ಮುಕ್ತಾಯವಾದ ಒಲಿಂಪಿಕ್ಸ್ 2020: ಮೊದಲನೆಯ ಸ್ಥಾನದಲ್ಲಿ ಯುಎಸ್‌ಎ, ಭಾರತ ಎಷ್ಟನೇ ಸ್ಥಾನದಲ್ಲಿದೆ ನೋಡಿ

in Kannada News/News/ಕ್ರೀಡೆ 147 views

ಟೋಕಿಯೋ:

Advertisement
ಒಲಿಂಪಿಕ್ಸ್‌ನಲ್ಲಿ ಈ ಬಾರಿಯೂ ಅಮೆರಿಕಾ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಭಾನುವಾರ ಈ ಕ್ರೀಡಾಕೂಟದ ಎಲ್ಲಾ ಪಂದ್ಯಗಳು ಅಂತ್ಯವಾಗಿದ್ದು ಸಮಾರೋಪ ಸಮಾರಂಭದ ವೇಳೆಗೆ ಅಮೆರಿಕಾ ಒಟ್ಟು 113 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಗಳಿಸಿದೆ. ಇದರಲ್ಲಿ 38 ಚಿನ್ನದ ಪದಕಗಳು ಕೂಡ ಸೇರಿದೆ. ಅಂತಿಮ ದಿನದಂದು ಅಮೆರಿಕಾ ಚೀನಾದ ಜೊತೆಗೆ ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದು ಅಂತಿಮವಾಗಿ ಅಗ್ರಸ್ಥಾನವನ್ನು ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಅಚ್ಚರಿಯೆಂದರೆ ಕೊನೆಯ ದಿನದವರೆಗೂ ಅಮೆರಿಕಾ ಪದಕಪಟ್ಟಿಯಲ್ಲಿ ಚೀನಾಕ್ಕಿಂತ ಕೆಳಗಿನ ಸ್ಥಾನದಲ್ಲಿಯೇ ಇತ್ತು, ಆದರೆ ಅಂತಿಮ ದಿನದಂದು ಬದ್ಧ ಎದುರಾಳಿ ಚೀನಾಕ್ಕಿಂತ ಹೆಚ್ಚಿನ ಚಿನ್ನದ ಪದಕ ಗೆದ್ದು ಅಗ್ರಸ್ಥಾನ ಪಡೆದುಕೊಂಡಿದೆ.

ಶನಿವಾರದ ಅಂತ್ಯಕ್ಕೆ ಅಂದರೆ ಸಮಾರೋಪ ದಿನದ ಮುನ್ನಾ ದಿನ ಚೀನಾ ಪದಕ ಪಟ್ಟಿಯಲ್ಲಿ 38-36 ಪದಕಗಳೊಂದಿಗೆ ಅಮೆರಿಕಾಕ್ಕಿಂತ ಮುಂದಿತ್ತು. ಒಲಿಂಪಿಕ್ಸ್‌ನ ಅಂತಿಮ ದಿನ ಮೂರು ಪದಕಗಳನ್ನು ಗೆಲ್ಲುವ ಮೂಲಕ ಅಮೆರಿಕಾ ತನ್ನ ಪ್ರತಿಸ್ಪರ್ಧಿಯನ್ನು ಹಿಂದಿಕ್ಕಿದೆ. ಟೋಕಿಯೋ ಒಲಿಂಪಿಕ್ಸ್‌ನ ಅಂತಿಮ ದಿನದಲ್ಲಿ ಚೀನಾ ಯಾವುದೇ ಪದಕವನ್ನು ಗೆದ್ದುಕೊಳ್ಳಲು ವಿಫಲವಾಗಿದೆ.

ಅಂತಿಮ ದಿನ ಮೂರು ಪದಕ ಗೆದ್ದ ಅಮೆರಿಕಾ:ಅಮೆರಿಕಾ ಟೋಕಿಯೋ ಒಲಿಂಪಿಕ್ಸ್‌ನ ಅಂತಿಮ ದಿನ ಮಹಿಳೆಯರ ಬಾಸ್ಕೆಟ್‌ಬಾಲ್‌ನ ಫೈನಲ್ ಪಂದ್ಯದಲ್ಲಿ ಜಪಾನ್ ವಿರುದ್ಧ ಗೆಲುವು ಸಾಧಿಸಿ ಮೊದಲ ಚಿನ್ನದ ಪದಕವನ್ನು ಗಳಿಸಿತ್ತು. ಯುಎಸ್‌ಎಯ ಎರಡನೇ ಚಿನ್ನದ ಪದಕ ಸೈಕ್ಲಸ್ಟ್ ಜೆನಿಫರ್ ವಾಲೆಂಟೆ ಮೂಲಕ ಬಂದಿತ್ತು. ಅಂತಿಮವಾಗಿ ಯುಎಸ್‌ಎಯ ಮಹಿಳೆಯರ ವಾಲಿಬಾಲ್ ತಂಡ ಒಲಿಂಪಿಕ್ಸ್‌ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಚಿನ್ನದ ಗೆಲ್ಲುವ ಮೂಲಕ ಬಂದಿತ್ತು. ಈ ಮೂಲಕ ಪದಕ ಪಟ್ಟಿಯಲ್ಲಿ ಯುಎಸ್‌ಎ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.

