“ವಿಜಯ್ ಗೆ ಆದ ಸ್ಥಿತಿ ನನಗೂ ಎದುರಾಗಿತ್ತು, ಅವರು ಅನುಭವಿಸಿದ ಕಷ್ಟ ನಾನು ಅನುಭವಿಸಿದ್ದೇನೆ”: ಬೇಸರ ವ್ಯಕ್ತಪಡಿಸಿ ವಿಡಿಯೋ ಹಂಚಿಕೊಂಡ ನಟ ಅನಿರುದ್ಧ್

in FILM NEWS/Kannada News/News/ಸಿನಿಮಾ 117 views

ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಸಾವು ಚಿತ್ರರಂಗಕ್ಕೆ ದೊಡ್ಡ ಆಘಾತವುಂಟು ಮಾಡಿದೆ. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿ, ತನ್ನ ಸಂಚಾರವನ್ನು ಅರ್ಧಕ್ಕೆ ನಿಲ್ಲಿಸಿ ಬಾರದ ಲೋಕಕ್ಕೆ ಸಂಚಾರಿ ವಿಜಯ್ ಹೊರಟು ಹೋಗಿದ್ದಾರೆ.

Advertisement

ವಿಜಯ್ ಸಾವಿನ ಬಳಿಕ ಅನೇಕರು ಚಿತ್ರರಂಗದಲ್ಲಿ ವಿಜಯ್‌ಗೆ ಸಿಗಬೇಕಾದ ಮನ್ನಣೆ, ಅವಕಾಶ ಸಿಗಲಿಲ್ಲ ಎಂದು ಹೇಳುತ್ತಿದ್ದಾರೆ. ಸ್ಯಾಂಡಲ್‌ವುಡ್‌ ಅದ್ಭುತ ಪ್ರತಿಭೆ ವಿಜಯ್ ಆದರೆ ಅವರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ನಟ ಅನಿರುದ್ಧ ಕೂಡ ವಿಜಯ್ ಬಗ್ಗೆ ಮಾತನಾಡಿ ಬೇಸರ ಹೊರಹಾಕಿದ್ದಾರೆ. ವಿಜಯ್ ಪಟ್ಟ ಕಷ್ಟವನ್ನು ನಾನು ಅನುಭವಿಸಿದ್ದೇನೆ ಎಂದಿರುವ ಅನಿರುದ್ಧ ಚಿತ್ರರಂಗದ ಈ ದುಸ್ಥಿತಿ ಬೇಗ ನಿಲ್ಲಲಿ ಎಂದು ಕೇಳಿಕೊಂಡಿದ್ದಾರೆ.

ಇದು ದೊಡ್ಡ ದುರಂತ

‘ಸಂಚಾರಿ ವಿಜಯ್ ಇಷ್ಟು ಬೇಗ ದೂರ ಆಗಿದ್ದು ದೊಡ್ಡ ದುರಂತ. ಸಂಚಾರಿ ವಿಜಯ್ ನಮ್ಮನ್ನು ಸಂಪೂರ್ಣವಾಗಿ ಬಿಟ್ಟು ಹೋಗಿಲ್ಲ. ಸಿನಿಮಾಗಳ ಮೂಲಕ, ಅವರ ಅಂಗಾಂಗಗಳನ್ನು ಕೆಲವರಿಗೆ ದಾನ ಮಾಡಿದ್ದರಿಂದ ನಮ್ಮ ಜೊತೆ ಸದಾ ಇರುತ್ತಾರೆ. ಸಂಕಷ್ಟ ಕಾಲದಲ್ಲೂ ಅವರ ಕುಟುಂಬದವರು ಅಂಗಾಂಗ ದಾನ ಮಾಡುವ ನಿರ್ಧಾರ ತೆಗೆದುಕೊಂಡಿದ್ದಕ್ಕೆ ನಮ್ಮ ಕುಟುಂಬದ ಪರವಾಗಿ ಕೋಟಿ ಕೋಟಿ ನಮನ ತಿಳಿಸುತ್ತೇನೆ.’

ದಯವಿಟ್ಟು ಹೆಲ್ಮೆಟ್ ಧರಿಸಿ

‘ಬೇಸರದ ಸಂಗತಿ ಎಂದರೆ ವಿಜಯ್ ಅವರು ಅಪಘಾತದ ಸಮಯದಲ್ಲಿ ಹೆಲ್ಮೆಟ್ ಧರಿಸದೆ ಇದ್ದಿದ್ದು. ದ್ವಿಚಕ್ರವಾಹನ ಓಡಿಸುವಾಗ ಹೆಲ್ಮೆಟ್ ಧರಿಸಿ ಎಂದು ಕೈಮುಗಿದು ಕೇಳಿಕೊಳ್ಳುತ್ತೇನೆ. ವಿಜಯ್ ತುಂಬಾ ಪ್ರತಿಭಾವಂತ ಕಲಾವಿದರು, ರಾಷ್ಟ್ರಪ್ರಶಸ್ತಿ ವಿಜೇತರು. ಆದರೆ ಅವರಿಗೆ ಅಷ್ಟೊಂದು ಅವಕಾಶ ಸಿಗಲಿಲ್ಲ, ಸಿನಿಮಾಗಳು ಇರಲಿಲ್ಲ.’

