ಕಳೆದ ಒಂದೆರಡು ತಿಂಗಳಿಂದ ಮೇಲಿಂದ ಮೇಲೆ ಕೇಳಿಬರುತ್ತಿರುವ ಸುದ್ದಿ: ವೆಂಟಿಲೇಟರ್‍ಗಳು ಸಿಗುತ್ತಿಲ್ಲ. ಈ ಸಮಸ್ಯೆಯ ಪರಿಹಾರಕ್ಕೆ ಮೋದಿ ಸರಕಾರ ಏನೂ ಮಾಡುತ್ತಿಲ್ಲ.. ಎನ್ನುವುದು.
ಭಾಗ – 1
ಮೊನ್ನೆ ಮಾರ್ಚ್ 18ರ ಇಂಡಿಯನ್ ಎಕ್ಸ್‍ಪ್ರೆಸ್‍ನಲ್ಲಿ ವೆಂಟಿಲೇಟರ್‍ಗಳ ಬಗ್ಗೆ ಸುದ್ದಿ ಬಂದಿತ್ತು. ಅದರ ಪ್ರಮುಖಾಂಶಗಳು: ಕೊವಿಡ್ ಸಾಂಕ್ರಾಮಿಕ ಶುರುವಾಗುವ ಮೊದಲು ಭಾರತದಲ್ಲಿ 8 ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆಗಳಿದ್ದವು. ಅವು ವರ್ಷಕ್ಕೆ 3,360 ವೆಂಟಿಲೇಟರುಗಳನ್ನು ತಯಾರಿಸುತ್ತಿದ್ದವು (ನೆನಪಿಡಿ: ಆ ಸಮಯದಲ್ಲಿ ದೇಶದಲ್ಲಿ ವೆಂಟಿಲೇಟರ್ ಸಿಗದೆ ಸತ್ತ ಒಂದೇ ಒಂದು ಪ್ರಕರಣ ಇರಲಿಲ್ಲ! ಅರ್ಥಾತ್, ದೇಶದ ಬೇಡಿಕೆ ಎಷ್ಟಿತ್ತೋ ಅಷ್ಟು ವೆಂಟಿಲೇಟರ್‍ಗಳು ತಯಾರಾಗುತ್ತಿದ್ದವು). ಕೊವಿಡ್ ಸಮಸ್ಯೆ ಶುರುವಾದ ಮೇಲೆ, ಮೊದಲಿದ್ದ 8ರ ಜೊತೆ ಮತ್ತೂ 9 ಮ್ಯಾನುಫ್ಯಾಕ್ಚರಿಂಗ್ ಕಂಪೆನಿಗಳು ಜೊತೆಗೂಡಿದವು. ವಾರ್ಷಿಕ 3,96,260 ವೆಂಟಿಲೇಟರ್‍ಗಳನ್ನು ತಯಾರು ಮಾಡುವಷ್ಟು ಸಾಮರ್ಥ್ಯ ಏರಿಕೆಯಾಯಿತು.
ಕೊವಿಡ್ ಸಮಸ್ಯೆಯನ್ನು ಎದುರಿಸಲು ಸರಕಾರ ಲಸಿಕೆ ತಯಾರಿಸಬೇಕಿತ್ತು; ಆಸ್ಪತ್ರೆಗಳಲ್ಲಿ ಬೆಡ್ ಸಂಖ್ಯೆ ಜಾಸ್ತಿ ಮಾಡಬೇಕಿತ್ತು; ವೆಂಟಿಲೇಟರ್, ಆಕ್ಸಿಜನ್ ಪೂರೈಕೆ ನೋಡಿಕೊಳ್ಳಬೇಕಿತ್ತು; ಮಾಸ್ಕ್, ಪಿಪಿಇ ಕಿಟ್ ಮತ್ತು ಸ್ಯಾನಿಟೈಸರುಗಳ ಪ್ರೊಡಕ್ಷನ್ ಹೆಚ್ಚಿಸಬೇಕಿತ್ತು. ಕೊವಿಡ್ ಮತ್ತಷ್ಟು ಹಬ್ಬದಂತೆ ದೇಶಾದ್ಯಂತ ಜನರ ಸುತ್ತಾಟವನ್ನು ಹದ್ದುಬಸ್ತಿನಲ್ಲಿಡಬೇಕಿತ್ತು; ಮತ್ತು ಇವೆಲ್ಲದರ ಮಧ್ಯೆ ಎಕಾನಮಿ ಕುಸಿಯದಂತೆ ನೋಡಿಕೊಳ್ಳಬೇಕಿತ್ತು! ದೇಶದೊಳಗೆ ವೆಂಟಿಲೇಟರ್ ನಿರ್ಮಾಣ ಹೆಚ್ಚುಮಾಡುವುದರ ಜೊತೆಗೇ ಸರಕಾರ, ವೆಂಟಿಲೇಟರುಗಳ ರಫ್ತನ್ನು ನಿಲ್ಲಿಸಿತು. ಹೊರ ದೇಶಗಳಿಂದ ಬರುವ ವೆಂಟಿಲೇಟರುಗಳ ಆಮದುಸುಂಕವನ್ನೂ ಇಳಿಸಿತು. ವೆಂಟಿಲೇಟರ್ ನಿರ್ಮಾಣದ ಮುಖ್ಯ ಕಂಪೆನಿಗಳಾದ ಸ್ಕ್ಯಾನ್‍ರೇ ಮತ್ತು ಆಗ್ವಾ-ಗಳು ತಮ್ಮ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದಕ್ಕಾಗಿ ಕ್ರಮವಾಗಿ ಬಿಇಎಲ್ (ಸರಕಾರೀ ಸಂಸ್ಥೆ) ಮತ್ತು ಮಾರುತಿ ಜೊತೆ ಕೈಜೋಡಿಸಿದವು.
ಇದೆಲ್ಲ ಆಗಿ ಮೂರ್ನಾಲ್ಕು ತಿಂಗಳ ಮೇಲೆ ಆಗ್ವಾ ಮಾಲಿಕ ದಿವಾಕರ್ ವೈಶ್ ಹೇಳುತ್ತಾರೆ: “ನಮಗೆ ತಿಂಗಳಿಗೆ 14,000 ವೆಂಟಿಲೇಟರ್ ನಿರ್ಮಿಸುವ ಸಾಮರ್ಥ್ಯ ಇದೆ. ಆದರೆ ತಯಾರಿಸಿಟ್ಟ ಸಾವಿರಾರು ವೆಂಟಿಲೇಟರುಗಳು ಹಾಗೇ ಬಿದ್ದಿವೆ. ಯಾರೂ ತಗೋತಿಲ್ಲ. ಗೋಡೌನ್ ಖಾಲಿಯಾದ ಮೇಲೆ ಹೊಸದಾಗಿ ನಿರ್ಮಾಣಕ್ಕೆ ಕೈಹಾಕುತ್ತೇವೆ.” ದೇಶದ ಬಹುತೇಕ ಎಲ್ಲ ವೆಂಟಿಲೇಟರ್ ಉತ್ಪಾದಕ ಸಂಸ್ಥೆಗಳ ಕತೆಯೂ ಹೀಗೆಯೇ ಆಯಿತು. ರಾಶಿ ರಾಶಿ ವೆಂಟಿಲೇಟರ್ ನಿರ್ಮಿಸಿ ಗೋಡೌನ್ ತುಂಬಿಸಿದರು. ಸರಕಾರೀ ಆಸ್ಪತ್ರೆಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ತುಂಬಿಸಿಯಾಯಿತು. ಖಾಸಗಿಯವರು ಅಲ್ಲಿಲ್ಲಿ ಒಂದಷ್ಟು ತಗೊಂಡರು ಬಿಟ್ಟರೆ ಹೆಚ್ಚಿನ ಯಂತ್ರಗಳಿಗೆ ಬೇಡಿಕೆಯೇ ಇರಲಿಲ್ಲ. “ಇವನ್ನೆಲ್ಲ ಇಟ್ಟುಕೊಂಡು ನಾವೇನು ಮಾಡುವುದು?” ಎಂಬ ಪ್ರಶ್ನೆ ಎಲ್ಲರ ಮುಖದಲ್ಲಿತ್ತು. ಗಮನಿಸಿ: ಇದು 2021ರ ಮಾರ್ಚ್ ಮೂರನೇ ವಾರದ ಸ್ಥಿತಿ. ಇಂಡಿಯನ್ ಎಕ್ಸ್‍ಪ್ರೆಸ್‍ನ ಆ ದೀರ್ಘ ವರದಿಯ ಸಾರಾಂಶ ಇಷ್ಟೆ: “ಇವರೆಲ್ಲ ಸಾವಿರಗಟ್ಟಲೆ ವೆಂಟಿಲೇಟರ್ ಉತ್ಪಾದಿಸಿ ಕೂತಿದ್ದಾರೆ. ಕೊಳ್ಳುವವರೇ ಇಲ್ಲ! ಹೀಗಾದರೆ ವೆಂಟಿಲೇಟರ್ ಉತ್ಪಾದಕರು ಬದುಕೋದು ಹೇಗೆ? ಮೋದಿ ಶುಡ್ ರಿಸೈನ್!”
