳು ಓಡಿಸೇ ಬಿಟ್ಟಿದ್ದರು. ಬಿನ್ ಲಾಡೆನ್ನನ್ನ ಒಮಾಮಾ ಸರ್ಕಾರ ಹೊಡೆದು ಹಾಕಿತ್ತು. ಆದಾದ ಬಳಿಕ ಅಮೆರಿಕ ಸೇನೆ ಅಲ್ಲಿ ನೆಲೆಸಿತ್ತು. ತಾಲಿಬಾನ್ ಅಲ್ಲಲ್ಲಿ ಇದ್ದರು. ಅಮೇರಿಕಾ ಸೇನೆ ವಾಪಸ್ ಕರೆಸಿದಾಗ ತಾಲಿಬಾನ್ ಮತ್ತೆ ಆಟಾಟೋಪ ಶುರು ಮಾಡಿದ್ದಾರೆ ಅನ್ನಿಸುತ್ತೆ . ಇವೆಲ್ಲ ಅಂತಾರಾಷ್ಟ್ರೀಯ ವಿಚಾರಗಳು. ವಿಶ್ವ ಸಂಸ್ಥೆ ಕೂಡಾ ತಾಲಿಬಾನ್ ವಿರುದ್ದ ಪ್ರಬಲವಾಗಿ ವಿರೋಧ ಮಾಡಿದೆ‘ ಎಂದು ಹೇಳಿದರು.
‘ಅನೇಕ ಮಹತ್ವದ ವಿಚಾರಗಳಿದ್ದರೂ ಸಂಸತ್ ಅಧಿವೇಶನದಲ್ಲಿ ಮಾತನಾಡಲು ಅವಕಾಶ ಸಿಗಲಿಲ್ಲ. ಮುಂದಿನ ಚಳಿಗಾಲದ ಅಧಿವೇಶನದವರೆಗೂ ನಾನು ಕಾಯುತ್ತಾ ಕೂರುವುದಿಲ್ಲ. ಪಕ್ಷ ಸಂಘಟನೆಗೆ ಆದ್ಯತೆ ನೀಡುತ್ತೇನೆ’ ಎಂದೂ ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆ, ಮಹದಾಯಿ ಹಾಗೂ ಮೇಕೆದಾಟು ಯೋಜನೆಗಳನ್ನು ಕರ್ನಾಟಕದ ಪರವಾಗಿ ರೂಪಿಸುವಂತೆ ಒತ್ತಾಯಿಸಿ ಜೆಡಿಎಸ್ ವತಿಯಿಂದ ರಾಜ್ಯದಾದ್ಯಂತ ಪಾದಯಾತ್ರೆ ನಡೆಯಲಿದೆ.
‘ನದಿ ಯೋಜನೆಗಳಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಈ ನಿಟ್ಟಿನಲ್ಲಿ ಹೋರಾಟ ನಡೆಸಲಿದೆ. ವಿಧಾನಮಂಡಲ ಅಧಿವೇಶನ ಮುಗಿಯುತ್ತಿದ್ದಂತೆ ರಾಜ್ಯದಾದ್ಯಂತ ಪಾದಯಾತ್ರೆ ನಡೆಯಲಿದೆ’ ಎಂದು ಹೇಳಿದರು.
‘ಪಕ್ಷದ ಸ್ಥಳೀಯ ಮುಖಂಡರು ಒಂದೊಂದು ತಂಡವಾಗಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಸಮಾವೇಶಗಳಲ್ಲಿ ನಾನು ಪಾಲ್ಗೊಳ್ಳುತ್ತೇನೆ’ ಎಂದರು.
