ಇಲ್ಲಿ ನಾವು ಗಮನಿಸಬೇಕಾದ ಒಂದು ಬಹಳ ಮುಖ್ಯವಾದ ವಿಷಯ ಏನೆಂದರೆ, ದ್ಯುತಿಸಂಶ್ಲೇಷಣೆಯೇ ಆಗಬಹುದು, ರಾತ್ರಿಯ ಉಸಿರಾಟವೇ ಆಗಬಹುದು ಅಥವಾ ಬಾಷ್ಪವಿಸರ್ಜನೆಯೇ ಆಗಬಹುದು, ಇವೆಲ್ಲವೂ ಎಲ್ಲ ಮರಗಿಡಗಳಲ್ಲೂ ಒಂದೇ ತರಹ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಇವೆಲ್ಲವೂ ಪ್ರತಿ ಮರಗಿಡಗಳಿಗೂ, ಕಾಲ ಕಾಲಕ್ಕೂ ಮತ್ತು ಪ್ರತಿ ಗಂಟೆ ಗಂಟೆಗೂ, ಪ್ರತಿ ಪ್ರದೇಶಕ್ಕೂ ವ್ಯತ್ಯಾಸವಾಗುತ್ತಿರುತ್ತದೆ. ಚಂದ್ರನ ಆರೋಹಣ ಮತ್ತು ಅವರೋಹಣದ ಪ್ರಕಾರ ಮತ್ತು ಹುಣ್ಣಿಮೆಯಲ್ಲಿ ಮತ್ತು ಅಮಾವಾಸ್ಯೆಯಲ್ಲಿ ಬೇರೆ ಬೇರೆ ಪ್ರಕ್ರಿಯೆ ನಡೆಯುತ್ತದೆ. ಉದಾಹರಣೆಗೆ ಹುಣಸೆಮರವು ರಾತ್ರಿ ಹೊತ್ತು ಇಂಗಾಲದ ಡೈಆಕ್ಸೈಡ್‌ನ್ನು ಹೆಚ್ಚು ಹೊರಸೂಸುತ್ತದೆ. ಅದು ನಮ್ಮ ಉಸಿರಾಟದ ಮೇಲೆ ಮತ್ತು ನಮ್ಮ ಮನಸ್ಸಿನ ಮೇಲೆ ಬಹಳ ಪ್ರಭಾವ ಬೀರುತ್ತದೆ. ಆದ್ದರಿಂದ ರಾತ್ರಿ ಹೊತ್ತು ಹುಣಸೆಮರದ ಕೆಳಗೆ ಮಲಗಬಾರದು ಅಲ್ಲಿ ದೆ-ವ್ವ ಇರುತ್ತದೆ ಎಂದು ಹೇಳುತ್ತಾರೆ.
ಎಲೆಗಳನ್ನು ಮನುಷ್ಯರು ಸಹಜವಾಗಿ ನಿರ್ಜೀವಿ ವಸ್ತು ಎಂದು ಪರಿಗಣಿಸುತ್ತಾರೆ. ಆದರೆ, ಈ ಎಲೆಗಳ ಕಾರ್ಯ ಚಟುವಟಿಕೆಯನ್ನು ಸ್ವಲ್ಪ ಸಂಕ್ಷಿಪ್ತವಾಗಿ ಗಮನಿಸೋಣ. ಇವು ಸ್ವತಂತ್ರವಾಗಿ ತನ್ನ ಎಲ್ಲ ಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕು. ಇದಕ್ಕೆ ಆಳುಕಾಳುಗಳಿಲ್ಲ, ಸಹಾಯಕರಿಲ್ಲ. ಪತ್ರ ಹರಿತ್ತನ್ನು ತಾವೇ ತಯಾರಿಸಿಕೊಳ್ಳಬೇಕು. ತನ್ನ ಶತ್ರ್ರುಗಳನ್ನು ತಡೆಯುವುದಕ್ಕಾಗಿ ತಮ್ಮ ದೇಹದಲ್ಲಿ ಹಲವು ಪದರಗಳನ್ನು ಸೃಷ್ಟಿಸಿಕೊಳ್ಳಬೇಕು. ನೀರು ಮತ್ತು ಗಾಳಿಯನ್ನು ಒಳಗೆ ಮತ್ತು ಹೊರಗೆ ವಿನಿಮಯ ಮಾಡಲು ಬಾಯಿಯನ್ನು (ಸ್ಟೋಮಾ) ಸೃಷ್ಟಿ ಮಾಡಿಕೊಳ್ಳಬೇಕು. ಅಂತಹ ಬಾಯಿಯನ್ನು ಮುಚ್ಚಲು ಮತ್ತು ತೆಗೆಯಲು ದಪ್ಪ ದಪ್ಪ ತುಟಿಗಳು (ಗಾರ್ಡ್ಸ್) ತಯಾರಿಸಿಕೊಳ್ಳಬೇಕು. ನಾಲಿಗೆ (ಪ್ಯಾರಂಕೈಮಾ), ಕಣ್ಣುಗಳು, ಪತ್ರ ಹರಿತ್ತು ಬೀಳದ ಹಾಗೆ ಜೋಡಿಸಲು ಟ್ರಿಗ್ನಾಮಿಟ್ರಿಯ ಮತ್ತು ಜಿಯೋಮೆಟ್ರಿಯ ಲೆಕ್ಕಾಚಾರದ ಪ್ರಕಾರ ಸಣ್ಣ ಸಣ್ಣ ಮೂಳೆಗಳನ್ನು (ಸ್ಟೆಮ್ಸ್) ಜೋಡಿಸಿಕೊಳ್ಳಬೇಕು. ತನ್ನ ದೇಹದ ತೂಕವನ್ನು ತಡೆಯಬಲ್ಲಂತಹ ಕುತ್ತಿಗೆಯನ್ನು (ತೊಟ್ಟು, ಪಿಟಿಯೋಲ್) ನಿರ್ಮಿಸಿಕೊಳ್ಳಬೇಕು.
ಮರಗಳು ಸೂರ್ಯನ ಶಾಖವನ್ನು ಹೀರಲು ಗಾಜಿನ ಪೊರೆ (ಕ್ಯುಟಿಕಲ್ಸ್) ತಯಾರಿ ಮಾಡಿಕೊಳ್ಳಬೇಕು. ಅಂತಹ ಎಲೆಕ್ಟ್ರಿಸಿಟಿ ದೇಹದೊಳಗೆ ಹೋಗಲು ರಂಧ್ರಭರಿತವಾದ ಹೊರ ಚರ್ಮವನ್ನು (ಎಪಿಡರ್ಮಿಸ್) ಮಾಡಿಕೊಳ್ಳಬೇಕು. ಮುಂದಿನ ಸಂತಾನೋತ್ಪತ್ತಿಗಾಗಿ ತನ್ನ ತೊಟ್ಟಿನ ಬುಡದಲ್ಲಿ ಹೂವಿನ ತೊಟ್ಟುಗಳಿಗೆ (ಬಡ್ಸ್) ಜನ್ಮ ಕೊಡಬೇಕು. ತಾನು ತಯಾರು ಮಾಡಿದ ಆಹಾರದ ಶೇಖರಣೆಗಾಗಿ ಉಗ್ರಾಣ ವ್ಯವಸ್ಥೆ (ಗ್ಲೂಕೋಸ್ ಸ್ಟೋರ್ ಹೌಸ್) ಮಾಡಿಕೊಳ್ಳಬೇಕು. ಆ ಆಹಾರ ನಿಧಾನವಾಗಿ ಸಸ್ಯದ ಇತರ ಎಲ್ಲ ಭಾಗಗಳಿಗೆ ತಲುಪಲು ಏಕಮುಖ ಸಾಗಾಣಿಕೆ ವ್ಯವಸ್ಥೆಯನ್ನು ತನ್ನ ನರ ನಾಡಿಗಳ (ಕ್ಸೈಲಮ್ ಮತ್ತು ಫ್ಲೂಯಮ್) ಮೂಲಕ ಸಾಗಾಣಿಕೆ ವ್ಯವಸ್ಥೆಗೆ (ಒನ್ ವೇ ಟ್ರಾನ್ಸ್‌ಪೋರ್ಟೇಷನ್) ಜೋಡಿಸಬೇಕು. ಸಾಗಾಣಿಕೆ ಸರಾಗವಾಗಿ ಸಾಗಲು ಗೋಡೆಗಳನ್ನು ನಿರ್ಮಿಸಿಕೊಳ್ಳಬೇಕು. ತನ್ನ ಸುತ್ತಲಿನ ವಾತಾವರಣ ತಂಪಾಗಿರಲು ನೀರಾವಿಯನ್ನು (ಟ್ರಾನ್‌ಸ್ಪಿರೇಷನ್) ಹೊರಗೆ ತಳ್ಳಬೇಕು. ಈ ಯಾವುದೇ ಚಟುವಟಿಕೆಗಳು ಹೆಚ್ಚೂ ಕಮ್ಮಿಯಾಗದಂತೆ ಸ್ವಯಂ ನಿಯಂತ್ರಣ ವ್ಯವಸ್ಥೆಯನ್ನು (ಆಟೋ ಸೆನ್ಸಾರ್ಸ್) ಸೃಷ್ಟಿಸಿಕೊಳ್ಳಬೇಕು. ಸಸ್ಯದ ದೇಹಕ್ಕೆ ತೊಂದರೆ ಆಗದೇ ಇರಲಿ ಎಂದುಕೊಂಡು ಹವಾ ನಿಯಂತ್ರಣ ವ್ಯವಸ್ಥೆ (ಏರ್ ಕಂಡಿಷನರ್ಸ್) ಮಾಡಬೇಕು. ಕ್ರಿಮಿ ಕೀಟಗಳು, ಬ್ಯಾಕ್ಟೀರಿಯಾ ಮತ್ತು ಶಿಲೀಂದ್ರಗಳಿಂದ (ಫಂಗಿ) ಆಗುವ ತೊಂದರೆಗಳನ್ನು ನಿವಾರಿಸಲು ವಿವಿಧ ರೀತಿಯ ರಾಸಾಯನಿಕ ವಸ್ತುಗಳನ್ನು ತಯಾರಿಸಿಕೊಳ್ಳಬೇಕು.
ಈ ಸಂದರ್ಭದಲ್ಲಿ, ಎಲ್ಲ ಚಟುವಟಿಕೆಗಳಿಗಾಗಿ ಹಲವು ರೀತಿಯ ಹಾರ್ಮೋನ್‌ಗಳು, ವಿವಿಧ ರೀತಿಯ ರಾಸಾಯನಿಕ ವಸ್ತುಗಳು, ಸುಗಂಧ ದ್ರವ್ಯಗಳು, ಕಿಣ್ವಗಳು, ಇಪ್ಪತ್ತು ರೀತಿಯ ಅಮಿನೋ ಆಸಿಡ್ಸ್, ಅವುಗಳ ಜೋಡಣೆಯ ಪ್ರೊಟೀನ್‌ಗಳು, ವಿವಿಧ ರೀತಿಯ ಲವಣಾಂಶಗಳು ಮತ್ತು ಡಿ.ಎನ್.ಎ.ಯನ್ನು ಉತ್ಪಾದನೆ ಮಾಡಿಕೊಳ್ಳಬೇಕು. ನಿತ್ಯ ಹರಿದ್ವರ್ಣ ಜಾತಿಯ ಮರಗಳ ಎಲೆಗಳು ಎರಡು ಮೂರು ವರ್ಷಗಳ ಕಾಲ ನಿರಂತರವಾಗಿ ಈ ರೀತಿಯ ಕೆಲಸವನ್ನು ಮಾಡುತ್ತಲೇ ಇರಬೇಕು. ಇಂತಹ ಸಾವಿರಾರು ಎಲೆಗಳಿಂದ ಸಹಾಯವನ್ನು ಪಡೆದು ಮರ ಬೆಳೆಯುತ್ತದೆ.