“ಮೋಹನ್ ಭಾಗವತ್ ಜೀ ನಮ್ಮ ದೇಶದ ರಾಷ್ಟ್ರಪಿತ ಹಾಗು ರಾಷ್ಟ್ರ‌ಋಷಿ: ಹಿಂದೂ ಮುಸ್ಲಿಮರ DNA ಒಂದೇ ಆದರೆ….”: ಡಾ.ಅಹಮದ್ ಇಲಿಯಾಸಿ, ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್ ಅಧ್ಯಕ್ಷ

in Uncategorized 288 views

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಗುರುವಾರ ಬೆಳಗ್ಗೆ ದೆಹಲಿಯ ಇಮಾಮ್ ಹೌಸ್ ತಲುಪಿದರು. ಇದು ಆಲ್ ಇಂಡಿಯಾ ಇಮಾಮ್ ಆರ್ಗನೈಸೇಷನ್ (All India Imam Organization) ಕಚೇರಿಯಾಗಿದೆ. ಕಸ್ತೂರಬಾ ಗಾಂಧಿ ಮಾರ್ಗದಲ್ಲಿರುವ ಈ ಮಸೀದಿಯ ಮುಚ್ಚಿದ ಕೋಣೆಯಲ್ಲಿ ಭಾಗವತ್ ಅವರು ಮುಖ್ಯ ಇಮಾಮ್ ಡಾ. ಉಮರ್ ಅಹ್ಮದ್ ಇಲ್ಯಾಸಿ ಅವರೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ಸಭೆ ನಡೆಸಿದ್ದಾರೆ. ಇದು ಮಸೀದಿಯಲ್ಲಿ ಮುಸ್ಲಿಂ ಧಾರ್ಮಿಕ ಸಂಘಟನೆಯೊಂದರ ಮುಖ್ಯಸ್ಥರೊಂದಿಗೆ ಆರ್‌ಎಸ್‌ಎಸ್ ಮುಖ್ಯಸ್ಥರೊಬ್ಬರು ನಡೆಸಿದ ಮೊದಲ ಸಭೆ ಇದಾಗಿದೆ.

Advertisement

ಡಾ.ಇಲಿಯಾಸಿ ಮಾತನಾಡುತ್ತ, ”ನಮ್ಮ (ಹಿಂದೂ ಮುಸ್ಲಿಮರ) ಡಿಎನ್‌ಎ ಒಂದೇ, ಆದರೆ ಇಬಾದತ್ (ಪ್ರಾರ್ಥನೆ) ಮಾಡುವ ರೀತಿ ಮಾತ್ರ ಬೇರೆ” ಎಂದು ಹೇಳಿದರು. ಡಾ‌.ಇಲಿಯಾಸಿ ಆಹ್ವಾನದ ಮೇರೆಗೆ ಆರ್‌ಎಸ್‌ಎಸ್ ಮುಖ್ಯಸ್ಥರು ಉತ್ತರ ದೆಹಲಿಯ ಮದ್ರಸಾ ತಜ್ವೀದುಲ್ ಕುರಾನ್‌ಗೆ ಭೇಟಿ ನೀಡಿದ್ದರು. ಅಲ್ಲಿ ಅವರು ಮಕ್ಕಳನ್ನೂ ಭೇಟಿಯಾದರು.

ಸಭೆಯ ನಂತರ, ಮುಖ್ಯ ಇಮಾಮ್ ಮಾಧ್ಯಮಗಳೊಂದಿಗೆ ಮಾತನಾಡಿ ಆರೆಸ್ಸೆಸ್ ಮುಖ್ಯಸ್ಥರೊಂದಿಗಿನ ಭೇಟಿಯ ಬಗ್ಗೆ ಹೇಳಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮೋಹನ್ ಭಾಗವತ್ ಅವರನ್ನು ರಾಷ್ಟ್ರಪಿತ ಮತ್ತು ರಾಷ್ಟ್ರ ಋಷಿ ಎಂದು ಬಣ್ಣಿಸಿದರು. ತಮ್ಮ ಆಹ್ವಾನದ ಮೇರೆಗೆ ಕೌಟುಂಬಿಕ ಕಾರ್ಯಕ್ರಮಕ್ಕೆ ಬಂದಿರುವುದಾಗಿ ತಿಳಿಸಿದರು. ಇವರೊಂದಿಗೆ ಸಹ ಸರಕಾರ್ಯವಾಹ ಡಾ.ಕೃಷ್ಣಗೋಪಾಲ್, ಹಿರಿಯ ಪ್ರಚಾರಕರಾದ ಇಂದ್ರೇಶ್ ಮತ್ತು ರಾಮಲಾಲ್ ಕೂಡ ಇದ್ದರು.

