ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರ್ಕಾರದ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.
ಹೌದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತನ್ನ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು ವಲಸಿಗ ಸಚಿವರಿಗೆ ಹಿಂದಿನ ಖಾತೆಗಳನ್ನೇ ಮುಂದುವರಿಸಿರುವ ಸಿಎಂ ಬೊಮ್ಮಾಯಿ ಹೊಸದಾಗಿ ಸೇರ್ಪಡೆಯಾದವರಿಗೆ ಬಂಪರ್ ಖಾತೆಗಳನ್ನು ನೀಡಿದ್ದಾರೆ.
ಮೊದಲ ಬಾರಿಗೆ ಸಚಿವ ಸ್ಥಾನ ಪಡೆದ ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ರಿಗೆ ಗೃಹ ಖಾತೆ ನೀಡಲಾಗಿದೆ. ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರಿಗೆ ಇಂಧನ ಖಾತೆ, ತಿಪಟೂರು ಶಾಸಕ ಬಿ.ಸಿ.ನಾಗೇಶ್ ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.
ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿದಾಗ ‘ಜನತಾ ಪರಿವಾರ’ ದಿಂದ ಬಂದವರು ಎಂಬ ಮಾತುಗಳು ಮುನ್ನೆಲೆಗೆ ಬಂದಿದ್ದವು. ವಿರೋಧ ಪಕ್ಷಗಳು ಕೂಡಾ ಇದೇ ಅಂಶವನ್ನು ಇಟ್ಟುಕೊಂಡು ಟೀಕೆ ಮಾಡಿದ್ದವು. ಸಂಘ ಪರಿವಾರ ಅಥವಾ ಮೂಲ ಬಿಜೆಪಿಗರಿಗೆ ಸಿಎಂ ಸ್ಥಾನ ನೀಡದೆ, ಹೊರಗಿನಿಂದ ಬಂದವರಿಗೆ ನೀಡಲಾಗಿದೆ ಎಂಬ ಮಾತುಗಳು ಕೇಳಿಬಂದಿತ್ತು.
ಆದರೆ ಸಚಿವರ ಖಾತೆ ಹಂಚಿಕೆ ಸಮಯದಲ್ಲಿ ಈ ಮಾತುಗಳನ್ನು ತೊಡೆದುಹಾಕುವ ಪ್ರಯತ್ನ ಮಾಡಿರುವುದು ಎದ್ದು ಕಾಣುತ್ತಿದೆ. ಸಂಘ ಪರಿವಾರ ಮೂಲದಿಂದ ಬಂದ ಸುನೀಲ್ ಕುಮಾರ್, ಅರಗ ಜ್ಞಾನೇಂದ್ರ, ಬಿ.ಸಿ.ನಾಗೇಶ್ ಗೆ ಪ್ರಮುಖ ಖಾತೆಗಳನ್ನು ನೀಡಿರುವುದು ಇದಕ್ಕೆ ಕಾರಣ. ಯಡಿಯೂರಪ್ಪ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ನಿರ್ವಹಿಸುತ್ತಿದ್ದ ಗೃಹ ಖಾತೆಯನ್ನು ಮೊದಲ ಬಾರಿಗೆ ಸಚಿವರಾದ ಅರಗ ಜ್ಞಾನೇಂದ್ರ ಅವರಿಗೆ ನೀಡಲಾಗಿದೆ. ಈ ಹಿಂದೆ ಡಿ ಕೆ ಶಿವಕುಮಾರ್, ನಂತರ ಸ್ವತಃ ಯಡಿಯೂರಪ್ಪ ತನ್ನ ಬಳಿ ಇಟ್ಟುಕೊಂಡಿದ್ದ ಪವರ್ ಪುಲ್ ಇಂಧನ ಖಾತೆಯನ್ನು ಸುನೀಲ್ ಕುಮಾರ್ ಅವರಿಗೆ ನೀಡಲಾಗಿದೆ. (ಶೋಭಾ ಕರಂದ್ಲಾಜೆ ಅವರೂ ಈ ಖಾತೆಯನ್ನು ನಿರ್ವಹಿಸಿದ್ದರು)
ವಲಸಿಗರ ರಕ್ಷಣೆ ಮಾಡಿದ ಬಿಎಸ್ ವೈ: ಕಾಂಗ್ರೆಸ್- ಜೆಡಿಎಸ್ ನಿಂದ ವಲಸೆ ಬಂದು ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿ ಸಚಿವರಾದವರು ತಮ್ಮ ಹಳೆಯ ಖಾತೆಗಳನ್ನೇ ಮರಳಿ ಪಡೆದಿದ್ದಾರೆ. ವಲಸಿಗರ ರಕ್ಷಣೆ ಮಾಡುವಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸಫಲರಾಗಿದ್ದಾರೆ.
