ಪಶ್ಚಿಮ ಬಂಗಾಳದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ (TMC) ಸದ್ಯಕ್ಕೆ ಭಾರತೀಯ ರಾಜಕೀಯದ ಅಪ್ರಸ್ತುತ ಮುಖಗಳ ಅದರಲ್ಲೂ ವಿಶೇಷವಾಗಿ ಬಿಜೆಪಿಯಿಂದ ದೂರ ಸರಿದಿರುವ ನಾಯಕರುಗಳ ನೆಚ್ಚಿನ ತಾಣವಾಗಿದೆ. ಈ ಪಟ್ಟಿಯಲ್ಲಿ ಹೊಸ ಹೆಸರು ಸುಬ್ರಮಣ್ಯಂ ಸ್ವಾಮಿ ಎಂದು ಹೇಳಲಾಗುತ್ತಿದೆ. ಅವರು ಗುರುವಾರ (18 ಆಗಸ್ಟ್ 2022) ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕೋಲ್ಕತ್ತಾ ಸಚಿವಾಲಯದಲ್ಲಿ ಭೇಟಿಯಾದರು.
ಮಮತಾ ಧೈರ್ಯಶಾಲಿ ಮತ್ತು ವರ್ಚಸ್ವಿ ನಾಯಕಿ ಎಂದು ಬಣ್ಣಿಸಿರುವ ಸ್ವಾಮಿ, ಈ ಭೇಟಿಯ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಚಿತ್ರವನ್ನು ಹಂಚಿಕೊಂಡ ಅವರು, “ಇಂದು ನಾನು ಕೋಲ್ಕತ್ತಾದಲ್ಲಿದ್ದೆ. ಅಲ್ಲಿ ನಾನು ಧೈರ್ಯಶಾಲಿ ಮತ್ತು ವರ್ಚಸ್ವಿ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾದೆ. ಕಮ್ಯುನಿಸ್ಟರನ್ನು ನಿರ್ನಾಮ ಮಾಡಿದ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ (ಸಿಪಿಐ-ಎಂ) ವಿರುದ್ಧದ ಅವರ ಹೋರಾಟವನ್ನು ನಾನು ಪ್ರಶಂಸಿಸಿದೆ” ಎಂದಿದ್ದಾರೆ.
Today I was in Kolkata and met the charismatic Mamata Banerjee. She is a courageous person. I admired her fight against the CPM in which she decimated the Communist pic.twitter.com/Gejytxpl4o
— Subramanian Swamy (@Swamy39) August 18, 2022
ಅವರು ಟ್ವೀಟ್ ಮಾಡಿದಾಗಿನಿಂದ ಸುಬ್ರಮಣಿಯನ್ ಸ್ವಾಮಿ ಟಿಎಂಸಿ ಸೇರುವ ಬಗ್ಗೆ ರಾಜಕೀಯ ವಲಯದಲ್ಲಿ ಊಹಾಪೋಹಗಳು ಎದ್ದಿವೆ. ಆದರೆ, ಈ ಹಿಂದೆಯೂ ಇಂತಹ ವರದಿಗಳನ್ನು ಸ್ವಾಮಿ ನಿರಾಕರಿಸಿದ್ದರು. ಈಗಾಗಲೇ ಮಮತಾ ಬ್ಯಾನರ್ಜಿ ಜೊತೆಗಿರುವುದರಿಂದ ಟಿಎಂಸಿ ಸೇರುವ ಅಗತ್ಯವಿಲ್ಲ ಎಂದು ಹೇಳಿದ್ದರು. ಇದಕ್ಕೂ ಮುನ್ನ ಹಲವು ಸಂದರ್ಭಗಳಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸ್ವಾಮಿ ಹೊಗಳಿದ್ದಾರೆ. ಜುಲೈ 1, 2022 ರಂದು ಮಮತಾ ಅವರನ್ನು ಬುದ್ಧಿವಂತ ನಾಯಕಿ ಎಂದು ಬಣ್ಣಿಸಿದ್ದ ಅವರು, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ನಾವು ಪ್ರತಿಭೆಯನ್ನು ಗುರುತಿಸಬೇಕು ಎಂದಿದ್ದರು.
