“ಕೇರಳ, ಮಹಾರಾಷ್ಟ್ರದಿಂದ ಬರುವವರು ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಬೇಕೆಂದರೆ ಮಾಡಿಸಬೇಕು, ದಟ್ಸ್ ಆಲ್” ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ ಖಡಕ್ ಉತ್ತರ. ಬಹುಶಃ ಎರಡನೇ ಅಲೆಯಲ್ಲಿ ಮಾಡಿದ ಎಡವಟ್ಟಿನಿಂದ ಸರಕಾರ ಪಾಠ ಕಲಿತಂತಿದೆ.
ಕೊರೊನಾ ಟಾಸ್ಕ್ ಫೋರ್ಸ್ ಸಭೆಯ ನಂತರ ಮುಖ್ಯಮಂತ್ರಿಗಳು ಎರಡು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡರು. ಒಂದು ಕಡೆ ಎಂಟು ಜಿಲ್ಲೆಗಳಲ್ಲಿ ಕೊರೊನಾ ಹೊಸ ಮಾರ್ಗಸೂಚಿ, ಇನ್ನೊಂದು ಶಾಲೆ ಆರಂಭಿಸುವ ನಿರ್ಧಾರ.
ಇಂದಲ್ಲಾ, ನಾಳೆ ರಾಜ್ಯ ಮತ್ತೆ ಲಾಕ್ಡೌನ್ ಆಗುವುದು ಖಚಿತವಾಗಿದ್ದರೂ, ಇಷ್ಟು ಬೇಗ ಸರಕಾರ ಕೋವಿಡ್ ನಿರ್ವಹಣೆಯ ವಿಚಾರದಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ.
ತಾಂತ್ರಿಕ ಸಮಿತಿ ನೀಡುವ ಸಲಹೆಗಳನ್ನು ಸರಕಾರ ಪಾಲಿಸುತ್ತಿಲ್ಲ ಎನ್ನುವುದು ಯಡಿಯೂರಪ್ಪನವರ ಅವಧಿಯಲ್ಲಿ ಇದ್ದಂತಹ ಅಪವಾದ. ಆದರೆ, ಈ ಬಾರಿ ಡಾ.ದೇವಿ ಶೆಟ್ಟಿ ನೇತೃತ್ವದ ಕಮಿಟಿ ನೀಡಿದ ಸಲಹೆಗಳನ್ನು ಬೊಮ್ಮಾಯಿ ಸರಕಾರ ಪಾಲಿಸಲು ಮುಂದಾದಂತಿದೆ.
ನೈಟ್ ಕರ್ಫ್ಯೂ ಸಮಯವನ್ನು ರಾತ್ರಿ ಒಂಬತ್ತರಿಂದ ಆರಂಭಿಸಲಾಗಿದೆ
ಕೇರಳದ ಜೊತೆ ಗಡಿಯನ್ನು ಹಂಚಿಕೊಂಡಿರುವ ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಇತ್ತ, ಮಹಾರಾಷ್ಟ್ರದ ಜೊತೆಗೆ ಗಡಿ ಹಂಚಿಕೊಂಡಿರುವ ವಿಜಯಪುರ, ಬೆಳಗಾವಿ, ಬೀದರ್ ಮತ್ತು ಕಲಬುರಗಿಯಲ್ಲಿ ಇಂದಿನಿಂದಲೇ (ಆಗಸ್ಟ್ 6) ಜಾರಿಗೆ ಬರುವಂತೆ ವೀಕೆಂಡ್ ಕರ್ಫ್ಯೂವನ್ನು ಜಾರಿಗೊಳಿಸಲಾಗಿದೆ. ಜೊತೆಗೆ, ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ, ನೈಟ್ ಕರ್ಫ್ಯೂ ಸಮಯವನ್ನು ರಾತ್ರಿ ಹತ್ತರ ಬದಲು, ಒಂಬತ್ತರಿಂದ ಆರಂಭಿಸಲಾಗಿದೆ.