ರಾಮುಲು, ಸಿ.ಸಿ.ಪಾಟೀಲ್ ಗೆ ಪ್ರಮೋಶನ್?: ಕಳೆದ ಬಾರಿ ಆರೋಗ್ಯ ಖಾತೆಯನ್ನು ಬಿಟ್ಟುಕೊಟ್ಟಿದ್ದ ಶ್ರೀರಾಮುಲು ಗೆ ಈ ಬಾರಿ ಪ್ರಮೋಶನ್ ನೀಡಲಾಗಿದೆ. ಯಡಿಯೂರಪ್ಪ ಸರ್ಕಾರದಲ್ಲಿ ಲಕ್ಷ್ಷಣ ಸವದಿ ನಿರ್ವಹಿಸಿದ್ದ ಸಾರಿಗೆ ಖಾತೆಯನ್ನು ಈ ಬಾರಿ ರಾಮುಲು ಪಡೆದುಕೊಂಡಿದ್ದಾರೆ. ಕಳೆದ ಬಾರಿ ಸಣ್ಣ ಕೈಗಾರಿಕೆ ಸಚಿವರಾಗಿದ್ದ ಸಿ.ಸಿ.ಪಾಟೀಲ್ ಅವರಿಗೆ ಪ್ರಮುಖ ಲೋಕೊಪಯೋಗಿ ಖಾತೆ ನೀಡಲಾಗಿದೆ.
ಮೊದಲ ಬಾರಿಗೆ ರಾಜ್ಯ ಸಂಪುಟದಲ್ಲಿ ಸ್ಥಾನ ಪಡೆದಿರುವ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಗೃಹ ಖಾತೆ ನೀಡಲಾಗಿದೆ. ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರಿಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ನೀಡಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಣಕಾಸು, ಡಿಪಿಎಆರ್, ಗೃಹ ಖಾತೆಯ ಗುಪ್ತಚರ, ಸಂಪುಟ ವ್ಯವಹಾರ, ಬೆಂಗಳೂರು ಅಭಿವೃದ್ಧಿ ಮತ್ತು ಹಂಚಿಕೆಯಾಗದ ಇತರೆ ಎಲ್ಲ ಖಾತೆಗಳನ್ನು ತಮ್ಮಲ್ಲಿ ಉಳಿಸಿಕೊಂಡಿದ್ದಾರೆ.
ಸಚಿವರಿಗೆ ಖಾತೆ ಹಂಚಿಕೆ….