ಭಾಗ – 2
2021ರ ಏಪ್ರಿಲ್ 21ರಂದು, ಇಂಡಿಯನ್ ಎಕ್ಸ್‍ಪ್ರೆಸ್‍ನ ಸೋದರ ಪತ್ರಿಕೆಯಾದ ಫೈನಾನ್ಷಿಯಲ್ ಎಕ್ಸ್‍ಪ್ರೆಸ್‍ನಲ್ಲಿ ಒಂದು ಸಂದರ್ಶನ (ಮ್ಯಾಕ್ಸ್ ವೆಂಟಿಲೇಟರ್ಸ್’ನ ಅಶೋಕ್ ಪಟೇಲ್) ಪ್ರಕಟವಾಗುತ್ತದೆ. ಅದರ ಶೀರ್ಷಿಕೆ: “ಭಾರತದಲ್ಲಿ ಕೊವಿಡ್ ಶುಶ್ರೂಷೆಗೆ ಅಗತ್ಯ ಬೇಡಿಕೆಯ ಅರ್ಧದಷ್ಟೂ ವೆಂಟಿಲೇಟರ್‍ಗಳು ಇಲ್ಲ!” ಈ ಸಂದರ್ಶನದ ಉದ್ದಕ್ಕೂ ಭಾರತದಲ್ಲಿ ನಿರ್ಮಾಣವಾಗಿರುವ ವೆಂಟಿಲೇಟರ್ ಕೊರತೆಯನ್ನು ಬೃಹತ್ ಸಮಸ್ಯೆ ಎಂಬಂತೆ ಬಿಂಬಿಸಲಾಗುತ್ತದೆ. ದೇಶದಲ್ಲಿ ವೆಂಟಿಲೇಟರ್ ಇಲ್ಲದೆ ಜನ ಸಾಯುತ್ತಿದ್ದಾರೆ, ಉತ್ಪಾದಕರಿಗೆ ಬೇಡಿಕೆಗೆ ತಕ್ಕಷ್ಟು ತಯಾರು ಮಾಡಿಕೊಡಲು ಆಗ್ತಾ ಇಲ್ಲ ಎಂದು ಗೋಳಾಡಲಾಗುತ್ತದೆ. ಈ ಸಂದರ್ಶನದ ಮಧ್ಯದಲ್ಲಿ ಬರುವ ಎರಡು ಪ್ರಶ್ನೆ-ಉತ್ತರಗಳನ್ನು ನೋಡಿ:
And if there is shortage, can you quantify that shortage? And why are we facing this shortage in the first place? ಎಂಬ ಪ್ರಶ್ನೆಗೆ ಉತ್ತರ: India has less than 50% of the ventilators than needed for the treatment.
As against the first wave, in your estimate, how many more ventilators would India require to meet the needs of our people during the second wave? ಎಂಬ ಪ್ರಶ್ನೆಗೆ ಉತ್ತರ: I think we have enough ventilators in the country, or we have sufficiently developed the capability to make more if required.
ಇಷ್ಟು ನೋಡಿದರೆ ಸಾಕು, ಈ ಇಡೀ ಸಂದರ್ಶನದ ಬೆಲೆ ಅರ್ಥವಾಗಬಹುದು. ಒಟ್ಟಾರೆ ಹೇಳುವುದಾದರೆ, “ವೆಂಟಿಲೇಟರ್‍ಗಳ ಸಂಖ್ಯೆ ಸಾಲಲ್ಲ. ನಮ್ಮ ದೇಶದಲ್ಲಿ ಬೇಕಾದಷ್ಟು ವೆಂಟಿಲೇಟರ್ ಇದೆ” – ಇದು ಈ ಬರಹದ ಒಟ್ಟು ಸಾರಾಂಶ!
