ನವದೆಹಲಿ: ಪಂಚಭಾಷಾ ತಾರೆ ಪ್ರಿಯಾಮಣಿ ಹಾಗೂ ಮುಸ್ತಫಾ ರಾಜ್ ಅವರ ಮದುವೆ ವಿಚಾರವೀಗ ಕೊರ್ಟ್ ಮೆಟ್ಟಿಲೇರಿದೆ. ಇಬ್ಬರ ಮದುವೆಯನ್ನು ಪ್ರಶ್ನಿಸಿ ಮುಸ್ತಫಾ ರಾಜ್ ಮೊದಲ ಪತ್ನಿ ಆಯೇಷಾ ಇದೀಗ ಕೋರ್ಟ್ನಲ್ಲಿ ದಾವೆ ಹೂಡಿದ್ದಾರೆ.
ಮುಸ್ತಾಫಾ ರಾಜ್ ಇಲ್ಲಿಯವರೆಗೂ ಕಾನೂನಾತ್ಮಕವಾಗಿ ವಿಚ್ಛೇದನ ಪಡೆದಿಲ್ಲ ಎಂದಿರುವ ಆಯೇಷಾ, ಅವರಿಬ್ಬರ ಮದುವೆ ಅಮಾನ್ಯ ಎಂದು ಆರೋಪಿಸಿದ್ದಾರೆ.
ಅಂದಹಾಗೆ ಮುಸ್ತಫಾ ರಾಜ್ ಮತ್ತು ಮೊದಲ ಪತ್ನಿ ಆಯೇಷಾ 2013ರಲ್ಲಿ ಬೇರೆಯಾಗಿದ್ದಾರೆ. ನಂತರ ಮುಸ್ತಫಾ ಅವರು 2017ರಲ್ಲಿ ಪ್ರಿಯಾಮಣಿಯನ್ನು ಮದುವೆ ಆದರು. ಆಯೇಷಾಗೆ ಇಬ್ಬರು ಮಕ್ಕಳಿದ್ದಾರೆ. ಅಲ್ಲದೆ, ಮುಸ್ತಫಾ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದಾರೆ.
ಆರೋಪದ ಬಗ್ಗೆ ಸ್ಪಷ್ಟನೆ ನೀಡಿರುವ ಮುಸ್ತಫಾ, ನನ್ನ ವಿರುದ್ಧ ಕೇಳಿಬಂದಿರುವ ಆರೋಪ ಸತ್ಯಕ್ಕೆ ದೂರವಾದದ್ದು. ನಾನು ನಿರಂತರವಾಗಿ ಆಯೇಷಾ ಮತ್ತು ಮಕ್ಕಳಿಗೆ ಪರಿಹಾರ ಹಣವನ್ನು ನೀಡುತ್ತಾ ಬರುತ್ತಿದ್ದೇನೆ. ನನ್ನಿಂದ ಹಣ ದೋಚಲು ಆಯೇಷಾ ಮಾಡುತ್ತಿರುವ ಕೃತ್ಯವಿದು ಎಂದು ಮೊದಲ ಪತ್ನಿಯ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.
ನಾವಿಬ್ಬರು 2010ರಲ್ಲೇ ಬೇರೆಯಾಗಿದ್ದೇವೆ ಮತ್ತು 2013ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದೇವೆ. ನನ್ನ ಮತ್ತು ಪ್ರಿಯಾಮಣಿ ನಡುವಿನ ಮದುವೆ 2017ರಲ್ಲಿ ನಡೆದಿದೆ. ಅಲ್ಲಿಯವರೆಗೂ ಆಯೇಷಾ ಯಾಕೆ ಸುಮ್ಮನಾಗಿದ್ದರು ಎಂದು ಮುಸ್ತಫಾ ಮರಳಿ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಯೇಷಾ, ಮುಸ್ತಫಾ ಈಗಲೂ ನನ್ನ ಪತಿಯೇ. ನಮ್ಮ ಮದುವೆ ಸಂಬಂಧ ಇನ್ನು ಮುರಿದಿಲ್ಲ. ಆದರೆ, ಪ್ರಿಯಾಮಣಿ ಮತ್ತು ಮುಸ್ತಫಾ ಮದುವೆ ಅಸಿಂಧುವಾಗಿದೆ. ನಾವು ಇಲ್ಲಿಯವರೆಗೂ ಕೂಡ ವಿಚ್ಛೇದನ ಪಡೆಯಲು ಯಾವುದೇ ಅರ್ಜಿಯನ್ನು ಸಲ್ಲಿಸಿಲ್ಲ. ಪ್ರಿಯಾಮಣಿ ಜತೆಯಲ್ಲಿ ಮದುವೆ ಆಗಬೇಕಾದರೆ ತಾನೊಬ್ಬ ಬ್ಯಾಚುಲರ್ ಎಂದು ನ್ಯಾಯಲಯಕ್ಕೆ ಸುಳ್ಳು ಹೇಳಿ ಮದುವೆ ಆಗಿದ್ದಾರೆಂದು ಆಯೇಷಾ ಸ್ಪಷ್ಟನೆ ನೀಡಿದ್ದಾರೆ.
ಪ್ರಿಯಾಮಣಿ ಜತೆ ಮದುವೆ ಆಗುವವರೆಗೂ ಸುಮ್ಮನಿದ್ದಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಆಯೇಷಾ, ಇಬ್ಬರು ಮಕ್ಕಳ ತಾಯಿಯಾಗಿ ನೀವು ಏನು ಮಾಡಬಹುದು? ವಿವಾದವನ್ನು ಒಬ್ಬರು ಸೌಹಾರ್ದಯುತವಾಗಿ ವಿಂಗಡಿಸಲು ಪ್ರಯತ್ನಿಸುತ್ತಾರೆ. ಆದರೆ ಅದು ಕಾರ್ಯರೂಪಕ್ಕೆ ಬಾರದಿದ್ದಾಗ ಮಾತ್ರ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಅವರೀಗ ನನ್ನ ವಿರುದ್ಧ ಬಳಸುತ್ತಿರುವ ಸಮಯವನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಎಂದು ಆಯೇಷಾ ಹೇಳಿದ್ದಾರೆ.
ಪ್ರಿಯಾಮಣಿ ಸಿನಿಮಾ ವಿಚಾರಕ್ಕೆ ಬರುವುದಾದರೆ, ಮದುವೆ ನಂತರ ಸಿನಿಮಾದಿಂದ ಅಂತರ ಕಾಯ್ದುಕೊಂಡಿದ್ದ ಪ್ರಿಯಾಮಣಿ ಇದೀಗ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈಗಾಗಲೇ ಮನೋಜ್ ಬಾಜ್ಪಾಯಿ ನಟನೆಯ ದಿ ಫ್ಯಾಮಿಲಿ ಮ್ಯಾನ್ ಚಿತ್ರದಲ್ಲಿ ನಟಿಸಿದ್ದಾರೆ. ಮುಂದಿನ ಚಿತ್ರದಲ್ಲಿ ಅಜಯ್ ದೇವಗನ್ ಅಭಿನಯದ ಮೈದಾನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.