ಮತಾಂತರದಿಂದ ವ್ಯಕ್ತಿಯ ಜಾತಿ ಬದಲಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ಇದರ ಆಧಾರದಲ್ಲಿ ಅಂತರ ಜಾತಿ ಪ್ರಮಾಣ ಪತ್ರ ನೀಡುವಂತಿಲ್ಲ. ಪರಿಶಿಷ್ಟ ಜಾತಿ (ಎಸ್‌ಸಿ) ವರ್ಗಕ್ಕೆ ಸೇರಿದ ವ್ಯಕ್ತಿಯೊಬ್ಬರ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಎಸ್‌ಎಂ ಸುಬ್ರಹ್ಮಣ್ಯಂ ಅವರು ಈ ಆದೇಶ ನೀಡಿದ್ದಾರೆ.
ತಮಿಳುನಾಡಿನ ಸೇಲಂ ಜಿಲ್ಲೆಯ ನಿವಾಸಿ ಎ ಪಾಲ್ ರಾಜ್, ಹುಟ್ಟಿನಿಂದ ಆದಿ ದ್ರಾವಿಡ ಸಮುದಾಯದಿಂದ (ಪರಿಶಿಷ್ಟ ಜಾತಿಗಳು) ಬಂದವರು. ನಂತರ ಅವರು ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಂಡು ಕ್ರಿಶ್ಚಿಯನ್ ಆದರು. ಇದಾದ ಬಳಿಕ ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಹಳೆಯ ಆದೇಶದಡಿ ಹಿಂದುಳಿದ ವರ್ಗದ ಪ್ರಮಾಣ ಪತ್ರ ಪಡೆದಿದ್ದಾರೆ. ನಂತರ ಅವರು ಅರುಂತಥಿಯಾರ್ ಸಮುದಾಯದ ಮಹಿಳೆಯನ್ನು ವಿವಾಹವಾದರು. ಈ ಜಾತಿ ಕೂಡ ಪರಿಶಿಷ್ಟ ಜಾತಿ ವರ್ಗದಡಿ ಬರುತ್ತದೆ.
ಇದರ ಆಧಾರದ ಮೇಲೆ ಅಂತರ್ಜಾತಿ ವಿವಾಹ ಪ್ರಮಾಣ ಪತ್ರ ಪಡೆಯಲು ಸೇಲಂ ಜಿಲ್ಲಾಡಳಿತಕ್ಕೆ ಎ.ಪಾಲ್ ರಾಜ್ ಅರ್ಜಿ ಸಲ್ಲಿಸಿದ್ದು, ಅದನ್ನ ತಿರಸ್ಕರಿಸಲಾಗಿದೆ. ಈ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಪತಿ-ಪತ್ನಿ ಇಬ್ಬರೂ ಹುಟ್ಟಿನಿಂದ ಪರಿಶಿಷ್ಟ ಜಾತಿಗೆ ಸೇರಿದವರು ಎಂದು ಹೈಕೋರ್ಟ್ ಹೇಳಿದೆ. ಧರ್ಮ ಬದಲಾಯಿಸುವುದರಿಂದ ಜಾತಿ ಬದಲಾಗುವುದಿಲ್ಲ, ಹಾಗಾಗಿ ರಾಜ್ ಅವರಿಗೆ ಹಿಂದುಳಿದ ವರ್ಗದ ಪ್ರಮಾಣಪತ್ರ ನೀಡಿರಬಹುದು, ಆದರೆ ಅವರ ಜಾತಿ ಬದಲಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅಂತಹ ಪರಿಸ್ಥಿತಿಯಲ್ಲಿ, ಅವರಿಗೆ ಅಂತರ್ಜಾತಿ ವಿವಾಹದ ಪ್ರಮಾಣಪತ್ರವನ್ನು ನೀಡಲಾಗುವುದಿಲ್ಲ ಎಂದು ಹೇಳಿದೆ.
ಅಂತರ್ಜಾತಿ ವಿವಾಹ ಪ್ರಮಾಣಪತ್ರವನ್ನು ಹೊಂದಿರುವುದು ಸರ್ಕಾರಿ ಉದ್ಯೋಗದಲ್ಲಿ ಆದ್ಯತೆ ನೀಡುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಇದರಿಂದ ಸರ್ಕಾರದ ಕಲ್ಯಾಣ ಯೋಜನೆಗಳ ಲಾಭ ಪಡೆಯಬಹುದು. ಆದರೆ ಪತಿ-ಪತ್ನಿ ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ಅಂತರ್ಜಾತಿ ವಿವಾಹ ಪ್ರಮಾಣ ಪತ್ರ ಪಡೆಯಲು ಅರ್ಹರಲ್ಲ ಎಂದು ನ್ಯಾಯಾಧೀಶರು ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಮದ್ರಾಸ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಜಾತಿಯನ್ನು ಹುಟ್ಟಿನಿಂದ ನಿರ್ಧರಿಸಲಾಗುತ್ತದೆ. ಮತಾಂತರವಾದರೂ ಜಾತಿ ಬದಲಾಗುವುದಿಲ್ಲ ಎಂದು ಹೇಳಿದೆ. ಈ ಸಂದರ್ಭದಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ಎಸ್‌ಸಿ ವರ್ಗಕ್ಕೆ ಸೇರಿದವರು. ಮತಾಂತರಗೊಂಡ ನಂತರ ದಲಿತರು ಎಸ್‌ಸಿ ವರ್ಗಕ್ಕೆ ಸೇರಿದ ವ್ಯಕ್ತಿಯೊಂದಿಗೆ ವಿವಾಹವಾಗಿದ್ದಾರೆ ಎಂಬ ಕಾರಣಕ್ಕೆ ಅಂತರ್ ಜಾತಿ ವಿವಾಹ ಪ್ರಮಾಣಪತ್ರವನ್ನು ನೀಡಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.