“ನಾನು ಸುಳ್ಳು ಆಶ್ವಾಸನೆ ಕೊಡೋಕೆ ಹೋಗಲ್ಲ, ಕಾಂಗ್ರೆಸ್ ಈ ಜನ್ಮದಲ್ಲಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರಲ್ಲ”: ಗುಲಾಂ ನಬಿ ಆಜಾದ್

in Kannada News/News 593 views

ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ 2024ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸಾಧನೆಯ ಕುರಿತಾಗಿ ನಿರಾಶಾದಾಯಕ ಹೇಳಿಕೆ ನೀಡಿದ್ದಾರೆ. “ಈಗಿನ ಪರಿಸ್ಥಿತಿ ಮುಂದುವರಿದರೆ, 2024 ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 300 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುವುದಿಲ್ಲ” ಎಂದು ಅವರು ಹೇಳುತ್ತಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ಮರುಸ್ಥಾಪಿಸುವ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ಅವರು ಹೀಗೆ ಹೇಳಿದರು.

Advertisement

ಸುಪ್ರೀಂ ಕೋರ್ಟ್ ಅಥವಾ ಕೇಂದ್ರ ಸರ್ಕಾರ ಮಾತ್ರ ಜಮ್ಮು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಮರುಸ್ಥಾಪಿಸಬಹುದು ಎಂದು ಆಜಾದ್ ಹೇಳಿದ್ದಾರೆ. ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 370 ನೇ ವಿಧಿಯನ್ನು ರದ್ದುಗೊಳಿಸಿದೆ, ಆದ್ದರಿಂದ ಬಿಜೆಪಿ ಸರ್ಕಾರ ಅದನ್ನ ಮರುಸ್ಥಾಪಿಸುವುದಿಲ್ಲ. ಅವರು ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ಪ್ರದೇಶದಲ್ಲಿ ರ‌್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಅವರು ಮಾತನಾಡುತ್ತ, “ನಾನು ಜನರನ್ನು ಮೆಚ್ಚಿಸಲು ಮಾತನಾಡುವುದಿಲ್ಲ. ಅದು ನಮ್ಮ ಕೈಯಲ್ಲಿಲ್ಲ. ನಾನು ನಿಮಗೆ ಸುಳ್ಳು ಭರವಸೆಗಳನ್ನು ನೀಡಿ 370 ನೇ ವಿಧಿಯ ಬಗ್ಗೆ ಮಾತನಾಡುವುದು ಸರಿಯಲ್ಲ. ಲೋಕಸಭೆಯಲ್ಲಿ ಬಹುಮತ ಹೊಂದಿರುವ ಸರ್ಕಾರದಿಂದ ಮಾತ್ರ 370 ನೇ ವಿಧಿಯನ್ನು ಮರುಸ್ಥಾಪಿಸಲು ಸಾಧ್ಯ. ಸರ್ಕಾರ ರಚಿಸಲು 300 ಸಂಸದರ ಅಗತ್ಯವಿದೆ. ನಮ್ಮ ಬಳಿ ಸರ್ಕಾರ ರಚಿಸಲು 300 ಸಂಸದರು ಗೆದ್ದು ಬರೋದಾದರೂ ಯಾವಾಗ? ಆದ್ದರಿಂದ, 2024 ರಲ್ಲಿ ನಾವು 300 ಸ್ಥಾನಗಳಲ್ಲಿ ಗೆದ್ದು ಆರ್ಟಿಕಲ್ 370 ಪುನಃಸ್ಥಾಪಿಸಲು ನಾನು ಭರವಸೆ ನೀಡುವುದಿಲ್ಲ. ಅಲ್ಲಾಹ್‌ನ ದಯೆಯಿಂದ 300 ಸೀಟು ಬಂದು ಅವಕಾಶ ನೀಡಲಿ ಆದರೆ ನಾನು ಯಾವುದೇ ಸುಳ್ಳು ಭರವಸೆ ನೀಡುವುದಿಲ್ಲ. ಅದಕ್ಕಾಗಿಯೇ ನಾನು 370 ನೇ ವಿಧಿಯ ಬಗ್ಗೆ ಮಾತನಾಡುವುದಿಲ್ಲ” ಎಂದರು.

