ಸನಾತನ ಧರ್ಮೀಯರ ನಂಬಿಕೆಯ ಕೇಂದ್ರವಾದ ರಾಮಸೇತು (Ram Setu) ವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಬೇಕೆಂಬ ಬೇಡಿಕೆ ಶೀಘ್ರದಲ್ಲೇ ಈಡೇರಲಿದೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಶೀಘ್ರದಲ್ಲೇ ರಾಮಸೇತುವನ್ಮ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಿದೆ. ಅದರ ಪ್ರಕ್ರಿಯೆ ನಡೆಯುತ್ತಿದೆ.
ಈ ಐತಿಹಾಸಿಕ ಸೇತುವೆಯನ್ನು ರಾಷ್ಟ್ರೀಯ ಲ ಸ್ಮಾರಕವನ್ನಾಗಿ ಘೋಷಿಸುವ ಪ್ರಕ್ರಿಯೆ ಸಂಸ್ಕೃತಿ ಸಚಿವಾಲಯದಲ್ಲಿ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ (Central Government) ಸುಪ್ರೀಂ ಕೋರ್ಟ್ (Supreme Court) ಗೆ ತಿಳಿಸಿದೆ.
Centre tells Supreme Court the process to declare ‘Ram Sethu’ a national heritage monument is currently underway in the ministry of Culture.
Supreme Court allows BJP leader Subramanian Swamy to file additional materials related to the issue with the Ministry
— ANI (@ANI) January 19, 2023
ಇದಕ್ಕೆ ಸಂಬಂಧಿಸಿದಂತೆ ಬೇರೆ ಯಾವುದೇ ದಾಖಲೆ ಅಥವಾ ಸಾಮಗ್ರಿ ಇದ್ದರೆ ಅದನ್ನು ಸಂಸ್ಕೃತಿ ಸಚಿವಾಲಯಕ್ಕೆ ನೀಡಬಹುದು ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರಿಗೆ ಸುಪ್ರೀಂ ಕೋರ್ಟ್ ಹೇಳಿದೆ. ಸ್ವಾಮಿ ಅವರು ಬಯಸಿದರೆ ಹೆಚ್ಚುವರಿ ವಿಷಯಗಳನ್ನು ಸಚಿವಾಲಯದ ಮುಂದೆ ಇಡಬಹುದು ಎಂದು ನ್ಯಾಯಾಲಯ ಹೇಳಿದೆ. ಈ ಬಗ್ಗೆ ಸುಬ್ರಮಣಿಯನ್ ಸ್ವಾಮಿ ತಾವು ತಮ್ಮ ಮಾತನ್ನು ಅದಾಗಲೇ ಕೇಂದ್ರ ಸರ್ಕಾರದ ಮುಂದಿಟ್ಟಿದ್ದೇನೆ ಎಂದು ಹೇಳಿದ್ದಾರೆ.
ಸುಬ್ರಮಣಿಯನ್ ಸ್ವಾಮಿ ಮಾತನಾಡುತ್ತ, “ಸಚಿವರು ನನ್ನನ್ನು ಭೇಟಿಯಾಗಲು ಬಯಸಿದರೆ, ಅವರು ಭೇಟಿ ಮಾಡಬಹುದು. ಮಂತ್ರಿಗಳು ನನ್ನನ್ನು ಭೇಟಿ ಮಾಡಲು ಬಯಸದಿದ್ದರೆ, ನಾನು ಕೂಡ ಯಾರನ್ನೂ ಭೇಟಿ ಮಾಡಲು ಬಯಸುವುದಿಲ್ಲ. ನಾವು ಒಂದೇ ಪಕ್ಷದಲ್ಲಿದ್ದೇವೆ. ಈ ವಿಷಯವನ್ನು ನಮ್ಮ ಪ್ರಣಾಳಿಕೆಯಲ್ಲೂ ಇದೆ. ಅವರು (ಸಂಸ್ಕೃತಿ ಸಚಿವಾಲಯ) 6 ವಾರಗಳಲ್ಲಿ ನಿರ್ಧರಿಸಲಿ” ಎಂದಿದ್ದಾರೆ.
ರಾಮಸೇತುವನ್ನು ಐತಿಹಾಸಿಕ ಸ್ಮಾರಕವನ್ನಾಗಿ ಗುರುತಿಸುವಂತೆ ಆಗ್ರಹಿಸಿ ಬಿಜೆಪಿ ರಾಜ್ಯಸಭಾ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ ಅರ್ಜಿ ಸಲ್ಲಿಸಿದ್ದರು. ಇದರ ನಂತರ, 2020 ರಲ್ಲಿ, ಅವರು ಈ ಅರ್ಜಿಯನ್ನು ಶೀಘ್ರವಾಗಿ ವಿಚಾರಣೆಗೆ ಒತ್ತಾಯಿಸಿದ್ದರು.
