ಅಯೋಧ್ಯೆ ರಾಮಲಲ್ಲಾನ ಪ್ರತಿಷ್ಠಾಪನೆ ಬಳಿಕ ಈಗ ದೂರದ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ರಾಜಧಾನಿ ಅಬುಧಾಬಿಯಲ್ಲೂ’ಮಂದಿರ’ ಸಡಗರ ಕಾಣಿಸಿದೆ. ದಕ್ಷಿಣ ಏಷ್ಯಾದ ಅತೀ ದೊಡ್ಡ, ಭವ್ಯ ಹಿಂದೂ ದೇಗುಲ ಸ್ವಾಮಿನಾರಾಯಣ ಪ್ರತಿಷ್ಠಾಪನೆಗೆ ಸಿದ್ಧಗೊಂಡಿದೆ. ಫೆಬ್ರವರಿ 14ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿರುವ ಈ ಮಂದಿರದ ಸುತ್ತ ಹತ್ತಾರು ಸ್ವಾರಸ್ಯಕರ ಸಂಗತಿಗಳು ಈಗ ತಲೆಯತ್ತಿವೆ. ಅರಬ್ ದೇಶದಲ್ಲಿ ಹಿಂದೂ ಮಂದಿರದ ಪರಿಕಲ್ಪನೆ ಹುಟ್ಟಿಕೊಂಡದ್ದು ಹೇಗೆ? ಯಾಕೆ? ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಇದು ಯುಎಇ-ಭಾರತ ಸಾಮರಸ್ಯದ ಹಬ್ಬ. ಅಬುಧಾಬಿ-ದುಬೈ ಹೆದ್ದಾರಿಯ ರಹ್ಬಾ ಪ್ರದೇಶದ ಅಬು ಮುರೇಖಾದ ವೈಭವದ ಸ್ವಾಮಿನಾರಾಯಣ ಮಂದಿರದ ಸ್ವಾರಸ್ಯ. ದುಬೈಯಿಂದ 50 ನಿಮಿಷ, ಅಬುಧಾಬಿಯಿಂದ 35 ನಿಮಿಷವಷ್ಟೇ ದೂರ. 2024ರ ಫೆಬ್ರವರಿ 14 (ವಸಂತ ಪಂಚಮಿ)ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಈ ಮಂದಿರವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ರಾಮ ಮಂದಿರ ಲೋಕಾರ್ಪಣೆ ವೈಭವದ ಜತೆಗೆ ರಹ್ಬಾದ ಸ್ವಾಮಿನಾರಾಯಣ ಮಂದಿರದ ಸಂಭ್ರಮವೂ ಸೇರಿಕೊಳ್ಳಲಿದೆ. ಇದು ಹಿಂದೂ-ಮುಸ್ಲಿಂ ಎರಡು ಸಮುದಾಯಗಳು ಸಾಮರಸ್ಯದಿಂದ ಬೆರೆತು ನಿರ್ಮಿಸಿದ ಭವ್ಯ ಮಂದಿರ. 24 ಎಕರೆ ಭೂಮಿಯನ್ನು ಮಂದಿರ ನಿರ್ಮಾಣಕ್ಕೆಂದು ಅಬುಧಾಬಿ ದೊರೆ ಕಾಣಿಕೆ ನೀಡಿದ್ದಾರೆ. ಜಗತ್ತಿನ ವಿವಿಧ ಭಾಗಗಳಲ್ಲಿ ನೆಲೆ ನಿಂತ ಧನಿಕ ಹಿಂದೂಗಳು ಈ ಮಂದಿರ ನಿರ್ಮಾಣಕ್ಕೆ ಖರ್ಚಾದ 700 ಕೋಟಿ ರೂಪಾಯಿ ದೇಣಿಗೆ ಭರಿಸಿದ್ದಾರೆ. ಮುಸ್ಲಿಂ ದೊರೆಗಳ ಆಡಳಿತ ಭೂಮಿಯಲ್ಲಿ ಈ ವರ್ಷವೇ ಮಂದಿರ ಲೋಕಾರ್ಪಣೆಗೊಳ್ಳುತ್ತಿರುವುದು ವಿಶೇಷ.
