ಬಿ.ಎಸ್. ಯಡಿಯೂರಪ್ಪ ಭಾರತದ ಅದರಲ್ಲೂ ದಕ್ಷಿಣ ಭಾರತದ ಬಿಜೆಪಿ ಪಾಳಯದಲ್ಲಿ ಅತಿದೊಡ್ಡ ಹೆಸರು. ಅಸಲಿಗೆ ನರೇಂದ್ರ ಮೋದಿ-ಅಮಿತ್ ಶಾ ಎಂಬ ನಾಯಕರು ರಾಷ್ಟ್ರ ರಾಜಕಾರಣದಲ್ಲಿ ಪ್ರವರ್ಧಮಾನಕ್ಕೆ ಬರುವ ಮುಂಚೆಯೇ ಕೇವಲ ಎರಡೇ ದಶಕದಲ್ಲಿ ಕರ್ನಾಟಕದ ಬಿಜೆಪಿಯನ್ನು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸಿದ್ದವರು ಮತ್ತು ದಕ್ಷಿಣ ಭಾರತದಲ್ಲೇ ಮೊದಲ ಬಿಜೆಪಿ ಸರ್ಕಾರವನ್ನು ರಚಿಸಿದ ಹಿರಿಮೆಯೂ ಯಡಿಯೂರಪ್ಪ ಅವರಿಗೆ ಇದೆ. ಲಿಂಗಾಯತರ ನಾಯಕ ಬಿಜೆಪಿ ಹಾಗೂ ಕಟ್ಟರ್ ಆರ್ಎಸ್ಎಸ್ ಎಂಬ ಬಣ್ಣನೆಯ ಹೊರತಾಗಿಯೂ, ಬಿಜೆಪಿ ಪಕ್ಷದ ಇತರ ನಾಯಕರಿಗೆ ಹೋಲಿಸಿದರೆ ಬಿಎಸ್ವೈ ಜಾತ್ಯಾತೀತ ನಾಯಕ ಎಂದು ಹೇಳಲು ಅಡ್ಡಿ ಇಲ್ಲ. ಕಾಂಗ್ರೆಸ್ ಮತ್ತು ಸಮಾಜವಾದ ಚಿಂತನೆಗಳು ಬೇರೂರಿದ್ದ ಕರ್ನಾಟಕದಲ್ಲಿ ಕೋಮು ಹಿನ್ನೆಲೆಯ ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಆದರೆ, ಯಡಿಯೂರಪ್ಪ ಅದನ್ನು ಸಾಧಿಸಿದ್ದರು. ಆದರೆ, ಸಿಎಂ ಸ್ಥಾನದಲ್ಲಿ ಮಾತ್ರ ಅವರಿಗೆ ನೆಮ್ಮದಿಯಾಗಿ ಈವರೆಗೆ ಕೂರಲು ಸಾಧ್ಯವಾಗದೇ ಇದ್ದದ್ದು ದುರಂತ!.
ಹಾಗೆ ನೋಡಿದರೆ ಯಡಿಯೂರಪ್ಪ ಅದೃಷ್ಟದಿಂದ ಸಿಎಂ ಸ್ಥಾನಕ್ಕೆ ಏರಿದವರಲ್ಲ. ಅವರಲ್ಲಿ ನಿಜಕ್ಕೂ ಆ ಸಾಮರ್ಥ್ಯ ಇದೆ. 2008ರಲ್ಲಿ ಜೆಡಿಎಸ್ ಮೈತ್ರಿಯ ಜೊತೆಗೆ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ಏರಿದ್ದ ಸಂದರ್ಭದಲ್ಲಿ ಕರ್ನಾಟಕದ ಜನ ನಿಜಕ್ಕೂ ಬದಲಾವಣೆಗೆ ನಿರೀಕ್ಷೆಯಲ್ಲಿದ್ದರು. ಆದರೆ, ಒಂದೇ ವಾರದಲ್ಲಿ ಅವರನ್ನು ಜೆಡಿಎಸ್ ಕೆಳಗೆ ಇಳಿಸಿದ್ದು, ನಂತರ ವಿಧಾನಸಭೆ ಚುನಾವಣೆ ರಾಜ್ಯದಲ್ಲಿ ವ್ಯಾಪಕವಾಗ ಬಿಎಸ್ವೈ ಅಲೆ ಕಂಡುಬಂದದ್ದು ಇಂದು ಇತಿಹಾಸ.
