ನವದೆಹಲಿ:
ಹೌದು. ಪುರಾತತ್ವ ಇಲಾಖೆ ನಡೆಸಿದ ಸಮೀಕ್ಷೆ ವೇಳೆ ಪತ್ತೆಯಾಗಿದ್ದ ಮೂರ್ತಿಗಳಿಗೆ ಪೂಜೆ ನಡೆಸಲು ವಾರಣಾಸಿ ಜಿಲ್ಲಾ ನ್ಯಾಯಾಲಯ ಬುಧವಾರ ಆದೇಶ ನೀಡಿತ್ತು. ಈ ಆದೇಶ ಪ್ರಕಟವಾದ ಬಳಿಕ ರಾತ್ರಿಯೇ ನೆಲಮಹಡಿಯಲ್ಲಿ ಮೂರ್ತಿಗಳಿಗೆ ಪೂಜೆ ಮಾಡಲಾಗಿತ್ತು. ಪೂಜೆ ಮಾಡಿದ ಬೆನ್ನಲ್ಲೇ ಗುರುವಾರ ನಸುಕಿನ ಜಾವ 3 ಗಂಟೆಯ ವೇಳೆ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಅವರ ಮನೆಗೆ ಆಗಮಿಸಿದ ಮಸೀದಿ ಪರ ವಕೀಲರು ತುರ್ತು ಅರ್ಜಿ ವಿಚಾರಣೆ ನಡೆಸಬೇಕೆಂದು ಕೋರಿದರು. ಜಿಲ್ಲಾ ನ್ಯಾಯಾಲಯ ಹೊರಡಿಸಿದ ಆದೇಶಕ್ಕೆ ತಡೆ ನೀಡಿ ಯಥಾಸ್ಥಿತಿ ಮುಂದುವರಿಸುವಂತೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದರು.
ಈ ಮನವಿಗೆ ಕೋರ್ಟ್ ರಿಜಿಸ್ಟ್ರಾರ್ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಗಮನಕ್ಕೆ ತಂದು ಅವರು ನೀಡಿದ ನಿರ್ದೇಶನದಂತೆ ನಡೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಬೆಳಗಿನ ಜಾವ 7 ಗಂಟೆ ವೇಳೆ ಮಸೀದಿ ಪರ ವಕೀಲರಿಗೆ ದೂರವಾಣಿ ಮಾಡಿದ ರಿಜಿಸ್ಟ್ರಾರ್ ಅವರು, ನಿಮ್ಮ ಮನವಿಯನ್ನು ಮುಖ್ಯ ನ್ಯಾಯಾಧೀಶರ ಗಮನಕ್ಕೆ ತರಲಾಗಿದೆ. ಅವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದಾರೆ ಎಂಬುದನ್ನು ತಿಳಿಸಿದರು.
ಸಿಜೆಐ ಸೂಚನೆಯಂತೆ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಹೈಕೋರ್ಟ್ ಮೊರೆ ಹೋಗಿ ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿದೆ.
ಜಿಲ್ಲಾ ನ್ಯಾಯಾಲಯ ನೆಲ ಮಹಡಿಯಲ್ಲಿ ಪೂಜೆ ಸಲ್ಲಿಸುವ ಸಂಬಂಧ ಅಗತ್ಯ ವ್ಯವಸ್ಥೆ ಮಾಡಲು ಸ್ಥಳೀಯ ಆಡಳಿತಕ್ಕೆ ಒಂದು ವಾರ ಕಾಲಾವಕಾಶ ನೀಡಿದೆ. ಹೀಗಿದ್ದರೂ ಬುಧವಾರ ರಾತ್ರಿ ಪೂಜೆಯನ್ನು ತರಾತುರಿಯಲ್ಲಿ ನಡೆಸಲು ಯಾವುದೇ ಕಾರಣ ಇರಲಿಲ್ಲ. ಅರ್ಜಿದಾರರ ಜೊತೆ ಆಡಳಿತವೂ ಶಾಮೀಲಾಗಿರುವ ಕಾರಣ ಈ ರೀತಿ ತರಾತುರಿಯಲ್ಲಿ ಪೂಜೆ ಸಲ್ಲಿಸಲಾಗಿದೆ. ಮಸೀದಿ ಜಾಗವನ್ನು ವಶಪಡಿಸಿಕೊಳ್ಳಲು ಮುಂದಾಗುತ್ತಿದೆ. ಈ ಕಾರಣದಿಂದ ವಾರಣಾಸಿ ಜಿಲ್ಲಾ ನ್ಯಾಯಾಲಯ ನೀಡಿದ ಆದೇಶಕ್ಕೆ ತಡೆ ನೀಡಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಆದೇಶಿಸಬೇಕೆಂದು ಕೋರಿ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.