ಮೋಹನ್ ಭಾಗವತ್ ಭೇಟಿಯ ಬಗ್ಗೆ ಡಾ.ಇಲಿಯಾಸಿ ಹೇಳಿದ್ದೇನು?

ಪ್ರಶ್ನೆ: ಆರೆಸ್ಸಸ್ ಮುಖ್ಯಸ್ಥರು ಇಮಾಮ್ ಸಂಘಟನೆಯ ಕಛೇರಿಗೆ ಬಂದರು. ಇದು ಮಸ್ಜಿದ್ ಕೂಡ ಹೌದು. ಈ ಭೇಟಿಯನ್ನ ನೀವು ಯಾವ ರೀತಿ ನೋಡುತ್ತೀರಿ?

ಉತ್ತರ: ಇದು ನಿಜಕ್ಕೂ ಒಳ್ಳೆಯ ಸಂಗತಿ ಹಾಗು ಬೆಳವಣಿಗೆ. ಈ ಸಭೆಯ ಬಗ್ಗೆ ಎಲ್ಲರೂ ಒಳ್ಳೆಯದನ್ನೇ ಯೋಚಿಸಬೇಕು. ಇದು ದೇಶಕ್ಕೆ ಒಳ್ಳೆಯ ಸಂದೇಶ. ಮೋಹನ್ ಭಾಗವತ್ ಅವರು ಇಮಾಮ್ ಹೌಸ್‌ಗೆ ಆಗಮಿಸಿರುವುದು ನಮಗೆಲ್ಲರಿಗೂ ಅದೃಷ್ಟ ಮತ್ತು ಸಂತೋಷದ ವಿಷಯವಾಗಿದೆ. ನನ್ನ ಆಹ್ವಾನದ ಮೇರೆಗೆ ಇಲ್ಲಿಗೆ ಬಂದಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ.

ಮೋಹನ್ ಭಾಗವತ್ ಇಂದು ನಮ್ಮ ರಾಷ್ಟ್ರ ಋಷಿ. ಅವರು ಈ ದೇಶದ ರಾಷ್ಟ್ರಪಿತ. ರಾಷ್ಟ್ರಪಿತ ನಮ್ಮ ಬಳಿಗೆ ಬಂದಿರುವುದು ಸಂತಸ ತಂದಿದೆ. ಈ ಪ್ರೀತಿಯ ಸಂದೇಶವನ್ನು ನಾವು ಎಲ್ಲರಿಗೂ ನೀಡಬೇಕು ಎಂದು ನಾನು ಭಾವಿಸುತ್ತೇನೆ.

ಪ್ರಶ್ನೆ: ರಾಮನವಮಿಯಿಂದ ಹಿಡಿದು ಹಿಜಾಬ್ ವಿಚಾರದಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳು ಹಲವು ಬಾರಿ ಮುಖಾಮುಖಿಯಾಗಿವೆ. ಹೀಗಿರುವಾಗ ಆರೆಸ್ಸೆಸ್ ಮುಖ್ಯಸ್ಥರು ನಿಮ್ಮನ್ನು ಭೇಟಿಯಾಗಿದ್ದು ಯಾವ ಸಂದೇಶ ರವಾನಿಸುತ್ತದೆ? 

ವಾಸ್ತವವೆಂದರೆ ನೀವು ನಿಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಿ, ಆಗ ಎಲ್ಲವೂ ಬದಲಾಗುತ್ತದೆ. ಪರಸ್ಪರ ಪ್ರೀತಿಯಿಂದ ಒಟ್ಟಿಗೆ ಬಾಳಬೇಕು, ಇದು ನಮ್ಮ ಸಂದೇಶ. ಇಂದು ನಮ್ಮ ದೇಶವು ಹೊಸ ಎತ್ತರದತ್ತ ವೇಗವಾಗಿ ಸಾಗುತ್ತಿದೆ. ಎಲ್ಲರೂ ಒಗ್ಗಟ್ಟಾಗಿ ನಡೆಯಬೇಕು ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ನಾವು ಒಂದೇ ಮತ್ತು ಭಾರತೀಯರು ಎಂಬುದೇ ಇದರ ಸಂದೇಶ. ಹೀಗೆಯೇ ನಮ್ಮ ದೇಶವನ್ನು ಮುಂದೆ ಕೊಂಡೊಯ್ಯಬೇಕು. ನಮ್ಮ ದೇಶದ ವಿಶೇಷತೆ ಎಂದರೆ ವಿವಿಧತೆಯಲ್ಲಿ ಏಕತೆ.

