ಮುಂದಿನ ಮುಖ್ಯಮಂತ್ರಿ ಯಾರು? ಅಚ್ಚರಿಯ ಹೇಳಿಕೆ ಕೊಟ್ಟ ಸಚಿವ ಮುರುಗೇಶ್ ನಿರಾಣಿ

in Kannada News/News/ರಾಜಕೀಯ 158 views

ಬೆಂಗಳೂರು:

Advertisement
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬದಲಾವಣೆ ಖಚಿತ ಎಂಬುದು ಗೊತ್ತಾಗುತ್ತಿದ್ದಂತೆಯೆ ಇದೀಗ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆಗಳು ಬಿಜೆಪಿಯಲ್ಲಿ ಮಹತ್ವ ಪಡೆದುಕೊಂಡಿವೆ. ಹಲವು ನಾಯಕರ ಹೆಸರುಗಳು ಕೇಳಿ ಬರುತ್ತಿವೆಯಾದರೂ, ಹೈಕಮಾಂಡ್ ಯಾವುದೆ ಗುಟ್ಟು ಬಿಟ್ಟು ಕೊಡುತ್ತಿಲ್ಲ. ಹೀಗಾಗಿ ಯಾರು ಮುಂದಿನ ಮುಖ್ಯಮಂತ್ರಿ ಎಂಬುದು ಸಿಎಂ ಪಟ್ಟದ ರೇಸ್‌ನಲ್ಲಿರುವವರಿಗೂ ಗೊತ್ತಾಗುತ್ತಿಲ್ಲ.

ಮುಖ್ಯಮಂತ್ರಿ ಹುದ್ದೆಗಾಗಿ ಬಿಜೆಪಿ ಹೈಕಮಾಂಡ್ ಬಳಿ ಲಾಬಿ ಮಾಡುವುದು ಆಗದ ಕೆಲಸ ಎಂಬ ತೀರ್ಮಾನಕ್ಕೆ ಬಿಜೆಪಿ ನಾಯಕರು ಈಗ ಬಂದಂತಿದೆ. ಹೀಗಾಗಿ ನಾಯಕತ್ವ ಬದಲಾವಣೆಯಂತೆ ಮುಂದಿನ ಸಿಎಂ ಯಾರು? ಎಂಬುದು ರಾಜ್ಯ ಬಿಜೆಪಿ ನಾಯಕರ ಊಹೆಗೂ ನಿಲುಕದ ಸಂಗತಿಯಾಗಿದೆ. ಹೀಗಾಗಿ ಮುಂದಿನ ಸಿಎಂ ವಿಚಾರವನ್ನು ಹೈಕಮಾಂಡ್ ಸುಪರ್ದಿಗೆ ಬಿಟ್ಟಿರುವ ರಾಜ್ಯ ನಾಯಕರು, ತಮ್ಮ ಕೆಲಸದತ್ತ ಮುಖ ಮಾಡಿದ್ದಾರೆ. ಬಹುತೇಕ ಇಷ್ಟೊಂದು ನಿಗೂಢವಾಗಿ ಬೇರೆ ಯಾವುದೇ ಹುದ್ದೆಗೆ ನೇಮಕಾತಿ ನಡೆದಿರುವ ಉದಾಹರಣೆ ಬಿಜೆಪಿಯಲ್ಲಿ ಕಾಣುತ್ತಿಲ್ಲ.

ಈ ಎಲ್ಲದರ ಮಧ್ಯೆ ಮುಂದಿನ ಸಿಎಂ ಎಂದೇ ಬಿಂಬಿತವಾಗಿದ್ದ ಸಚಿವ ಮುರುಗೇಶ್ ನಿರಾಣಿ ಅವರು ‘ಮುಂದಿನ ಮುಖ್ಯಮಂತ್ರಿ’ ಯಾರು ಎಂಬುದರ ಬಗ್ಗೆ ಮಹತ್ವದ ಮಾತುಗಳನ್ನು ಆಡಿದ್ದಾರೆ. ಬಿಜೆಪಿಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರು?