ಭಾಗ – 3
ಇವೆರಡನ್ನು ಬಿಟ್ಟು ನಾನು ಫೋರ್ಬ್ಸ್ ಪತ್ರಿಕೆಯ 2021 ಏಪ್ರಿಲ್ 9ರ ಒಂದು ವರದಿಯನ್ನು ಎತ್ತಿಕೊಂಡೆ. ಅದರಲ್ಲಿ ಕಂಡುಬಂದ ಕೆಲವು ಅಂಶಗಳನ್ನು ಗಮನಿಸಿ:
2020ರ ಮಾರ್ಚ್‍ನಲ್ಲಿ ಕೊವಿಡ್ ಸಮಸ್ಯೆ ತಲೆದೋರಿದ ತಕ್ಷಣವೇ ಕೇಂದ್ರ ಸರಕಾರ ಎಚ್ಚೆತ್ತುಕೊಂಡಿತು. ಭಾರತೀಯ ಕಂಪೆನಿಗಳಿಗೆ ಸಮರೋಪಾದಿಯಲ್ಲಿ ವೆಂಟಿಲೇಟರ್ ಉತ್ಪಾದನೆ ಮಾಡುವಂತೆ ಕರೆಕೊಟ್ಟಿತು. ಈಗಾಗಲೇ ದೊಡ್ಡ ಪ್ರಮಾಣದಲ್ಲಿ ವೆಂಟಿಲೇಟರ್ ಉತ್ಪಾದನೆ ಮಾಡುವವರ ಜೊತೆಗೇ ಸ್ಟಾರ್ಟ್ ಅಪ್‍ಗಳಿಗೂ ಪ್ರೋತ್ಸಾಹಿಸಿತು. ದೊಡ್ಡ ಪ್ರಮಾಣದ ಉತ್ಪಾದನೆಗೆ ಏನೆಲ್ಲ ಬೇಕೋ ಅದೆಲ್ಲವನ್ನೂ ತಕ್ಷಣ ಮಾಡಿಕೊಟ್ಟಿತು. ಹೊಸ ಮೆಷಿನ್‍ಗಳನ್ನು ನಿರ್ಮಿಸಲಾಯಿತು; ಸಂಶೋಧನೆಗೆ ಆದ್ಯತೆ ಕೊಡಲಾಯಿತು.
ಜೂನ್ ವೇಳೆಗೆ ಸರಕಾರ ವೆಂಟಿಲೇಟರ್‍ಗಳ ಉತ್ಪಾದನೆಗೆಂದೇ 2,000 ಕೋಟಿ ರುಪಾಯಿಗಳನ್ನು ಎತ್ತಿಟ್ಟಿತು. “ಮೇಡ್ ಇನ್ ಇಂಡಿಯಾ” ಅಡಿ 50,000 ವೆಂಟಿಲೇಟರ್‍ಗಳನ್ನು ನಿರ್ಮಿಸಲು ಯೋಜನೆ ಹಾಕಲಾಯಿತು. ಉತ್ಪಾದಿಸಿದ ಅವಷ್ಟನ್ನೂ ದೇಶಾದ್ಯಂತ ಸರಕಾರೀ ಆಸ್ಪತ್ರೆಗಳಿಗೆ ಕಳಿಸಿಕೊಡಲು “ಪಿಎಂ ಕೇರ್ಸ್ ಫಂಡ್”ನಿಂದ ಧನಸಹಾಯ ಪಡೆಯಲಾಯಿತು. ಸರಕಾರೀ ಸ್ವಾಮ್ಯದ ಬಿಇಎಲ್ ಒಂದೇ ಬರೋಬ್ಬರಿ 30,000 ವೆಂಟಿಲೇಟರ್‍ಗಳನ್ನು ತಯಾರಿಸಿತು. ಆಗ್ವಾ 10,000; ಎಎಂಟಿಝಡ್ ಬೇಸಿಕ್ ಎಂಬ ಕಂಪೆನಿ 5,650; ಎಎಂಟಿಝಡ್ ಹೈಎಂಡ್ ಎಂಬ ಕಂಪೆನಿ 4,000; ಆಲೈಡ್ ಮೆಡಿಕಲ್ ಎಂಬ ಕಂಪೆನಿ 350 ವೆಂಟಿಲೇಟರ್‍ಗಳನ್ನು ಉತ್ಪಾದಿಸಿದವು.