ಅಸಲಿಗೆ 2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅಲೆ ಕಮಾಲ್ ಮಾಡುವ ಮುನ್ನವೇ ಕರ್ನಾಟಕದಲ್ಲಿನ ಜನ 2008ರ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅಲೆಯನ್ನು ಸಾಕ್ಷೀಕರಿಸಿದ್ದರು. ಆ ಮಟ್ಟಿಗೆ ಅವರೊಬ್ಬ ಬಿಜೆಪಿಯ ಚಾರ್ಮಿಂಗ್ ಲೀಡರ್ ಎನ್ನಲು ಅಡ್ಡಿ ಇಲ್ಲ.
ಆದರೆ, ಕಠಿಣ ಹಾದಿಯಲ್ಲಿ ನಡೆಸಿ ಬಿಜೆಪಿಗೆ ಅಧಿಕಾರದ ರುಚಿ ತೋರಿಸಿದ ಬಿ.ಎಸ್. ಯಡಿಯೂರಪ್ಪ ಅವರನ್ನು ಸ್ವತಃ ಬಿಜೆಪಿ ನಾಯಕರೇ ನೆಮ್ಮದಿಯಾಗಿ ಅಧಿಕಾರ ನಡೆಸಲು ಬಿಡದೇ ಇರುವುದು ವಿಪರ್ಯಾಸವೇ ಸರಿ. 2011ರಲ್ಲಿ ಯಡ್ಡಿ ಬ್ರದರ್ಸ್ ಆದಿಯಾಗಿ ರೇಣುಕಾಚಾರ್ಯವರೆಗೆ ಹಲವರು ಯಡಿಯೂರಪ್ಪ ಹಾದಿಯ ಮುಳ್ಳಾಗಿದ್ದರು. ತದನಂತರ ಬಿಎಸ್ವೈಗೆ ಜೈಲುವಾಸವೂ ಖಾತ್ರಿಯಾಗಿತ್ತು.
ಇದೀಗ ಸಿ.ಪಿ. ಯೋಗೇಶ್ವರ್, ಅರವಿಂದ ಬೆಲ್ಲದ್ ಹಾಗೂ ಹೆಚ್. ವಿಶ್ವನಾಥ್ ಯಡಿಯೂರಪ್ಪ ಅವರಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದ್ದಾರೆ. ಅಷ್ಟಕ್ಕೂ ಈ ಮೂವರು ನಾಯಕರು ಯಡಿಯೂರಪ್ಪ ವಿರುದ್ಧ ತಿರುಗಿ ಬಿದ್ದಿರುವುದು ಏಕೆ? ಇಲ್ಲಿದೆ ಮಾಹಿತಿ..