ಆಜಾದ್ ಅವರು ಒಮರ್ ಅಬ್ದುಲ್ಲಾ ಅವರ ಹೇಳಿಕೆಯನ್ನು ಖಂಡಿಸಿದರು ಮತ್ತು ಅವರ ಹೇಳಿಕೆಯ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ. ಗುಲಾಂ ನಬಿ ಮಾತನಾಡುತ್ತ, “ಕಳೆದ ಮೂರು ವರ್ಷಗಳಿಂದ ಸಂಸತ್ತಿನಲ್ಲಿ ನಾನು ಒಬ್ಬಂಟಿಯಾಗಿ ಮಾತನಾಡುತ್ತಿದ್ದೇನೆ. 370 ನೇ ವಿಧಿಯನ್ನು ರದ್ದುಪಡಿಸಿದಾಗ ಮತ್ತು ರಾಜ್ಯವನ್ನು ವಿಭಜಿಸಿದಾಗ, ನಾನು ಸಂವಿಧಾನದಲ್ಲಿ ಬದಲಾವಣೆಗಳನ್ನು ತರಲು ಕೇಂದ್ರ ಸರ್ಕಾರಕ್ಕೆ ಹಕ್ಕಿದೆ, ಆದರೆ ಅದು ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯ ಮೂಲಕ ಬರುತ್ತದೆ ಹೊರತು ಸಂಸತ್ತಿನ ಮೂಲಕವಲ್ಲ ಎಂದು ನಾನು ಹೇಳಿದ್ದೇನೆ” ಎಂದರು.

ಜಮ್ಮು ಕಾಶ್ಮೀರದ ಪೂಂಚ್ ಮತ್ತು ರಜೌರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಜಾದ್ ಇತ್ತೀಚೆಗೆ 370 ನೇ ವಿಧಿಯ ಬಗ್ಗೆ ಮಾತನಾಡುವುದು ಅಪ್ರಸ್ತುತ ಎಂದು ಹೇಳಿದ್ದರು. ಜಮ್ಮು ಕಾಶ್ಮೀರ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸುವುದು ಮತ್ತು ಶೀಘ್ರ ವಿಧಾನಸಭೆ ಚುನಾವಣೆಗಳು ತಮ್ಮ ಪ್ರಮುಖ ಬೇಡಿಕೆಗಳಾಗಿವೆ ಎಂದು ಅವರು ಹೇಳಿದರು. ಅವರ ಹೇಳಿಕೆಯನ್ನು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಖಂಡಿಸಿದ್ದಾರೆ. ಆಜಾದ್ ಅವರು ಈಗಾಗಲೇ ಸೋಲನ್ನು ಒಪ್ಪಿಕೊಂಡಿದ್ದಾರೆ, ಆದರೆ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ ಎಂದು ಅವರು ಹೇಳಿದರು.

ಇತ್ತೀಚೆಗಷ್ಟೇ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ವಿರುದ್ಧ ಕ್ರಮ ಕೈಗೊಂಡು ಪಕ್ಷದ ಶಿಸ್ತು ಕ್ರಮ ಸಮಿತಿಯಿಂದ ವಜಾಗೊಳಿಸಿರುವುದು ಗಮನಿಸಬೇಕಾದ ಸಂಗತಿ. ಕಥುವಾದಲ್ಲಿ ದೊಡ್ಡ ರ‌್ಯಾಲಿ ನಡೆಸುವ ಮೂಲಕ ಶಕ್ತಿ ಪ್ರದರ್ಶಿಸಿದರು. ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಅವರು, ರಾಜ್ಯದ ಜನತೆಗೆ ಏನು ಬೇಕೋ ಅದನ್ನು ಮಾಡುತ್ತೇನೆ ಎಂದಿದ್ದರು. ಇದಾದ ಬಳಿಕ ಅವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿತ್ತು.

Advertisement
Share this on...