ಕೋಲ್ಕತ್ತಾ: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನ ಗೆಲ್ಲೋದು ಸಹ ಅನುಮಾನವಿದೆ ಎಂದು ಭವಿಷ್ಯ ನುಡಿದಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamata Banerjee), ಧೈರ್ಯವಿದ್ದರೇ ವಾರಣಾಸಿಯಲ್ಲಿ ಬಿಜೆಪಿ ಸೋಲಿಸುವಂತೆ ಸವಾಲು ಹಾಕಿದ್ದಾರೆ.
ಲೋಕಸಭಾ ಚುನಾವಣೆಗೂ (MP Election) ಮುನ್ನ I.N.D.I.A ಒಕ್ಕೂಟದಿಂದ ಹೊರಬಂದ ಬಳಿಕ ಮಮತಾ ಬ್ಯಾನರ್ಜಿ ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಂಗಾಳದ ಮುರ್ಷಿದಾಬಾದ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ದೀದಿ, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನು ಗೆಲ್ಲೋದೂ ಅನುಮಾನವಿದೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್‌ನವರು 300 ಸ್ಥಾನಗಳನ್ನು ಗೆಲ್ಲುತ್ತೇವೆ ಅಂದು ಹೇಳಿಕೊಳ್ಳುತ್ತಿದ್ದಾರೆ. ಆದ್ರೆ ಕನಿಷ್ಠ 40 ಸ್ಥಾನಗಳನ್ನಾದ್ರೂ ಗೆಲ್ತೀರಾ ಅನ್ನೋದು ಅನುಮಾನವಿದೆ. ನಿಮಗೇಕೆ ಇಂತಹ ದುರಹಂಕಾರ? ಧೈರ್ಯವಿದ್ದರೆ ವಾರಣಾಸಿಯಲ್ಲಿ (Varanasi) ಬಿಜೆಪಿಯನ್ನು ಸೋಲಿಸಿ ನೋಡೋಣ? ಎಂದು ಸವಾಲು ಹಾಕಿದರಲ್ಲದೇ, ಕಳೆದ ಬಾರಿ ನೀವು ಗೆದ್ದಿರುವ ಕ್ಷೇತ್ರಗಳಲ್ಲಿಯೂ ಈ ಬಾರಿ ಸೋಲುತ್ತೀರಿ ಎಂದು ಭವಿಷ್ಯ ನುಡಿದಿದ್ದಾರೆ.
ನೀವು ರಾಜಸ್ಥಾನದಲ್ಲಿಯೂ ಗೆದ್ದಿಲ್ಲ. ಮೊದಲು ಹೋಗಿ ಆ ಸ್ಥಾನಗಳನ್ನು ಗೆದ್ದು ತೋರಿಸಿ, ಅಲಹಾಬಾದ್, ವಾರಣಾಸಿಯಲ್ಲೂ ಗೆದ್ದು ತೋರಿಸಿ ನೀವು ಮತ್ತು ನಿಮ್ಮ ಪಕ್ಷಕ್ಕೆ ಎಷ್ಟು ಸಾಮರ್ಥ್ಯವಿದೆ ನಾನೂ ನೋಡ್ತೀನಿ ಎಂದು ಸವಾಲೆಸೆದಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿ ತೃಣಮೂಲ ಕಾಂಗ್ರೆಸ್, I.N.D.I.A ಒಕ್ಕೂಟದಿಂದ ಹೊರ ಬಂದ ಬಳಿಕ ಮಮತಾ ಬ್ಯಾನರ್ಜಿ ಅವರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗಷ್ಟೇ 2019ರ ಲೋಕಸಭಾ ಚುನಾವಣೆ ಮತ್ತು 2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಗಳ ಸಾಧನೆಯನ್ನು ಆಧರಿಸಿ ಸೀಟು ಹಂಚಿಕೆ ಸೂತ್ರವನ್ನು ರೂಪಿಸಬೇಕು ಎಂದು ತೃಣಮೂಲ ಬೇಡಿಕೆ ಮಂಡಿಸಿತ್ತು. ನಂತರ ಸೀಟು ಹಂಚಿಕೆ ಬೇಡಿಕೆಗಳನ್ನು ತಿರಸ್ಕರಿಸಿ ಒಕ್ಕೂಟದಿಂದ ಹೊರಬಂದಿತು.