ಸಿ.ಪಿ. ಯೋಗೇಶ್ವರ್;
ಸಚಿವ ಸಿ.ಪಿ. ಯೋಗೇಶ್ವರ್ ಮೂಲತಃ ಬಿಜೆಪಿ ನಾಯಕರಲ್ಲ. ಅವರಿಗೆ ಆರ್ಎಸ್ಎಸ್ ಹಿನ್ನೆಲೆಯೂ ಇಲ್ಲ. ಆದರೆ, ರಾಮನಗರ, ಕನಕಪುರ, ಚನ್ನಪಟ್ಟಣದಲ್ಲಿ ಬಲವಾಗಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿಗೆ ಗಟ್ಟಿ ನೆಲೆ ಕಲ್ಪಿಸಲು ಯೋಗೇಶ್ವರ್ ಅಗತ್ಯತೆ ಬಿಜೆಪಿಗೆ ಇತ್ತು. ಹೀಗಾಗಿ ಬಿಜೆಪಿ ಪಾಲಾದವರು ಯೋಗೇಶ್ವರ್. ಅಲ್ಲದೆ, ಆಪರೇಷನ್ ಕಮಲದಲ್ಲಿ ಯೋಗೇಶ್ವರ್ ಪಾತ್ರವೂ ಇತ್ತು. ಇದೇ ಕಾರಣಕ್ಕೆ ಚನ್ನಪಟ್ಟಣ ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದರೂ ಯೋಗೇಶ್ವರ್ ರನ್ನು ವಿಧಾನ ಪರಿಷತ್ಗೆ ನಾಮ ನಿರ್ದೇಶನ ಮಾಡಿ ಸಚಿವ ಸ್ಥಾನ ನೀಡಲಾಗಿತ್ತು.
ಆದರೆ, ಯೋಗೇಶ್ವರ್ಗೆ ಅಗತ್ಯ ಇದ್ದದ್ದು ಡಿಸಿಎಂ ಸ್ಥಾನ ಅಥವಾ ಗೃಹ ಇಲಾಖೆ. ಏಕೆಂದರೆ ರಾಮ ನಗರ ಜಿಲ್ಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಬಲವಾದ ಹಿಡಿತ ಹೊಂದಿದ್ದಾರೆ. ಈ ಜಿಲ್ಲೆಯಲ್ಲಿ ಬಿಜೆಪಿ ಜಂಡಾ ಹಾರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಸ್ವತಃ ತಾನು ಮುಂದಿನ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಗೆಲ್ಲಲು ಮತ್ತು ಈ ಇಬ್ಬರೂ ಪ್ರಬಲ ನಾಯಕರ ವಿರುದ್ಧ ಹೋರಾಡಲು ತನಗೆ ಪ್ರಬಲ ಖಾತೆ ಅಗತ್ಯವಿದೆ ಎಂಬುದು ಯೋಗೇಶ್ವರ್ ಅಂಬೋಣ.
ಆದರೆ, ಚುನಾವಣೆಯಲ್ಲಿ ಸೋತವರಿಗೆ ನೀರಾವರಿ ಸಚಿವ ಸ್ಥಾನ ನೀಡಿರುವುದೇ ಹೆಚ್ಚು ಎಂಬುದು ಯಡಿಯೂರಪ್ಪ ವಾದ. ಇದೇ ಕಾರಣಕ್ಕೆ ಯೋಗೇಶ್ವರ್ ಸಿಎಂ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ ಎನ್ನಲಾಗುತ್ತಿದೆ.
ಅರವಿಂದ್ ಬೆಲ್ಲದ್:
