ಈ ಸೇನಾಧಿಕಾರಿ ವಯಸ್ಸು ಇನ್ನೂ 35. ಆಗಲೇ ಸೇನಾ ಕಾರ್ಯಚರಣೆಯಲ್ಲಿ ದೃಷ್ಟಿ ಕಳೆದುಕೊಂಡರು. ಹಾಗಿದ್ದೂ, ತಮ್ಮ ಅಪಾರ ಆತ್ಮವಿಶ್ವಾಸದಿಂದ ಒಂದಾದ ಮೇಲೊಂದು ಸಾಧನೆಯ ಶಿಖರವೇರುತ್ತಲೇ ಇದ್ದಾರೆ. ಈಗಲೂ ಕೂಡಾ ಭಾರತ ಸೇನೆಯ ಏಕೈಕ ಅಂಧ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮನುಷ್ಯನ ಆತ್ಮವಿಶ್ವಾಸಕ್ಕೆ ಎಂಥಾ ಅಡ್ಡಿ ಆತಂಕಗಳನ್ನೂ ಕುಟ್ಟಿ ಕೆಡವಬಲ್ಲ ತಾಕತ್ತಿರುತ್ತದೆ ಎಂಬುದಕ್ಕೆ ಲೆಫ್ಟಿನೆಂಟ್ ಕರ್ನಲ್ ದ್ವಾರಕೇಶ್ ಉತ್ತಮ ಉದಾಹರಣೆ. ವಿಶೇಷ ಸಂದರ್ಶನವೊಂದರಲ್ಲಿ, ಲೆಫ್ಟಿನೆಂಟ್ ಕರ್ನಲ್ ದ್ವಾರಕೇಶ್ ಅವರ ಜೀವನ, ದೃಢತೆ, ಶೌರ್ಯ ಮತ್ತು ಸಮರ್ಪಣೆಯ ಒಳನೋಟಗಳನ್ನು ಹಂಚಿಕೊಂಡಿದ್ದಾರೆ.
ಸೇನಾಧಿಕಾರಿಯಾಗಿದ್ದ ದ್ವಾರಕೇಶ್ ಚಿಕ್ಕ ವಯಸ್ಸಿನಲ್ಲೇ ಗಡಿ ಕಾರ್ಯಾಚರಣೆಯ ವೇಳೆ ದೃಷ್ಟಿ ಕಳೆದುಕೊಂಡರು. ಹಾಗಿದ್ದೂ, ಸೇನೆಯಲ್ಲೇ ಉಳಿದು ಭಾರತದ ಏಕೈಕ ಅಂಧ ಸೇನಾಧಿಕಾರಿ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಶೂಟಿಂಗ್‌ನಲ್ಲಿ ರಾಷ್ಟ್ರೀಯ ಪದಕಗಳನ್ನು ಗೆದ್ದು ಸೈ ಎನಿಸಿಕೊಂಡಿದ್ದಾರೆ. ಸಿಯಾಚಿನ್ ಗ್ಲೇಸಿಯರ್ ಅನ್ನು ಹತ್ತಿ ವಿಶ್ವದಾಖಲೆ ಮಾಡಿ ಸ್ಫೂರ್ತಿಯಾಗಿದ್ದಾರೆ. ಈ ಬಾರಿ ಗಣರಾಜ್ಯೋತ್ಸವ ಪೆರೇಡ್‌ಗೆ ಪ್ರಧಾನಿ ಮೋದಿ ಕಚೇರಿಯಿಂದ ಆಹ್ವಾನವನ್ನೂ ಪಡೆದಿದ್ದಾರೆ. ಅವರ ಈ ಎಲ್ಲ ಸಾಧನೆಗಳ ಬಗ್ಗೆ, ಅಂಧತೆಯ ಬಗ್ಗೆ ಕೇಳಿದಾಗ ಅವರು ಹೇಳುವುದು, ‘ನಾನೊಬ್ಬ ಸೈನಿಕ, ನಾನು ಒಪ್ಪಿಕೊಳ್ಳದ ಹೊರತು ಸೋಲು ನನ್ನ ಬಳಿ ಸುಳಿಯದು’.
ದ್ವಾರಕೇಶ್ ವಯಸ್ಸಿನ್ನೂ 35. ವರ್ಷಗಳ ಹಿಂದೆ ಗಡಿ ಕಾರ್ಯಾಚರಣೆಯ ವೇಳೆ ದೃಷ್ಟಿ ಕಳೆದುಕೊಂಡಿದ್ದ ಲೆಫ್ಟಿನೆಂಟ್ ಕರ್ನಲ್ ದ್ವಾರಕೇಶ್ ಅವರು ಪ್ಯಾರಾ ಶೂಟಿಂಗ್‌ನಲ್ಲಿ ಪದಕ ಗೆದ್ದು ಸ್ಫೂರ್ತಿಯ ಬೆಳಕಾಗಿದ್ದಾರೆ. ತಮ್ಮ ಸವಾಲಿನ ಸಂದರ್ಭಗಳಿಂದ ಹಿಂಜರಿಯದೆ, ಹಲವಾರು ಪುರಸ್ಕಾರಗಳನ್ನು ಗಳಿಸಿದ್ದಾರೆ.
