ಕರ್ನಾಟಕ ಹಿಜಾಬ್ ಬಗ್ಗೆ ವಿವಾದ ಮುಂದುವರಿದಿದೆ. ಕರ್ನಾಟಕದಲ್ಲಿ ಹಿಜಾಬ್ ಧರಿಸುವ ಹಕ್ಕನ್ನು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ನಂತರ ವಿಷಯವನ್ನು ವಿಸ್ತೃತ ಪೀಠಕ್ಕೆ ಉಲ್ಲೇಖಿಸಲಾಗಿತ್ತು, ತ್ರಿಸದಸ್ಯ ಪೀಠ ಮಧ್ಯಂತರ ಆದೇಶವನ್ನೂ ಹೊರಡಿಸಿತ್ತು. ಮದ್ರಾಸ್ ಹೈಕೋರ್ಟ್ ಗುರುವಾರ (ಫೆಬ್ರವರಿ 10, 2022) ದೇಶದ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ಡ್ರೆಸ್ ಕೋಡ್ ವಿವಾದದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದು ಗಂಭೀರವಾದ ಟಿಪ್ಪಣಿಗಳನ್ನ ಮಾಡಿದೆ.
ವಾಸ್ತವವಾಗಿ, ತಮಿಳುನಾಡಿನ ದೇವಾಲಯಗಳಿಗೆ ಹಿಂದೂಯೇತರರು ಮತ್ತು ವಿದೇಶಿಯರ ಪ್ರವೇಶವನ್ನು ಸಂಪೂರ್ಣ ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ತಿರುಚ್ಚಿ ಮೂಲದ ಹೋರಾಟಗಾರ ರಂಗರಾಜನ್ ಅವರು ಸಲ್ಲಿಸಿರುವ ಅರ್ಜಿಯಲ್ಲಿ, ಹಿಂದೂಯೇತರರು ಮತ್ತು ವಿದೇಶಿಯರ ಉಪಸ್ಥಿತಿಯು ದೇವಾಲಯಗಳ ಶುದ್ಧತೆಯನ್ನು ಕಲುಷಿತಗೊಳಿಸುತ್ತದೆ ಎಂದು ಹೇಳಲಾಗಿತ್ತು.
ದೇವಸ್ಥಾನಗಳಲ್ಲಿ ಕಟ್ಟುನಿಟ್ಟಿನ ವಸ್ತ್ರ ಸಂಹಿತೆ ಜಾರಿಗೊಳಿಸಬೇಕು ಹಾಗೂ ನಾಸ್ತಿಕರು ದೇವಸ್ಥಾನ ಪ್ರವೇಶಿಸುವುದನ್ನು ತಡೆಯಲು ಹಿಂದೂಗಳು ಬಿಂದಿ, ಭಸ್ಮ, ಧೋತಿ, ಸೀರೆ, ಸಲ್ವಾರ್ ಕಮೀಜ್ ಧರಿಸಬೇಕು ಎಂದು ಅರ್ಜಿದಾರರು ಆಗ್ರಹಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಮದ್ರಾಸ್ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ (ಎಸಿಜೆ) ಮುನೀಶ್ವರ್ ನಾಥ್ ಭಂಡಾರಿ ನೇತೃತ್ವದ ಪೀಠ, “ಯಾವುದು ಅತಿಮುಖ್ಯ? ಇದು ದೇಶವೋ ಅಥವಾ ಧರ್ಮವೋ?” ಎಂದಿದ್ದಾರೆ.
ಅವರು ಮುಂದೆ ಮಾತನಾಡುತ್ತ, “ನನ್ನ ಅರ್ಥವೇನೆಂದರೆ, (ಇದು) ನಿಜವಾಗಿಯೂ ಆಘಾತಕಾರಿಯಾಗಿದೆ, ಕೆಲವರು ಹಿಜಾಬ್ಗಾಗಿ ಆಂದೋಲನ ಮಾಡುತ್ತಿದ್ದಾರೆ, ಇನ್ನೂ ಕೆಲವರು ಟೋಪಿಗಾಗಿ, ಮತ್ಯಾರೋ ಇತರ ವಿಷಯಗಳಿಗೆ ನ್ಯಾಯಾಲಯಗಳ ಮೆಟ್ಟಿಲೇರುತ್ತಿದ್ದಾರೆ” ಎಂದರು. ಅಂತಹ ವಿಷಯಗಳ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದ ಅವರು, “ಇದು ದೇಶವೇ ಅಥವಾ ಧರ್ಮಗಳಿಂದ ವಿಭಜಿಸಲ್ಪಟ್ಟಿದೆಯೇ ಅಥವಾ ಮತ್ತಿನ್ನೇನಾದರೂ ಆಗಿದೆಯೇ? ಇದು ನಿಜಕ್ಕೂ ಆಶ್ಚರ್ಯಕರವಾಗಿದೆ” ಎಂದರು.
