ಕರೊನಾ 2ನೇ ಅಲೆಯ ಅಬ್ಬರ ತಗ್ಗಿಸಲು ರಾಜ್ಯ ಸರ್ಕಾರ ವಿಧಿಸಿದ ಜನತಾ ಕರ್ಫ್ಯೂ ಹಾಗೂ ಬಿಗಿ ನಿರ್ಬಂಧಗಳಿಂದಾಗಿ ಬೆಂಗಳೂರು ನಗರ ಸೇರಿ 7 ಜಿಲ್ಲೆಗಳಲ್ಲಿ ಸೋಂಕು ಹತೋಟಿಗೆ ಬರುತ್ತಿದೆ. ಆದರೆ, ಉಳಿದ 23 ಜಿಲ್ಲೆಗಳಲ್ಲಿ ಸೋಂಕು ತೀವ್ರ ಏರಿಕೆ ಕಂಡಿದೆ. ಗ್ರಾಮೀಣ ಭಾಗಗಳಲ್ಲಿ ವೈರಸ್ ವ್ಯಾಪಕವಾಗಿ ಕಾಡಲಿದೆ ಎಂಬ ಕೇಂದ್ರ ಸರ್ಕಾರದ ಎಚ್ಚರಿಕೆ ನಿಜವಾಗುವ ಎಲ್ಲ ಮುನ್ಸೂಚನೆ ಕಂಡುಬರುತ್ತಿದೆ. ಜನತಾ ಕರ್ಫ್ಯೂ ಮತ್ತು ಲಾಕ್ಡೌನ್ ಪರಿಣಾಮ ಕುರಿತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ ) ನಡೆಸಿದ ಅಧ್ಯಯನದಿಂದ ಈ ಅಂಶ ಬೆಳಕಿಗೆ ಬಂದಿದೆ. ರಾಜ್ಯದ ಒಟ್ಟಾರೆ ಸೋಂಕು ಪ್ರಕರಣಗಳಲ್ಲಿ ಅರ್ಧದಷ್ಟು ಕೇಸ್ಗಳನ್ನು ಹೊಂದಿದ್ದ ಬೆಂಗಳೂರು ನಗರದಲ್ಲಿ ಜನತಾ ಕರ್ಫ್ಯೂ ಕೆಲಸ ಮಾಡಿದ್ದು, ಸೋಂಕು ತೀವ್ರತೆ ಇಳಿಕೆ ಕಂಡಿದೆ.
ಎಲ್ಲೆಲ್ಲಿ ಇಳಿಕೆ?: ಬೆಂಗಳೂರು ನಗರ, ಬೀದರ್, ಚಿತ್ರದುರ್ಗ, ದಕ್ಷಿಣ ಕನ್ನಡ, ಕಲಬುರಗಿ, ಉಡುಪಿ ಮತ್ತು ವಿಜಯಪುರದಲ್ಲಿ ಜನತಾ ಕರ್ಫ್ಯೂ ಮತ್ತು ಲಾಕ್ಡೌನ್ ಫಲಪ್ರದವಾಗಿದ್ದು, ಈ ಜಿಲ್ಲೆಗಳಲ್ಲಿ ಸೋಂಕು ಈಗ ಇಳಿಮುಖವಾಗಿರುವುದು ಕೊಂಚ ನಿರಾಳತೆ ಮೂಡಿಸಿದೆ. ಆದರೆ ಉಳಿದ 23 ಜಿಲ್ಲೆಗಳಲ್ಲಿ ಕರ್ಫ್ಯೂ ವಿಫಲವಾಗಿ ವೈರಸ್ ಏರುಗತಿ ಕಂಡಿರುವುದು ಆತಂಕ ಸೃಷ್ಟಿಸಿದೆ.
