ಮಂಗಳೂರು: ‘ಜ್ಞಾನವಾಪಿ ನಮ್ಮದು ನಮ್ಮದಾಗೆ ಉಳಿಯುವುದು, ಸಂಘರ್ಷಕ್ಕೆ ಮತ್ತು ಹುತಾತ್ಮರಾಗಲು ತಯಾರಾಗಿ’ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಬಹಿರಂಗ ಕರೆ ನೀಡಿದ್ದಾರೆ.
ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆಗೆ ಅನುಮತಿ ನೀಡಿರುವುದನ್ನು ಖಂಡಿಸಿ ಮಂಗಳೂರಿನಲ್ಲಿ SDPI ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನಾ ಸಭೆ ನಡೆಸಿದ ಪ್ರತಿಭಟನಕಾರರು ಪೂಜಾ ಸ್ಥಳಗಳ ಕಾಯಿದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿದರು. ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಜ್ಞಾನವಾಪಿ ವಿಷಯದಲ್ಲಿ ಹೈಕೋರ್ಟ್ ನಲ್ಲಿ ಕೇಸು ನಡೀತಾ ಇತ್ತು ಆದ್ರೂ ತರಾತುರಿಯಲ್ಲಿ ಕೆಳಗಿನ ಕೋರ್ಟ್ ನ ಜಡ್ಜ್ ಪೂಜೆಗೆ ಅವಕಾಶ ಕೊಟ್ಟರು. ಪೂಜಾ ಸ್ಥಳ ಕಾಯಿದೆಯಡಿ ಯಥಾಸ್ಥಿತಿ ಆದೇಶ ಇದೆ ಆದ್ರೆ ಆ ಕಾನೂನಿಗೆ ಮೂರು ಕಾಸಿನ ಬೆಲೆ ಕೊಡ್ತಾ ಇಲ್ಲ. ಸಂಘರ್ಷ, ತ್ಯಾಗ, ಬಲಿದಾನ ಮಾಡದೇ ನಮ್ಮ ಸಮಸ್ಯೆಗೆ ಪರಿಹಾರ ಇಲ್ಲ, ಈ ದೇಶದಲ್ಲಿ ಕಾನೂನು ಇದ್ಯಾ? ಕಾನೂನು ಸತ್ತು ಹೋಗಿದೆ. ಯಾವ ಬೆಲೆ ತೆತ್ತಾದರೂ ಮಸೀದಿ, ಮಂದಿರ, ಚರ್ಚ್ ಗಳನ್ನು ಉಳಿಸಿಕೊಳ್ಳಬೇಕು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದ್ದಿದ್ದನ್ನ ಅಲ್ಲೇ ಉಳಿಸಿಕೊಳ್ಳಬೇಕು ಎಂದ ಅವರು ಸಿದ್ದರಾಮಯ್ಯ, ರಾಹುಲ್, ಸೋನಿಯಾ, ಖರ್ಗೆ ಉಳಿಸ್ತಾರೆ ಅಂತ ಕಾಯಬೇಡಿ. ಹೋರಾಟಕ್ಕೆ ತಯಾರಾಗಿ ಜ್ಞಾನವಾಪಿ ನಮ್ಮದು ನಮ್ಮದಾಗೆ ಉಳಿಯುವುದು. ಸಂಘರ್ಷಕ್ಕೆ ಮತ್ತು ಹುತಾತ್ಮರಾಗಲು ತಯಾರಾಗಿ ಎಂದು ಸಂಘರ್ಷಕ್ಕೆ ಬಹಿರಂಗ ಕರೆ ನೀಡಿದ್ದಾರೆ.
ಇನ್ನು ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಪರಂಗೀಪೇಟೆ ಮಾತನಾಡಿ ದೇಶದ ಸ್ಥಳೀಯ ಮತ್ತು ಮೇಲಿನ ನ್ಯಾಯಾಲಯಗಳ ತೀರ್ಪು ಅಂತಿಮ ಅಂದುಕೊಂಡಿದ್ದಾರೆ ಆದ್ರೆ ಈ ದೇಶಕ್ಕೆ ಸರ್ವೋಚ್ಛ ಅನ್ನೋದು ಸಂವಿಧಾನವಾಗಿದೆ. ಹೀಗಾಗಿ ನ್ಯಾಯಾಲಯಗಳು ಸಂವಿಧಾನದ ಪರವಾಗಿ ತೀರ್ಪು ನೀಡದಿದ್ದರೆ ಪ್ರಶ್ನಿಸಬೇಕು. ದ.ಕ ಜಿಲ್ಲೆಯಲ್ಲಿ ಸಂಘಪರಿವಾರವನ್ನ ಎದುರಿಸೋ ಜನ ಸಮೂಹ ಇದೆ.ನಾವು ಸೋತಿರಬಹುದು, ಆದರೆ ನಾವು ಸತ್ತಿಲ್ಲ. ಮೋಹನ್ ಭಾಗವತ್ ಯಾರು ನಮ್ಮ ರಾಷ್ಟ್ರಪತಿಯಾ? ಎಂದು ಪ್ರಶ್ನಿಸಿದ ಅವರು ನಮ್ಮ ಜೀವ ಹೋದರೂ ಪರವಾಗಿಲ್ಲ, ಹಕ್ಕಿಗಾಗಿ ನಾವು ಹೋರಾಟ ಮಾಡಬೇಕು. ಯಾವ ಕ್ಷಣದಲ್ಲಾದರೂ ನಮ್ಮ ಬಂಧನವಾಗಬಹುದು,
ಆದರೆ ಹೋರಾಟದಿಂದ ಹಿಂದೆ ಸರಿಯಲ್ಲ. ಇಡಿ, ಎನ್ಐಎ ಮೂಲಕ ನೀವು ಭಯ ಪಡಿಸಿದರೂ ನಾವು ಭಯ ಪಡಲ್ಲ. ನಾವು ಕೇವಲ ಮಸೀದಿಗಳನ್ನ ಕಳೆದುಕೊಳ್ತಿಲ್ಲ, ನಮ್ಮ ಅಸ್ತಿತ್ವ ಕಳೆದುಕೊಳ್ತಾ ಇದೀವಿ. ಈ ದೇಶದ ಮಣ್ಣಿನಲ್ಲಿ ನಮಗೆ ಹಕ್ಕಿದೆ, ನಮ್ಮ ಪೂರ್ವಿಕರ ಅಸ್ತಿತ್ವ ಇದೆ. ನಿಮ್ಮ ಮನೆಗೆ ನುಸುಳಿದ್ರೆ ನೀವು ಸುಮ್ಮನೆ ಇರ್ತೀರಾ?, ಅದೇ ರೀತಿ ನಮ್ಮ ಧಾರ್ಮಿಕ ಚಿಹ್ನೆಗಳಾದ ಮಸೀದಿಗಳಿಗೆ ನುಸುಳಿದಾಗಲೂ ಪ್ರತಿರೋಧ, ವಿರೋಧ, ಆಕ್ರೋಶ ಇದ್ದೇ ಇವೆ ಎಂದ್ರು. ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು, ಮಹಿಳೆಯರು ಭಾಗವಹಿಸಿದ್ದರು.