ನೇಪಾಳದ ವಿಮಾನ ಅಪಘಾತದಲ್ಲಿ ಮೃತಪಟ್ಟ ಐವರು ಭಾರತೀಯರಲ್ಲಿ ಒಬ್ಬರಾದ ಸೋನು ಜೈಸ್ವಾಲ್ ಅವರು ಕಠ್ಮಂಡುವಿನ ಪ್ರಸಿದ್ಧ ಪಶುಪತಿನಾಥ ದೇವಾಲಯಕ್ಕೆ ಪೂಜೆ ಸಲ್ಲಿಸಲು ತೆರಳಿದ್ದರು. ಸುಮಾರು ಆರು ತಿಂಗಳ ಹಿಂದೆ ಸೋನು ಜೈಸ್ವಾಲ್ ದಂಪತಿ ಆಸೆ ಈಡೇರಿತ್ತು. ಗಂಡು ಮಗು ಜನಿಸಿದರೆ ತಾನು ಪಶುಪತಿನಾಥಕ್ಕೆ ಹೋಗಿ ಹರಕೆ ತೀರಿಸುತ್ತೇನೆ ಎಂದು ಸೋನು ಹರಕೆ ಹೊತ್ತುಕೊಂಡಿದ್ದರು, ಆದರೆ ವಿಧಿಯ ಆಟವೇ ಬೇರೆ ಆಗಿತ್ತು.
ಸೋನುಗೆ ಮೊದಲು ಇಬ್ಬರು ಹೆಣ್ಣುಮಕ್ಕಳಿದ್ದರು, 6 ತಿಂಗಳ ಹಿಂದೆಯಷ್ಟೇ ಜನಿಸಿತ್ತು ಗಂಡು ಮಗು
ಉತ್ತರಪ್ರದೇಶದ ಗಾಜಿಪುರ ಜಿಲ್ಲೆಯ ಚಕ್ ಜೈನಬ್ ಗ್ರಾಮಕ್ಕೆ ನೇಪಾಳದಲ್ಲಿ ಪತನವಾದ ವಿಮಾನದ ಸುದ್ದಿ ತಿಳಿದ ತಕ್ಷಣ ಕುಟುಂಬದ ಸ್ಥಿತಿ ಹೇಳತೀರದಂತಾಗಿತ್ತು. ಅಪಾರ ಸಂಖ್ಯೆಯ ಜನರು, ಸಂಬಂಧಿಕರು ಮನೆಗೆ ಆಗಮಿಸಿ ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸೋನುವಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಗಂಡು ಮಗು ಜನಿಸಿದರೆ ಪಶುಪತಿನಾಥ ದೇವಸ್ಥಾನಕ್ಕೆ ಹೋಗಿ ಹರಕೆ ತೀರಿಸುವುದಾಗಿ ಬೇಡಿಕೊಂಡಿದ್ದರು. ಅವರ ಸಂಬಂಧಿ ಮತ್ತು ಚಕ್ ಜೈನಾಬ್ ಗ್ರಾಮದ ಮುಖ್ಯಸ್ಥ ವಿಜಯ್ ಜೈಸ್ವಾಲ್ ಅವರು ಈ ವಿಷಯವನ್ನು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ತನ್ನ ಗೆಳೆಯರ ಜೊತೆ ನೇಪಾಳಕ್ಕೆ ತೆರಳಿದ್ದ ಸೋನು
ವಿಜಯ್ ಜೈಸ್ವಾಲ್ ಮಾತನಾಡುತ್ತ, “ಸೋನು ತನ್ನ ಮೂವರು ಸ್ನೇಹಿತರ ಜೊತೆ ಜನವರಿ 10 ಕ್ಕೆ ನೇಪಾಳಕ್ಕೆ ಹೋಗಿದ್ದ. ಆತನ ಮುಖ್ಯ ಉದ್ದೇಶ ಪಶುಪತಿನಾಥನ ದರ್ಶನ ಮಾಡುವುದಾಗಿತ್ತು. ಆತ ಗಂಡು ಮಗು ಜನಿಸಿದರೆ ದರ್ಶನ ಮಾಡುತ್ತೇನೆ ಎಂದು ಹರಕೆ ಹೊತ್ತಿದ್ದ ಆದರೆ ವಿಧಿಯ ಆಟವೇ ಬೇರೆ ಆಗಿತ್ತು” ಎಂದಿದ್ದಾರೆ.
