ಗೃಹ ಸಚಿವ ಅರಗ ಜ್ಞಾನೇಂದ್ರ ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ರು ಅಂತ ಸುಳ್ಳು ಸುದ್ದಿ ಹಬ್ಬಿಸಿದ BTv: ತರಾಟೆಗೆ ತೆಗೆದುಕೊಂಡ ರವಿಕಾಂತೇಗೌಡರು

in Kannada News/News 214 views

ದೇಶಾದ್ಯಂತ ಸಂಭವಿಸುವ ರಸ್ತೆ ಅಪಘಾತಗಳಿಂದಾಗಿ ಪ್ರತಿ ವರ್ಷ ಸುಮಾರು 1.5 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ ಎಂಬುದು ಅಂಕಿ ಅಂಶಗಳಿಂದ ಸಾಬೀತಾಗಿದೆ. ಸಂಚಾರ ನಿಯಮಗಳ ಉಲ್ಲಂಘನೆಯೇ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ.

Advertisement

ಸಂಚಾರ ನಿಯಮ ಉಲ್ಲಂಘನೆಗಳಲ್ಲಿ ಸಿಗ್ನಲ್ ಜಂಪ್, ಡ್ರಿಂಕ್ ಅಂಡ್ ಡ್ರೈವ್, ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ ಮಾಡುವುದು ಸೇರಿವೆ. ವಾಹನ ಸವಾರರು ಸಂಚಾರ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲಿ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು 2019 ರಲ್ಲಿ ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೊಳಿಸಿತು.

ಈ ಕಾಯ್ದೆಯನ್ವಯ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತದೆ. ಭಾರೀ ಪ್ರಮಾಣದ ದಂಡ ವಿಧಿಸುವುದರ ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆಸಲಾಗಿತ್ತು.

ಜನಾಕ್ರೋಶಕ್ಕೆ ಮಣಿದ ಕೆಲವು ರಾಜ್ಯ ಸರ್ಕಾರಗಳು ದಂಡದ ಮೊತ್ತವನ್ನು ಕಡಿಮೆ ಮಾಡಿದ್ದವು. ನಮ್ಮ ಬೆಂಗಳೂರಿನಲ್ಲೂ ಸಂಚಾರಿ ಪೊಲೀಸರು ವಾಹನಗಳ ತಪಾಸಣೆ ನಡೆಸಿ ದಂಡ ವಿಧಿಸುತ್ತಿದ್ದಾರೆ.

ಸಂಚಾರಿ ಪೊಲೀಸರು ರಸ್ತೆಗಳ ಮೂಲೆಗಳಲ್ಲಿ, ಸಿಗ್ನಲ್‌ನಲ್ಲಿ, ಮರಗಳ ಮರೆಯಲ್ಲಿ ನಿಂತು ವಾಹನ ದಟ್ಟಣೆ ಹೆಚ್ಚಾಗಿರುವ ಸಂದರ್ಭದಲ್ಲೂ ವಾಹನ ತಡೆದು ದಂಡ ವಿಧಿಸುತ್ತಾರೆ. ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕೆಲವೊಮ್ಮೆ ವಾಹನ ಸವಾರರು ಹಾಗೂ ಸಂಚಾರಿ ಪೊಲೀಸರ ನಡುವೆ ಮಾತಿನ ಚಕಮಕಿ ಸಹ ನಡೆಯುತ್ತದೆ.

ಇನ್ನು ಕೆಲವು ಬಾರಿ ಸಂಚಾರಿ ಪೊಲೀಸರು ಹಾಗೂ ನಿಯಮ ಉಲ್ಲಂಘಿಸುವ ವಾಹನ ಸವಾರರ ನಡುವೆ ‘ರಾಜಿ ಸಂಧಾನಗಳು’ ನಡೆಯುತ್ತಿವೆ. ಸಂಚಾರಿ ಪೊಲೀಸರು ಹೇಗೆಂದರೆ ಹಾಗೆ ವಾಹನಗಳನ್ನು ತಡೆದು ನಿಲ್ಲಿಸುತ್ತಿದ್ದ ಕಾರಣಕ್ಕೆ ಟ್ರಾಫಿಕ್ ಜಾಮ್ ಸಹ ಉಂಟಾಗುತ್ತಿದೆ.

ಈ ಬಗ್ಗೆ ವಾಹನ ಸವಾರರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿ, ಈ ಕಿರಿ ಕಿರಿಯಿಂದ ಮುಕ್ತಿ ನೀಡುವಂತೆ ಮನವಿ ಮಾಡುತ್ತಲೇ ಇದ್ದಾರೆ. ನಿನ್ನೆಯಿಂದ ಬೆಂಗಳೂರಿನ ಸಂಚಾರಿ ಪೊಲೀಸರು ವಾಹನಗಳನ್ನು ತಡೆದು ದಂಡ ವಿಧಿಸುತ್ತಿಲ್ಲ. ಅವರ ಬಳಿಯಿದ್ದ ದಂಡ ಪಾವತಿ ಯಂತ್ರಗಳನ್ನು ವಾಪಸ್ ಪಡೆಯಲಾಗಿದೆ ಎಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಇದರ ಜೊತೆಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸಂಚಾರಿ ಪೊಲೀಸರ ಬಳಿಯಿದ್ದ ದಂಡ ಪಾವತಿ ಯಂತ್ರಗಳನ್ನು ಅಪ್ ಡೇಟ್ ಮಾಡುವ ಸಲುವಾಗಿ ವಾಪಸ್ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ ಎಂದು ಸಹ ವರದಿಯಾಗಿತ್ತು.