ಫ್ರಾನ್ಸ್ನ ಅತ್ಯುತ್ತಮ ವ್ಯವಹಾರ ನಿರ್ವಹಣಾ ವಿಶ್ವವಿದ್ಯಾಲಯದಲ್ಲಿ (Management Institute) ಸ್ನಾತಕೋತ್ತರ ಪದವಿ ಪಡೆದ ಅರವಿಂದ ಬೆಲ್ಲದ್ ಉತ್ತರ ಕರ್ನಾಟಕದ ಪ್ರಬಲ ಕೋಮು ಲಿಂಗಾಯತ ಮತ ಬ್ಯಾಂಕ್ನ ಪ್ರಮುಖ ಮುಖ. ಧಾರವಾಡದ ಇವರು ಎರಡನೇ ತಲೆಮಾರಿನ ರಾಜಕಾರಿಣಿ. ತಂದೆ ಚಂದ್ರಕಾಂತ್ ಬೆಲ್ಲದ್ ಮೊದಲು ಜನತಾ ಪರಿವಾರದಲ್ಲಿದ್ದವರು. ಆಮೇಲೆ ಬಿಜೆಪಿಗೆ ಬಂದರು. ಅವರ ಕ್ಷೇತ್ರವನ್ನು ಮಗ ಅರವಿಂದ ಈಗ ಪ್ರತಿನಿಧಿಸುತ್ತಿದ್ದಾರೆ. 2013ರಿಂದ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಹೇಳಿ ಕೇಳಿ ಲಿಂಗಾಯತ್ ಪಕ್ಷ ಎಂಬ ಬ್ರ್ಯಾಂಡ್ಗೆ ಒಳಗಾಗಿದೆ. ಯಡಿಯೂರಪ್ಪ ಅವರನ್ನು ಕೆಳಗೆ ಇಳಸಬೇಕು ಎಂದರೆ ಮತ್ತೋರ್ವ ಲಿಂಗಾಯತ ನಾಯಕನನ್ನೇ ಆ ಸ್ಥಾನಕ್ಕೆ ಏರಿಸಬೇಕು ಎಂಬುದು ಹೈಕಮಾಂಡ್ಗೂ ಚನ್ನಾಗಿ ಗೊತ್ತು. ಇದೇ ಕಾರಣಕ್ಕೆ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕ ಎಂಬ ಗುರುತು ಹಚ್ಚಿ ಲಕ್ಷ್ಮಣ ಸವದಿ ಅವರನ್ನು ಬೆಳೆಸಲು ಮುಂದಾಗಿತ್ತು. ಇದೇ ಕಾರಣಕ್ಕೆ ಅವರ ಮೇಲೆ ಬ್ಲ್ಯೂ ಬಾಯ್ ಎಂಬ ಆರೋಪ ಇದ್ದಾಗ್ಯೂ ಅವರಿಗೆ ಡಿಸಿಎಂ ಹುದ್ದೆ ನೀಡಲಾಗಿತ್ತು. ಆದರೆ, ಲಕ್ಷ್ಮಣ ಸವದಿ ಈಗ ಸಿಎಂ ರೇಸ್ನಿಂದ ಹಿಂದೆ ಸರಿದಂತೆ ಕಾಣುತ್ತಿದೆ.
ಇದೇ ಕಾರಣಕ್ಕೆ ಲಿಂಗಾಯತ ಮತ್ತು ಯುವ ನಾಯಕ ಎಂಬ ಲೇಬಲ್ ಮೇಲೆ ತಾನೂ ಏಕೆ ಸಿಎಂ ಸ್ಥಾನದ ರೇಸ್ನಲ್ಲಿ ಕಾಣಿಸಿಕೊಳ್ಳಬಾರದು? ಎಂಬ ಮಹತ್ವಾಕಾಂಕ್ಷೆಯಿಂದ ಅರವಿಂದ ಬೆಲ್ಲದ್ ಇದೀಗ ಯಡಿಯೂರಪ್ಪ ವಿರುದ್ಧ ಬಂಡಾಯ ಎದ್ದಿದ್ದಾರೆ. ಆದರೆ, ಇದು ಫಲ ನೀಡುವ ಹೋರಾಟ ಅಲ್ಲ ಎಂಬುದು ಈಗ ಜಗಜ್ಜಾಹೀರಾಗಿದೆ. ಮುಂದಿನ ದಿನಗಳಲ್ಲಿ ಅವರು ಪಕ್ಷದಲ್ಲಿ ನೇಪಥ್ಯಕ್ಕೆ ಸರಿದರೂ ಅಚ್ಚರಿ ಇಲ್ಲ.