ಭಾರತ ಜಾತ್ಯತೀತ ದೇಶ ಎಂಬ ಅಂಶವನ್ನು ಎತ್ತಿ ಹಿಡಿದ ನ್ಯಾಯಮೂರ್ತಿ ಮುನೀಶ್ವರ್ ನಾಥ್ ಭಂಡಾರಿ, “ಇತ್ತೀಚಿನ ಪ್ರಕರಣಗಳನ್ನ ಗಮನಿಸಿದರೆ ಇವೆಲ್ಲಾ ದೇಶವನ್ನು ಧಾರ್ಮಿಕವಾಗಿ ವಿಭಜಿಸುವ ಪ್ರಯತ್ನವಲ್ಲದೇ ಬೇರೇನೂ ಅಲ್ಲ.” ಎಂದರು.
ಭಕ್ತಾದಿಗಳ ವಸ್ತ್ರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನ್ಯಾಯಾಲಯವು ಆದೇಶಿಸಬೇಕು ಮತ್ತು ತಮಿಳುನಾಡಿನಾದ್ಯಂತ ದೇವಾಲಯಗಳಲ್ಲಿ ಹಿಂದೂಯೇತರರಿಗೆ ಪ್ರವೇಶವನ್ನು ನಿಷೇಧಿಸಬೇಕು ಎಂದು ಕೋರಿ ಶ್ರೀರಂಗಂ ಮೂಲದ ಹೋರಾಟಗಾರ ರಂಗರಾಜನ್ ನರಸಿಂಹನ್ ಅವರು ಸಲ್ಲಿಸಿದ ಅರ್ಜಿಗಳ ಒಂದು ಗುಂಪಿನ ವಿಚಾರಣೆಯ ಸಂದರ್ಭದಲ್ಲಿ ಎಸಿಜೆ ಈ ಹೇಳಿಕೆಗಳನ್ನು ನೀಡಿದರು.
ಆದಾಗ್ಯೂ, ಧಾರ್ಮಿಕ ಆಚರಣೆಗಳಲ್ಲಿ ಬಳಸುವ ಡ್ರೆಸ್ ಕೋಡ್ ಅನ್ನು ಉದಾಹರಣೆಯಾಗಿ ತೋರಿಸಲು ಪೀಠವು ಅವರನ್ನು ಕೇಳಿತು ಮತ್ತು ಆಚರಣೆಯು ದೇವಾಲಯದಿಂದ ದೇವಾಲಯಕ್ಕೆ ಭಿನ್ನವಾಗಿರುತ್ತದೆ ಎಂದು ಸ್ಪಷ್ಟಪಡಿಸಿತು.
ನಿರ್ದಿಷ್ಟ ಡ್ರೆಸ್ ಕೋಡ್ ಇಲ್ಲದಿರುವಾಗ ಅದರ ಮೇಲೆ ಡಿಸ್ಪ್ಲೇ ಬೋರ್ಡ್ ಹಾಕುವ ಪ್ರಶ್ನೆ ಹೇಗೆ ಉದ್ಭವಿಸುತ್ತದೆ ಎಂದು ಪೀಠ ಅರ್ಜಿದಾರರನ್ನು ಕೇಳಿದೆ.
ಆದರೆ ಅರ್ಜಿದಾರರು ಆದೇಶವನ್ನು ಕೋರಿದಾಗ, ಆಗಮಗಳ (ಆಗಮ ಶಾಸ್ತ್ರ) ಯಾವ ಭಾಗದಲ್ಲಿ ಪ್ಯಾಂಟ್ ಮತ್ತು ಶರ್ಟ್ ಅನ್ನು ಉಲ್ಲೇಖಿಸಲಾಗಿದೆ ಎಂಬುದನ್ನು ತೋರಿಸಲು ಪೀಠವು ಕೇಳಿತು.
