ರಾಮಮಂದಿರದಿಂದಾಗಿ ಹೊಟ್ಟೆ ತುಂಬುತ್ತಾ? ಉದ್ಯೋಗ ಸಿಗುತ್ತಾ? ಅನ್ನೋರಿಗೆ ಸಿಕ್ತು ಉತ್ತರ: SBI ರಿಸರ್ಚ್ ಪ್ರಕಾರ ರಾಮಮಂದಿರದಿಂದ ವಾರ್ಷಿಕ ಎಷ್ಟು ಸಾವಿರ ಕೋಟಿ ಆದಾಯ ಬರಲಿದೆ ಗೊತ್ತಾ?

in Uncategorized 20,754 views

ಅಯೋಧ್ಯೆಯ ರಾಮಮಂದಿರದ ದೆಸೆಯಿಂದ ಉತ್ತರಪ್ರದೇಶದ ಪ್ರವಾಸೋದ್ಯಮಕ್ಕೆ ಭಾರೀ ಪುಷ್ಟಿ ಸಿಕ್ಕಿದೆ. ಉತ್ತರಪ್ರದೇಶಕ್ಕೆ ಹೋಗುವ ಪ್ರವಾಸಿಗರ ಸಂಖ್ಯೆ ಬಹಳಷ್ಟು ಹೆಚ್ಚಲಿದೆ. ಎಸ್​ಬಿಐ ರಿಸರ್ಚ್ ವರದಿ ಪ್ರಕಾರ 2024-25ರ ವರ್ಷದಲ್ಲಿ ಉತ್ತರಪ್ರದೇಶಕ್ಕೆ 25,000 ಕೋಟಿ ರೂನಷ್ಟು ತೆರಿಗೆ ಆದಾಯ ಹೆಚ್ಚಳವಾಗಲಿದೆ.

Advertisement

ನವದೆಹಲಿ: ಉತ್ತರಪ್ರದೇಶ ರಾಜ್ಯದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದಲ್ಲಿ ನಿನ್ನೆ ಪ್ರಾಣ ಪ್ರತಿಷ್ಠಾಪನಾ (Ram temple desecration ceremony) ಕಾರ್ಯಕ್ರಮ ನಡೆದಿದೆ. ಇಡೀ ದೇಶಕ್ಕೆ ದೇಶವೇ ನಿನ್ನೆ ಕೇಸರೀಮಯವಾಗಿತ್ತು. ರಾಮಮಂದಿರ ಬಹಳಷ್ಟು ಭಾರತೀಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಯೋಧ್ಯೆಗೆ ಹೋಗಿ ಬಾಲರಾಮನನ್ನು ಕಣ್ತುಂಬಿಸಿಕೊಳ್ಳಬೇಕೆಂದು ಹಪಹಪಿಸುತ್ತಿರುವವರ ಸಂಖ್ಯೆ ಬಹಳ ದೊಡ್ಡದಿದೆ. ಇದು ಉತ್ತರಪ್ರದೇಶ ರಾಜ್ಯದ ಪ್ರವಾಸೋದ್ಯಮಕ್ಕೆ ಸಿಗಲಿರುವ ಭಾರೀ ಪುಷ್ಟಿಯ ವಿಚಾರವಾಗಿದೆ. ಗ್ಲೋಬಲ್ ಬ್ರೋಕರೇಜ್ ಸಂಸ್ಥೆಯಾದ ಜೆಫ್ರೀಸ್ ಈ ರಾಮಮಂದಿರದಿಂದ ಭಾರತದ ಪ್ರವಾಸೋದ್ಯಮಕ್ಕೆ ಎಷ್ಟು ಲಾಭ ತರಬಹುದು ಎಂದು ವಿಶ್ಲೇಷಿಸಿ ವರದಿ ಬಿಡುಗಡೆ ಮಾಡಿತ್ತು. ಈಗ ಎಸ್​ಬಿಐ ರಿಸರ್ಚ್ ಸಂಸ್ಥೆಯ ವರದಿಯೊಂದರ ಪ್ರಕಾರ ರಾಮಮಂದಿರದ ಫಲವಾಗಿ ಉತ್ತರಪ್ರದೇಶಕ್ಕೆ ಒಂದು ವರ್ಷದಲ್ಲಿ 25,000 ಕೋಟಿ ರೂನಷ್ಟು ತೆರಿಗೆ ಲಾಭ ತರಬಹುದು.