ಹೆಚ್. ವಿಶ್ವನಾಥ್:
ಹುಣಸೂರಿನ ಹೆಚ್. ವಿಶ್ವನಾಥ್ ಎಲ್ಲೂ ನೆಲೆ ನಿಲ್ಲದ ರಾಜಕಾರಣಿ. ಯಡಿಯೂರಪ್ಪ ಅವರನ್ನು ಕೋಮುವಾದಿ ರಾಜಕಾರಣಿ ಎಂದು ದಶಕಗಳಿಂದ ವಿರೋಧಿಸುತ್ತಲೇ ಬಿಜೆಪಿ ಸೇರಿದ ಅವರ ಮೇಲೆ ಯಾರಿಗೂ ಹೆಚ್ಚಿನ ನಿರೀಕ್ಷೆ ಏನೂ ಇರಲಿಲ್ಲ. ಅದರಂತೆ ಹುಣಸೂರು ವಿಧಾನಸಭೆ ಉಪ ಚುನಾವಣೆಯಲ್ಲೂ ಅವರು ಸೋಲನುಭವಿಸಿದ್ದರು. ಆದರೂ ಬಿಜೆಪಿ ಸರ್ಕಾರ ರಚನೆಗೆ ಸಹಕರಿಸಿದ ಕಾರಣ ಅವರನ್ನು ವಿಧಾನ ಪರಿಷತ್ಗೆ ನಾಮ ನಿರ್ದೇಶನ ಮಾಡಲಾಗಿತ್ತು. ಆದರೆ, ಸಚಿವ ಸ್ಥಾನ ನೀಡಲಾಗಿಲ್ಲ.
ಸಿಎಂ ಯಡಿಯೂರಪ್ಪ ಹೇಳಿದಂತೆ ತಮಗೆ ಸಿಎಂ ಸ್ಥಾನ ನೀಡಿಲ್ಲ ಎಂಬ ಆಕ್ರೋಶದಲ್ಲಿ ಹೆಚ್. ವಿಶ್ವನಾಥ್ ಅವರ ಬಗ್ಗೆ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. “ಬಿಎಸ್. ಯಡಿಯೂರಪ್ಪ ಅವರಿಗೆ ವಯಸ್ಸಾಗಿದ್ದು, ಮೊದಲಿನಂತೆ ಅವರಿಂದ ಕೆಲಸ ಮಾಡಲಾಗುತ್ತಿಲ್ಲ. ಹೀಗಾಗಿ ಅವರನ್ನು ಬದಲಾಯಿಸಿ” ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ಗೆ ದೂರು ನೀಡಿದ್ದಾರೆ. ಆದರೆ, ಬಿಜೆಪಿ ನಾಯಕತ್ವವನ್ನು ಬದಲಿಸುವಷ್ಟು ಪ್ರಭಾವಿ ನಾಯಕರಾಗಿ ಈಗ ಹೆಚ್. ವಿಶ್ವನಾಥ್ ಉಳಿದಿಲ್ಲ ಎಂಬುದೇ ಸತ್ಯ.
ಹೈಕಮಾಂಡ್ ಬೆಂಬಲ ಇಲ್ಲದೆ ಈವರೆಗೆ ಯಾವ ದೊಡ್ಡ ನಾಯಕರು ಬಿಎಸ್ವೈ ವಿರುದ್ಧ ಬಂಡಾಯ ಎದ್ದ ಇತಿಹಾಸ ಬಿಜೆಪಿ ಪಕ್ಷದಲ್ಲಿ ಇಲ್ಲ. ಆದರೆ, ಮೊದಲ ಬಾರಿಗೆ ಈ ಮೂವರು ನಾಯಕರು ಹೈಕಮಾಂಡ್ ಬೆಂಬಲ ಇಲ್ಲದೆ ಬಿಎಸ್ವೈ ವಿರುದ್ಧ ನಿಂತು ಈಗ ಸೋಲನುಭವಿಸಿದ್ದಾರೆ. ಒಂದು ಹಂತಕ್ಕೆ ಯಡಿಯೂರಪ್ಪ ಸ್ಥಾನ ಈಗ ಮತ್ತಷ್ಟು ಭದ್ರವಾಗಿದೆ. ಆದರೆ, ಬಿಜೆಪಿ ಪಕ್ಷದಲ್ಲಿ ಈ ಮೂವರು ಬಂಡಾಯ ನಾಯಕರ ಸ್ಥಾನದ ಭದ್ರತೆಯ ಬಗ್ಗೆ ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ.