ಮದುವೆಯಾದವನು ಕೈಕೊಟ್ಟ, ಹೆತ್ತವರಿಗೂ ಬೇಡವಾದಳು: ನೋವು ನುಂಗಿಕೊಂಡು ಖಡಕ್ ಪೋಲಿಸ್ ಆಫೀಸರ್ ಆದ ಯುವತಿ

in Kannada News/News/Story 16,373 views

ಕೇರಳದ ವರ್ಕಳ ಪೊಲೀಸ್ ಠಾಣೆಯಲ್ಲಿ ಪ್ರೊಬೇಷನರಿ ಸಬ್ ಇನ್‍ಸ್ಪೆಕ್ಟರ್ ಆಗಿ ಸೇರಿರುವ ಆ್ಯನಿ ಸಿವ  ಅವರ ಬದುಕು ಯಾವ ಸಿನಿಮಾ ಕತೆಗಿಂತಲೂ ಕಡಿಮೆಯಿಲ್ಲ. ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ಆ್ಯನಿಯನ್ನು, ಒಂದು ಮಗುವಾಗುತ್ತಲೇ ಗಂಡ ಬಿಟ್ಟು ಹೋದ. ಹಸುಗೂಸನ್ನು ಕಂಕುಳಲ್ಲಿ ಇಟ್ಟುಕೊಂಡು ಭವಿಷ್ಯದ ಕಠಿಣ ದಿನಗಳನ್ನು ನೆನೆದು ಕಣ್ಣೀರಿಡುವಾಗ ಆಕೆಗಿನ್ನೂ 18 ವರ್ಷ. ಸಂಕಷ್ಟಗಳನ್ನು ಎದುರಿಸಿ ಗುರಿ ತಲುಪಿರುವ ಆ್ಯನಿಗೆ ಈಗ 31 ವರ್ಷ ವಯಸ್ಸು.

Advertisement

ಆ್ಯನಿಯ ಯಶೋಗಾಥೆಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಕೇರಳ ಪೊಲೀಸ್ ಇಲಾಖೆಯು, ಆಕೆಯ ಸಾಧನೆಯನ್ನು ಪ್ರಶಂಸಿದೆ.

ಏನಿದು ಆ್ಯನಿ ಕಥೆ

ಕೆಲವು ವರ್ಷಗಳ ಹಿಂದೆ, ಕಂಜೀರಂಕುಲಮ್‍ನ ಕೆಎನ್‍ಎಂ ಸರಕಾರಿ ಕಾಲೇಜಿನಲ್ಲಿ ಓದುವಾಗ, ಆ್ಯನಿ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದರು. ಆಕೆಗೊಂದು ಗಂಡು ಮಗು ಹುಟ್ಟುತ್ತಲೇ ಗಂಡ ಆಕೆಯನ್ನು ಬಿಟ್ಟು ಹೋದ. ಹೆತ್ತವರು ಕೂಡ ಆಕೆಯನ್ನು ಮಗುವಿನೊಂದಿಗೆ ಸ್ವೀಕರಿಸಲು ಸಿದ್ಧವಿರಲಿಲ್ಲ. ಆ್ಯನಿ ತನ್ನ ಮಗ ಶಿವಸೂರ್ಯನ ಜೊತೆ ಅಜ್ಜಿ ಮನೆಯಲ್ಲಿ ಬದುಕಲು ಆರಂಭಿಸಿದಳು.

ಕೆಲವು ದಿನಗಳ ಹಿಂದೆ ವರ್ಕಳಕ್ಕೆ ಪೋಸ್ಟಿಂಗ್ ಆಗಿರುವ ಆ್ಯನಿ, ಹಲವು ವರ್ಷಗಳ ಹಿಂದೆ ಅದೇ ಜಾಗದಲ್ಲಿ ತಾನು ಪಟ್ಟ ಕಷ್ಟಗಳನ್ನು ನೆನೆಸಿಕೊಂಡಿದ್ದಾರೆ. “ಯಾರ ಬೆಂಬಲವೂ ಸಿಗದೆ, ನನ್ನ ಹಸುಗೂಸಿನೊಂದಿಗೆ ಕಣ್ಣೀರು ಹಾಕಿದ ಜಾಗವಿದು” ಎಂದು ಆ್ಯನಿ ಸುದ್ದಿ ಸಂಸ್ಥೆ ಎಎನ್‍ಐಗೆ ತಿಳಿಸಿದ್ದಾರೆ.

ಎಲ್ಲರಿಂದ ತ್ಯಜಿಸಲ್ಪಟ್ಟ ಬಳಿಕ ಆ್ಯನಿ ವರ್ಕಳದಲ್ಲಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿದ್ದರು. “ವರ್ಕಳದ ಶಿವಗಿರಿ ಆಶ್ರಮದ ಅಂಗಡಿಗಳಲ್ಲಿ ಲಿಂಬೆ ಪಾನಕ, ಐಸ್‍ಕ್ರೀಂ ನಿಂದ ಹಿಡಿದು ಕರಕುಶಲ ವಸ್ತುಗಳನ್ನು ಮಾರುವವರಗೆ ನಾನಾ ರೀತಿಯ ಸಣ್ಣ ವ್ಯಾಪಾರಗಳನ್ನು ಪ್ರಯತ್ನಿಸಿದ್ದೆ. ಯಾವುದೂ ಸಫಲವಾಗಿರಲಿಲ್ಲ. ಆ ಬಳಿಕ ಒಬ್ಬ ವ್ಯಕ್ತಿ, ಸಬ್ ಇನ್‍ಸ್ಪೆಕ್ಟರ್ ಹುದ್ದೆಗೆ ಪರೀಕ್ಷೆ ಬರೆಯಲು ಮತ್ತು ಓದಲು ಸಲಹೆ ನೀಡಿ, ಹಣ ಸಹಾಯ ಮಾಡಿದರು ಎಂದು ತಿಳಿಸಿದ್ದಾರೆ ಆ್ಯನಿ.

