ಕೊರೋನಾದಿಂದ ಚೇತರಿಸಿಕೊಂಡವರು ಹಾಗು ಕೊರೋನಾ ವ್ಯಾಕ್ಸಿನ್ ಫರ್ಸ್ಟ್ ಡೋಸ್ ಪಡೆದವರಿಗೆ ಗುಡ್ ನ್ಯೂಸ್

in Helath-Arogya/Kannada News/News 527 views

ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ 5 ವಿಜ್ಞಾನಿಗಳು ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ಮಹತ್ವದ ಹೇಳಿಕೆ ನೀಡಿದ್ದಾರೆ. ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದ ರೋಗಿಗೆ ಕೊರೊನಾ ಲಸಿಕೆಯ ಒಂದು ಡೋಸ್ ಸಾಕು ಎಂದವರು ಹೇಳಿದ್ದಾರೆ. ಸದ್ಯ ದೇಶದಲ್ಲಿ ಎರಡು ಡೋಸ್ ಲಸಿಕೆ ಹಾಕಲಾಗ್ತಿದೆ.

Advertisement

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಜನರಿಗೆ ಕೊರೊನಾ ಲಸಿಕೆಯ ಮೊದಲ ಡೋಸ್ 10 ದಿನಗಳಲ್ಲಿ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಇದು ಕೊರೊನಾ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ. ಕೊರೊನಾ ಸೋಂಕಿಗೊಳಗಾಗದ ಜನರಿಗೆ ಪ್ರತಿಕಾಯ ಉತ್ಪತ್ತಿಯಾಗಲು 3-4 ವಾರಗಳು ಬೇಕೆಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ಬಗ್ಗೆ ವಿಜ್ಞಾನಿಗಳು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಕೊರೊನಾ ಸೋಂಕಿಗೊಳಗಾದವರಿಗೆ ಒಂದು ಡೋಸ್ ಸೀಮಿತಗೊಳಿಸಿ. ಇದ್ರಿಂದ ಲಸಿಕೆ ಕೊರತೆ ನೀಗಿಸಬಹುದು. ಜೊತೆಗೆ ಕಡಿಮೆ ಸಮಯದಲ್ಲಿ ಹೆಚ್ಚಿನ ಜನರಿಗೆ ಲಸಿಕೆ ನೀಡಬಹುದು ಎಂದು ವಿಜ್ಞಾನಿಗಳು ಪತ್ರದಲ್ಲಿ ಹೇಳಿದ್ದಾರೆ.

ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು 20 ಜನರ ಮೇಲೆ ಪ್ರಾಯೋಗಿಕ ಅಧ್ಯಯನ ಮಾಡಿದ್ದಾರೆ. ನೈಸರ್ಗಿಕ ಪ್ರತಿಕಾಯಗಳ ಪಾತ್ರ ಮತ್ತು ಅದರ ಪ್ರಯೋಜನಗಳ ಕುರಿತು ಸಂಶೋಧನೆ ನಡೆಸಲಾಯಿತು. ಕೊರೊನಾದಿಂದ ಚೇತರಿಸಿಕೊಳ್ಳುವ ಜನರಲ್ಲಿ ಪ್ರತಿಕಾಯಗಳು ವೇಗವಾಗಿ ರೂಪುಗೊಂಡಿವೆ. ಇದು ಕೇವಲ 10 ದಿನಗಳನ್ನು ತೆಗೆದುಕೊಂಡಿದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ. ಸಾಮಾನ್ಯ ಜನರಲ್ಲಿ ಎರಡೂ ಡೋಸ್ ನಂತ್ರ 21 ರಿಂದ 28 ದಿನಗಳಲ್ಲಿ ಪ್ರತಿಕಾಯ ಉತ್ಪತ್ತಿಯಾಗಿದೆ.

ಇದನ್ನೂ ಓದಿ: ಲಸಿಕೆ ಪಡೆವರಿಂದ ಇತರರೂ ಸುರಕ್ಷಿತರೇ? 

