ಬೆಂಗಳೂರು: ಇತ್ತೀಚಿಗೆ ಕನ್ನಡ ಭಾಷೆಯನ್ನು ಅತ್ಯಂತ ಕೆಟ್ಟ ಭಾಷೆ ಎಂದು ತೋರಿಸಿ ಅಪಮಾನ ಮಾಡಿದ್ದ ಗೂಗಲ್ ಮತ್ತೊಂದು ಎಡವಟ್ಟು ಮಾಡಿದೆ.
ತಮಿಳು ಚಿತ್ರವೊಂದರ ಗೂಗಲ್ ಪುಟದಲ್ಲಿ ಕನ್ನಡ ಚಿತ್ರರಂಗದ ಮೇರುನಟ ದಿವಂಗತ ಡಾ. ರಾಜ್ ಕುಮಾರ್ ಅವರ ಫೋಟೋವನ್ನು ತಪ್ಪಾದ ಹೆಸರಿನಲ್ಲಿ ತೋರಿಸಲಾಗಿದೆ. ಇದರಿಂದ ಆಕ್ರೋಶಗೊಂಡಿರುವ ಅಭಿಮಾನಿಗಳು ಕೂಡಲೇ ಅದನ್ನು ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.
ಆರ್ ಮಾಧವನ್ ಮತ್ತು ಸೇತುಪತಿ ವಿಜಯ್ ಅಭಿಯನದ ತಮಿಳಿನ ವಿಕ್ರಮ್ ವೇದ ಸಿನಿಮಾ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಕೊಟ್ಟರೆ ಸಿನಿಮಾ ಪಾತ್ರವರ್ಗದವರ ಪಟ್ಟಿಯಲ್ಲಿ ಡಾ. ರಾಜ್ ಕುಮಾರ್ ಹೆಸರೂ ಇದೆ. ಡಾ. ರಾಜಕುಮಾರ್ ಅವರ ಫೋಟೋ ಬೇರೆ ಹೆಸರಿನಲ್ಲಿ ತೋರಿಸುತ್ತಿದ್ದು, ಹಾಫ್ ಬಾಯಿಲ್ಡ್ (ಅರೆಬೆಂದ ಪಾತ್ರ) ಎಂದು ಅವಮಾನ ಮಾಡಲಾಗಿದೆ.
ಸ್ಯಾಂಡಲ್ ವುಡ್ ನ ನಟ ನಿರ್ದೇಶಕ ರಿಷಬ್ ಈ ವಿಷಯವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಸ್ತಾಪಿಸಿದ್ದು, ಗೂಗಲ್ ಗೆ ರಿಪೋರ್ಟ್ ಮಾಡುವಂತೆ ಕರೆ ನೀಡಿದ್ದಾರೆ. ನಟ ಪಿಡಿ ಸತೀಶ್ ಚಂದ್ರ ಕೂಡಾ ಇದೇ ರೀತಿಯ ಮನವಿ ಮಾಡಿದ್ದಾರೆ.
ಎಲ್ಲರಲ್ಲೂ ಒಂದು ಮನವಿ, ವಿಕ್ರಂ ವೇದ ತಮಿಳು ಚಿತ್ರದ ಗೂಗಲ್ ಪುಟದಲ್ಲಿ ನಮ್ಮ ಡಾ. ರಾಜಕುಮಾರ್ ಅವರ ಫೋಟೋ ಬೇರೆ ಹೆಸರಿನಲ್ಲಿ (half boil) ಅಂತ ನಮೂದಿಸಲಾಗಿದೆ, ದಯಮಾಡಿ ಅದನ್ನು ಗೂಗಲ್ ಗೆ report ಮಾಡಿ, ತಪ್ಪು ಸರಿ ಹೋಗಲಿ… pic.twitter.com/ah8p7Ish8H
— Rishab Shetty (@shetty_rishab) June 21, 2021
ಕನ್ನಡ ಕೆಟ್ಟ ಭಾಷೆ ಎಂಬುದರ ಬಗ್ಗೆ ಕ್ಷಮೆಕೋರಿದ್ದ ಗೂಗಲ್
ಭಾರತದ ಕೆಟ್ಟ ಭಾಷೆ ಎಂಬ ಸರ್ಚ್ನಲ್ಲಿ ಕನ್ನಡ ಎಂಬ ಉತ್ತರವನ್ನು ತೋರಿಸುವ ಮೂಲಕ ಗೂಗಲ್ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿತ್ತು. ಇದು ಕನ್ನಡಿಗರಲ್ಲಿ ಸಾಕಷ್ಟು ಆಕ್ರೋಶಕ್ಕೂ ಕಾರಣವಾಗಿತ್ತು. ಇದೇ ಕಾರಣಕ್ಕೆ ಕನ್ನಡಿಗರು ಮಾಹಿತಿ ತಂತ್ರಜ್ಞಾನದ ದೈತ್ಯ ಸಂಸ್ಥೆ ಗೂಗಲ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಮರ ಸಾರಿದ್ದರು.
