ಬೆಂಗಳೂರು: ಅಯೋಧ್ಯೆಯಲ್ಲಿ ಬಾಲ ರಾಮನ ಕಣ್ಣನ್ನು ಕೆತ್ತಲು ಬಳಸಿದ ಚಿನ್ನದ ಉಳಿ ಮತ್ತು ಬೆಳ್ಳಿಯ ಸುತ್ತಿಗೆಯನ್ನು ಅರುಣ್ ಯೋಗಿರಾಜ್ ಇಂದು ಬಹಿರಂಗ ಪಡಿಸಿದ್ದಾರೆ.
ಅರುಣ್ ಯೋಗಿರಾಜ್ ಅವರು ಎಕ್ಸ್‌ನಲ್ಲಿ, “ಬೆಳ್ಳಿಯ ಸುತ್ತಿಗೆ, ಚಿನ್ನದ ಉಳಿಯನ್ನು ಹಂಚಿಕೊಳ್ಳಲು ನಾನು ಯೋಚಿಸಿದೆ. ಇದರಲ್ಲಿ ನಾನು ರಾಮ ಲಲ್ಲಾನ ದೈವಿಕ ಕಣ್ಣುಗಳನ್ನು (ನೇತ್ರೋನ್ಮಿಲನ) ಕೆತ್ತಿದ್ದೇನೆ” ಎಂದು ಬರೆದಿದ್ದಾರೆ.
Thought of sharing this Silver hammer with the golden chisel using which I carved the divine eyes (Netronmilana )of Ram lalla, Ayodhya pic.twitter.com/95HNiU5mVV
— Arun Yogiraj (@yogiraj_arun) February 10, 2024
ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್‌ಆರ್ ರಂಗನಾಥ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನೇತ್ರೋನ್ಮಿಲನ ಮಾಡಲೆಂದೇ ಒಂದು ಮುಹೂರ್ತ ನೀಡಿದ್ದರು. ಆ ಮುಹೂರ್ತದಲ್ಲೇ ಬೆಳ್ಳಿಯ ಸುತ್ತಿಗೆ ಮತ್ತು ಚಿನ್ನದ ಉಳಿಯನ್ನು ಬಳಸಿ ಕಣ್ಣನ್ನು ಕೆತ್ತಿದ್ದೆ ಎಂದು ವಿವರಿಸಿದರು.
ಅರುಣ್ ಶಿಲ್ಪ ಕೆತ್ತನೆ ಮಾಡುವಾಗ ಒಂದು ಕಣ್ಣನ್ನೇ ಕಳೆದುಕೊಳ್ಳುವ ಸ್ಥಿತಿ ಎದುರಾಗಿತ್ತು. ಮೂರ್ತಿ ಕೆತ್ತನೆ ಮಾಡುವಾಗ ಒಂದು ಕಲ್ಲಿನ ಚೂರು ಅರುಣ್ ಯೋಗಿರಾಜ್ ಕಣ್ಣಿನ ಗುಡ್ಡೆಗೆ ಬಡಿದಿತ್ತು. ಕಣ್ಣಿಗೆ ಗಾಯ ಸಹ ಆಗಿತ್ತು. ತಕ್ಷಣ ಅಯೋಧ್ಯೆ ಟ್ರಸ್ಟ್‌ನವರು ಅವರನ್ನು ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಿಸಿ, ಕಲ್ಲಿನ ಚೂರನ್ನು ಹೊರ ತೆಗೆಸಿದ್ದರು ಎಂದು ಅರುಣ್ ಅವರ ಪತ್ನಿ ವಿಜೇತಾ ತಿಳಿಸಿದ್ದರು.
ಸರಿಸುಮಾರು 15 ದಿನಗಳ ಕಾಲ ಅರುಣ್ ಒಂದು ಕಣ್ಣು ಮುಚ್ಚಿಕೊಂಡೇ ಶಿಲ್ಪ ಕೆತ್ತನೆ ಮಾಡಿದ್ದರು. ಈ ಬಗ್ಗೆ ನನಗಾಗಲಿ ನಮ್ಮ, ಕುಟುಂಬಸ್ಥರಿಗಾಗಿ ಹೇಳಿರಲಿಲ್ಲ. ಅಲ್ಲಿ ಕೆಲಸ ಮಾಡುತ್ತಿದ್ದವರು ವಿಷಯ ತಿಳಿಸಿದಾಗ ತುಂಬಾ ಭಯವಾಗಿತ್ತು. ಚಿಕಿತ್ಸೆ ಪಡೆದ ಒಂದೆರಡು ದಿನಗಳಲ್ಲಿ ಅವರೇ ಕರೆ ಮಾಡಿ ವಿಷಯ ತಿಳಿಸಿ ಆರಾಮಾಗಿದ್ದೇನೆ ಎಂದು ಹೇಳಿದರು. ನಂತರ ನಮಗೆ ಸಮಾಧಾನವಾಯಿತು. ಅಷ್ಟಾದರೂ ವಿಶ್ರಾಂತಿ ತೆಗೆದುಕೊಳ್ಳದೇ ಶಿಲ್ಪ ಕೆತ್ತನೆ ಮಾಡಿದ್ದರು. ಇದೆಲ್ಲವು ಆ ಭಗವಂತನದ್ದೇ ಕೃಪೆ ಎಂದು ಹೇಳಿ ಪತ್ನಿ ಭಾವುಕರಾಗಿದ್ದರು.