1997ರಲ್ಲಿ ಪ್ರಮುಖ್ ಸ್ವಾಮಿ ಮಹಾರಾಜ್ ಅಬುಧಾಬಿಗೆ ಭೇಟಿ ನೀಡಿದ ಸಂದರ್ಭ ದೇಗುಲ ನಿರ್ಮಿಸುವ ಚಿಂತನೆ ಹುಟ್ಟಿತು. 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬುಧಾಬಿಗೆ ತೆರಳಿದಾಗ ಕ್ರೌನ್ ಪ್ರಿನ್ಸ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಆಲ್ ನಹ್ಯಾನ್ ಮಂದಿರ ನಿರ್ಮಿಸಲು 14 ಎಕರೆ ಭೂಮಿ ಉಡುಗೊರೆ ಘೋಷಿಸಿದರು. ಇದು ದೇವಾಲಯ ನಿರ್ಮಾಣಕ್ಕೆ ಬುನಾದಿ ಆಯಿತು. ಬಾಫ್ಸ್ ಸಂಸ್ಥೆ ಮಂದಿರ ನಿರ್ಮಾಣದ ಉಸ್ತುವಾರಿ ವಹಿಸಿತು.
ಅಕ್ಷರಧಾಮ ಮಾದರಿ ಮಂದಿರ
BAPS ನಿರ್ಮಿತ ಸ್ವಾಮಿನಾರಾಯಣ ಮಂದಿರ 14 ಎಕರೆ ವ್ಯಾಪ್ತಿಯಲ್ಲಿದ್ದು, 180 ಅಡಿ ಅಗಲ, 262 ಅಡಿ ಉದ್ದ, 108 ಅಡಿ ಎತ್ತರದಲ್ಲಿದೆ. 2 ಗುಮ್ಮಟಗಳು, 7 ಶಿಖರಗಳು, 12 ಸಾಮ್ರಾನ್ ಮತ್ತು 410 ಸ್ತಂಭಗಳಿವೆ. 7 ಗೋಪುರಗಳಿದ್ದು, ಮಂದಿರವನ್ನು 40 ಸಾವಿರ ಕ್ಯೂಬಿಕ್ ಮೀಟರ್ ಅಮೃತಶಿಲೆ, 1,80,000 ಘನ ಮೀಟರ್ ಮರಳುಗಲ್ಲು ಮತ್ತು 18 ಲಕ್ಷ ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ. ಅಕ್ಷರಧಾಮ ಮಾದರಿಯಲ್ಲೇ ಈ ದೇವಾಲಯವನ್ನು ನಿರ್ಮಿಸಲಾಗಿದ್ದು ಇದಕ್ಕೆ ರಾಜಸ್ಥಾನ ಮರಳುಕಲ್ಲುಮತ್ತು ಯುರೋಪಿಯನ್ ಮಾರ್ಬಲ್ ಬಳಸಲಾಗಿದೆ. ಇನ್ನೊಂದು ವಿಶೇಷವೆಂದರೆ ಈ ದೇಗುಲ ನಿರ್ಮಾಣಕ್ಕೆ ಎಲ್ಲೂ ಉಕ್ಕು, ಕಬ್ಬಿಣ ಬಳಸಿಲ್ಲ. ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿದ್ದು ಆರ್‌ಎಸ್ಪಿ ಆರ್ಕಿಟೆಕ್ಟ್ ಪ್ಲಾನರ್ಸ್ ಆಂಡ್ ಎಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್.