ಅಲ್ಲದೇ ರಾಜಕೀಯ ನಾಯಕರು, ಸಿನಿಮಾ ನಟ-ನಟಿಯರು ಜನಸಾಮಾನ್ಯರು ಗೂಗಲ್ ಸಂಸ್ಥೆ ವಿರುದ್ಧ ಮುಗಿಬಿದ್ದಿದ್ದರು. ಈ ಕುರಿತು ಗೂಗಲ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದರು. ಅಲ್ಲದೇ, ಕನ್ನಡವನ್ನು ಕೆಟ್ಟ ಭಾಷೆ ಎಂದು ಬಿಂಬಿಸಿದ್ದ ಗೂಗಲ್ ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶ್ರೀ ಅರವಿಂದ ಲಿಂಬಾವಳಿ ತಿಳಿಸಿದ್ದರು.
— Google India (@GoogleIndia) June 3, 2021
ಈ ಎಲ್ಲಾ ಘಟನೆಗಳ ಬೆನ್ನಲ್ಲೇ ಗೂಗಲ್ ಈಗ ಅಧಿಕೃತವಾಗಿ ಕನ್ನಡಿಗರ ಕ್ಷಮೆಯಾಚಿಸಿತ್ತು.ತಮ್ಮ ಅಧಿಕೃತ ಟ್ವೀಟರ್ ಪೇಜ್ನಲ್ಲಿ ಗೂಗಲ್ ಕನ್ನಡದಲ್ಲಿಯೇ ಕನ್ನಡಿಗರ ಕ್ಷಮೆಯಾಚಿಸಿತ್ತು. ಹುಡುಕುವುದು ಪರಿಪೂರ್ಣವಾಗಿರುವುದಿಲ್ಲ. ಕೆಲವೊಮ್ಮೆ ಇಂಟರ್ನೆಟ್ನಲ್ಲಿ ನಿರ್ದಿಷ್ಟ ಹುಡುಕಾಟಕ್ಕೆ ಬರುವ ಫಲಿತಾಂಶ ಆಶ್ಚರ್ಯವನ್ನುಂಟು ಮಾಡುತ್ತವೆ.
ಇದು ಸೂಕ್ತವಲ್ಲ ಎಂಬುದು ನಮಗೆ ಗೊತ್ತು. ಆದರೆ ಯಾವುದೇ ಒಂದು ಸಮಸ್ಯೆ ಎದುರಾದಾಗ ಮತ್ತು ಅದು ನಮ್ಮ ಗಮನಕ್ಕೆ ಬಂದಾಗ ನಾವು ತಕ್ಷಣಕ್ಕೆ ಸಮರ್ಪಕ ಕ್ರಮ ತೆಗೆದುಕೊಳ್ಳುತ್ತೇವೆ, ನಮ್ಮ ಅಲ್ಗೊರಿದಂ ಸುಧಾರಣೆ ಮಾಡುವ ನಿಟ್ಟಿನಲ್ಲಿ ಸದಾ ಕ್ರಿಯಾಶೀಲರಾಗಿರುವುದನ್ನು ಮುಂದುವರೆಸುತ್ತೇವೆ. ತಪ್ಪು ಅರ್ಥ ಬಂದಿರುವುದಕ್ಕೆ ಮತ್ತು ಯಾವುದೇ ಭಾವನೆಗಳಿಗೆ ಧಕ್ಕೆಯಾಗಿದ್ದರೆ ನಾವು ಕ್ಷಮೆ ಯಾಚನೆ ಮಾಡುತ್ತೇವೆ ಎಂದು ಗೂಗಲ್ ತಿಳಿಸಿತ್ತು.
ಇದನ್ನೂ ಓದಿ: ಗೂಗಲ್ ನಲ್ಲಿ ಸರ್ಚ್ ಹಿಸ್ಟರಿಯನ್ನ ತ್ವರಿತವಾಗಿ ಹೇಗೆ ತೆಗೆಯಬಹುದು?
ಸರ್ಚ್ ಹಿಸ್ಟರಿಗಳನ್ನು ಸುಲಭವಾಗಿ ಅಳಿಸುವಂತೆ ಗೂಗಲ್ ಇದೀಗ ಹೊಸ ಫೀಚರ್ ಒಂದನ್ನು ಹೊರತಂದಿದೆ. ಆ ಮೂಲಕ ಬಳಕೆದಾರರು ಕಳೆದ 15 ನಿಮಿಷಗಳಲ್ಲಿ ಗೂಗಲ್ ನಲ್ಲಿ ಜಾಲಾಡಿದ ಮಾಹಿತಿಗಳನ್ನು ಸುಲಭವಾಗಿ ಮತ್ತು ತ್ವರಿತವಾಗಿ ಡಿಲೀಟ್ ಮಾಡಬಹುದು. ಈ ಆಯ್ಕೆಯನ್ನು “ಡಿಲೀಟ್ ಲಾಸ್ಟ್ 15 ಮಿನಿಟ್” ಎಂದೇ ಕರೆಯಲಾಗಿದೆ.