ಆಗ ಅವರು ನ್ಯಾಯಾಲಯದ ಮುಂದೆ ಖುದ್ದು ಹಾಜರಾಗದಂತೆ ತಡೆಯಬಹುದು ಎಂದು ಎಚ್ಚರಿಸಿದ ಪೀಠ, ಸೂಕ್ತ ಪದಗಳನ್ನು ಬಳಸಿ ಇಂತಹ ವಿವಾದ, ಜಗಳಗಳಿಂದ ದೂರವಿರುವಂತೆ ಸೂಚಿಸಿತು.
ಮಾಧ್ಯಮ ವರದಿಗಳ ಪ್ರಕಾರ, ಅಡ್ವೊಕೇಟ್ ಜನರಲ್ ಆರ್ ಷಣ್ಮುಗಸುಂದರಂ ಅವರು ಪ್ರತಿ ದೇವಸ್ಥಾನವು ತನ್ನದೇ ಆದ ಸಂಪ್ರದಾಯವನ್ನು ಅನುಸರಿಸುತ್ತಿದೆ ಮತ್ತು ಇತರ ಧರ್ಮದ ಜನರಿಗೆ ಕೇವಲ ‘ಕೋಡಿ ಮರಮ್’ (ಧ್ವಜದ ಸ್ತಂಭ – ದೇವಾಲಯದ ಧ್ವಜವನ್ನು ಹಾಕಲಾಗಿರುತ್ತದೆ) ವರೆಗೆ ಮಾತ್ರ ಹೋಗುವ ಅನುಮತಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ರಿಟ್ ಅರ್ಜಿಯ ವ್ಯಾಪ್ತಿಯಿಂದ ಹೊರಗಿರುವ ಕಾರಣ ಡ್ರೆಸ್ ಕೋಡ್ ಅನ್ನು ಸೂಚಿಸುವ ಏಕ ನ್ಯಾಯಾಧೀಶರ ಆದೇಶವನ್ನು ಮದ್ರಾಸ್ ಹೈಕೋರ್ಟ್ನ ವಿಭಾಗೀಯ ಪೀಠವು ಈಗಾಗಲೇ ರದ್ದುಗೊಳಿಸಿದೆ ಮತ್ತು ಈ ಆದೇಶವು ವ್ಯಾಪಕ ಆಕ್ರೋಶ ಮತ್ತು ಚರ್ಚೆಗೆ ಕಾರಣವಾಯಿತು ಎಂದು ಅವರು ನೆನಪಿಸಿದರು.
ಅವರು ಪೀಠಕ್ಕೆ, “ಪ್ರತಿಯೊಂದು ದೇವಾಲಯಕ್ಕೂ ತನ್ನದೇ ಆದ ಸಂಪ್ರದಾಯವಿದೆ. ಕೆಲವು ದೇವಾಲಯಗಳು ಹಿಂದೂಯೇತರರಿಗೆ ಕೆಲವು ಪ್ರದೇಶಗಳಿಗೆ ಭೇಟಿ ನೀಡಲು ಅವಕಾಶ ನೀಡುತ್ತವೆ. ಹಿಂದೂಯೇತರರು ಕೊಡಿ ಮರದಿಂದ ಆಚೆ ಪ್ರವೇಶಿಸುವಂತಿಲ್ಲ (ದೇವಸ್ಥಾನದ ಧ್ವಜಕ್ಕೆ ಸಂಬಂಧಿಸಿದಂತೆ). ಅದು ಪದ್ಧತಿ.” ಎಂದು ಅರ್ಜಿದಾರರು ಹೇಳಿದರು.
ಅಂತಿಮವಾಗಿ, ಪೀಠವು ಅರ್ಜಿದಾರರಿಗೆ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಉಲ್ಲಂಘನೆಯನ್ನು ತೋರಿಸುವ ಅವರ ಭಾವಚಿತ್ರಗಳೊಂದಿಗೆ ಅಫಿಡವಿಟ್ ಸಲ್ಲಿಸುವಂತೆ ಕೇಳಿದೆ.