ಸಂಪೂರ್ಣವಾಗಿ ಕಲ್ಲಿನಿಂದ ಕೆತ್ತಲಾಗಿದೆ. ಮೂರು ವರ್ಷಗಳಲ್ಲಿ700ಕ್ಕೂ ಹೆಚ್ಚು ಕಂಟೈನರ್‌ಗಳಲ್ಲಿ 20 ಸಾವಿರ ಟನ್‌ಗಳಿಗಿಂತ ಹೆಚ್ಚು ಕಲ್ಲು ಮತ್ತು ಅಮೃತಶಿಲೆ ಅಬುಧಾಬಿಗೆ ರವಾನಿಸಲಾಗಿದೆ. ಅಡಿಪಾಯವನ್ನು ತುಂಬಲು ಹಾರುಬೂದಿ ಬಳಸಲಾಗಿದೆ. ಗಂಗಾ-ಯಮುನಾ ನದಿ ಪ್ರತಿನಿಧಿಸುವ ಎರಡು ನೀರಿನ ತೊರೆಗಳಿವೆ. ಸರಸ್ವತಿ ನದಿಯನ್ನು ಪ್ರತಿನಿಧಿಸುವ ಬೆಳಕಿನ ಕಿರಣ ಮಂದಿರ ರಚನೆಯ ಅಡಿಯಲ್ಲಿ ಅಳವಡಿಕೆಯಾಗಿದೆ. ಒತ್ತಡ, ತಾಪಮಾನ ಮತ್ತು ಭೂಕಂಪಗಳ ಲೈವ್‌ಡೇಟಾ ಒದಗಿಸಲು ನಾನಾ ಹಂತಗಳಲ್ಲಿ300ಕ್ಕೂ ಹೆಚ್ಚು ಸಂವೇದಕಗಳನ್ನು ಜೋಡಿಸಲಾಗಿದೆ. ರಾಜಸ್ಥಾನ ಮತ್ತು ಗುಜರಾತ್‌ನ 2 ಸಾವಿರಕ್ಕೂ ಹೆಚ್ಚು ಕುಶಲಕರ್ಮಿಗಳು ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ನವಿಲುಗಳು, ಆನೆಗಳು, ಕುದುರೆಗಳು, ಒಂಟೆಗಳು, ಚಂದ್ರನ ಹಂತಗಳು ಮತ್ತು ಡೋಲು ಬಾರಿಸುವ ಅಥವಾ ಸಿತಾರ್ ನುಡಿಸುವ ಸಂಗೀತಗಾರರ ಸಂಕೀರ್ಣ ವಿನ್ಯಾಸಗಳನ್ನು ಕೆತ್ತಲಾಗಿದೆ.
ಭೂಮಿ ನೀಡಿದ ಪ್ರಿನ್ಸ್
2015ರಲ್ಲಿ ಕ್ರೌನ್ ಪ್ರಿನ್ಸ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್, ಮಂದಿರ ನಿರ್ಮಿಸಲು 14 ಎಕರೆ ಭೂಮಿ ಉಡುಗೊರೆ ನೀಡಿದ್ದರು. ಈ ಘೋಷಣೆ ಮಾಡಿದ ಬಳಿಕ ಪ್ರಿನ್ಸ್ ಶೇಖ್ ಭಾರತಕ್ಕೆ ಆಗಮಿಸಿ ಇಲ್ಲಿನ ಅಕ್ಷರಧಾಮ ದೇಗುಲ ವೀಕ್ಷಿಸಿದರು. ವ್ಯವಸ್ಥೆ, ಅಚ್ಚುಕಟ್ಟು, ವಿನ್ಯಾಸ, ಪಾರ್ಕಿಂಗ್ ವ್ಯವಸ್ಥೆ, ಕಲೆಗೆ ಮಾರು ಹೋದ ಅವರು ಇದೇ ಮಾದರಿಯಲ್ಲೇ ಅಬುಧಾಬಿಯಲ್ಲೂ ದೇಗುಲ ನಿರ್ಮಾಣವಾಗಬೇಕು ಎಂದರು. ಅದಕ್ಕೆ ಬಾಫ್ಸ್ ಸಂಸ್ಥೆ ಹೆಚ್ಚುವರಿಯಾಗಿ ಜಾಗ ಕೇಳಿದಾಗ ಮತ್ತೆ 10 ಎಕರೆ ಸೇರ್ಪಡೆ ಮಾಡಿ ಒಟ್ಟು 24 ಎಕರೆ ಭೂಮಿಯನ್ನು ಅಬುಧಾಬಿ ಆಡಳಿತ ನೀಡಿದೆ.