ಮೂರು ದಿನದಿಂದ ಇಳಿಕೆ: ರಾಜ್ಯದಲ್ಲಿ ಕಳೆದ 3 ದಿನಗಳಿಂದ ಸೋಂಕು ಪ್ರಕರಣಗಳ ಸಂಖ್ಯೆ ಇಳಿದಿದೆ. ಮೇ 8ರಂದು 47,563 (482 ಸಾ’ವು), ಮೇ 9ಕ್ಕೆ 47,930 (490 ಸಾ’ವು), ಮೇ 10ರಂದು 39,305 (596 ಸಾ’ವು), ಮೇ 11ರಂದು 39,510 (480 ಸಾ’ವು), ಮೇ 12ರಂದು 39,998 (517 ಸಾ’ವು) ಪ್ರಕರಣಗಳು ವರದಿಯಾಗಿತ್ತು.
ಇಳಿಕೆಗೆ ಕಾರಣವೇನು?: ಬೆಂಗಳೂರಿನಲ್ಲಿ ಜನತಾ ಕರ್ಫ್ಯೂ ಹಾಗೂ ಲಾಕ್ ಡೌನ್ ಪರಿಣಾಮ ಬೀರಿದೆ. ಮೊದಲು ದಿನದ ಸೋಂಕು ಪ್ರಕರಣಗಳು 25 ಸಾವಿರವರೆಗೂ ಏರಿಕೆಯಾಗಿತ್ತು. 4-5 ದಿನಗಳಿಂದ ನಗರದಲ್ಲಿ ಸೋಂಕು ಇಳಿಮುಖವಾಗುತ್ತಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಸೋಂಕು ತೀವ್ರತೆಯ ಅವಧಿ ಮುಗಿದಿದೆ ಎಂದು ಐಐಎಸ್ಸಿ ತಿಳಿಸಿದೆ. ಬೆಂಗಳೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಗರ ತೊರೆದು ಹೋಗಿದ್ದೂ ಸಹ ಸೋಂಕು ಇಳಿಕೆಗೆ ಕಾರಣವಾಗಿದೆ. ಉಳಿದ ಆರು ಜಿಲ್ಲೆಗಳಲ್ಲಿ ಕರ್ಫ್ಯೂ ಪರಿಣಾಮಕಾರಿ ಜಾರಿಯಿಂದಾಗಿ ಸೋಂಕು ಇಳಿಮುಖವಾಗಿದೆ ಎಂದು ವರದಿ ತಿಳಿಸಿದೆ.
ಏರಿಕೆಗೆ ಕಾರಣವೇನು?: ಜನತಾ ಕರ್ಫ್ಯೂ ಘೋಷಣೆ ಬೆನ್ನಲ್ಲೇ ಲಕ್ಷಾಂತರ ಜನರು ಬೆಂಗಳೂರಿನಿಂದ ಹಾಗೂ ಇತರೆ ನಗರಗಳಿಂದ ತಮ್ಮ ಹಳ್ಳಿಗಳಿಗೆ ಹಿಂದಿರುಗಿದರು. ಹೀಗೆ ಹೋದವರು ಮನೆಯಲ್ಲಿ ಕ್ವಾರಂಟೈನ್ಗೆ ಒಳಗಾಗದೆ ಊರೆಲ್ಲ ಸುತ್ತಿದ್ದರ ಪರಿಣಾಮ ಜಿಲ್ಲೆಗಳಲ್ಲಿ ಸೋಂಕು ಸಮುದಾಯಕ್ಕೆ ಹರಡಿ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಅದರಲ್ಲೂ ಲಕ್ಷಣ ರಹಿತ ಸೋಂಕಿತರು ಸೂಪರ್ ಸ್ಪ್ರೆಡ್ಡರ್ಗಳಾಗಿದ್ದಾರೆ ಎಂದು ತಜ್ಞರು ಹೇಳಿದ್ದಾರೆ
