ರಾಮ ಮಂದಿರ ಉದ್ಘಾಟನೆಗೂ ಮುನ್ನ ಭಾರೀ ರಾಜಕೀಯ ನಡೆಯುತ್ತಿದೆ. ಕರ್ನಾಟಕದಲ್ಲಿ ಹಿಂದೂ ಕಾರ್ಯಕರ್ತರ ಬಂಧನ, ಹಳೇ ಕೇಸ್ ರಿ ಓಪನ್ ಹೋರಾಟ ನಡೆಯುತ್ತಿದೆ. ವಿವಿಧ ರಾಜ್ಯಗಳಲ್ಲಿ ರಾಮ ಮಂದಿರ ಉದ್ಘಾಟನೆ ಕುರಿತು ಆರೋಪ ಪ್ರತ್ಯಾರೋಪಗಳು ನಡೆಯುತ್ತಿದೆ. ಇದರ ನಡುವೆ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಕೆಲ ಪ್ರಶ್ನೆಗಳನ್ನು ಎತ್ತಿ ನಗೆಪಾಟಲಿಗೀಡಾಗಿದ್ದಾರೆ.ರಾಮ ಮಂದಿರ ದುಡ್ಡಲ್ಲಿ ಎಷ್ಟು ಮಕ್ಕಳಿಗೆ ಶಿಕ್ಷಣ ಸಿಗುತ್ತಿತ್ತು? ಹಸಿವಾದರೆ, ಆರೋಗ್ಯ ಹದಗೆಟ್ಟರೇ ರಾಮ ಮಂದಿರಕ್ಕೆ ಹೋಗುತ್ತೀರಾ ಎಂದು ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ. ತೇಜಸ್ವಿ ಯಾದವ್ ವಿರುದ್ಧ ಭಾರಿ ಆಕ್ರೋಶದ ಜೊತೆಗೆ ಟ್ರೋಲ್ ಕೂಡ ಮಾಡಲಾಗುತ್ತಿದೆ. ರಾಮ ಮಂದಿರ ಭಕ್ತರ ದೇಣಿಗೆ ದುಡ್ಡಿನಲ್ಲಿ ಕಟ್ಟಲಾಗಿದೆ. ಇದು ಸರ್ಕಾರದ ದುಡ್ಡಲ್ಲ ಎಂದು ಕೆಲವರು ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ.
ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಬಿಹಾರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಯಾರಿಗಾದರೂ ಹುಷಾರಿಲ್ಲ ಅಂತಂದ್ರೆ ಅವರು ವೈದ್ಯರನ್ನು ಸಂಪರ್ಕಿಸುತ್ತಾರೆ ಹೊರತು ಅರ್ಚಕರನ್ನ ಸಂಪರ್ಕಿಸುವುದಿಲ್ಲ ಎಂದು ಹೇಳಿದ್ದಾರೆ. “ನಾನು ಯಾವುದೇ ಧರ್ಮದ ವಿರೋಧಿಯಲ್ಲ, ಮಗಳಿಗೆ ಟೊಂಗೆ ಹಾಕಿಸಲು ತಿರುಪತಿ ದೇವಸ್ಥಾನಕ್ಕೆ ಹೋಗಿದ್ದೆ, ಅಲ್ಲಿಯೂ ಮುಡಿಯನ್ನು ಅರ್ಪಿಸಿದ್ದೇನೆ, ದೇಶದ ಇಂದಿನ ಸ್ಥಿತಿ ಏನೆಂದರೆ, ದೇಶ, ಸಂವಿಧಾನ ಬದಲಿಸಿ ಪ್ರಜಾಪ್ರಭುತ್ವವನ್ನು ನಾಶ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ನಾವು ಜನರಿಗೆ ಉದ್ಯೋಗಗಳನ್ನು ನೀಡಲು ತಯಾರಿ ನಡೆಸುತ್ತಿದ್ದೇವೆ ಆದರೆ ಈ ಜನರು (ಬಿಜೆಪಿ) ನಮಗೆ ಇಡಿ ಮತ್ತು ಸಿಬಿಐ ಮೂಲಕ ಬೆದರಿಸುವ ಕೆಲಸ ಮಾಡುತ್ತಿದ್ದಾರೆ” ಎಂದಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ತೇಜಸ್ವಿ ಯಾದವ್
ತೇಜಸ್ವಿ ಯಾದವ್ ಮಾತನಾಡುತ್ತಾ ತಮ್ಮ ಹೋರಾಟ ನರೇಂದ್ರ ಮೋದಿಯವರೊಂದಿಗೆ ಅಲ್ಲ ನಿಜವಾದ ಸಮಸ್ಯೆಗಳೊಂದಿಗೆ ಎಂದು ಹೇಳಿದರು. “ನಾವು ಕೇಳುತ್ತಿರೋದು ದೇಶದ ಪ್ರತಿಯೊಬ್ಬರ ಖಾತೆಗಳಿಗೆ ನೀವು ಖಾತೆಗೆ 15 ಲಕ್ಷ ರೂ. ಹಾಕ್ತೀನಿ ಅಂದಿದ್ರಲ್ಲ ಅದು ಎಲ್ಲಿದೆ? ಕಪ್ಪು ಹಣ ಏಕೆ ವಾಪಸ ಬಂದಿಲ್ಲ? ನೀವು ಪ್ರಧಾನಿಯಾದ ನಂತರ ಮೆಹುಲ್ ಚೋಕ್ಸಿ, ಲಲಿತ್ ಮೋದಿ ಮತ್ತು ನೀರವ್ ಮೋದಿ ದೇಶದಿಂದ ಓಡಿಹೋದರು. ಈ ಜನರು ಬ್ಯಾಂಕ್ ದರೋಡೆ ಮಾಡಿ ದಿವಾಳಿಯಾದ ನಂತರ ಓಡಿಹೋದರು, ಇದು ಯಾರ ಹಣ?. ಈ ಜನರು ದೇಶವನ್ನು ಲೂಟಿ ಮಾಡೋಕೆ ಅಂತ ದ್ವೇಷವನ್ನು ಸೃಷ್ಟಿಸುತ್ತಿದ್ದಾರೆ”ಎಂದು ಅವರು ಹೇಳಿದರು.
ಅಯೋಧ್ಯೆಯ ರಾಮಮಂದಿರದ ನಿರ್ಮಾಣದ ಬಗ್ಗೆಯೂ ಚಕಾರ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಮಾತನಾಡುತ್ತ, “ಅಯೋಧ್ಯೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದಾರೆ, ಅದರಿಂದ ಎಷ್ಟು ಜನರಿಗೆ ಕೆಲಸ ಸಿಗುತ್ತೆ? ಅದೇ ಬಡಜನರಿಗಾಗಿ ಖರ್ಚು ಮಾಡಿದ್ದರೆ ಜನರಿಗೆ ಶಿಕ್ಷಣ ಮತ್ತು ಚಿಕಿತ್ಸಾ ಸೌಲಭ್ಯಗಳು ಸಿಗುತ್ತಿದ್ದವು, ಭಗವಂತ ಆ ಹಣ ತಗೊಂಡು ಏನು ಮಾಡುತ್ತಾನೆ? ರಾಮನಿಗೆ ಇದೆಲ್ಲಾ ಬೇಕಾ? ಮೋದಿ ಜಿ ಸುಳ್ಳಿನ ಕಾರ್ಖಾನೆ, ಮೋದಿ ಜಿ ಸುಳ್ಳಿನ ಸಗಟು ವ್ಯಾಪಾರಿ” ಎಂದಿದ್ದಾರೆ.