ಶಾಲೆ ಆರಂಭಿಸುವ ಮಹತ್ವದ ನಿರ್ಧಾರಕ್ಕೆ ಸಿಎಂ ಬೊಮ್ಮಾಯಿ ಬಂದಿರುವುದು
ಇದು ಒಂದು ಕಡೆಯಾದರೆ, ಶಾಲೆ ಆರಂಭಿಸುವ ಮಹತ್ವದ ನಿರ್ಧಾರಕ್ಕೆ ಸಿಎಂ ಬೊಮ್ಮಾಯಿ ಬಂದಿರುವುದು. ಮೂರನೇ ಅಲೆಯ ಎಚ್ಚರಿಕೆಯ ನಡುವೆ, ಶಾಲೆ ಆರಂಭ ಸದ್ಯದ ಮಟ್ಟಿಗೆ ಮರೀಚಿಕೆ ಎಂದೇ ಹೇಳಲಾಗುತ್ತಿದ್ದ ಸಮಯದಲ್ಲಿ ಬೊಮ್ಮಾಯಿ ಸರಕಾರ ಶಾಲೆಯನ್ನು ಆರಂಭಿಸುವ ಸಂಬಂಧ ಅಧಿಕೃತ ಆದೇಶವನ್ನು ಹೊರಡಿಸಿದೆ. ಸರಕಾರದ ಈ ನಿರ್ಧಾರ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸವಿಸ್ತಾರವಾಗಿ ಚರ್ಚಿಸಿ ನಿರ್ಧಾರ
ಎರಡು ಹಂತಗಳಲ್ಲಿ ಶಾಲೆಯನ್ನು ಆರಂಭಿಸಲು ಸರಕಾರ ಅನುಮತಿ ನೀಡಿದೆ. ಮೊದಲ ಹಂತದಲ್ಲಿ ಒಂಬತ್ತು ಮತ್ತು ಹತ್ತು, ಎರಡನೇ ಹಂತದಲ್ಲಿ ಆರರಿಂದ ಎಂಟನೇ ತರಗತಿ ತೆರೆಯುವ ನಿರ್ಧಾರಕ್ಕೆ ಸರಕಾರ ಬಂದಿದೆ. ಆಗಸ್ಟ್ 23ರಿಂದ ಮೊದಲ ಹಂತದ ಶಾಲೆಗಳು ಆರಂಭವಾಗಲಿದೆ. ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿ ಕುರಿತು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವರು, ಕೋವಿಡ್ ಟಾಸ್ಕ್ ಫೋರ್ಸ್ ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಜೊತೆಗೆ ಸವಿಸ್ತಾರವಾಗಿ ಸಿಎಂ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ.
ಶಾಲೆಗಳ ಓಪನ್ ನಿರ್ಧಾರದ ಹಿಂದೆ ಸರಕಾರದ ನಡೆ ಕುತೂಹಲಕ್ಕೆ ಕಾರಣವಾಗಿದೆ
ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸಲಹೆಯ ಮೇರೆಗೆ ಮುಖ್ಯಮಂತ್ರಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ. ಮೂರನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್ ಎನ್ನುವ ಎಚ್ಚರಿಕೆಯ ನಡುವೆ ಸರಕಾರದ ನಿರ್ಧಾರ ಆಶ್ಚರ್ಯಕ್ಕೆ ಕಾರಣವಾಗಿದೆ. ಒಂದು ಕಡೆ ಕರ್ಫ್ಯೂ, ಇನ್ನೊಂದು ಕಡೆ ಶಾಲೆಗಳ ಓಪನ್ ನಿರ್ಧಾರದ ಹಿಂದೆ ಸರಕಾರದ ನಡೆ ಕುತೂಹಲಕ್ಕೆ ಕಾರಣವಾಗಿದೆ.