“ನನಗೆ ಮೊದಲಿನಿಂದಲೂ ಭಾರತೀಯ ಪೊಲೀಸ್ ಸೇವಾ ಅಧಿಕಾರಿ ಆಗಬೇಕೆಂಬ ಆಸೆ ಇತ್ತು. ಆದರೆ ವಿಧಿ ಬರಹ ಬೇರೆಯೇ ಇತ್ತು. ಈಗ ಅನೇಕರು ನನ್ನ ಫೇಸ್‍ಬುಕ್ ಪೋಸ್ಟ್ ಅನ್ನು ಹಂಚಿಕೊಂಡ ಬಳಿಕ, ನನಗೆ ಸಿಗುತ್ತಿರುವ ಬೆಂಬಲವನ್ನು ಕಂಡು ಹೆಮ್ಮೆಯಾಗುವುದರ ಜೊತೆಗೆ ಭಾವುಕಳೂ ಆಗಿದ್ದೇನೆ. ಆ ಪೋಸ್ಟ್‌ನಲ್ಲಿ ನನ್ನ ಸಂತೋಷವನ್ನು ಸಂಕ್ಷಿಪ್ತವಾಗಿ ಬರೆದುಕೊಂಡಿದ್ದೆ” ಎನ್ನುತ್ತಾರೆ ಅವರು.

ಕೇರಳದ ವಿರೋಧ ಪಕ್ಷದ ನಾಯಕ, ವಿ ಡಿ ಸತೀಸನ್ ಕೂಡ, ಆ್ಯನಿಯ ಸಾಧನೆಯನ್ನು ಹೊಗಳಿದ್ದು, “ಅಭಿನಂದನೆಗಳು ಆ್ಯನಿ ಸಿವ, ಸಬ್ ಇನ್‍ಸ್ಪೆಕ್ಟರ್ ಆಫ್ ಪೊಲೀಸ್! 18ನೇ ವಯಸ್ಸಿನಲ್ಲಿ ತನಗೆ ಮತ್ತು ತನ್ನ ಮಗನಿಗಾಗಿ ಬದುಕು ಕಟ್ಟಿಕೊಳ್ಳಲು, ಕಷ್ಟಗಳನ್ನು ಎದುರಿಸಿದರು. ಪ್ರತಿದಿನ ದುರ್ಬಲ ಮಹಿಳೆಯರ ವಿರುದ್ಧ ದೌರ್ಜನ್ಯಗಳು ನಡೆಯುತ್ತಿರುವ ಈ ಪುರುಷ ಪ್ರಧಾನ ಸಮಾಜದಲ್ಲಿ , ಅವರ ಬದುಕು ಮತ್ತು ಸಾಧನೆ ನಿಜಕ್ಕೂ ಪ್ರೇರಣಾದಾಯಕ’ ಎಂದು ಟ್ವೀಟ್ ಮಾಡಿದ್ದಾರೆ.

“ಎಲ್ಲಾ ಪ್ರತಿಕೂಲ ಪರಿಸ್ಥಿತಿಗಳನ್ನು ಮೀರಿ, ನಾನು ಈ ಗುರಿಯನ್ನು ಸಾಧಿಸಿದ್ದೇನೆ. ಇತರ ಮಹಿಳೆಯರು ತಮ್ಮ ಸ್ವಂತ ಕಾಲ ಮೇಲೆ ನಿಂತುಕೊಳ್ಳಲು, ನನ್ನ ಬದುಕನ್ನು ಪ್ರೇರಣೆಯಾಗಿ ತೆಗೆದುಕೊಳ್ಳುತ್ತಿರುವುದು ಖುಷಿ ಎನಿಸುತ್ತಿದೆ” ಎಂದಿದ್ದಾರೆ ಆ್ಯನಿ.

ಆ‌್ಯನಿಯ ಯಶಸ್ಸನ್ನು ಮನಗಂಡ ಕೇರಳದ ಪ್ರಸಿದ್ಧ ಸಿನಿಮಾ ನಟ ಮೋಹನ್ ಲಾಲ್‌ ಫೇಸ್‌ ಬುಕ್‌ ನಲ್ಲಿ ಅಭಿನಂದಿಸಿದ್ದಾರೆ. ” ಮನೋರ್ದಾಢ್ಯದ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಿದ ಆನಿಗೆ ಅಭಿನಂದನೆಗಳು. ಹಲವರ ಜೀವನದ ಕನಸುಗಳಿಗೆ ತಮ್ಮ ಸಾಧನೆಯು ಮಾದರಿಯಾಗಲಿ” ಎಂದು ಅವರು ತಮ್ಮ ಫೇಸ್‌ ಬುಕ್‌ ಪೋಸ್ಟ್‌ ನಲ್ಲಿ ಬರೆದುಕೊಂಡಿದ್ದಾರೆ.

Advertisement
Share this on...