ದಾವಣಗೆರೆ:
ದಾವಣಗೆರೆ ರುದ್ರನಕಟ್ಟೆಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಉದ್ಘಾಟಿಸಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯನವರು, ನಮ್ಮ ದೇಶ ಹಿಂದು ರಾಷ್ಟ್ರವಾದರೆ ದೇಶಕ್ಕೆ ತೊಂದರೆ. ನಮ್ಮ ದೇಶವು, ಪಾಕಿಸ್ತಾನ ಅಪಘಾನಿಸ್ತಾನ ತರಾನೇ ಆಗುತ್ತೆ. ಪಾಕಿಸ್ತಾನ್ ಮತ್ತು ಅಪಘಾನಿಸ್ತಾನ ಧರ್ಮದ ಹೆಸರಲ್ಲಿ ಸರ್ವಾಧಿಕಾರ ಮಾಡಿ ದಿವಾಳಿಯಾಗಿವೆ. ದೇಶ ಜಾತ್ಯಾತೀತ ತತ್ವ ಬಿಟ್ಟು ಧರ್ಮದ ಹಿಂದೆ ಹೋದರೆ ಅಭಿವೃದ್ಧಿ ಕಾಣಲ್ಲ. ಇವತ್ತು ಜಾತ್ಯಾತೀತ ತತ್ವಕ್ಕೆ ಅಪಾಯ ಬಂದಿದೆ.
ಬಿಜೆಪಿ ಹಾಗೂ ಮಾತೃ ಸಂಸ್ಥೆ ಆರ್ ಎಸ್ ಎಸ್ ಅಪಾಯ ಶುರುವಾಗಿದೆ. ಬಿಜೆಪಿಯ ಅಂಗ ಸಂಘಟನೆಗಳು ಹಿಂದು ದೇಶ ಮಾಡೋಕೆ ಹೊರಟಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಟ್ಟರೆ ನಮ್ಮ ದೇಶ ಕೂಡ ಪಾಕಿಸ್ತಾನ ಅಪ್ಘಾನಿಸ್ತಾನ ಆಗುತ್ತದೆ. ಧರ್ಮಕ್ಕಾಗಿ ಇನ್ನೊಬ್ಬರ ಜೊತೆ ಹೋರಾಟ ಮಾಡೋಕೆ ಹೋದರೆ ನಮ್ಮ ಹಕ್ಕು ಕಳೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ನಾವು ಬದಲಾಗಬೇಕು ಎಂದು ಹೇಳಿದ್ದಾರೆ. ಸದ್ಯ ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಲು ಹೋರಾಟ ಮಾಡಬೇಕೆಂಬ ಯತೀಂದ್ರ ಹೇಳಿಕೆಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ಕೊಡುವುದಿಲ್ಲ ಎಂದರು. ಅದು ಯಾಕೆ ಚರ್ಚೆಗೆ ಬಂತೆಂದು ಅವರನ್ನೇ ಕೇಳಿ. ಅವರು ರೀತಿ ಹೇಳುವ ಅವಶ್ಯಕತೆ ಇಲ್ಲ ಎಂದು ಚನ್ನಪಟ್ಟಣದಲ್ಲಿ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಹಿಂದೂ ರಾಷ್ಟ್ರವಾದರೆ ಪಾಕಿಸ್ತಾನದ ರೀತಿ ದಿವಾಳಿಯಾಗುತ್ತದೆಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಮ್ಮ ದೇಶ ಬಲಿಷ್ಠವಾಗಿದೆ. ಈ ದೇಶಕ್ಕೆ ಭದ್ರ ಬುನಾದಿ ಹಾಕಿರುವುದು ಕಾಂಗ್ರೆಸ್. ನೆಹರು ನಮಗೆ ಗಟ್ಟಿ ತಳಪಾಯ ಕೊಟ್ಟಿದ್ದಾರೆ. ಆದಾದ ಬಳಿಕ ಬಂದ ಪ್ರಧಾನಿಗಳು ಅವರ ಶಕ್ತಿಅನುಸಾರ ಕೆಲಸ ಮಾಡಿದ್ದಾರೆ. ಅದನ್ನು ಹೊರತು ಪಡಿಸಿ ಬೇರೆ ವಿಚಾರಗಳಿಗೆ ಮಾತನಾಡಲ್ಲ ಎಂದರು.
ಕರಸೇವಕರ ಬಂಧನ ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಹೋರಾಟಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಬಂಧಿತ ಶ್ರೀಕಾಂತ್ ಪೂಜಾರಿ ಮೇಲೆ 16 ಕೇಸ್ ಗಳಿವೆ. ಕೋರ್ಟ್ ಆದೇಶದ ಮೇಲೆ ಆತನನ್ನು ಬಂಧಿಸಲಾಗಿದೆ. ಕಾನೂನಿನ ಪ್ರಕಾರ ಪೊಲೀಸರು ಕೆಲಸ ಮಾಡಿದ್ದಾರೆ. ಬಿಜೆಪಿ ಆಡಳಿತದಲ್ಲಿ 20 ಸಾವಿರ ಮಂದಿಯನ್ನ ರೌಡಿಶೀಟರ್ ನಿಂದ ತೆಗೆಸಿದ್ದರು. ಬಳಿಕ ಪಕ್ಷದ ಶಾಲು ಹಾಕಿ ಬಿಜೆಪಿಗೆ ಸೇರಿಸಿಕೊಂಡಿದ್ದರು. ಇದು ಬಿಜೆಪಿಯವರು ಕೊಟ್ಟಿದ್ದ ಆಡಳಿತ ಎಂದು ವ್ಯಂಗ್ಯವಾಡಿದರು.
ಗೋದ್ರಾ ರೀತಿ ಮತ್ತೊಂದು ದುರಂತ ಸಂಭವಿಸುತ್ತದೆಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆ ಬಗ್ಗೆ ಮಾತನಾಡಿದ ರಾಮಲಿಂಗಾ ರೆಡ್ಡಿ, ಹರಿಪ್ರಸಾದ್ ರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡಿದವರು. ಈ ಹಿಂದೆ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಹಾಗಾಗಿ ಅವರಿಗೆ ಮಾಹಿತಿ ಇರಬಹುದು. ನೀವು ಅದರ ಬಗ್ಗೆ ಅವರನ್ನೇ ಕೇಳಿ ಎಂದರು.
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಿ ವಿಚಾರವಾಗಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ 20 ಕ್ಷೇತ್ರ ಗೆದ್ದೇ ಗೆಲ್ಲುತ್ತೇವೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿಯಾದರೂ ನಮಗೆ ಯಾವುದೇ ಆತಂಕ ಇಲ್ಲ. ನಾವು ಚುನಾವಣೆ ಸಂದರ್ಭದಲ್ಲಿ ಕೊಟ್ಟಿದ್ದ ಆಶ್ವಾಸನೆ ಈಡೇರಿಸಿದ್ದೇವೆ. ಬಿಜೆಪಿಯವರು ಯಾವ ಮುಖ ಇಟ್ಕೊಂಡು ಚುನಾವಣೆಗೆ ಹೋಗುತ್ತಾರೆ ಎಂದರು.