ಗೂಗಲ್ ಸಂಸ್ಥೆ ಹೇಳುವಂತೆ “ಕಳೆದ ಹಲವು ವರ್ಷಗಳಿಂದ ಬಳಕೆದಾರರು ಈ ಫೀಚರ್ ಗೆ ಬೇಡಿಕೆಯಿರಿಸಿದ್ದರು. ಆದರೆ ಕ್ಲಿಯರ್ ಹಿಸ್ಟರಿ ಆಯ್ಕೆ ಮಾತ್ರ ಇಲ್ಲಿಯವರೆಗೂ ಚಾಲ್ತಿಯಲ್ಲಿತ್ತು. ಇನ್ನು ಮುಂದೆ “ ಡಿಲೀಟ್ ಲಾಸ್ಟ್ 15 ಮಿನಿಟ್” ಆಯ್ಕೆಯೂ ಲಭ್ಯವಾಗಲಿದೆ” ಎಂದಿದೆ.
ಹೊಸ ಆಯ್ಕೆಯ ಮೂಲಕ ಗೂಗಲ್ ಬಳಕೆದಾರರು ತಮ್ಮ ಡೇಟಾದ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಬಹುದು ಎಂದು ಸಂಸ್ಥೆ ಹೇಳಿಕೊಂಡಿದೆ.
ಈ ಫೀಚರ್ ಬಳಸುವುದು ಹೇಗೆ ?
ಗೂಗಲ್ ಅಪ್ಲಿಕೇಶನ್ ತೆರೆದು ಅದರಲ್ಲಿರುವ ಪ್ರೊಫೈಲ್ ಫೋಟೋ ಮೇಲೆ ಕ್ಲಿಕ್ ಮಾಡಿದಾಕ್ಷಣ ಸೆಟ್ಟಿಂಗ್ ಮೆನು ಕಾಣಿಸಿಕೊಳ್ಳುತ್ತದೆ.
ಸೆಟ್ಟಿಂಗ್ ನಲ್ಲಿ ಡಿಲೀಟ್ ಲಾಸ್ಟ್ 15 ಮಿನಿಟ್ ಎಂಬ ಆಯ್ಕೆ ಗೋಚರಿಸುತ್ತದೆ. ಅದನ್ನು ಟ್ಯಾಪ್ ಮಾಡಿದಾಕ್ಷಣ ಸರ್ಚ್ ಹಿಸ್ಟರಿಗಳು ಡಿಲೀಟ್ ಆಗುತ್ತವೆ.
ಇದು ಮಾತ್ರವಲ್ಲದೆ ಗೂಗಲ್ ‘ಕಳೆದ ಒಂದು ಗಂಟೆ’ ಮತ್ತು ‘ಕಳೆದ ಒಂದು ದಿನ’ದ ಸರ್ಚ್ ಹಿಸ್ಟರಿ ಡಿಲೀಟ್ ಮಾಡುವ ಆಯ್ಕೆಯನ್ನು ಕಲ್ಪಿಸಿದೆ. ಆದರೆ ಇದು ಪ್ರಸ್ತುತ ಲ್ಯಾಪ್ ಟಾಪ್ ಮತ್ತು ಡೆಸ್ಕ್ ಟಾಪ್ ಆವೃತ್ತಿಗಳಲ್ಲಿ ಮಾತ್ರ ಲಭ್ಯವಿದೆ.
ಗೂಗಲ್ ಕ್ರೋಮ್ ನಲ್ಲಿ ಸರ್ಚ್ ಹಿಸ್ಟರಿ ಕ್ಲಿಯರ್ ಮಾಡುವುದು ಹೇಗೆ ?
ಗೂಗಲ್ ಕ್ರೋಮ್ ನಲ್ಲಿ “ಮೋರ್” ಎಂಬ ಆಯ್ಕೆಯು ಕಾಣಿಸುತ್ತದೆ. ಇದರಲ್ಲಿ ಹಿಸ್ಟರಿ ಎಂಬ ಫೀಚರ್ ಇದ್ದು, ಇದರ ಮೂಲಕ ಸುಲಭವಾಗಿ ‘ಕ್ಲಿಯರ್ ಬ್ರೌಸಿಂಗ್ ಡೇಟಾ’ ಮಾಡಬಹುದು.