ಬಾರ್ಪೇಟಾ: ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 22ರಂದು ನಡೆಯಲಿರುವ ಬಾಲರಾಮ ವಿಗ್ರಹದ ಪ್ರತಿಷ್ಠಾಪನೆಗೂ ಮುನ್ನ ಮುಸ್ಲಿಂ ಮುಖಂಡರೊಬ್ಬರು ನೀಡಿರುವ ಹೇಳಿಕೆ ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು.. ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೂ ಮುನ್ನ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಅಧ್ಯಕ್ಷ ಹಾಗೂ ಲೋಕಸಭಾ ಸದಸ್ಯ ಬದ್ರುದ್ದೀನ್ ಅಜ್ಮಲ್ ಅವರು ಅಸ್ಸಾಂನ ಬಾರ್ಪೇಟಾದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ನೀಡಿರುವ ಹೇಳಿಕೆ ಬಿಜೆಪಿಯ ಕೆಂಗಣ್ಣಿಗೆ ಕಾರಣವಾಗಿದೆ.
ಸುದ್ದಿ ಸಂಸ್ಥೆ ಎಎನ್ಐ ಪ್ರಕಾರ, ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಅಧ್ಯಕ್ಷ ಹಾಗೂ ಲೋಕಸಭಾ ಸದಸ್ಯ ಬದ್ರುದ್ದೀನ್ ಅಜ್ಮಲ್ ಅವರು, ಎಲ್ಲಾ ಮುಸ್ಲಿಮರು ಜನವರಿ 20 ರಿಂದ 25 ರವರೆಗೆ ತಮ್ಮ ಮನೆಗಳಲ್ಲಿಯೇ ಇರುವಂತೆ ಕೇಳಿಕೊಂಡಿದ್ದಾರೆ. ಅಲ್ಲದೇ ತಮ್ಮ ಹೇಳಿಕೆಯಲ್ಲಿ ಅಜ್ಮಲ್ ಅವರು ಬಿಜೆಪಿಯನ್ನು ಮುಸ್ಲಿಂ ಸಮುದಾಯದ ದೊಡ್ಡ ಶತ್ರು ಎಂದು ಹೇಳಿದ್ದಾರೆ.
ಭಾಷಣದಲ್ಲಿ ಮಾತನಾಡಿದ್ದ ಲೋಕಸಭಾ ಸದಸ್ಯ ಬದ್ರುದ್ದೀನ್ ಅಜ್ಮಲ್, ‘ನಾವು (ಮುಸ್ಲಿಮರು) ಜಾಗರೂಕರಾಗಿರಬೇಕು. ಮುಸ್ಲಿಮರು ಜನವರಿ 20 ರಿಂದ 25 ರವರೆಗೆ ಎಲ್ಲಿಗೇ ಆದರೂ ಪ್ರಯಾಣಿಸುವುದನ್ನು ತಪ್ಪಿಸಬೇಕು. ರಾಮ ಜನ್ಮಭೂಮಿಯಲ್ಲಿ ರಾಮಲಾಲಾ ಪ್ರತಿಮೆ ಸ್ಥಾಪನೆಯನ್ನು ಇಡೀ ಜಗತ್ತು ನೋಡಲಿದೆ. ಬಸ್ಸುಗಳು, ರೈಲುಗಳು, ವಿಮಾನಗಳು ಸೇರಿದಂತೆ ಇತ್ಯಾದಿಗಳಲ್ಲಿ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ನಾವು ಶಾಂತಿ ಕಾಪಾಡಬೇಕು ಎಂದು ಹೇಳಿದ್ದಾರೆ.
ಜನವರಿ 20 ರಿಂದ 25 ರವರೆಗೆ ಮುಸ್ಲಿಮರು ಪ್ರಯಾಣ ಮಾಡುವುದನ್ನು ತಪ್ಪಿಸಿ ಮನೆಯಲ್ಲೇ ಇರಬೇಕು ಎಂದು ಹೇಳಿರುವ ಬದ್ರುದ್ದೀನ್ ಅಜ್ಮಲ್, ಬಿಜೆಪಿ ಮುಸ್ಲಿಮರ ದೊಡ್ಡ ಶತ್ರು. ಇದು ನಮ್ಮ ಜೀವನ, ನಂಬಿಕೆ, ಮಸೀದಿಗಳು, ಇಸ್ಲಾಮಿಕ್ ಕಾನೂನುಗಳು ಮತ್ತು ನಮ್ಮ ಅಜಾನ್ನ ಶತ್ರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಬದ್ರುದ್ದೀನ್ ಅಜ್ಮಲ್ ನೀಡಿರುವ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದ್ದು, ಸಬ್ಕಾ ಸಾಥ್, ಸಬ್ಕಾ ವಿಶ್ವಾಸ್ ಮಂತ್ರದ ಮೇಲೆ ಬಿಜೆಪಿ ಕೆಲಸ ಮಾಡುತ್ತದೆ ಎಂದು ಬಿಜೆಪಿ ನಾಯಕರು ಟಾಂಗ್ ನೀಡಿದ್ದಾರೆ. ಎಐಯುಡಿಎಫ್ ಸಂಸದ ಬದ್ರುದ್ದೀನ್ ಅಜ್ಮಲ್ ಹೇಳಿಕೆಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರತಿಕ್ರಿಯೆ ನೀಡಿ, ಬಿಜೆಪಿ ಮುಸ್ಲಿಮರನ್ನು ದ್ವೇಷಿಸುವುದಿಲ್ಲ ಎಂದು ಹೇಳಿದ್ದಾರೆ. ನಾವು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್’ ಮಂತ್ರದೊಂದಿಗೆ ಕೆಲಸ ಮಾಡುತ್ತೇವೆ ಎಂದರು.
ಅಯೋಧ್ಯೆ ಭೂ ವಿವಾದ ಪ್ರಕರಣದ ಮಾಜಿ ದಾವೆದಾರ ಇಕ್ಬಾಲ್ ಅನ್ಸಾರಿ ಅವರನ್ನು ರಾಮ ಮಂದಿರದ ಪ್ರತಿಷ್ಠಾಪನಾ ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಅವರು ಪ್ರಾರ್ಥನೆಯಲ್ಲಿ ಭಾಗವಹಿಸಲಿದ್ದಾರೆ. ಬದ್ರುದ್ದೀನ್ ಅಜ್ಮಲ್, ಓವೈಸಿಯಂಥವರು ಸಮಾಜದಲ್ಲಿ ದ್ವೇಷ ಹರಡುತ್ತಾರೆ. ಬಿಜೆಪಿ ಎಲ್ಲ ಧರ್ಮಗಳನ್ನು ಗೌರವಿಸುತ್ತದೆ ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.