ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸಂಪುಟ ರಚನೆ, ಸಚಿವರ ಖಾತೆ ಕ್ಯಾತೆ, ಅಸಮಾಧಾನಿತರ ಭಿನ್ನಮತದ ನಡುವೆ ಈಗ ಆಡಳಿತಾರೂಢ ಬಿಜೆಪಿಗೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ. ಇದೇ ವೇಳೆ ರಾಜ್ಯ ಚುನಾವಣಾ ಆಯೋಗ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರ್ಗಿ ನಗರ ಪಾಲಿಕೆಗಳಿಗೆ ದಿನಾಂಕ ಘೋಷಣೆ ಮಾಡಿದೆ.
ಸದ್ಯದಲ್ಲೇ ಕೇಂದ್ರ ಚುನಾವಣಾ ಆಯೋಗ ಸಿಂಧಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೂ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ. ಒಂದು ಕಡೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಬಿಜೆಪಿಗೆ ಸವಾಲಾಗಿ ಪರಿಣಮಿಸಿದ್ದು, 2023ರ ಚುನಾವಣೆಗೆ ಇದು ದಿಕ್ಸೂಚಿ ಎಂದೇ ಹೇಳಲಾಗಿದೆ.
ಸಿಂಧಗಿ ಮತ್ತು ಹಾನಗಲ್‍ಗೆ ಚುನಾವಣೆ ನಡೆಯಬೇಕಿತ್ತಾದರೂ ದೇಶದಲ್ಲಿ ಕೊರೊನಾ ಸೋಂಕಿನ ಹಾವಳಿ ಹೆಚ್ಚಾಗಿದ್ದರಿಂದ ಆಯೋಗ ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿತ್ತು. ಈಗ ಪರಿಸ್ಥಿತಿ ಕೊಂಚ ಸುಧಾರಿಸುತ್ತಿರುವುದರಿಂದ ಯಾವುದೇ ಕ್ಷಣದಲ್ಲೂ ಈ ಎರಡೂ ಕ್ಷೇತ್ರಗಳಿಗೆ ಮುಹೂರ್ತ ನಿಗದಿಯಾಗುವ ಸಂಭವವಿರುವುದರಿಂದ ಬಿಜೆಪಿಗೆ ಇದು ಸವಾಲೆಂದೇ ಹೇಳಲಾಗಿದೆ.
ಈ ಹಿಂದೆ ನಡೆದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಾಗೂ ಎರಡು ತಿಂಗಳ ಹಿಂದೆ ನಡೆದ ಒಂದು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಪ್ರಯಾಸದಾಯಕ ಗೆಲುವು ಕಂಡಿತ್ತು. ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ಪತ್ನಿ ಮಂಗಳ ಅಂಗಡಿ ಕೆಲವೇ ಸಾವಿರ ಮತಗಳ ಅಂತರದಿಂದ ವಿಜೇತರಾಗಿದ್ದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ರಾಜ್ಯವು 19 ವಿಧಾನಸಭಾ ಕ್ಷೇತ್ರಗಳಿಗೆ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆಗೆ ಸಾಕ್ಷಿಯಾಯಿತು. ಈ 16 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಡಿಸೆಂಬರ್ 2020 ರಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಭ್ಯರ್ಥಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಪಕ್ಷವು ಹೇಳಿಕೊಂಡಿದೆ.
ಬಸವಕಲ್ಯಾಣದಲ್ಲಿ ಬಿಜೆಪಿ ಹೆಚ್ಚಿನ ಮತಗಳಿಂದ ಗೆದ್ದಿದ್ದರೆ ಮಸ್ಕಿಯಲ್ಲಿ ಕಾಂಗ್ರೆಸ್ ಗೆದ್ದಿದ್ದು ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಗಿ ಪರಿಣಿಮಿಸಿತ್ತು. ಈಗ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಬಿಎಸ್‍ವೈ ರಾಜೀನಾಮೆ ನೀಡಿದ್ದಾರೆ. ಹೊಸದಾಗಿ ಬಸವರಾಜ ಬೊಮ್ಮಾಯಿ ಸರ್ಕಾರದ ಸಾರಥ್ಯ ವಹಿಸಿದ್ದಾರೆ. ಬಿಜೆಪಿಯೊಳಗೆ ಸದ್ಯ ಎದ್ದಿರುವ ಭಿನ್ನಮತ ಶಮನವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇಂತಹ ಬೆಳವಣಿಗೆಗಳ ನಡುವೆಯೂ ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಉಪಚುನಾವಣೆ ನಡೆಯುತ್ತಿರುವುದು ಕಮಲ ಪಡೆಗೆ ನುಂಗಲಾರದ ತುತ್ತಾಗಿದೆ.
ಕರ್ನಾಟಕ ಹೈಕೋರ್ಟ್ ಇತ್ತೀಚೆಗೆಷ್ಟೇ ರಾಜ್ಯ ಚುನಾವಣಾ ಆಯೋಗ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವಂತೆ ಸೂಚಿಸಿತ್ತು. ಹುಬ್ಬಳ್ಳಿ-ಧಾರವಾಡ, ಇದರಲ್ಲಿ 82 ವಾರ್ಡ್‍ಗಳು, ಕಲಬುರಗಿ (55 ವಾರ್ಡ್‍ಗಳು) ಮತ್ತು ಬೆಳಗಾವಿ (58 ವಾರ್ಡ್‍ಗಳು). ದೊಡ್ಡಬಳ್ಳಾಪುರ, ತರೀಕೆರೆ ಮತ್ತು ಇತರ ಕೆಲವು ಸ್ಥಳೀಯ ಸಂಸ್ಥೆಗಳಿಗೆ ಸೆಪ್ಟಂಬರ್ 3ರಂದು ಮತದಾನ ನಡೆಯಲಿದೆ.
ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುವ ಮೂರು ಕ್ಷೇತ್ರಗಳು ಉತ್ತರ ಕರ್ನಾಟಕದಲ್ಲಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು, ಕಲಬುರಗಿ ಮತ್ತು ಬೆಳಗಾವಿಯಲ್ಲಿ ಕೂಡ ಉತ್ತಮ ಸಂಖ್ಯೆಯ ಲಿಂಗಾಯತ ಮತದಾರರಿದ್ದಾರೆ. ಸಿಎಂ ಬೊಮ್ಮಾಯಿ ಮತ್ತು ಅವರ ಸಂಪುಟದ 8 ಸಚಿವರು ಲಿಂಗಾಯತ ಸಮುದಾಯಕ್ಕೇ ಸೇರಿರುವ ಕಾರಣ ಇದನ್ನು ಸದುಪಯೋಗ ಪಡಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.
ಆಗಸ್ಟ್ 16ರಂದು ಚುನಾವಣಾ ಅಧಿಸೂಚನೆಯನ್ನು ಜಿಲ್ಲಾಧಿಕಾರಿಗಳು ಹೊರಡಿಸಲಿದ್ದಾರೆ. ಆಗಸ್ಟ್ 23 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಆಗಸ್ಟ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಆಗಸ್ಟ್ 26 ನಾಮಪತ್ರಗಳನ್ನು ಹಿಂದಕ್ಕೆ ಪಡೆದುಕೊಳ್ಳಲು ಕೊನೆಯ ದಿನವಾಗಿದೆ. ಸೆಪ್ಟೆಂಬರ್ 3ರಂದು ಮತದಾನ ನಡೆಯಲಿದೆ. ಸೆಪ್ಟೆಂಬರ್ 6ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.