ಕಲಬುರಗಿ:
ಜ್ಞಾನವಾಪಿ ಮಸೀದಿಯ ನಂತರ ಕಾಲಗರ್ಭದಲ್ಲಿ ಅಡಗಿ ಹೋಗಿದ್ದ ಮತ್ತೊಂದು ದೇವಸ್ಥಾನದ ವಿಚಾರದ ಚರ್ಚೆ ಮುನ್ನೆಲೆಗೆ ಬಂದಿದೆ. ಕಲಬುರಗಿಯ ಬಹುಮನಿ ಕೋಟೆಯಲ್ಲಿರುವ ಸೋಮೇಶ್ವರ ದೇವಸ್ಥಾನವನ್ನ ಪುನರ್ ನಿರ್ಮಾಣ ಮಾಡುವಂತೆ ಹಿಂದೂ ಸಂಘಟನೆಗಳು ಜಿಲ್ಲಾಡಳಿತಕ್ಕೆ ಆಗ್ರಹಿಸಿವೆ.
ಬಹುಮನಿ ಸುಲ್ತಾನರ ಕೋಟೆಯಲ್ಲಿ ಸೋಮೇಶ್ವರ ದೇವಸ್ಥಾನವಿದ್ದು, ಅದು ಸಂಪೂರ್ಣವಾಗಿ ನಶಿಸಿ ಹೋಗಿದೆ. ಬಹುಮನಿ ಸುಲ್ತಾನರ ಆಳ್ವಿಕೆ ಸಂದರ್ಭದಲ್ಲಿ ಕೋಟೆಯಲ್ಲಿದ್ದ ಸೋಮೇಶ್ವರ ದೇವಸ್ಥಾನವನ್ನು ಕೆಡವಿ ಬಿಟ್ಟಿದ್ದಾರೆ. ಆದರೆ ಅಲ್ಲಿ ದೇವಸ್ಥಾನ ಇತ್ತು ಎನ್ನುವುದಕ್ಕೆ ಸಾಕಷ್ಟು ಸಾಕ್ಷಿ ಪುರಾವೆಗಳು ಸಿಕ್ಕಿವೆ. ಹಾಗಾಗಿ ಶಿವರಾತ್ರಿ ಹಬ್ಬಕ್ಕೂ ಮೊದಲೇ ಅ ದೇವಸ್ಥಾನವನ್ನು ಸ್ವಚ್ಛಗೊಳಿಸಿ ಶಿವಲಿಂಗ ಪ್ರತಿಷ್ಠಾಪನೆ ಮಾಡಿ ಪೂಜೆಗೆ ಅವಕಾಶ ಕಲ್ಪಿಸುವಂತೆ ಆಗ್ರಹ ಕೇಳಿಬಂದಿದೆ.
ಈ ಕುರಿತು ಹಿಂದೂ ಜಾಗೃತಿ ಸೇನೆಯ ಲಕ್ಷ್ಮಿಕಾಂತ್ ಸ್ವಾಧಿ ಮಾತನಾಡಿ, ಇನ್ನೂ ಬಹುಮನಿ ಕೋಟೆಯಲ್ಲಿರುವ ಸೋಮೇಶ್ವರ ದೇವಸ್ಥಾನದ ಅಭಿವೃದ್ಧಿಗಾಗಿ ಹಿಂದೂ ಜಾಗೃತಿ ಸೇನೆ ಕಳೆದ ಎರಡು ವರ್ಷಗಳಿಂದ ಹೋರಾಟ ನಡೆಸಿದೆ. ಆದರೆ ಇದೀಗ ಅದಕ್ಕೆ ಮತ್ತೆ ಕೂಗು ಹೆಚ್ಚಾಗಿದೆ. ಕೋಟೆಯಲ್ಲಿ ಶಿವಲಿಂಗ ಸ್ಥಾಪನೆ ಮಾಡುವಂತೆ ಮತ್ತೊಂದು ಬಾರಿ ಜಿಲ್ಲಾಡಳಿತದ ಜೊತೆ ಮನವಿ ಮಾಡಿದ್ದೇವೆ. ಜಿಲ್ಲಾಡಳಿತವೇ ಶಿವಲಿಂಗ ಸ್ಥಾಪನೆ ಮಾಡಿ ಪೂಜೆ ಮಾಡಲಿ. ಇಲ್ಲದೆ ಇದ್ದರೇ ನಾವೇ ದೇವಸ್ಥಾನ ಸ್ವಚ್ಛಗೊಳಿಸಿ ಶಿವಲಿಂಗ ಸ್ಥಾಪನೆ ಮಾಡಿ ಪೂಜೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.