ನರೇಂದ್ರ ಮೋದಿ ಭಾರತದ ಪ್ರಧಾನಿ ಆದ ಮೇಲೆ ಡಿಜಿಟಲ್ ಯುಗದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಿದೆ ಅನ್ನುವುದನ್ನು ಪ್ರತಿಪಕ್ಷಗಳೂ ಒಪ್ಪಿಕೊಳ್ಳುತ್ತವೆ. ಕೇವಲ ಒಂದು ಮೇಲ್ ವರ್ಷಗಳ ಕಾಲ ಆಗದ ಕೆಲಸವನ್ನು ಮಾಡಿಸಿದೆ. ಹಣ ಪಾವತಿಯೂ ಚಿಟಿಕೆ ಹೊಡೆದಷ್ಟೇ ಸುಲಭವಾಗಿದೆ.
ಸಚಿವಾಲಯಗಳು ಜನರ ತುದಿ ಬೆರಳಿಗೆ ಸಿಗುತ್ತಿದ್ದು, ಇಲಾಖೆಗಳ ಎಲ್ಲಾ ಮಾಹಿತಿಯೂ ಕ್ಷಣ ಮಾತ್ರದಲ್ಲೇ ಜನರಿಗೆ ಸಿಗುತ್ತಿದೆ. ಅದರಲ್ಲೂ ಕಳೆದ ಆರು ವರ್ಷದಿಂದ ನರೇಂದ್ರ ಮೋದಿಯವರ ಪ್ರಧಾನಮಂತ್ರಿ ಕಾರ್ಯಾಲಯ ಹಲವು ಕ್ರಾಂತಿಕಾರಿ ಹೆಜ್ಜೆಗಳನ್ನು ಇಟ್ಟು ಜನಸಾಮಾನ್ಯರೂ ಪ್ರಧಾನಮಂತ್ರಿ ಕಚೇರಿಯನ್ನು ತಲುಪಬಹುದು ಎಂಬುವುದನ್ನು ನಿರೂಪಿಸಿದೆ. ಕುಗ್ರಾಮದ ರಸ್ತೆಗಳಿಂದ ಹಿಡಿದು ಪುಟಾಣಿಗಳ ಮನವಿಗೂ ಪ್ರಧಾನಮಂತ್ರಿ ಕಾರ್ಯಾಲಯ ಸ್ಪಂದಿಸಿದೆ. ಅಷ್ಟರ ಮಟ್ಟಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯ ಕಚೇರಿ ಜನಸ್ನೇಹಿಯಾಗಿದೆ.
ದಾಖಲೆ ಪತ್ರಕ್ಕಾಗಿ 16 ತಿಂಗಳು ಸತಾಯಿಸಿದ ಗ್ರಾಮಕರಣಿಕ
ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತಹದ್ದೇ ಒಂದು ಅಪರೂಪದ ವಿದ್ಯಮಾನ ನಡೆದಿದೆ. ಲಂಚದಾಸೆಗೆ ದಾಖಲೆ ಪತ್ರಕ್ಕಾಗಿ 16 ತಿಂಗಳು ಸತಾಯಿಸಿದ ಗ್ರಾಮಕರಣಿಕನ ವಿರುದ್ಧ ವ್ಯಕ್ತಿಯೋರ್ವರು ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ದೂರು ನೀಡಿದ್ದು, 16 ತಿಂಗಳಲ್ಲಿ ಆಗದ ಕೆಲಸ ಕೆಲವೇ ಗಂಟೆಗಳಲ್ಲಿ ಆಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ.
ಕಡಬ ತಾಲೂಕಿನ ಕೋಡಿಂಬಾಳದ ನಿವಾಸಿ ಧರ್ಮಪಾಲ ಗೌಡ ಎಂಬುವವರು ಕಳೆದ 16 ತಿಂಗಳ ಹಿಂದೆ ತನ್ನ ಜಮೀನಿನ 11 ಇ- ನಕ್ಷೆಗಾಗಿ ಕೋಡಿಂಬಾಳ ಗ್ರಾಮ ಪಂಚಾಯತ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನಕ್ಷೆಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಗ್ರಾಮ ಕರಣಿಕನಿಗೆ ಧರ್ಮಪಾಲ ನೀಡಿದ್ದರು. ಆದರೆ ತಿಂಗಳು ಕಳೆದಂತೆ ಗ್ರಾಮ ಪಂಚಾಯತ್‌ನಲ್ಲಿ ಅರ್ಜಿ ಮುಂದೆ ಹೋಗಲೇ ಇಲ್ಲ.
ಕಚೇರಿಗೆ ಅಲೆದು ಸುಸ್ತಾದ ಧರ್ಮಪಾಲಗೌಡರು
ಯಾವುದೇ ಕಾರಣವಿಲ್ಲದೇ ಗ್ರಾಮ ಕರಣಿಕ ಹರೀಶ್ ಮಾತ್ರ ನಾಳೆ ಬಾ, ನಾಡಿದ್ದು ಬಾ ಅಂತಾನೇ ಇದ್ದ. ಪದೇ ಪದೇ ವಿಚಾರಿಸಿದಾಗ ಪುತ್ತೂರು ಉಪ ವಿಭಾಗಾಧಿಕಾರಿ ಕಚೇರಿಗೆ ಕಡತ ಹೋಗಿದೆ ಎಂಬ ಸಿದ್ಧ ಉತ್ತರವನ್ನು ಗ್ರಾಮಕರಣಿಕ ನೀಡುತ್ತಿದ್ದ. ಅತ್ತ ಪುತ್ತೂರು ಕಚೇರಿಯಲ್ಲಿ ಕೇಳಿದಾಗ ಅರ್ಜಿ ಬಂದೇ ಇಲ್ಲ ಎಂಬ ಉತ್ತರ ಸಿಕ್ಕಿತ್ತು. ಬರೋಬ್ಬರಿ 16 ತಿಂಗಳುಗಳ ಕಾಲ ಕಚೇರಿಗೆ ಅಲೆದು ಸುಸ್ತಾದ ಧರ್ಮಪಾಲಗೌಡರು, ಕೊನೆಗೆ ದಾರಿ ಕಾಣದೇ ಯಾರದ್ದೋ ಸಲಹೆ ಪಡೆದು ಈ ಬಗ್ಗೆ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆಯುವ ನಿರ್ಧಾರ ಮಾಡಿದರು.