ದೈನಂದಿನ ಕಾರ್ಯಗಳು ಮತ್ತು ಕರ್ತವ್ಯಗಳನ್ನು ಜಯಿಸಲು ತಂತ್ರಜ್ಞಾನದ ಮೊರೆ ಹೋಗಿರುವ ದ್ವಾರಕೇಶ್, ಕೃತಕ ಬುದ್ಧಿಮತ್ತೆ (AI) ಬಳಸಿಕೊಂಡು ದೈನಂದಿನ ಕಾರ್ಯಗಳನ್ನು ಸುಲಭಸಾಧುವಾಗಿಸಿಕೊಂಡಿದ್ದಾರೆ. ಶೂಟಿಂಗ್‌ನಲ್ಲಿ ರಾಷ್ಟ್ರೀಯ ಪದಕಗಳನ್ನು ಗೆದ್ದುಕೊಂಡಿದ್ದಲ್ಲದೆ ಸಿಯಾಚಿನ್ ಗ್ಲೇಸಿಯರ್ ಅನ್ನು ಏರುವ ಕಠಿಣ ಕಾರ್ಯವನ್ನು ಸಾಧಿಸಿದ ಅಧಿಕಾರಿ, ‘ನಾನು ನನ್ನ ದೃಷ್ಟಿಯನ್ನು ಕಳೆದುಕೊಂಡಿದ್ದೇನೆ, ನನ್ನ ಜೀವನದ ದೃಷ್ಟಿಕೋನವನ್ನಲ್ಲ’ ಎಂದು ಪ್ರತಿಪಾದಿಸುತ್ತಾರೆ.
ಕಣ್ಣುಗಳನ್ನು ಕಳೆದುಕೊಂಡ ಘಟನೆಯ ಬಗ್ಗೆ ಹೇಳುತ್ತಾ, ‘ಶತ್ರು ಸೇನೆಯವರು ಜೀವ ಕಳೆದುಕೊಂಡರು. ನಾನು ಕಣ್ಣು ಕಳೆದುಕೊಂಡೆನಷ್ಟೇ. 8 ತಿಂಗಳು ಆಸ್ಪತ್ರೆಯಲ್ಲಿದ್ದೆ’ ಎನ್ನುತ್ತಾರೆ.
ಸಧ್ಯ ಸೇನೆಯಲ್ಲಿ ಆಫೀಸ್ ಅಡ್ಮಿನಿಸ್ಟ್ರೇಶನ್ ಕೆಲಸ ನೋಡಿಕೊಳ್ಳುವ ದ್ವಾರಕೇಶ್‌ಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಹಾಯಕ್ಕೆ ಬಂದಿದೆಯಂತೆ. ಇದರ ಸಹಾಯದಿಂದ ಕಂಪ್ಯೂಟರ್, ಫೋನ್‌ಗಳ ಟೆಕ್ಸ್ಟ್ ಓದುತ್ತಾರಂತೆ. ಇನ್ನು ಶೂಟಿಂಗ್‌ಗಾಗಿ ಇನ್ಫ್ರಾರೆಡ್ ಸೆನ್ಸಾರ್ ಶೂಟಿಂಗ್ ಇಕ್ವಿಪ್‌ಮೆಂಟ್ ಬಳಸಿ ಅಭ್ಯಸಿಸಿದ್ದಾರೆ. ದೇಶದ ಇಬ್ಬರು ಅಂಧ ಶೂಟರ್‌ಗಳಲ್ಲಿ ದ್ವಾರಕೇಶ್ ಒಬ್ಬರಾಗಿದ್ದಾರೆ.
ತಮ್ಮ ಪ್ರಯಾಣದಲ್ಲಿ ನಾಯಕತ್ವದ ಪ್ರಭಾವವನ್ನು ಒತ್ತಿ ಹೇಳುವ ಪ್ರೇರಣೆಯ ಮೂಲವಾಗಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸುವ ಲೆಫ್ಟಿನೆಂಟ್ ಕರ್ನಲ್ ದ್ವಾರಕೇಶ್ ಅವರ ಕಥೆಯು ಇಂದಿನ ತಲೆಮಾರಿಗೆ ಸ್ಪೂರ್ತಿದಾಯಕವಾಗಿದೆ.