ಉಮೇಶ್ ಕತ್ತಿ- ಅರಣ್ಯ, ಆಹಾರ, ಎಸ್. ಅಂಗಾರ- ಮೀನುಗಾರಿಕೆ, ಜೆ.ಸಿ. ಮಾಧುಸ್ವಾಮಿ- ಸಣ್ಣ ನೀರಾವರಿ, ಕಾನೂನು ಸಂಸದೀಯ ವ್ಯವಹಾರ, ಅರಗ ಜ್ಞಾನೇಂದ್ರ- ಗೃಹ ಇಲಾಖೆ, ಡಾ. ಅಶ್ವತ್ಥ ನಾರಾಯಣ- ಉನ್ನತ ಶಿಕ್ಷಣ, ಐಟಿಬಿಟಿ, ಆನಂದ್ ಸಿಂಗ್- ಪರಿಸರ, ಪ್ರವಾಸೋದ್ಯಮ, ಸಿಸಿ ಪಾಟೀಲ್- ಲೋಕೋಪಯೋಗಿ ಇಲಾಖೆ, ಕೋಟ ಶ್ರೀನಿವಾಸ ಪೂಜಾರಿ- ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಪ್ರಭು ಚೌಹಾಣ್- ಪಶು ಸಂಗೋಪನೆ, ಮುರುಗೇಶ್ ನಿರಾಣಿ- ಬೃಹತ್ ಕೈಗಾರಿಕೆ, ಶಿವರಾಮ್ ಹೆಬ್ಬಾರ್- ಕಾರ್ಮಿಕ ಖಾತೆ, ಎಸ್.ಟಿ. ಸೋಮಶೇಖರ್- ಸಹಕಾರ ಖಾತೆ, ಬಿ.ಸಿ. ಪಾಟೀಲ್- ಕೃಷಿ ಖಾತೆ
ಭೈರತಿ ಬಸವರಾಜ್- ನಗರಾಭಿವೃದ್ಧಿಿ, ಡಾ.ಕೆ. ಸುಧಾಕರ್- ಆರೋಗ್ಯ, ವೈದ್ಯಕೀಯ ಶಿಕ್ಷಣ ಖಾತೆ, ಗೋಪಾಲಯ್ಯ- ಅಬಕಾರಿ ಖಾತೆ, ಶಶಿಕಲಾ ಜೊಲ್ಲೆ- ಮುಜರಾಯಿ, ಹಜ್, ವಕ್ಫ್ ಖಾತೆ, ಎಂಟಿಬಿ ನಾಗರಾಜ್- ಪೌರಾಡಳಿ ಖಾತೆ, ನಾರಾಯಣಗೌಡ- ರೇಷ್ಮೆ, ಕ್ರೀಡೆ, ಯುವ ಸಬಲೀಕರಣ, ಬಿ.ಸಿ. ನಾಗೇಶ್- ಶಿಕ್ಷಣ ಇಲಾಖೆ, ಸುನೀಲ್ ಕುಮಾರ್ – ಇಂಧನ, ಕನ್ನಡ- ಸಂಸ್ಕೃತಿ ಇಲಾಖೆ, ಶ್ರೀರಾಮುಲು- ಸಾರಿಗೆ ಖಾತೆ, ಪರಿಶಿಷ್ಟ ಜಾತೆ ಸಚಿವಾಲಯ, ಆರ್. ಅಶೋಕ್ – ಕಂದಾಯ ಇಲಾಖೆ, ವಿ. ಸೋಮಣ್ಣ- ವಸತಿ, ಮೂಲಭೂತ ಅಭಿವೃದ್ಧಿ ಖಾತೆ, ಕೆ.ಎಸ್. ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ, ಹಾಲಪ್ಪ ಆಚಾರ್- ಗಣಿ, ಭೂ ವಿಜ್ಞಾನ, ಮಹಿಳಾ- ಮಕ್ಕಳ ಕಲ್ಯಾಣ, ಶಂಕರ ಪಾಟೀಲ್ ಮುನೇನಕೊಪ್ಪ- ಜವಳಿ, ಸಕ್ಕರೆ ಖಾತೆ, ಮುನಿರತ್ನ- ತೋಟಗಾರಿಕೆ ಖಾತೆ, ಯೋಜನೆ, ಅಲ್ಪಸಂಖ್ಯಾತ ಕಲ್ಯಾಣ, ಸಾಂಖಿಕ, ಗೋವಿಂದ ಕಾರಜೋಳ- ಜಲಸಂಪನ್ಮೂಲ ಖಾತೆ