ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಬಿಕ್ಕಟ್ಟು ಒಂದು ಹಂತಕ್ಕೆ ಶಮನಗೊಂಡಿತು ಎನ್ನುವಷ್ಟರಲ್ಲಿ ಮತ್ತೊಂದು ವಿದ್ಯಮಾನ, ಯಡಿಯೂರಪ್ಪ ಸರಕಾರಕ್ಕೆ ಬಹುದೊಡ್ಡ ತಲೆನೋವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ಯಡಿಯೂರಪ್ಪ ಸರಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣೀಭೂತರಾದ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿಯವರು ಸರಕಾರದ ವಿರುದ್ದ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದ್ದಕ್ಕಿದ್ದಂತೆಯೇ ಮುಂಬೈಗೆ ಪ್ರಯಾಣಿಸಿರುವ ಜಾರಕಿಹೊಳಿ ನಡೆ, ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದೆ. ಮುಂಬೈನಲ್ಲಿ ಬೀಡು ಬಿಟ್ಟಿರುವ ಜಾರಕಿಹೊಳಿ ಪ್ರಭಾವೀ ಬಿಜೆಪಿ ಮುಖಂಡರನ್ನು ಸಂಪರ್ಕಿಸುವ ಪ್ರಯತ್ನ ನಡೆಸುತ್ತಿದ್ದಾರೆಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ತಾನು ಹಿಡಿದ ಹಠ ಈಡೇರದಿದ್ದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಚಿಂತನೆಯನ್ನು ಜಾರಕಿಹೊಳಿ ಹೊಂದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಜಲಸಂಪನ್ಮೂಲ ಖಾತೆಯನ್ನು ಹೊಂದಿದ್ದ ಜಾರಕಿಹೊಳಿ, ಸಿಡಿ ಪ್ರಕರಣದಿಂದಾಗಿ ರಾಜೀನಾಮೆ ನೀಡಿದ್ದರು.
ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಈಗ ನಿರ್ಣಾಯಕ ಹಂತಕ್ಕೆ
ರಮೇಶ್ ಜಾರಕಿಹೊಳಿಯವರ ಅ ಶ್ಲೀ ಲ ಸಿಡಿ ಪ್ರಕರಣದ ತನಿಖೆ ಈಗ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಎಲ್ಲಿಂದ ಕೂತು ಕುಮಾರಸ್ವಾಮಿ ನೇತೃತ್ವದ ಸರಕಾರದ ಪತನಕ್ಕೆ ಸ್ಕೆಚ್ ಹಾಕಿದ್ದರೋ, ಮತ್ತದೇ ಜಾಗಕ್ಕೆ (ಮುಂಬೈ) ಜಾರಕಿಹೊಳಿ ತೆರಳಿರುವುದು ಇನ್ನೊಂದು ರೌಂಡಿನ ರಾಜಕೀಯ ಮೇಲಾಟಕ್ಕೆ ರಾಜ್ಯ ಸಾಕ್ಷಿಯಾಗುವ ಸಾಧ್ಯತೆಯಿದೆ.
ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿಗೆ ಗೋಕಾಕ್ ನಿಂದ 25ಸಾವಿರ ಲೀಡ್
ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಗೆಲುವಿಗೆ ತೆರೆಯ ಹಿಂದೆ ಪ್ರಯತ್ನ ಮಾಡಿದ್ದ ತನ್ನನ್ನು ಸರಕಾರ ಕಡೆಗಣಿಸುತ್ತಿದೆ ಎನ್ನುವುದು ಜಾರಕಿಹೊಳಿ ಸಿಟ್ಟಿಗೆ ಪ್ರಮುಖ ಕಾರಣವಾಗಿದೆ. ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿಗೆ ಗೋಕಾಕ್ ನಿಂದ 25ಸಾವಿರ ಲೀಡ್ ಬಂದಿತ್ತು. ಬಿಜೆಪಿ ಗೆಲುವಿಗೆ ಇದು ನಿರ್ಣಾಯಕವಾಗಿತ್ತು.
ದೇವೇಂದ್ರ ಫಡ್ನವೀಸ್, ನಿತಿನ್ ಗಡ್ಕರಿ ಸೇರಿದಂತೆ ಪ್ರಮುಖರ ಭೇಟಿ ಸಾಧ್ಯತೆ
ಮತ್ತೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ರಮೇಶ್ ಜಾರಕಿಹೊಳಿ, ಮುಂಬೈಗೆ ತೆರಳಿ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಪ್ರಮುಖರನ್ನು ಭೇಟಿಯಾಗಿ ಒತ್ತಡ ಹೇರುವ ತಂತ್ರಗಾರಿಕೆಯನ್ನು ಬಳಸುತ್ತಾರಾ ಎನ್ನುವುದು ಚರ್ಚೆಯ ವಿಷಯವಾಗಿದೆ.
ಜಾರಕಿಹೊಳಿಯವರ ರಾಜಕೀಯ ಮುಂದಿನ ದಿನಗಳಲ್ಲಿ ಸದ್ದು ಮಾಡುವ ಸಾಧ್ಯತೆ
ರಮೇಶ್ ಜಾರಕಿಹೊಳಿಯವರನ್ನು ಬಿಜೆಪಿಯ ಐದಾರು ಶಾಸಕರು ಸೇರಿಕೊಳ್ಳುವ ಸಾಧ್ಯತೆಯಿದೆ. ಸಚಿವ ಸ್ಥಾನ ಸಿಗುವುದು ಕಷ್ಟ ಎಂದಾದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು. ಜೊತೆಗೆ, ಗೋಕಾಕ್ ನಿಂದ ತಮ್ಮ ಪುತ್ರ ಅಮರನಾಥ್ ಅವರನ್ನು ಕಣಕ್ಕಿಳಿಸುವ ಲೆಕ್ಕಾಚಾರವನ್ನು ಜಾರಕಿಹೊಳಿ ಹೊಂದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಒಟ್ಟಿನಲ್ಲಿ, ಜಾರಕಿಹೊಳಿಯವರ ರಾಜಕೀಯ ಮುಂದಿನ ದಿನಗಳಲ್ಲಿ ಸದ್ದು ಮಾಡುವ ಸಾಧ್ಯತೆಯಿದೆ.