ರಿಯೋ ಒಲಿಂಪಿಕ್ಸ್‌ಗಿಂತ ಕಡಿಮೆ ಪದಕ ಗೆದ್ದ ಯುಎಸ್‌ಎ: ಈ ಹಿಂದಿನ ರಿಯೋ ಒಲಿಂಪಿಕ್ಸ್‌ಗೆ ಹೋಲಿಸಿದರೆ ಯುಎಸ್‌ಎ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಪಟ್ಟಿಯಲ್ಲಿ ಕಡಿಮೆ ಸಾಧನೆ ಮಾಡಿದಂತಾಗಿದೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಒಟ್ಟು 46 ಚಿನ್ನದ ಪದಕ ಗೆದ್ದು ಸಾಧನೆ ಮಾಡಿತ್ತು ಅಮೆರಿಕಾ. ಈ ಬಾರಿ ಟ್ರ್ಯಾಕ್ ಸ್ಪರ್ಧೆಗಳಲ್ಲಿ ಅಮೆರಿಕಾ ಪುರುಷರು ಯಾವುದೇ ಚಿನ್ನದ ಪದಕವನ್ನು ಗೆಲ್ಲುವಲ್ಲಿ ವಿಫಲವಾಗಿದ್ದು, ಆಧುನಿಕ ಒಲಿಂಪಿಕ್ಸ್‌ನ ಇತಿಹಾಸದಲ್ಲಿ ಅಮೆರಿಕಾದ ಮೊದಲ ದೃಷ್ಟಾಂತ ಇದಾಗಿದೆ. ಇದು ಪದಕ ಪಟ್ಟಿಯಲ್ಲಿ ಹಿನ್ನಡೆಗೂ ಕಾರಣವಾಗಿದೆ. ಅಲ್ಲದೆ ಸ್ಟಾರ್ ಜಿಮ್ನ್ಯಾಸ್ಟ್ ಸೈಮನ್ ಬೈಲ್ಸ್ ಅವರು ಸ್ಪರ್ಧೆಯಿಂದ ಹಿಂದಕ್ಕೆ ಸರಿದಿದ್ದು ಕೂಡ ಅಮೆರಿಕಾದ ಹಿನ್ನಡೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಕೊರೊನಾವೈರಸ್‌ನ ಕಾರಣದಿಂದ ಒಂದು ವರ್ಷ ತಡ: ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ಒಂದು ವರ್ಷ ತಡವಾಗಿ ನಡೆಯಿತು. ನಿಗದಿಯ ಪ್ರಕಾರ ಕಳೆದ ವರ್ಷ ಅಂದರೆ 2020ರಲ್ಲಿ ಈ ಒಲಿಂಪಿಕ್ಸ್ ನಡೆಯಬೇಕಾಗಿತ್ತು. ಆದರೆ ಕೊರೊನಾವೈರಸ್‌ನ ಹಾವಳಿ ವಿಶ್ವಾದ್ಯಂತ ತೀವ್ರವಾಗಿದ್ದ ಕಾರಣ ಅನಿವಾರ್ಯವಾಗಿ ಮುಂದೂಡುವ ನಿರ್ಧಾರವನ್ನು ಕೈಗೊಳ್ಳಬೇಕಾಗಿತ್ತು. ಈ ಬಾರಿ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭದವರೆಗೂ ಟೋಕಿಯೋ ನಗರದಲ್ಲಿ ಒಲಿಂಕ್ಸ್ ಆಯೋಜನೆಯಿಂದಾಗಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತದೆ ಎಂಬ ಭಯದಿಂದ ಪ್ರತಿಭಟನೆಗಳು ನಡೆದಿದ್ದವು. ಆದರೆ ಇವೆಲ್ಲವುಗಳ ಹೊರತಾಗಿಯೂ ಒಲಿಂಪಿಕ್ಸ್ ಆಯೋಜಕರು ಯಶಸ್ವಿಯಾಗಿ ಕ್ರೀಡಾಕೂಟವನ್ನು ಆಯೋಜನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೊರೊನಾವೈರಸ್ ಮಧ್ಯೆಯೂ ಬಹುರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜನೆ ಮಾಡುವುದು ಸಾಧ್ಯ ಎಂಬುದನ್ನು ಟೋಕಿಯೋ ಒಲಿಂಪಿಕ್ಸ್ ಸಾಬೀತುಪಡಿಸಿದೆ.

ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ದಾಖಲೆಯ 83 ರಾಷ್ಟ್ರಗಳು ಫೈನಲ್ಸ್‌ಗೆ ಪ್ರವೇಶ ಪಡೆದಿರುವುದು ವಿಶೇಷತೆಯಾಗಿದೆ. ಈ ಬಾರಿಯ ಕ್ರೀಡಾಕೂಟದಲ್ಲಿ ಒಟ್ಟು ಮೂರು ವಿಶ್ವದಾಖಲೆಗಳು ಸೃಷ್ಟಿಯಾದವು. ಅಲ್ಲದೆ 12 ಒಲಿಂಪಿಕ್ಸ್ ದಾಖಲೆಗಳು, 28 ಪ್ರಾದೇಶಿಕ ದಾಖಲೆಗಳು ಹಾಗೂ 151 ರಾಷ್ಟ್ರೀಯ ದಾಖಲೆಗಳು ನಿರ್ಮಾಣವಾದವು.

Advertisement
Share this on...