2025ರ ಅಂತ್ಯದೊಳಗೆ ಉತ್ತರಪ್ರದೇಶದಲ್ಲಿ ಪ್ರವಾಸಿಗರು ಮಾಡುವ ವೆಚ್ಚ 4 ಲಕ್ಷ ಕೋಟಿ ರೂ ದಾಟಿ ಹೋಗಬಹುದು. 2024-25ರ ಹಣಕಾಸು ವರ್ಷದಲ್ಲಿ ಉತ್ತರಪ್ರದೇಶದ ತೆರಿಗೆ ಆದಾಯ 20,000 ದಿಂದ 25,000 ಕೋಟಿ ರೂನಷ್ಟು ಹೆಚ್ಚಾಗಬಹುದು ಎಂದು ಎಸ್​ಬಿಐ ರಿಸರ್ಚ್ ಜನವರಿ 21ರಂದು ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಲಾಗಿದೆ.

ಉತ್ತರಪ್ರದೇಶ ನಾಗಾಲೋಟ

ಒಂದು ಕಾಲದಲ್ಲಿ ಬಿಮಾರು ರಾಜ್ಯಗಳಲ್ಲಿ ಒಂದೆಂದು ಹಂಗಿಸಲಾಗುತ್ತಿದ್ದ ಉತ್ತರಪ್ರದೇಶ ಈಗ ಬಹಳಷ್ಟು ಬೆಳವಣಿಗೆ ಕಾಣುತ್ತಿದೆ. 2028ರಲ್ಲಿ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿ ಉತ್ತರಪ್ರದೇಶದ ಪಾತ್ರ ಮಹತ್ವದ್ದಿರಲಿದೆ. 2027ರಲ್ಲಿ 500 ಬಿಲಿಯನ್ ಡಾಲರ್ ಜಿಡಿಪಿ ಗಾತ್ರ ಮುಟ್ಟಬಹುದು ಎಂದು ನಿರೀಕ್ಷಿಸಲಾಗಿರುವ ಎರಡು ರಾಜ್ಯಗಳಲ್ಲಿ ಉತ್ತರಪ್ರದೇಶವೂ ಒಂದು. ಮಹಾರಾಷ್ಟ್ರ ಮತ್ತೊಂದು ರಾಜ್ಯವಾಗಿದೆ.

ಉತ್ತರಪ್ರದೇಶ ಮತ್ತು ಮಹಾರಾಷ್ಟ್ರ ಭಾರತದ ಅತಿದೊಡ್ಡ ರಾಜ್ಯಗಳ ಪೈಕಿ ಸೇರಿದೆ. ಮಹಾರಾಷ್ಟ್ರಕ್ಕೆ ಮುಂಬೈ ನಗರದ ಅನುಕೂಲ ಇದೆ. ಉತ್ತರಪ್ರದೇಶಕ್ಕೆ ಹೆಚ್ಚು ಆದಾಯ ತರಬಲ್ಲ ಪ್ರಮುಖ ನಗರ ಇಲ್ಲ. ನವದೆಹಲಿ ಪಕ್ಕದ ನೋಯ್ಡಾ, ಘಾಜಿಯಾಬಾದ್ ಮುಂತಾದ ಪ್ರದೇಶಗಳು ಹೆಚ್ಚಿನ ಆದಾಯ ತರುತ್ತವೆ. ಈಗ ಧಾರ್ಮಿಕ ಸ್ಥಳಗಳಾದ ಅಯೋಧ್ಯೆ ಮತ್ತು ವಾರಾಣಸಿ ಉತ್ತರಪ್ರದೇಶದ ಪ್ರವಾಸೋದ್ಯಮಕ್ಕೆ ಪುಷ್ಟಿ ಕೊಡಲಿದ್ದು ಆರ್ಥಿಕತೆಯ ಬೆಳವಣಿಗೆಯ ವೇಗ ಹೆಚ್ಚಿಸಬಹುದು.

ಉತ್ತರಪ್ರದೇಶದ ಆರ್ಥಿಕತೆ ನಾರ್ವೆಯಂತಹ ದೇಶವನ್ನು ಮೀರಿಸಬಹುದು ಎಂಬ ಎಣಿಕೆ ಇದೆ.

Advertisement
Share this on...