ಕೋವಿಡ್‌ ಲಸಿಕೆ ಹಾಕಿಸಿಕೊಂಡರೆ ಸೋಂಕು ತಗಲುವ, ತಗುಲಿದರೂ ಅದು ಮಾರಣಾಂತಿಕವಾಗುವ ಸಾಧ್ಯತೆ ಕಡಿಮೆ ಎಂಬುದು ಈಗಾಗಲೇ ಸಾಬೀತಾಗಿದೆ. ಲಸಿಕೆ ಹಾಕಿಸಿಕೊಂಡವರಿಂದ ಇತರರು ಸುರಕ್ಷಿತವೇ ಎಂಬ ನಿಟ್ಟಿನಲ್ಲಿ ಈಗ ಸಂಶೋಧನೆಗಳು ನಡೆಯುತ್ತಿವೆ.

ಅಮೆರಿಕದ ವಾಂಡರ್‌ಬಿಲ್ಟ್‌ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದ ವಿಜ್ಞಾನಿ ಮತ್ತು ಯೋಜನಾ ಸಂಯೋಜಕ ಸಂಜಯ್‌ ಮಿಶ್ರಾ ಅವರು ಕೆಲ ಅಧ್ಯಯನಗಳನ್ನು ಆಧರಿಸಿ ಮಾಹಿತಿ ನೀಡಿದ್ದಾರೆ.

ಕೋವಿಡ್‌–19ರ ಲಸಿಕೆಗಳು ನಿರೀಕ್ಷೆಯನ್ನೂ ಮೀರಿ ತನ್ನ ಪರಿಣಾಮಕಾರಿತ್ವವನ್ನು ತೋರಿಸುತ್ತಿವೆ. ಇಸ್ರೇಲ್‌ನಲ್ಲಿ 16 ವರ್ಷ ಮೇಲ್ಪಟ್ಟ 65 ಲಕ್ಷ ಜನರು ಫೈಜರ್‌ ಬಯೋಟೆಕ್‌ ಎಂಆರ್‌ಎನ್‌ಎ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದಿದ್ದು, ಈ ಲಸಿಕೆಗಳು ಶೇ 95.3ರಷ್ಟು ಪರಿಣಾಮಕಾರಿ ಎಂದು ಕಂಡು ಬಂದಿದೆ. ಎರಡು ತಿಂಗಳಲ್ಲಿ ಸೋಂಕು ದೃಢಪಡುವ ಪ್ರಮಾಣ 30 ಪಟ್ಟು ಕಡಿಮೆಯಾಗಿದೆ.

ಅದೇ ರೀತಿ ಕ್ಯಾಲಿಫೋರ್ನಿಯಾ ಮತ್ತು ಟೆಕ್ಸಾಸ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತರ ಪೈಕಿ ಕೇವಲ ಶೇ 0.05ರಷ್ಟು ಕಾರ್ಯಕರ್ತರಲ್ಲಿ ಮಾತ್ರ ಕೋವಿಡ್‌ ದೃಢಪಟ್ಟಿದೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ.

ಪ್ರತಿಕಾಯಗಳು ಸೋಂಕು ಹರಡುವುದನ್ನು ತಡೆಯುವುದರ ಜತಗೆ ಪುನರಾವರ್ತಿತ ಸೋಂಕುಗಳನ್ನು ತಡೆಯುತ್ತದೆ ಎಂಬುದು ಸಂಶೋಧಕರ ಪ್ರತಿಪಾದನೆ. ಲಸಿಕೆಗಳಿಂದ ಒದಗುವ ರೋಗ ನಿರೋಧಕ ಶಕ್ತಿ ಎಷ್ಟು ಕಾಲ ಈ ರಕ್ಷಣೆ ಒದಗಿಸುತ್ತದೆ ಎಂಬುದರ ಅಧ್ಯಯನವನ್ನು ವಿಜ್ಞಾನಿಗಳು ಮಾಡುತ್ತಿದ್ದಾರೆ.

ಹರಡುವುದರಿಂದ ರಕ್ಷಣೆ ಹೇಗೆ?: ಲಸಿಕೆ ಪಡೆದವರಿಗೆ ವೈರಾಣು ಸೋಂಕಿನಿಂದ ರಕ್ಷಣೆ ಸಿಗಬೇಕು ಮತ್ತು ಸೋಂಕು ಹರಡುವುದು ಕಡಿಮೆಯಾಗಬೇಕು ಎಂಬುದು ರೋಗನಿರೋಧಕ ತಜ್ಞರು ನಿರೀಕ್ಷೆ. ಆದರೆ ಲಸಿಕೆ ಹಾಕಿಸಿಕೊಂಡವರಿಂದ ಸೋಂಕು ಹರಡುತ್ತಿದೆಯೇ ಇಲ್ಲವೇ ಎಂಬುದರ ಖಚಿತವಾಗಿ ಪತ್ತೆ ಹಚ್ಚುವುದು ಕಷ್ಟಕರವಾಗಿ ಪರಿಣಮಿಸಿದೆ.

ರೋಗ ಲಕ್ಷಣ ಇಲ್ಲದವರು ಮತ್ತು ಪೂರ್ವ ರೋಗ ಲಕ್ಷಣ ಇರುವವರಿಂದ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇವರ ಸಂಪರ್ಕಿತರರನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದೂ ವಿಳಂಬವಾಗುತ್ತಿದೆ. ಕೋವಿಡ್‌–19 ದೃಢಪಟ್ಟ ಸಂಖ್ಯೆಗಿಂತ 3ರಿಂದ 20 ಪಟ್ಟು ಹೆಚ್ಚು ಪ್ರಮಾಣದಲ್ಲಿ ರೋಗ ಲಕ್ಷಣ ಇಲ್ಲದ ಸೋಂಕಿತರು ಇರುತ್ತಾರೆ ಎಂದು ಕೆಲ ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಲಸಿಕೆ ಪಡೆದವರಿಗೆ ಸೋಂಕಿನಿಂದ ಬಹುತೇಕ ರಕ್ಷಣೆ ದೊರೆತಿರುತ್ತದೆ. ಅವರಿಂದ ವೈರಸ್‌ ಹರಡುವ ಸಾಧ್ಯತೆಯೂ ಕಡಿಮೆ. ಒಂದು ವೇಳೆ ಲಸಿಕೆ ಪಡೆದವರಿಗೆ ಸೋಂಕು ದೃಢಪಟ್ಟರೂ ಅದು ಸೂಕ್ಷ್ಮ ಸ್ವರೂಪದ್ದಾಗಿರುತ್ತದೆ ಎಂಬುದನ್ನು ಸಂಶೋಧನೆಗಳು ತಿಳಿಸಿವೆ.

ಮೊದಲ ಡೋಸ್‌ ಲಸಿಕೆ ಪಡೆದವರಲ್ಲಿ ಕೋವಿಡ್‌–19 ದೃಢಪಡಬಹುದು. ಆದರೆ ಅವರ ದೇಹದಲ್ಲಿ ವೈರಸ್‌ ಪ್ರಮಾಣ ಕಡಿಮೆಯಾಗಿರುತ್ತದೆ. ಇದು ಅಪಾಯವನ್ನು ಕಡಿಮೆ ಮಾಡುತ್ತದೆ. ಲಸಿಕೆಗಳು ಸೋಂಕಿನ ಸರಪಳಿಯನ್ನು ಮುರಿಯುವ ಮೂಲಕ ಸಾಂಕ್ರಾಮಿಕ ಕಾಯಿಲೆಯ ಹರಡುವಿಕೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತವೆ.

ಮಾಡರ್ನಾ ಕೋವಿಡ್ -19ರ ಲಸಿಕೆಯು ಬಾಯಿ ಮತ್ತು ಮೂಗಿನ ದ್ರವದಲ್ಲಿ ಕೊರೊನಾ ವೈರಸ್‌ ವಿರುದ್ಧ ಹೋರಾಟದ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಎಂದು ಅಪ್ರಕಟಿತ ಸಂಶೋಧನೆಯೊಂದು ಹೇಳಿದೆ. ಈ ಸಂಶೋಧನೆ ಕುರಿತು ತಜ್ಞರ ಪರಿಶೀಲನೆ ಆಗಬೇಕಿದೆ.

ಇತ್ತೀಚೆಗೆ ನ್ಯೂಯಾರ್ಕ್‌ನಲ್ಲಿ ಲಸಿಕೆ ಪಡೆದವರೂ ಸೋಂಕಿಗೆ ಒಳಗಾಗಿರುವ ಮತ್ತು ಅವರ ನಿಕಟ ಸಂಪರ್ಕಿತರಿಗೆ ಸೋಂಕು ಹರಡಿರುವ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬಂದಿವೆ. ಹಾಗಾಗಿ ಲಸಿಕೆ ಪಡೆದಿದ್ದರೂ ಮಾಸ್ಕ್‌ ಹಾಕುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದರ ಜತೆಗೆ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಒಳ್ಳೆಯದು ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ.

Advertisement
Share this on...