ಅರಬ್ ರಾಷ್ಟ್ರದಲ್ಲಿ ಒಟ್ಟು 30 ಲಕ್ಷಕ್ಕೂ ಅಧಿಕ ಅನಿವಾಸಿ ಭಾರತೀಯರಿದ್ದಾರೆ. ಪ್ರತಿವರ್ಷ 5-10 ಲಕ್ಷ ಭಾರತೀಯರು ಪ್ರವಾಸ ಹೋಗುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡೇ ಅಬುಧಾಬಿ ಆಡಳಿತ ದೇಗುಲಕ್ಕೆ ಜಾಗ ನೀಡಿದೆ. ಇದರಿಂದ ಈ ವ್ಯಾಪ್ತಿಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರವಾಸೋದ್ಯಮ ಬೆಳೆಯಲಿದೆ ಎನ್ನುತ್ತಾರೆ ಅನಿವಾಸಿ ಭಾರತೀಯ ಸರ್ವೋತ್ತಮ ಶೆಟ್ಟಿ.
ವಿಶ್ವ ಆವರಿಸಿದ ಬಾಫ್ಸ್
ಬೋಚಸನ್ಯಾಸಿ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥಾ(ಬಾಫ್ಸ್) ವಿಶ್ವದಾದ್ಯಂತ ಪಸರಿಸಿರುವ ಆಧ್ಯಾತ್ಮಿಕ ಸಂಸ್ಥೆ. 18ನೇ ಶತಮಾನ ಕೊನೆಯಲ್ಲಿ ಭಗವಾನ್ ಸ್ವಾಮಿನಾರಾಯಣ ಯುಗವಾಗಿದ್ದು, 1907ರಲ್ಲಿ ಶಾಸ್ತ್ರೀಜಿ ಮಹಾರಾಜ್(1865-1951) ಬಾಫ್ಸ್ ಸಂಸ್ಥೆ ಸ್ಥಾಪಿಸಿದರು. ಪ್ರಸ್ತುತ ಪವಿತ್ರ ಮಹಂತ್ ಸ್ವಾಮಿ ಮಹಾರಾಜ್ ನಾಯಕತ್ವದಲ್ಲಿ ವಿಶ್ವದಾದ್ಯಂತ 1,200 ಮಂದಿರಗಳು, 3,850 ಕೇಂದ್ರಗಳು ಮತ್ತು 55 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರಿದ್ದಾರೆ. ಅಬುಧಾಬಿಯಲ್ಲಿರುವ ಬಾಫ್ಸ್ ಹಿಂದೂ ಮಂದಿರ ಸಾಂಪ್ರದಾಯಿಕ ದೇಗುಲವಾಗಿ ರೂಪುಗೊಂಡಿದೆ.
