ಬರಗಾಲದ ಸಂಕಷ್ಟದ ಮಧ್ಯೆಯೂ 50 ಚೀಲ ಜೋಳ ಮಾರಿ ಅಯೋಧ್ಯೆಯ ರಾಮ ಮಂದಿರಕ್ಕೆ ದೇಣಿಗೆ ನೀಡಿದ ರಾಯಚೂರಿ‌ನ ರೈತ

in Uncategorized 1,213 views

50 ಚೀಲ ಜೋಳ ಮಾರಾಟ ಮಾಡಿದ ಸಣ್ಣ ಕರಿಯಪ್ಪ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​​ಗೆ 91,870 ರೂ. ಜಮೆ ಮಾಡಿದ್ದಾರೆ. ಬರಗಾಲದ ಸಮಯದಲ್ಲಿಯೂ ಅವರು ದೇಣಿಗೆ ನೀಡಿರುವುದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

ರಾಯಚೂರು: ಬರಗಾಲದ ಸಂಕಷ್ಟದ ಮಧ್ಯೆಯೂ ರಾಮ ಬಗ್ಗೆ ಭಕ್ತಿಯ ಪರಾಕಾಷ್ಠೆ ಮೆರೆದ ರೈತರೊಬ್ಬರು ಜೋಳ ಮಾರಿ ಅಯೋಧ್ಯೆಯ ರಾಮ ಮಂದಿರಕ್ಕೆ (Ayodhya Ram Mandir) ದೇಣಿಗೆ ನೀಡಿದ ಅಪರೂಪದ ವಿದ್ಯಮಾನ ರಾಯಚೂರು ಜಿಲ್ಲೆಯಿಂದ ವರದಿಯಾಗಿದೆ. ರಾಯಚೂರು ಜಿಲ್ಲೆ ‌ಸಿಂಧನೂರು ತಾಲ್ಲೂಕಿನ ಗೋಮರ್ಸಿ ಗ್ರಾಮದ ರೈತ ಸಣ್ಣ ಕರಿಯಪ್ಪ ಎಂಬವರೇ ಜೋಳ ಮಾರಿ ರಾಮ ಮಂದಿರಕ್ಕೆ ದೇಣಿಗೆ ನೀಡಿದವರು.

50 ಚೀಲ ಜೋಳ ಮಾರಾಟ ಮಾಡಿದ ಸಣ್ಣ ಕರಿಯಪ್ಪ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​​ಗೆ 91,870 ರೂ. ಜಮೆ ಮಾಡಿದ್ದಾರೆ. ಆರ್​​ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಸಣ್ಣ ಕರಿಯಪ್ಪ ಅವರು ಮೂರು ಎಕರೆಯಲ್ಲಿ ಪ್ರತಿ ವರ್ಷ 120 ಚೀಲ ಜೋಳ ಬೆಳೆಯುತ್ತಿದ್ದರು. ಆದರೆ, ಈ ಬಾರಿ ಬರದಿಂದಾಗಿ ಕೇವಲ 80 ಚೀಲ ಜೋಳ‌ ಬೆಳೆದಿದ್ದರು. ಅದರಲ್ಲಿ 50 ಚೀಲ ಮಾರಾಟ ಮಾಡಿ ದೇಣಿಗೆ ನೀಡಿದ್ದಾರೆ. ರೈತ ಸಣ್ಣ ಕರಿಯಪ್ಪ ಭಕ್ತಿ ಸೇವೆಗೆ ಇದೀಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಯೋಧ್ಯೆ ರಾಮ ಮಂದಿರಕ್ಕೂ ಕರ್ನಾಟಕಕ್ಕೂ ಬಹಳ ನಂಟು
ಅಯೋಧ್ಯೆಯ ರಾಮ ಮಂದಿರಕ್ಕೂ ಕರ್ನಾಟಕಕ್ಕೂ ಬಹಳಷ್ಟು ನಂಟು ಇವೆ. ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಿರುವ ರಾಮ ಲಲ್ಲಾ ಮೂರ್ತಿಯನ್ನು ಕೆತ್ತಿರುವ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್. ಅದೇ ರೀತಿ ಕರ್ನಾಟಕ ವಿವಿಧ ಜಿಲ್ಲೆಗಳ ಅನೇಕ ಶಿಲ್ಪಿಗಳು ಅಯೋಧ್ಯೆಯ ರಾಮ ಮಂದಿರದಲ್ಲಿ ಕೆತ್ತನೆ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಎಲ್ಲದರ ಮಧ್ಯೆ ಇದೀಗ ರಾಯಚೂರಿನ ರೈತ ಸಣ್ಣ ಕರಿಯಪ್ಪ ಕೂಡ ಗಮನ ಸೆಳೆದಿದ್ದಾರೆ.

ರಾಮ ಮಂದಿರದಲ್ಲಿ ಭಕ್ತ ಪ್ರವಾಹ

ಈ ಮಧ್ಯೆ, ಅಯೋಧ್ಯೆಯ ರಾಮ ಮಂದಿರೆದಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠೆಯ ನಂತರ ದರ್ಶನಕ್ಕೆ ಭಕ್ತರ ಸರತಿ ಸಾಲು ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಸಾರ್ವಜನಿಕ ದರ್ಶನಕ್ಕೆ ಮಂದಿರ ಮುಕ್ತವಾದ ಮೊದಲ ದಿನವಾದ ಮಂಗಳವಾರ 5 ಲಕ್ಷಕ್ಕೂ ಅಧಿಕ ಭಕ್ತರು ದೇವರ ದರ್ಶನ ಪಡೆದರೆ, ಬುಧವಾರ ಬೆಳಗ್ಗೆಯೂ 20 ಸಾವಿರಕ್ಕೂ ಹೆಚ್ಚು ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಬೆಳಿಗ್ಗೆ ದೇವಸ್ಥಾನದ ಬಾಗಿಲು ತೆರೆಯುವ ಮುನ್ನವೇ, ಪ್ರವೇಶ ದ್ವಾರದ ಹೊರಗೆ ಒಂದು ಕಿಲೋಮೀಟರ್‌ಗೂ ಹೆಚ್ಚು ಉದ್ದದ ಸರತಿ ಸಾಲುಗಳು ಕಂಡುಬಂದವು. ಬೆಳಗ್ಗೆಯಿಂದಲೇ ಪೊಲೀಸರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯೋನ್ಮುಖವಾಗಿ ಭಕ್ತರಿಗೆ ಸುಗಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

Advertisement
Share this on...