ನಿರಾಣಿ ಅಚ್ಚರಿಯ ಮಾತು

ಮುಂದಿನ ಸಿಎಂ ಯಾರು ಎಂಬುದರ ಬಗ್ಗೆ ಕಲಬುರಗಿಯಲ್ಲಿ ಸಚಿವ ಮುರುಗೇಶ್ ನಿರಾಣಿ ಅಚ್ಚರಿಯ ಹೆಳಿಕೆ ನೀಡಿದ್ದಾರೆ. ‘ಬಿಜೆಪಿ ಪಕ್ಷದ 120 ಶಾಸಕರೆಲ್ಲರೂ ಸಿಎಂ ಹುದ್ದೆಗೆ ಅರ್ಹತೆ ಹೊಂದಿದ್ದಾರೆ. ನಿರೀಕ್ಷೆಯಿಲ್ಲದೆ ಪಕ್ಷ ನನಗೆ ಹಲವು ಜವಾಬ್ದಾರಿ ನೀಡಿದೆ. ಮೊದಲ ಬಾರಿ ಶಾಸಕನಾದಾಗಲೇ ಹೈಕಮಾಂಡ್ ನನ್ನನ್ನು ಸಚಿವನನ್ನಾಗಿ ಮಾಡಿದೆ. ಈಗಲೂ ಮಹತ್ವದ ಜವಾಬ್ದಾರಿ ಕೊಟ್ಟಿದೆ. ಹಿಂದೆಯೂ ನಾನು ಯಾವುದೇ ಹುದ್ದೆ ಅಪೇಕ್ಷೆ ಮಾಡಿದವನಲ್ಲ, ಈಗಲೂ ಮಾಡುವುದಿಲ್ಲ’ ಎಂದು ನಿರಾಣಿ ಹೇಳಿದ್ದಾರೆ.

ಜೊತೆಗೆ, ‘ರಾಜ್ಯದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ಅಧಿಕೃತವಾಗಿ ಈವರೆಗೆ ಯಾವುದೇ ಸೂಚನೆ ಬಂದಿಲ್ಲ. ಯಡಿಯೂರಪ್ಪನವರೇ ನಮ್ಮ ನಾಯಕರು. ಅವರ ಜೊತೆ ನಾವಿರುತ್ತೇವೆ ಬೆಂಬಲ ಸೂಚಿಸಿದರು. ಯಾರನ್ನು ಈ ಸ್ಥಾನಕ್ಕಾಗಿ ಕೂರಿಸಬೇಕೆಂದು ನಮ್ಮ ವರಿಷ್ಠರು ತೀರ್ಮಾನಿಸುತ್ತಾರೆ. ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದರಾಗಬೇಕು’ ಅಷ್ಟೇ ಎಂದು ನಿರಾಣಿ ಹೇಳಿದರು.

ಸಿಎಂ ಹುದ್ದೆಗೆ ಲಾಬಿ ಮಾಡಿಲ್ಲ!

‘ನಾನು ಮುಖ್ಯಮಂತ್ರಿ ಸ್ಥಾನಕ್ಕೆ ವರಿಷ್ಠರ ಬಳಿ ಯಾವುದೇ ರೀತಿಯ ಲಾಬಿ ನಡೆಸಿಲ್ಲ. ಹೈಕಮಾಂಡ್ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ನಾವೆಲ್ಲರೂ ಬದ್ದರಾಗಿರುತ್ತೇವೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಅವರ ಈ ಹೇಳಿಕೆಯಲ್ಲಿ ಮುಂದಿನ ಸಿಎಂ ಯಾರು ಎಂಬ ಅರ್ಥವಿದೆ ಎನ್ನುತ್ತಿವೆ ಬಿಜೆಪಿ ಮೂಲಗಳು.

‘ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತ, ವರಿಷ್ಠರ ಆದೇಶವನ್ನು ಪಾಲನೆ ಮಾಡುವುದು ನಮ್ಮ ಕರ್ತವ್ಯ. ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು ಇಲ್ಲಿ ಹುದ್ದೆಗಾಗಿ ಬೇರೆ ಪಕ್ಷದಂತೆ ಲಾಬಿ ನಡೆಯುವುದಿಲ್ಲ’ ಎಂದು ಸಚಿವ ನಿರಾಣಿನ ಸ್ಷಷ್ಟಪಡಿಸಿದ್ದಾರೆ. ಹೀಗಾಗಿ ಮುಂದಿನ ಸಿಎಂ ಯಾರು ಎಂಬುದು ಈಗಾಗಲೇ ಹೈಕಮಾಂಡ್ ನಿರ್ಧರಿಸಿದೆ. ಮುಂದಿನ ಸಿಎಂ ಮುರುಗೇಶ್ ನಿರಾಣಿ ಅವರಾ? ಎಂಬ ಚರ್ಚೆ ಇದೀಗ ಬಿಜೆಪಿಯಲ್ಲಿ ಕಾವು ಪಡೆದುಕೊಲ್ಳುತ್ತಿದೆ.

ಅರ್ಹತೆ ಇದ್ದವರಿಗೆ ಸಿಎಂ ಪಟ್ಟ!

‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಗಲೂ ನಮ್ಮ ನಾಯಕರು. ಮುಂದೆಯೂ ಕೂಡ ಅವರೇ ನಮ್ಮ ಸಾರಥಿ. ನಮ್ಮ ಹೈಕಮಾಂಡ್ ಅತ್ಯಂತ ಪ್ರಬಲವಾಗಿದ್ದು, ಯಾರಿಗೆ ಯಾವ ಸ್ಥಾನವನ್ನು, ಯಾವ ಸಂದರ್ಭದಲ್ಲಿ ನೀಡಬೇಕೆಂಬುದನ್ನು ತೀರ್ಮಾನಿಸುತ್ತಾರೆ. ನಾನು ಯಾವುದೇ ಹುದ್ದೆಗಾಗಿ ಲಾಬಿ ಮಾಡುತ್ತಿಲ್ಲ, ರಾಷ್ಟ್ರಿಯ ನಾಯಕರು ಅಳೆದು ತೂಗಿ ಅರ್ಹರನ್ನೇ ಸಿಎಂ ಮಾಡುತ್ತಾರೆ. ನನಗೆ ಪಕ್ಷ ವಹಿಸುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ಸ್ಥಾನಮಾನಕ್ಕಾಗಿ ನಾನು ಯಾವತ್ತೂ ಲಾಬಿ ಮಾಡಿಲ್ಲ’ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ವಾರಣಾಸಿ ಭೇಟಿ ಬಗ್ಗೆ ನಿರಾಣಿ ಹೇಳುವುದೇನು?
‘ನಾನು ಚಿಕ್ಕಂದಿನಿಂದಲೂ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆಯುವುದನ್ನು ರೂಢಿಸಿಕೊಂಡು ಬಂದಿದ್ದೇನೆ. ಈಗಲೂ ಅಷ್ಟೇ. ಸಾಮಾನ್ಯವಾಗಿ ತಿಂಗಳು ಎರಡು ತಿಂಗಳಿಗೊಮ್ಮೆ ದೇವಸ್ಥಾನಕ್ಕೆ ಹೋಗಿಬರುತ್ತೇನೆ. ಅದರಂತೆಯೇ ನಾನು ವಾರಣಾಸಿಗೆ ಹೋಗಿದ್ದೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ನಾನು ವಾರಣಾಸಿಗೆ ಹೋಗಿದ್ದಕ್ಕೆ ಏನೇನೋ ಅರ್ಥ ಕಲ್ಪಿಸಲಾಗಿತ್ತು. ಪ್ರತಿ ತಿಂಗಳು ನಾನು ಒಂದೊಂದು ದೇವಸ್ಥಾನಕ್ಕೆ ಹೋಗಿಬರುತ್ತೇನೆ. ಇದಕ್ಕೂ, ರಾಜಕೀಯಕ್ಕೂ ಸಂಬಂಧವಿಲ್ಲ ಮತದಾರರು ನಮಗೆ ಮತ ಹಾಕಿ ಆರಿಸಿ ಕಳಿಸಿದ್ದಾರೆ. ಅವರ ನಿರೀಕ್ಷೆಯಂತೆ ಕೆಲಸ ಮಾಡುವುದೊಂದೇ ನನ್ನ ಮೂಲ ಉದ್ದೇಶ’ ಎಂದು ತಮ್ಮ ವಾರಾಣಸಿ ಭೇಟಿ ಬಗ್ಗೆ ಸಚಿವ ನಿರಾಣಿ ಸ್ಪಷ್ಟನೆ ಕೊಟ್ಟರು. ಇನ್ನೆರಡು ದಿನಗಳಲ್ಲಿ ರಾಜ್ಯ ಬಿಜೆಪಿಯ ನಾಯಕತ್ವ ಬದಲಾವಣೆ ಖಚಿತ ಎಂಬ ಮಾಹಿತಿಯಿದೆ. ಆದರೆ ಆ ಬಗ್ಗೆ ಹೈಮಾಂಡ್ ಬಹಳಷ್ಟು ಗೌಪ್ಯತೆ ಕಾಪಾಡಿಕೊಳ್ಳುತ್ತಿದೆ. ಯಾವ ಕಾರಣಕ್ಕಾಗಿ ಹೈಕಮಾಂಡ್ ಹಾಗೆ ಮಾಡುತ್ತಿದೆ ಎಂಬುದು ರಾಜಕೀಯ ಆಸಕ್ತಿ ಇರುವವರಿಗೆ ಕುತೂಹಲ ಮೂಡಿಸಿದೆ.

Advertisement
Share this on...