ಸದನದಲ್ಲಿ ಡ್ಯಾನ್ಸ್ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡ
ಸಂಸತ್ ಅಧಿವೇಶನದ ವೇಳೆ ಸದಸ್ಯರು ನಡೆದುಕೊಂಡ ರೀತಿ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ನಾವು ಮುಂದಿನ ಪೀಳಿಗೆಗೆ ಯಾವ ಮಾರ್ಗದರ್ಶನ ಕೊಟ್ಟು ಹೋಗುತ್ತಿದ್ದೇವೆ ಎಂಬುದನ್ನು ಯೋಚಿಸಬೇಕು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ದೇವೇಗೌಡರು, ಈ ಬಾರಿ 27 ದಿನಗಳು ಮಾತ್ರ ಸಂಸತ್ ಚಳಿಗಾಲದ ಅಧಿವೇಶನ ನಡೆಯಿತು. ಒಂದು ದಿನವೂ ನಾನು ಗೈರಾಗಿಲ್ಲ, ನನಗೆ ಮಾತನಾಡುವ ಅವಕಾಶ ಸಿಗುತ್ತೆ ಎಂದು ಕಾಯುತ್ತಿದ್ದೆ, ದುರಂತ ಎಂದರೆ ಸುಗಮವಾಗಿ ಅಧಿವೇಶನ ನಡೆಯಲೇ ಇಲ್ಲ. ಚರ್ಚೆಯೇ ನಡೆಯದೇ ಬಿಲ್ ಪಾಸ್ ಮಾಡಲಾಗಿದೆ ಎಂದರು.
ಒಂದಿಷ್ಟು ಸದಸ್ಯರು ಸದನದಲ್ಲಿ ಡಾನ್ಸ್ ಕೂಡ ಮಾಡಿದ್ದರು. ಇತಿಹಾಸದಲ್ಲಿಯೇ ಇಂತಹ ಘಟನೆ ನಾನು ನೋಡಿರಲಿಲ್ಲ. ಬೇರೆ ಬೇರೆ ರಾಷ್ಟ್ರಗಳಲ್ಲಿ ಏನೇನೂ ನಡೆಯುತ್ತೆ ಅಂತ ಗಮನದಲ್ಲಿದೆ. ಆದರೆ ಟೇಬಲ್ ಮೇಲೆ ನಿಂತು ಡಾನ್ಸ್ ಮಾಡಿದ್ದು ನೋಡಿರಲಿಲ್ಲ. ಇಂತಹ ಘಟನೆಗಳು ಒಳ್ಳೆಯ ಲಕ್ಷಣಗಳಲ್ಲ, ಕಲಾಪದ ವೇಳೆ ಚರ್ಚೆಗೂ ಅವಕಾಶ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸದನದಲ್ಲಿ ಚರ್ಚಿಸಲು ಹಲವಾರು ವಿಷಯಗಳಿವೆ. ಬೆಲೆ ಏರಿಕೆ, ರೈತರ ಸಮಸ್ಯೆ, ನೀರಾವರಿ ಸಮಸ್ಯೆ ಹೀಗೆ ಅನೇಕ ಗಂಭೀರ ವಿಚಾರಗಳಿವೆ. ಆದರೆ ಅಧಿವೇಶನದಲ್ಲಿ ಕಾಲ ವ್ಯರ್ಥವಾಗಿದೆ. ಮುಂದಿನ ಅಧಿವೇಶನ ಹೇಗೆ ಆರಂಭ ಮಾಡುತ್ತಾರೆ ಗೊತ್ತಿಲ್ಲ. ಆದರೆ ನಾವು ಮುಂದಿನ ಪೀಳಿಗೆಗೆ ಯಾವ ಮಾರ್ಗದರ್ಶನ ಕೊಟ್ಟು ಹೋಗ್ತೀವಿ? ಮಹಾನುಭಾವರು ದೇಶಕ್ಕೆ ಸ್ವಾತಂತ್ರ್ಯ ತರಲು ಆತ್ಮಾರ್ಪಣೆ ಮಾಡಿದ್ದಾರೆ. ಈ ರೀತಿ ಅಧಿವೇಶನಗಳು ನಡೆದರೆ ಹೇಗೆ? ಮುಂದಿನ ಅಧಿವೇಶನ ಹೇಗೆ ನಡೆಯುತ್ತೆ ಎಂಬುದನ್ನು ನೋಡಿಕೊಂಡು ಅಲ್ಲಿ ಇರುವ ಬಗ್ಗೆ ತೀರ್ಮಾನಿಸುತ್ತೇನೆ. ಇಲ್ಲವಾದರೆ ನಮ್ಮ ಪಕ್ಷದ ಬಲವರ್ಧನೆಯಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದರು.