ಬೆಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವೈದ್ಯರು ಜಾಗೃತಿ ಮೂಡಿಸುವ ಹಾಗೂ ಧೈರ್ಯ ತುಂಬುವ ಹೆಸರಲ್ಲಿ ತಪ್ಪು ಸಂದೇಶ ರವಾನೆ ಮಾಡುತ್ತಿದ್ದಾರೆಂಬ ಆರೋಪ ಈಗ ಬಡವರ ಪಾಲಿನ ಆಶಾಕಿರಣ ಡಾ. ರಾಜು ಕೃಷ್ಣಮೂರ್ತಿ ಅವರ ವಿರುದ್ದ ಕೇಳಿ ಬಂದಿದೆ.
ಕೊರೊನಾ ಎರಡನೇ ಅಲೆಯಲ್ಲಿ ಜನರಲ್ಲಿ ತಪ್ಪು ಸಂದೇಶ ರವಾನಿಸುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಡಾ. ರಾಜು ಅವರ ಕ್ಲಿನಿಕ್ ಲೈಸನ್ಸ್ ರದ್ದುಗೊಳಿಸಲು ಕರ್ನಾಟಕ ಮೆಡಿಕಲ್ ಕೌನ್ಸಿಲ್ ಆದೇಶ ನೀಡಿದೆ.
ಮಾಸ್ಕ್ ಹಾಗೂ ದೈಹಿಕ ಅಂತರ ಪಾಲನೆ ಕೊರೊನಾ ತಡೆಯಲು ಪ್ರಯೋಜನವಾಗಲ್ಲ. ಸ್ಯಾನಿಟೈಸರ್ ಬಳಕೆ ಅಪಾಯಕ್ಕೂ ಕಾರಣವಾಗಬಲ್ಲದು. ಎಲ್ಲಕ್ಕಿಂತ ಮುಖ್ಯ ರೋಗಿಗಳಿಗೆ ಧೈರ್ಯ ತುಂಬುವುದು ಮುಖ್ಯ ಎಂದು ಡಾ.ರಾಜು ಸೋಶಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದರು.
ಅಲ್ಲದೇ ಡಾ. ರಾಜು ಅವರ ಸಾಗರ್ ಕ್ಲಿನಿಕ್ ನಲ್ಲಿ ವೈದ್ಯರು, ಶುಶ್ರೂಷಕರು ಸೇರಿದಂತೆ ವೈದ್ಯಕೀಯ ಸಿಬ್ಬಂದಿಗಳು ಮಾಸ್ಕ್, ಸ್ಯಾನಿಟೈಸರ್ ಇಲ್ಲದೇ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿತ್ತು.
ಡಾ. ರಾಜು ಅವರ ಈ ಸಂದೇಶಗಳು ವೈರಲ್ ಆಗುತ್ತಿದ್ದಂತೆ ತಜ್ಞ ವೈದ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ಮಾಸ್ಕ್ ಹಾಗೂ ಸೂಕ್ತ ಮುಂಜಾಗೃತಾ ಕ್ರಮವಿಲ್ಲದೇ ಸ್ವತಃ ವೈದ್ಯರು ರೋಗಿಗೆ ಚಿಕಿತ್ಸೆ ನೀಡುವುದು ಅಪಾಯಕಾರಿ, ಇದರಿಂದ ಬೇರೆಯವರಿಗೆ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಕಿಡಿಕಾರಿದ್ದರು.
ಇದರ ಬೆನ್ನಲ್ಲೇ ಇದೀಗ ಡಾ. ರಾಜು ಮೆಡಿಕಲ್ ಲೈಸನ್ಸ್ ರದ್ದು ಮಾಡಲಾಗಿದ್ದು, ಬೆಂಗಳೂರಿನ ಮೂಡಲಪಾಳ್ಯದಲ್ಲಿರುವ ಸಾಗರ್ ಕ್ಲಿನಿಕ್ ಗೆ ಬೀಗ ಹಾಕಲು ಆದೇಶಿಸಲಾಗಿದೆ.
ಇದನ್ನೂ ಓದಿ: ಕೊರೋನಾದಿಂದ ಯಾರೀ ಉಸಿರಾಟದ ಸಮಸ್ಯೆ ಕಂಡುಬರುತ್ತದೆ? ಇತ್ತೀಚೆಗಷ್ಟೇ ಜಾಗೃತಿ ಮೂಡಿಸಿದ್ದ ಡಾ.ರಾಜು
ಕೊರೊನಾ ಸೋಂಕಿತರು ಹೆಚ್ಚಾಗಿ ಉಸಿರಾಟದ ತೊಂದರೆಯಿಂದಲೇ ಬಳಲುತ್ತಿರುತ್ತಾರೆ. ಆದರೆ ಯಾರಲ್ಲಿ ಈ ಉಸಿರಾಟದ ತೊಂದರೆ ಹೆಚ್ಚು, ಅಂತವರು ಯಾವ ಕ್ರಮವನ್ನು ಅನುಸರಿಸಬೇಕು ಎಂಬ ಮಹತ್ವದ ಸಲಹೆಯೊಂದನ್ನು ಡಾ. ರಾಜು ಕೃಷ್ಣಮೂರ್ತಿ ತಮ್ಮ ಹೊಸ ವಿಡಿಯೋದಲ್ಲಿ ತಿಳಿಸಿದ್ದಾರೆ.
ಕೊರೊನಾ ಸೋಂಕು ಇರುವ ಗರ್ಭಿಣಿಯರಲ್ಲಿ ಹಾಗೂ ದಪ್ಪಕಾಯದವರಲ್ಲಿ ಉಸಿರಾಟದ ತೊಂದರೆ ಹೆಚ್ಚು. ಕಾರಣ ಗರ್ಭಿಣಿಯರಲ್ಲಿ ಹಾಗೂ ದಢೂತಿಕಾಯದವರಲ್ಲಿ ಹೊಟ್ಟೆ ಭಾಗ ದಪ್ಪವಿರುವುದರಿಂದ ಶ್ವಾಸಕೋಶದ ಮೇಲೆ ಒತ್ತಡ ಹೆಚ್ಚುತ್ತದೆ. ಇದರಿಂದಾಗಿ ಉಸಿರಾಟದಲ್ಲಿ ಏರುಪೇರಾಗುತ್ತದೆ.
ಹಾಗಾಗಿ ಇಂತವರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಲ್ಲಿ ಕುಳಿತುಕೊಳ್ಳುವುದನ್ನು ಕಡಿಮೆ ಮಾಡಿ. ಬೆನ್ನಿಗೆ ಎರಡು ದಿಂಬುಗಳನ್ನಿರಿಸಿ 45 ಡಿಗ್ರಿ ಆಂಗಲ್ ನಲ್ಲಿ ವಿಶ್ರಾಂತಿ ಪಡೆಯುವುದು ಉತ್ತಮ. ಉಸಿರಾಟದ ತೊಂದರೆ ಕಂಡುಬಂದಲ್ಲಿ ಓಡಾಡುವುದು ಕೂಡ ಸೂಕ್ತವಲ್ಲ. ಓಡಾಡುವುದರಿಂದ ಸ್ಯಾಚುರೇಷನ್ ಲೆವಲ್ ಕಡಿಮೆಯಾಗಿ ಕುಸಿದು ಬೀಳುವ ಸಾಧ್ಯತೆ ಹೆಚ್ಚು. 15 ದಿನಗಳ ಸಂಪೂರ್ಣ ಬೆಡ್ ರೆಸ್ಟ್ ಮಾಡುವುದು ಒಳ್ಳೆಯದು ಎಂದು ಡಾ.ರಾಜು ಸಲಹೆ ನೀಡಿದ್ದಾರೆ.
ಹಾಗಾದರೆ ಉಸಿರಾಟದ ತೊಂದರೆಯಿಂದ ಪಾರಾಗಲು ಇನ್ನೂ ಏನೆಲ್ಲ ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಈ ಹೊಸ ವಿಡಿಯೋದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಡಾ.ರಾಜು ಅವರ ಈ ವಿಡಿಯೋವನ್ನು ನೀವೂ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.
ಅಷ್ಟೇ ಅಲ್ಲದೆ ಕೊರೋನಾ ಸೋಂಕಿತರಿಗೆ ಧೈರ್ಯ ತುಂಬುತ್ತಿದ್ದ ಡಾ.ರಾಜು ವಿರುದ್ಧ ಕರ್ನಾಟಕ ಮೆಡಿಕಲ್ ಕೌನ್ಸಿಲ್ ಕೈಗೊಂಡಿರುವ ಕ್ರಮದ ಬಗ್ಗೆ ನಿಮ್ಮ ಅಭಿಪ್ರಾಯವೇನು ಅನ್ನೋದನ್ನ ಕಮೆಂಟ್ ಮಾಡುವ ಮೂಲಕ ತಿಳಿಸಿ.