ಸರಕಾರ ಇಷ್ಟೆಲ್ಲ ಮಾಡುವಾಗ ಕೆಲವು ಬೇಜವಾಬ್ದಾರಿಯ ರಾಜಕಾರಣಿಗಳು ಏನು ಮಾಡಿದರು ಗೊತ್ತೆ? ಪಂಜಾಬ್‍ನ ಕೇಸ್ ತಗೊಳ್ಳಿ. ಇಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಪ್ರತಿ ದಿನ 2,800 ಕೇಸುಗಳು ಪತ್ತೆಯಾಗಲು ಪ್ರಾರಂಭವಾದವು. ಅವುಗಳಲ್ಲಿ 80% ಕೇಸುಗಳೆಲ್ಲವೂ ಯುಕೆ ವೇರಿಯೆಂಟ್ (ಇಂಗ್ಲೆಂಡಿನ ರೂಪಾಂತರಿ). ಇಂದು ದೇಶದಲ್ಲಿ ಸಂಭವಿಸುತ್ತಿರುವ ಒಟ್ಟು ಕೊವಿಡ್ ಸಾವುಗಳಲ್ಲಿ 5%ರಷ್ಟು ವರದಿಯಾಗುತ್ತಿರುವುದು ಪಂಜಾಬ್‍ನಲ್ಲಿ. ಕಳೆದ ವರ್ಷ ಕೇಂದ್ರ ಸರಕಾರ ಸುಮಾರು 30 ಕೋಟಿ ರುಪಾಯಿಗಳಷ್ಟು ದುಡ್ಡಿನಲ್ಲಿ ನೂರಾರು ವೆಂಟಿಲೇಟರ್‍ಗಳನ್ನು ಪಂಜಾಬಿಗೆ ಕಳಿಸಿತ್ತು. ಆದರೆ ಒಂದು ವರ್ಷ ಕಳೆದರೂ ಪಂಜಾಬ್‍ನ ರಾಜ್ಯ ಆರೋಗ್ಯ ಇಲಾಖೆ, ಆ ವೆಂಟಿಲೇಟರುಗಳ ಪ್ಯಾಕ್ ಕೂಡ ತೆರೆಯಲಿಲ್ಲ! ಇನ್ನು ರಾಜಸ್ಥಾನದ ಕತೆ ಕೇಳಿ. ಅಲ್ಲಿಗೆ ಕೇಂದ್ರ ಕಳಿಸಿದ 1,900 ವೆಂಟಿಲೇಟರುಗಳಲ್ಲಿ 60% ವೆಂಟಿಲೇಟರುಗಳು ಸಮರ್ಪಕವಾಗಿಲ್ಲ ಎಂದು ಅಲ್ಲಿನ ರಾಜ್ಯ ಸರಕಾರ ರಿಪೋರ್ಟ್ ಕೊಟ್ಟಿದೆ. ಆಗ್ವಾ ಟೆಕ್ನಾಲಜೀಸ್‍ನ ವೈಶ್ ಹೇಳುವ ಪ್ರಕಾರ, “ನಾವು ಕಳಿಸಿರುವ ಅಷ್ಟೂ ವೆಂಟಿಲೇಟರ್‍ಗಳು ಅತ್ಯಂತ ಸಮರ್ಪಕವಾಗಿ ಕೆಲಸ ಮಾಡುತ್ತಿವೆ. ನಾವು ರಾಜಸ್ಥಾನಕ್ಕೆ ಮಾತ್ರ ಅಲ್ಲ; ದೇಶದ ಹತ್ತು ಹಲವು ರಾಜ್ಯಗಳಿಗೆ ವೆಂಟಿಲೇಟರ್ ಕಳಿಸಿಕೊಡುತ್ತಿದ್ದೇವೆ. ಸಮಸ್ಯೆ ಏನೆಂದರೆ ನಮ್ಮ ವೆಂಟಿಲೇಟರ್‍ನ ಬೆಲೆ ಒಂದೂವರೆ ಲಕ್ಷ. ಅದೇ, ಇವರು ವಿದೇಶದಿಂದ ತರಿಸಿಕೊಂಡರೆ ಒಂದಕ್ಕೆ 35 ಲಕ್ಷ ರುಪಾಯಿ ಬಿಲ್ ಮಾಡಬಹುದು. ಸಮಸ್ಯೆ ಎಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ!”
ಈಗ ಹೇಳಿ ನನಗೆ, ಈ ಸಮಸ್ಯೆಯ ಮೂಲ ಎಲ್ಲಿದೆ?
📝 ರೋಹಿತ್ ಚಕ್ರತೀರ್ಥ