ವಿಮಾನ ಲ್ಯಾಂಡ್ ಆಗುವ ಸಮಯದಲ್ಲಿ ಲೈವ್ ವಿಡಿಯೋ ಮಾಡಿದ್ದ ಸೋನು
ವಿಮಾನ ಲ್ಯಾಂಡಿಂಗ್ ವೇಳೆ ಗಾಜಿಪುರದ ಸೋನು ಜೈಸ್ವಾಲ್ ತನ್ನ ಸ್ನೇಹಿತರಿಗೆ ಫೇಸ್ ಬುಕ್ ನಲ್ಲಿ ವಿಮಾನ ಲ್ಯಾಂಡಿಂಗ್ ನ ಲೈವ್ ವಿಡಿಯೋ ತೋರಿಸುತ್ತಿದ್ದ. ಈ ವಿಡಿಯೋ 1.40 ಸೆಕೆಂಡ್ನದ್ದಾಗಿದೆ, ಆದರೆ ಅದನ್ನು ಲೈವ್ ಮಾಡುವಾಗ, ಸೋನುಗೆ ತಾನು ಸಾವಿನಿಂದ ಕೆಲವು ಕ್ಷಣಗಳು ದೂರದಲ್ಲಿದ್ದೇನೆ ಎಂದು ತಿಳಿದಿರಲಿಲ್ಲ. ನಿಜಕ್ಕೂ ಈ ವಿಡಿಯೋ ಆಘಾತಕಾರಿಯಾಗಿದೆ.
#Technology की वजह से भयावह हादसे भी क़ैद हो जाते हैं
ग़ाज़ीपुर का सोनू जायसवाल LIVE था .. दोस्तों को Landing दिखा रहा था .. सोनू तो नहीं रहा , कैमरा रहा और दुनिया ने पहली बार विमान के अंदर से क्रेश देखा। #NepalPlaneCrash pic.twitter.com/Emf6TXMHp9— Vinod Kapri (@vinodkapri) January 15, 2023
ವಾರಣಸಿಯ ಸಾರನಾಥದಲ್ಲಿ ವಾಸಿಸುತ್ತಿದ್ದ ಸೋನು
ಸೋನು ಜೈಸ್ವಾಲ್ ಬಿಯರ್ ಶಾಪ್ ನಡೆಸುತ್ತಿದ್ದರು. ಸೋನು ವಾರಣಾಸಿಯ ಸಾರನಾಥದಲ್ಲಿ ವಾಸಿಸುತ್ತಿದ್ದ. ಆದರೆ, ಅಲವಲಪುರ ಚಟ್ಟಿಯಲ್ಲಿ ಅವರಿಗೆ ಇನ್ನೊಂದು ಮನೆಯೂ ಇದೆ. ಅವರ ಸ್ನೇಹಿತರಾದ ಅಭಿಷೇಕ್ ಕುಶ್ವಾಹ (25), ವಿಶಾಲ್ ಶರ್ಮಾ (22) ಮತ್ತು ಅನಿಲ್ ಕುಮಾರ್ ರಾಜ್ಭರ್ (27) ಕೂಡ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿಜಯ್ ಜೈಸ್ವಾಲ್ ತಿಳಿಸಿದ್ದಾರೆ.
ಪ್ಯಾರಾಗ್ಲೈಡಿಂಗ್ ಬಳಿಕ ಗಾಜಿಪುರ್ ಮರಳಬೇಕಿತ್ತು
ವಿಶಾಲ್ ಶರ್ಮಾ ಬಡೇಸರ್ ಪ್ರದೇಶದ ಅಲವಲ್ಪುರ್ ಚಟ್ಟಿ ಗ್ರಾಮಕ್ಕೆ ಸೇರಿದವರು. ಅನಿಲ್ ರಾಜ್ಭರ್ ಚಕ್ ಜೈನಾಬ್ ಮತ್ತು ಅಭಿಷೇಕ್ ಕುಶ್ವಾಹಾ ಧಾರ್ವಾ ನಿವಾಸಿಗಳಾಗಿದ್ದರು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ರಾಜ್ಭರ್ ಸಾರ್ವಜನಿಕ ಸೇವಾ ಕೇಂದ್ರಗಳನ್ನು ನಡೆಸುತ್ತಿದ್ದರು ಎಂದು ಸ್ಥಳೀಯರು ಹೇಳುತ್ತಾರೆ. ಕುಶ್ವಾಹ ಅವರು ಕಂಪ್ಯೂಟರ್ ವ್ಯವಹಾರದೊಂದಿಗೆ ಸಂಬಂಧ ಹೊಂದಿದ್ದರು ಮತ್ತು ಶರ್ಮಾ ದ್ವಿಚಕ್ರ ವಾಹನ ಶೋರೂಂನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದರು. ಪೋಖರಾದಲ್ಲಿ ಪ್ಯಾರಾಗ್ಲೈಡಿಂಗ್ ಮುಗಿಸಿ ನಾಲ್ವರೂ ಮಂಗಳವಾರ ಗಾಜಿಪುರಕ್ಕೆ ಮರಳಬೇಕಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಅಧಿಕಾರಿಗಳಿಗೆ ಸೂಚನೆ ನೀಡಿದ ಸಿಎಂ ಯೋಗಿ ಆದಿತ್ಯನಾಥ್
ನಮ್ಮ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಮತ್ತು ಇತರ ಅಧಿಕಾರಿಗಳು ದುಃಖಿತ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ನರಾಯಭಾರಿ ಕಚೇರಿಯೊಂದಿಗೂ ಸಂಪರ್ಕದಲ್ಲಿದ್ದೇವೆ ಎಂದು ಗಾಜಿಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳುತ್ತಾರೆ. ಮತ್ತೊಂದೆಡೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಪಘಾತದಲ್ಲಿ ಸಾವನ್ನಪ್ಪಿದ ಮೃತರ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ, ಮೃತರ ಪಾರ್ಥಿವ ಶರೀರವನ್ನು ತರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಸಮನ್ವಯ ಸಾಧಿಸಲು ಅಧಿಕಾರಿಗಳಿಗೆ ಸೂಚಿಸಿಸದ್ದಾರೆ.
ಟ್ವೀಟ್ ಮಾಡಿ ಸಂತಾಪ ಸೂಚಿಸಿದ ಮುಖ್ಯಮಂತ್ರಿ
ನೇಪಾಳ ವಿಮಾನ ದುರಂತ ಅತ್ಯಂತ ದುಃಖಕರವಾಗಿದೆ. ಪ್ರಾಣ ಕಳೆದುಕೊಂಡ ಭಾರತೀಯ ನಾಗರಿಕರು ಸೇರಿದಂತೆ ಎಲ್ಲ ಜನರಿಗೆ ವಿನಮ್ರ ಶ್ರದ್ಧಾಂಜಲಿ. ನನ್ನ ಸಂತಾಪವು ದುಃಖಿತ ಕುಟುಂಬಗಳೊಂದಿಗೆ ಇರುತ್ತದೆ. ಭಗವಂತ ಶ್ರೀರಾಮ ಅವರಿಗೆ ಪವಿತ್ರ ಪಾದಗಳಲ್ಲಿ ಸ್ಥಾನ ನೀಡಲಿ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.