ಮುಖ್ಯ ಕಾರ್ಯದರ್ಶಿಗೆ ಸಮಸ್ಯೆ ಬಗೆಹರಿಯುವಂತೆ ಸೂಚನೆ
ಧರ್ಮಪಾಲಗೌಡ ಎಲ್ಲಾ ದಾಖಲೆಗಳನ್ನು ಲಗತ್ತೀಕರಿಸಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದಾರೆ. ಅಲ್ಲದೇ ಒಂದೂವರೆ ವರ್ಷದಿಂದ ತಾನು ಅನುಭವಿಸಿದ ಸಂಕಟ, ಅಲೆದಾಟ ಎಲ್ಲವನ್ನೂ ಬರೆದುಕೊಂಡಿದ್ದಾರೆ. ಪ್ರಧಾನಿ ಕಾರ್ಯಾಲಯಕ್ಕೆ ಧರ್ಮಪಾಲ ಗೌಡರ ಪತ್ರ ತಲುಪುತ್ತಿದ್ದಂತೆಯೇ ಕಾರ್ಯಾಲಯದ ಅಧಿಕಾರಿಗಳು ಅಮಾಯಕ ಗೌಡರ ಮನವಿಗೆ ಸ್ಪಂದಿಸಿದ್ದಾರೆ.
ಪ್ರಧಾನಮಂತ್ರಿ ಕಾರ್ಯಾಲಯ ಶೀಘ್ರ ಸ್ಪಂದನೆ ನೀಡಿದ್ದು, ಪ್ರಧಾನಮಂತ್ರಿ ಕಾರ್ಯಾಲಯ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸಮಸ್ಯೆ ಬಗೆಹರಿಯುವಂತೆ ಸೂಚನೆ ನೀಡಿದೆ. ರಾಜ್ಯ ಮುಖ್ಯ ಕಾರ್ಯದರ್ಶಿಯವರಿಂದ ನೇರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಆದೇಶ ಬಂದಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಕಡಬ ತಹಶೀಲ್ದಾರ್‌ಗೆ ಮಾಹಿತಿ ಕಲೆ ಹಾಕುವಂತೆ ಸೂಚನೆ ನೀಡಿದ್ದಾರೆ.
ಧರ್ಮಪಾಲರ ಗೌಡರ ನಕ್ಷೆಯನ್ನು ನೀಡಿದ ಹರೀಶ್
ಕಡಬ ತಹಶೀಲ್ದಾರ, ಗ್ರಾಮಕರಣಿಕನ ಬಳಿ ಘಟನೆ ಬಗ್ಗೆ ವಿವರ ಕೇಳಿದ್ದಾರೆ. ಉನ್ನತ ಅಧಿಕಾರಿಗಳು ವಿವರಣೆ ಕೇಳುತ್ತಿದ್ದಂತೆಯೇ ಗ್ರಾಮ ಕರಣಿಕ ಹರೀಶ್ ದಡಬಡಾಯಿಸಿ ಧರ್ಮಪಾಲರ ಗೌಡರ ನಕ್ಷೆಯನ್ನು ನೀಡಿದ್ದಾನೆ. ಕೊನೆಗೂ ಧರ್ಮಪಾಲ ಗೌಡರ 16 ತಿಂಗಳ ಅಲೆದಾಟಕ್ಕೆ ಮುಕ್ತಿ ಸಿಕ್ಕಿದೆ.
ಪ್ರಧಾನಮಂತ್ರಿ ಕಾರ್ಯಾಲಯದಿಂದ ಬಂದ ಉತ್ತರಕ್ಕೆ ಧರ್ಮಪಾಲ ಗೌಡರೂ ಖುಷಿಯಾಗಿದ್ದಾರೆ. 16 ತಿಂಗಳು ಅನುಭವಿಸಿದ ಕಷ್ಟ ಅವಮಾನಗಳೆಲ್ಲಾ ಕೇವಲ ಒಂದು ಪತ್ರದಿಂದ ಶಮನವಾಗಿದೆ ಅನ್ನೋದು ಸ್ವತಃ ಧರ್ಮಪಾಲ ಗೌಡರಿಗೆ ನಂಬುವುದಕ್ಕೆ ಸಾಧ್ಯವಾಗ್ತಿಲ್ಲ. ಜನಸಾಮಾನ್ಯನ ಸಣ್ಣ ಸಮಸ್ಯೆಗೆ ಪ್ರಧಾನಮಂತ್ರಿ ಕಾರ್ಯಾಲಯವೇ ಮಧ್ಯ ಪ್ರವೇಶ ಮಾಡಿ ಪರಿಹಾರ ನೀಡಿರುವುದು ಧರ್ಮಪಾಲ ಗೌಡರಿಗೆ ಖುಷಿ ತಂದಿದೆ.