I always knew Mamata Banerjee is an intelligent leader. We have to recognise talent even if we have ideological differences
— Subramanian Swamy (@Swamy39) July 1, 2022
ಕಳೆದ ವರ್ಷ ನವೆಂಬರ್ನಲ್ಲಿಯೂ ಸುಬ್ರಮಣಿಯನ್ ಸ್ವಾಮಿ ಅವರು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದರು. ಉಭಯ ನಾಯಕರ ಈ ಸಭೆ ದೆಹಲಿಯಲ್ಲಿ ನಡೆದಿತ್ತು. ಆ ಸಮಯದಲ್ಲಿ ಅವರು ಟಿಎಂಸಿ ವರಿಷ್ಠರನ್ನು ಜೆಪಿ (ಜೈಪ್ರಕಾಶ್ ನಾರಾಯಣ), ಮೊರಾರ್ಜಿ ದೇಸಾಯಿ, ರಾಜೀವ್ ಗಾಂಧಿ, ಚಂದ್ರಶೇಖರ್ ಮತ್ತು ಪಿವಿ ನರಸಿಂಹ ರಾವ್ ಅವರೊಂದಿಗೆ ಹೋಲಿಸಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ನಲ್ಲಿ ಮಮತಾ ಬ್ಯಾನರ್ಜಿ ದೊಡ್ಡ ನಾಯಕರ ಗುಣಗಳನ್ನು ಹೊಂದಿದ್ದಾರೆ ಎಂದು ಸ್ವಾಮಿ ಹೇಳಿದ್ದರು.
Of the all the politicians I have met or worked with, Mamata Banerjee ranks with JP, Morarji Desai, Rajiv Gandhi, Chandrashekhar, and P V Narasimha Rao who meant what they said and said what they meant. In Indian politics that is a rare quality
— Subramanian Swamy (@Swamy39) November 24, 2021
ಆಗ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡುತ್ತ, “ನಾನು ಭೇಟಿಯಾದ ಮತ್ತು ಕೆಲಸ ಮಾಡಿದ ಎಲ್ಲಾ ನಾಯಕರಲ್ಲಿ, ಮಮತಾ ಬ್ಯಾನರ್ಜಿ ಅವರು ಜಯಪ್ರಕಾಶ್ ನಾರಾಯಣ್ (ಜೆಪಿ), ಮೊರಾರ್ಜಿ ದೇಸಾಯಿ, ರಾಜೀವ್ ಗಾಂಧಿ, ಚಂದ್ರಶೇಖರ್ ಮತ್ತು ಪಿವಿ ನರಸಿಂಹ ರಾವ್ ಅವರನ್ನೇ ಹೋಲುತ್ತಾರೆ. ಈ ನಾಯಕರೆಲ್ಲರ ಮಾತು, ನಡೆ ಒಂದೇ. ಭಾರತದ ರಾಜಕೀಯದಲ್ಲಿ ಇದು ಅಪರೂಪ” ಎಂದಿದ್ದರು.
ಬಿಜೆಪಿಯ ಮಾಜಿ ಸಂಸದ ಸ್ವಾಮಿಗೂ ಮುನ್ನ ಬಿಜೆಪಿ ನಾಯಕರಾದ ಯಶವಂತ್ ಸಿನ್ಹಾ, ಶತ್ರುಘ್ನ ಸಿನ್ಹಾ ಕೂಡ ಟಿಎಂಸಿ ಸೇರಿದ್ದು, ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾದ ನಂತರ ಯಶವಂತ್ ಸಿನ್ಹಾ ಅವರು ಟಿಎಂಸಿಗೆ ರಾಜೀನಾಮೆ ನೀಡಿದ್ದರೆ, ಶತ್ರುಘ್ನ ಸಿನ್ಹಾ ಅವರು ಅಸನ್ಸೋಲ್ ಉಪಚುನಾವಣೆಯಲ್ಲಿ ಗೆದ್ದು ಲೋಕಸಭೆಗೆ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಿರುವಾಗ ಕೆಲ ದಿನಗಳಿಂದ ಸಾರ್ವಜನಿಕವಾಗಿ ಮಮತಾ ಬ್ಯಾನರ್ಜಿ ಅವರನ್ನು ಸ್ವಾಮಿ ಹೊಗಳುತ್ತಿರುವ ರೀತಿಯನ್ನ ನೋಡಿದರೆ ಅವರೂ ಟಿಎಂಸಿಗೆ ಹೋಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.