ದೇಗುಲ ಪ್ರತಿಷ್ಠಾಪನೆಗೆ 1,500 ಮಂದಿ ಮಾತ್ರ
ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ದೇಶಾದ್ಯಂತ 8 ಸಾವಿರ ಮಂದಿಗೆ ಮಾತ್ರ ಅಧಿಕೃತವಾಗಿ ಆಹ್ವಾನಿಸಿ, ಪ್ರವೇಶಾವಕಾಶ ನೀಡಲಾಗಿತ್ತು. ಇದೇ ಮಾದರಿಯಲ್ಲಿಅಬುಧಾಬಿಯ ಸ್ವಾಮಿನಾರಾಯಣ ಮಂದಿರದಲ್ಲಿಪ್ರಧಾನಿ ಮೋದಿ ಸೇರಿದಂತೆ ನಾನಾ ಗಣ್ಯರು ಭಾಗವಹಿಸುತ್ತಿದ್ದು, ಭದ್ರತೆ ದೃಷ್ಟಿಯಿಂದ ಆಹ್ವಾನಿತರ ಸಂಖ್ಯೆಯನ್ನು 1,500ಕ್ಕೆ ಸೀಮಿತಗೊಳಿಸಲಾಗಿದೆ.
ಈ ಮಂದಿರಕ್ಕೂ ಇಟ್ಟಿಗೆ ದಾನ
ಅಯೋಧ್ಯೆಯಲ್ಲಿ ನಿರ್ಮಾಣಗೊಂಡ ಅತ್ಯಪೂರ್ವ ರಾಮ ಮಂದಿರಕ್ಕೆ ದೇಶಾದ್ಯಂತ ಭಕ್ತಾದಿಗಳು ಇಟ್ಟಿಗೆ ಕೊಡುಗೆ ನೀಡುವ ಮೂಲಕ ದೇವರ ಸೇವೆ ಮಾಡಿದರು. ಇದೇ ಮಾದರಿಯಲ್ಲಿಅಬುಧಾಬಿಯ ನಾಗರಿಕರು ಮತ್ತು ಅಬುಧಾಬಿಯಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರು, ವಿದೇಶಿಗರು ಇಟ್ಟಿಗೆ ಕೊಡುಗೆಯಾಗಿ ನೀಡಿದ್ದಾರೆ. ಒಂದು ಇಟ್ಟಿಗೆಗೆ 100 ದಿರಮ್‌ನಂತೆ(2,300 ರೂ.) ಸಾವಿರಾರು ಇಟ್ಟಿಗೆಗಳನ್ನು ದಾನರೂಪದಲ್ಲಿ ನೀಡಿದ್ದಾರೆ.
• ಸ್ವಾಮಿ ನಾರಾಯಣ ಮಂದಿರದಲ್ಲಿಏಕಕಾಲಕ್ಕೆ 8 ಸಾವಿರದಿಂದ 10 ಸಾವಿರ ಜನರು ದರ್ಶನ ಪಡೆಯಬಹುದು.
• ರಾಮಾಯಣ, ಶಿವಪುರಾಣ, ಭಾಗವತ, ಮಹಾಭಾರತದ ಕೆತ್ತನೆಗಳು ಮತ್ತು ಜಗನ್ನಾಥಜಿ, ಸ್ವಾಮಿನಾರಾಯಣ, ಪದ್ಮಾವತಿ-ವೆಂಕಟೇಶ್ವರ ಮತ್ತು ಅಯ್ಯಪ್ಪನಿಗೆ ಸಂಬಂಧಿಸಿದ ಚರಿತ್ರೆ, ಪುರಾಣ ಕಥೆಗಳ ಕೆತ್ತನೆ ಇದೆ.
• ಫೆ.14ರಂದು ನಡೆಯುವ ಬಾಫ್ಸ್ ಮಂದಿರದ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿಯುಎಇ 7 ಎಮಿರೇಟ್ಸ್ (ಅಬುಧಾಬಿ, ದುಬೈ, ಶಾರ್ಜಾ, ಅಜ್ಮನ್, ಉಮ್‌ಆಲ್ ಕ್ವೈನ್, ರಸ್ ಆಲ್ ಕೈಮಾ, ಫುರ್ಜಾರಿಯಾ)ಗಳ ಅನಿವಾಸಿ ಭಾರತೀಯರು ಪಾಲ್ಗೊಳ್ಳಲಿದ್ದಾರೆ.