ಇದಕ್ಕೂ ಮುನ್ನ 2023ರ ಜನವರಿ 12ರಂದು ಕೇಂದ್ರ ಸರ್ಕಾರವು ಸ್ವಾಮಿ ಅವರ ಅರ್ಜಿಗೆ ಫೆಬ್ರವರಿ ಮೊದಲ ವಾರದಲ್ಲಿ ಉತ್ತರ ನೀಡುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ನ್ಯಾಯಮೂರ್ತಿ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರು ಫೆಬ್ರವರಿ ಎರಡನೇ ವಾರದಲ್ಲಿ ವಿಚಾರಣೆ ನಡೆಸುವಂತೆ ಕೋರಿದ್ದರು. ಆದಾಗ್ಯೂ, ಈ ವಿಷಯವನ್ನು ಗುರುವಾರ (ಜನವರಿ 19, 2023) ವಿಚಾರಣೆಗೆ ಲಿಸ್ಟ್ ಮಾಡಲಾಗಿತ್ತು.
ರಾಮಸೇತು ಅಸ್ತಿತ್ವವನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಾಗಲೇ ನಾನು ಮೊದಲ ಸುತ್ತಿನ ವ್ಯಾಜ್ಯದಲ್ಲಿ ಜಯಗಳಿಸಿದ್ದೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ತಮ್ಮ ಬೇಡಿಕೆಯನ್ನು ಪರಿಗಣಿಸಿ 2017ರಲ್ಲಿ ಸಂಬಂಧಪಟ್ಟ ಸಚಿವರು ಸಭೆ ಕರೆದರೂ ಏನೂ ಆಗಿಲ್ಲ ಎಂದರು.
ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಮೊದಲ ಅವಧಿಯಲ್ಲಿ ಸೇತುಸಮುದ್ರಂ ಜಲಮಾರ್ಗ ಯೋಜನೆಯ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಈ ಹಿಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ವಿಷಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು ಮತ್ತು ನಂತರ 2007 ರಲ್ಲಿ ಯೋಜನೆಯನ್ನು ನಿಷೇಧಿಸಲಾಗಿತ್ತು.
ರಾಮಸೇತು ತಮಿಳುನಾಡಿನ ಆಗ್ನೇಯ ಕರಾವಳಿಯ ಪಂಬನ್ ದ್ವೀಪ ಮತ್ತು ಶ್ರೀಲಂಕಾದ ವಾಯುವ್ಯ ಕರಾವಳಿಯಲ್ಲಿರುವ ಮನ್ನಾರ್ ದ್ವೀಪದ ನಡುವಿನ ಸುಣ್ಣದ ಸೇತುವೆಗಳ ಸರಪಳಿಯಾಗಿದೆ. 48 ಕಿಲೋಮೀಟರ್ ಉದ್ದದ ರಾಮಸೇತುವನ್ನು ಆಡಮ್ಸ್ ಬ್ರಿಡ್ಜ್ ಎಂದೂ ಕರೆಯುತ್ತಾರೆ. ಇತಿಹಾಸಕಾರರ ಪ್ರಕಾರ, 1480 ರಲ್ಲಿ, ಈ ಸೇತುವೆಗೆ ಚಂಡಮಾರುತದಲ್ಲಿ ಸಾಕಷ್ಟು ಹಾನಿಯಾಯಿತು. ಅದಕ್ಕೂ ಮೊದಲು ಜನರು ಕಾಲ್ನಡಿಗೆಯಲ್ಲಿ ಮತ್ತು ವಾಹನಗಳಲ್ಲಿ ಭಾರತ ಮತ್ತು ಶ್ರೀಲಂಕಾಕ್ಕೆ ಹೋಗುತ್ತಿದ್ದರಂತೆ.
ಭಾರತ ಮತ್ತು ಶ್ರೀಲಂಕಾ ನಡುವೆ ಇರುವ ರಾಮಸೇತು ಪ್ರಾಕೃತಿಕ ರಚನೆಯಲ್ಲ ಬದಲಾಗಿ ಅದು ಮನುಷ್ಯರಿಂದ ನಿರ್ಮಿತವಾಗಿದೆ ಎಂದು ಅಮೆರಿಕದ ಸೈನ್ಸ್ ಚಾನೆಲ್ ಸಾಕ್ಷ್ಯಾಧಾರಗಳ ಮೂಲಕ ಹೇಳಿಕೊಂಡಿತ್ತು. ರಾಮಸೇತುವಿನ ಕಲ್ಲುಗಳು ಸುಮಾರು 7000 ವರ್ಷಗಳಷ್ಟು ಹಳೆಯವು ಎಂಬುದಕ್ಕೆ ಅಮೆರಿಕದ ವಿಜ್ಞಾನಿಗಳಿಗೆ ಪುರಾವೆಗಳು ಸಿಕ್ಕಿವೆ ಎಂದೂ ಹೇಳಲಾಗುತ್ತದೆ.