ಪ್ರಶ್ನೆ: ಜ್ಞಾನವಾಪಿ ಮಸೀದಿ ವಿವಾದ ಆರಂಭವಾದಾಗ ಮೋಹನ್ ಭಾಗವತ್ ಅವರು ‘ಪ್ರತಿ ಮಸೀದಿಯಲ್ಲೂ ಶಿವಲಿಂಗವನ್ನು ಏಕೆ ಕಾಣಬೇಕು?’ ಎಂದು ಹೇಳಿದ್ದರು ಈ ಬಗ್ಗೆ ನೀವು ಹೇಳುವುದೇನು?

ಮೋಹನ್ ಭಾಗವತ್ ಹೇಳಿದ್ದು ಸರಿಯಿದೆ. ಎಲ್ಲರೂ ಪರಸ್ಪರ ಸಂಪರ್ಕ ಹೊಂದಿ ಪ್ರೀತಿಯಿಂದ ಬಾಳಬೇಕು ಎಂಬ ಸಂದೇಶ ಇದಾಗಿದೆ. ಪ್ರೀತಿ ಇರುವ ಕಡೆ ಒಳ್ಳೆಯ ವಾತಾವರಣ ಇರುತ್ತದೆ. ಎಲ್ಲರೂ ಹೀಗೆ ಒಗ್ಗಟ್ಟಾಗಿ ಬಾಳಬೇಕು.

ಪ್ರಶ್ನೆ: ಭಾರತದಲ್ಲಿ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಮಾಡಲಾಗುತ್ತಿದೆ ಎಂದು ಒಂದು ವಿಭಾಗ ನಂಬುತ್ತದೆ. ನಿಮ್ಮ ಅಭಿಪ್ರಾಯವೇನು?

ನಾವೆಲ್ಲರೂ ಪ್ರೀತಿಯಿಂದ ಬದುಕಬೇಕು ಎಂದು ನಾನು ಭಾವಿಸುತ್ತೇನೆ. ಕೊರೋನಾ ನಂತರ, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ನಮ್ಮ ದೇಶವು ಎತ್ತರವನ್ನು ತಲುಪಿದೆ. ನಾವೆಲ್ಲರೂ ಒಟ್ಟಾಗಿ ಅವರಿಗೆ ಸಹಕರಿಸಬೇಕು.

ಆರ್ಗನೈಸೇಶನ್ ಜೊತೆ ಸೇರಿದ 5 ಲಕ್ಷ ಇಮಾಮ್‌ಗಳು

ದೇಶಾದ್ಯಂತ ಸುಮಾರು 5 ಲಕ್ಷ ಇಮಾಮ್‌ಗಳು ಆಲ್ ಇಂಡಿಯಾ ಇಮಾಮ್ ಆರ್ಗನೈಸೇಶನ್ ನೊಂದಿಗೆ ಸಂಬಂಧ ಹೊಂದಿದ್ದಾರೆ. ಈ ಸಂಸ್ಥೆಯನ್ನು 1976 ರಲ್ಲಿ ಸ್ಥಾಪಿಸಲಾಯಿತು. ಈ ಸಂಘಟನೆಯನ್ನು ಹಜರತ್ ಮೌಲಾನಾ ಉಮರ್ ಅಹಮದ್ ಇಲಿಯಾಸಿ ರಚಿಸಿದ್ದಾರೆ. ಪ್ರಸ್ತುತ, ಸಂಸ್ಥೆಯ ಮುಖ್ಯ ಇಮಾಮ್ ಹಜರತ್ ಮೌಲಾನಾ ಉಮರ್ ಅಹ್ಮದ್ ಇಲಿಯಾಸಿ ಆಗಿದ್ದಾರೆ.

ಕೋಮು ಸೌಹಾರ್ದತೆಯನ್ನು ಬಲಪಡಿಸುವ ಪ್ರಯತ್ನಗಳು

ಡಾ.ಉಮರ್ ಅಹಮದ್ ಅವರನ್ನು ಭೇಟಿ ಮಾಡಿದ ಸಂಘ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಮಾತನಾಡಿ, ಆರೆಸ್ಸೆಸ್ ಮುಖ್ಯಸ್ಥರು ಎಲ್ಲಾ ವರ್ಗದ ಜನರನ್ನು ಭೇಟಿಯಾಗುತ್ತಾರೆ. ಇದು ಸಂಘದ ಸಾಮಾನ್ಯ ಸಂವಾದ ಪ್ರಕ್ರಿಯೆಯ ಒಂದು ಭಾಗವಾಗಿದೆ ಎಂದರು.

Advertisement
Share this on...