ಇದರ ಬಗ್ಗೆ ಸ್ಪಷ್ಟನೆ ನೀಡಿರುವ ಬೆಂಗಳೂರು ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಬಿ.ಆರ್ ರವಿಕಾಂತೇಗೌಡರವರು ದಂಡ ಪಾವತಿ ಯಂತ್ರಗಳನ್ನು ಸಂಚಾರಿ ಪೊಲೀಸರಿಂದ ವಾಪಸ್ ಪಡೆದಿರುವ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವರದಿ ಸಂಪೂರ್ಣ ಸುಳ್ಳು ಎಂದು ತಿಳಿಸಿದ್ದಾರೆ.

ನಿನ್ನೆಯಿಂದ ಬೆಂಗಳೂರಿನ ಸಂಚಾರಿ ಪೊಲೀಸರು ವಾಹನಗಳನ್ನು ತಡೆದು ದಂಡ ವಿಧಿಸುವುದರ ಬದಲು, ರಸ್ತೆಗಳಲ್ಲಿ ಉಂಟಾಗುತ್ತಿರುವ ವಾಹನ ದಟ್ಟಣೆಯನ್ನುನಿವಾರಿಸಲು ಮುಂದಾಗಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ (ಮೊದಲು ಬಿಟಿವಿ ಯಲ್ಲಿ) ವರದಿ ಪ್ರಸಾರವಾಗಿತ್ತು.

ಈ ವರದಿಗಳಿಗೆ ಸ್ವತಃ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತರೇ ಸ್ಪಷ್ಟನೆ ನೀಡಿ ವಾಹನ ಸವಾರರಲ್ಲಿ ಉಂಟಾಗಿದ್ದ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಇನ್ನು ಇತ್ತೀಚಿಗಷ್ಟೇ ಮುಂಬೈ ಪೊಲೀಸ್ ಆಯುಕ್ತರಾದ ಹೇಮಂತ್ ನಾಗರೆಲ್ ಸಂಚಾರಿ ಪೊಲೀಸರಿಗಾಗಿ ಹೊಸ ಆದೇಶವನ್ನು ಹೊರಡಿಸಿದ್ದರು.

ಸಂಚಾರಿ ಪೊಲೀಸರು ದಾಖಲೆಗಳನ್ನು ಪರಿಶೀಲಿಸಲು ವಾಹನಗಳನ್ನು ತಡೆದು ನಿಲ್ಲಿಸುವಂತಿಲ್ಲ ಎಂದು ಈ ಆದೇಶದಲ್ಲಿ ಹೇಳಲಾಗಿತ್ತು. ಮುಂಬೈನಲ್ಲಿ ಸಂಚಾರಿ ಪೊಲೀಸರು ವಾಹನಗಳನ್ನು ನಿಲ್ಲಿಸಿ ದಾಖಲೆಗಳನ್ನು ಪರಿಶೀಲಿಸುವ ವೇಳೆ ಅನಗತ್ಯವಾಗಿ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗುತ್ತಿತ್ತು.

ಇದನ್ನು ಗಮನಿಸಿದ್ದ ಪೊಲೀಸ್ ಆಯುಕ್ತರಾದ ಹೇಮಂತ್ ನಾಗರೆಲ್ ಈ ಆದೇಶವನ್ನು ಹೊರಡಿಸಿದ್ದರು. ಸಣ್ಣಪುಟ್ಟ ಕಾರಣಗಳಿಗಾಗಿ ವಾಹನಗಳನ್ನು ನಿಲ್ಲಿಸುವುದರ ಬದಲು ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಒತ್ತು ನೀಡಬೇಕು ಎಂದು ಅವರು ಸಂಚಾರಿ ಪೊಲೀಸರಿಗೆ ಸೂಚನೆ ನೀಡಿದ್ದರು.

ಸಂಚಾರಿ ಪೊಲೀಸರು ಕೇವಲ ದಾಖಲೆಗಳನ್ನು ಪರಿಶೀಲಿಸಲು ವಾಹನಗಳನ್ನು ನಿಲ್ಲಿಸಬಾರದು. ಬದಲಿಗೆ ಅವರು ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಹೆಚ್ಚು ಒತ್ತು ನೀಡಬೇಕು. ಸಂಚಾರಿ ಪೊಲೀಸರು ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಅವರು ಆದೇಶ ಹೊರಡಿಸಿದ್ದರು.

ಈ ಸುದ್ದಿ ತಿಳಿದ ದೇಶದ ಇತರ ನಗರಗಳ ವಾಹನ ಸವಾರರು ತಮ್ಮ ನಗರಗಳಲ್ಲಿಯೂ ಇದೇ ರೀತಿಯ ಆದೇಶವನ್ನು ಹೊರಡಿಸಬೇಕೆಂದು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಬೆಂಗಳೂರು ನಗರ ಸಂಚಾರಿ ಪೊಲೀಸರಿಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಈಗ ಈ ಸುಳ್ಳು ಸುದ್ದಿಗೆ ತೆರೆ ಬಿದ್ದಿದೆ.

Advertisement
Share this on...