ಯಾವ ಜಿಲ್ಲೆಯಲ್ಲಿ ಸೋಂಕು ಏರಿಕೆ?: ತುಮಕೂರು, ಹಾವೇರಿ, ಉತ್ತರ ಕನ್ನಡ, ಶಿವಮೊಗ್ಗ, ಮೈಸೂರು, ಮಂಡ್ಯ, ಕೊಪ್ಪಳ, ಯಾದಗಿರಿ, ರಾಮನಗರ, ರಾಯಚೂರು, ಕೋಲಾರ, ಕೊಡಗು, ಹಾಸನ, ಗದಗ, ಧಾರವಾಡ, ದಾವಣಗೆರೆ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬಳ್ಳಾರಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಜನತಾಕರ್ಫ್ಯೂ ಹಾಗೂ ಲಾಕ್ ಡೌನ್ ನಂತರ ಸೋಂಕು ಹರಡುವಿಕೆ ಹೆಚ್ಚಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಲಾಕ್ಡೌನ್ ಮುಂದುವರಿಕೆ ಅನಿವಾರ್ಯ: ಕೇಂದ್ರ ಸರ್ಕಾರವು ಸೋಂಕು ಪ್ರಮಾಣ ದರ ಶೇ. 10ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರಿಸುವಂತೆ ಸೂಚಿಸಿದೆ. ಐಐಎಸ್ಸಿ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿರುವ ಹಸಿರು ಪಟ್ಟಿಯಲ್ಲಿರುವ ಬೆಂಗಳೂರು ನಗರ ಸೇರಿ 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮೇ 24ರ ನಂತರವೂ ಲಾಕ್ಡೌನ್ ಮುಂದುವರಿಸಬೇಕಿದೆ. ಇದರ ಜತೆಗೆ ಲಕ್ಷಣ ರಹಿತ ಯುವಜನರನ್ನು ಪರೀಕ್ಷೆಗೆ ಒಳಪಡಿಸಿ ಸೋಂಕಿತರನ್ನು ಕ್ವಾರಂಟೈನ್ಗೆ ಒಳಪಡಿಸುವ ಮೂಲಕ ನಿಯಂತ್ರಣಕ್ಕೆ ಮತ್ತಷ್ಟು ಕ್ರಮ ವಹಿಸಬೇಕಿದೆ. ಹಾಗಾದಲ್ಲಿ ಸೋಂಕು ನಿಯಂತ್ರಣ ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವೈರಸ್ ಸ್ವಭಾವ ತಿಳಿಯುವುದು ಬಹಳ ಕಷ್ಟ. ಆರಂಭದಲ್ಲಿ ಅದು ಎಲ್ಲಿ ಹೆಚ್ಚಳವಾಗಿರುತ್ತದೋ ದಿನ ಕಳೆದಂತೆ ಅಲ್ಲಿ ಕಡಿಮೆಯಾಗುತ್ತದೆ. ಕಡಿಮೆ ಇರುವ ಕಡೆಗಳಲ್ಲಿ 40-60 ದಿನಗಳ ನಂತರ ಏರಿಕೆಯಾಗುತ್ತದೆ. ಹಾಗೆಂದು ಇದಕ್ಕೆ ವಾತಾವರಣ ಕಾರಣವೆಂದು ಹೇಳಲಾಗದು. ಬದಲಿಗೆ ಜನರ ಓಡಾಟ, ಗುಂಪು ಸೇರುವಿಕೆ ಕಾರಣವಾಗುತ್ತದೆ. ಕರ್ಫ್ಯೂ, ಲಾಕ್ಡೌನ್ ಎಂದ ಕೂಡಲೇ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗಳತ್ತ ತೆರಳಿದರು. ಸೋಂಕು ನಿಯಂತ್ರಣಕ್ಕೆ ಬರಲು ಜನರ ಓಡಾಟ ನಿಯಂತ್ರಣಗೊಳ್ಳಬೇಕು.
ಮಾಹಿತಿ ಕೃಪೆ: ವಿಜಯವಾಣಿ