ಅವರ ವಿಡಿಯೋ ನೋಡಿ

ವಿಜಯ್ ಪಟ್ಟ ಕಷ್ಟವನ್ನು ನಾನು ಅನುಭವಿಸಿದ್ದೇನೆ

‘ಆ ಒಂದು ಹಂತವನ್ನು ನಾನು ಕೂಡ ಅನುಭವಿಸಿದ್ದೇನೆ. ನಾನು ಕೂಡ ನೋಡಿದ್ದೇನೆ. ನಿಮ್ಮ ಸಿನಿಮಾ ಚೆನ್ನಾಗಿ ಇದೆ, ಅಭಿನಯ ಚೆನ್ನಾಗಿದೆ ಎಂದು ತುಂಬಾ ಜನ ಹೇಳ್ತಾರೆ. ಆದರೆ ಅವಕಾಶ ಸಿಗಲ್ಲ. ಮಾರುಕಟ್ಟೆಯಲ್ಲೂ ಮಾತುಗಳು ಕೇಳಿಬರುತ್ತೆ, ಉತ್ತಮ ಕಲಾವಿದರು ಆದರೆ ನಿಮ್ಮ ಮೇಲೆ ಅಷ್ಟು ಹೂಡಿಕೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ. ಇಂಥ ಮಾತುಗಳ ಜೊತೆಗೆ ಸಾಕಷ್ಟು ಅವಮಾನ ಆಗುತ್ತೆ. ಈ ದುಸ್ಥಿತಿ ಆದಷ್ಟು ಬೇಗ ನಿಲ್ಲಬೇಕು’ ಎಂದು ಕೇಳಿಕೊಂಡಿದ್ದಾರೆ.

ಮಲಯಾಳಂ ಚಿತ್ರರಂಗ ಮಾದರಿಯಾಗಲಿ

‘ಮಲಯಾಳಂ ಚಿತ್ರರಂಗ ನೋಡಿದಾಗ ಅವರ ಸಿನಿಮಾಗಳು, ಕಥೆಗಳನ್ನು ಗಮನಿಸಿದ್ರೆ ಅವರು ತುಂಬಾ ಮುಂದೆ ಹೋಗಿದ್ದಾರೆ. ನಾವು ಕೂಡ ಮುಂದುವರೆಯಬೇಕು. ಅಲ್ಲಿ ಸೌಂದರ್ಯ, ಲಕ್ಷಣ ಬದಲು ಪ್ರತಿಭೆಗೆ ಅವಕಾಶ ಕೊಡುತ್ತಾರೆ. ಆ ರೀತಿಯ ಸುಸ್ಥಿತಿ ನಮ್ಮ ಚಿತ್ರರಂಗದಲ್ಲೂ ನಿರ್ಮಾಣ ಆಗಬೇಕು.’

‘ರಾಷ್ಟ್ರಪ್ರಶಸ್ತಿ, ರಾಜ್ಯ ಪ್ರಶಸ್ತಿ ಸಿಕ್ಕ ಮೇಲೆ ನಿರ್ಧಿಷ್ಟವಾದ ಗೌರವ ಧನ ಅಂತ ಸರ್ಕಾರ ನೀಡುತ್ತೆ ಆದರೆ ಅದು ಅದು ಸಾಕಾಗಲ್ಲ. ನಿರ್ಧಿಷ್ಟವಾದ ಪೆನ್ಶನ್ ನೀಡಿದ್ರೆ ಒಳ್ಳೆಯದು.’ ಎಂದಿದ್ದಾರೆ.

ಪ್ರತಿಭಾವಂತರಿಗೆ ಅವಕಾಶ ಸಿಗಬೇಕು

‘ನಿರ್ಮಾಪಕರು, ಕಲಾವಿದರ ಸಂಘಗಳಲ್ಲಿ ಶಿಬಿರ ನಡೆಸಿ, ಪ್ರತಿಭಾವಂತರನ್ನು ಕರೆಸಿ ಅನುಭವ ಹಂಚಿಕೊಳ್ಳುವ ಅವಕಾಶ ಕಲ್ಪಸಿಕೊಡಬೇಕು. ಅದಕ್ಕೆ ಸರಿಯಾಗಿ ಗೌರವ ಧನ ನೀಡಬೇಕು. ರಾಜ್ಯದ ಬೇರೆ ಬೇರೆ ಕಡೆಯಿಂದ ಚಿತ್ರರಂಗಕ್ಕೆ ಬರ್ತಾರೆ, ಇಂಥ ಶಿಬಿರಗಳನ್ನು ಮಾಡಿದಾಗ ಅವರಿಗೂ ದಾರಿ ಗೊತ್ತಾಗುತ್ತೆ’ ಎಂದಿದ್ದಾರೆ.

ವೀಕ್ಷಕರಲ್ಲಿ ಅನಿರುದ್ಧ ಮನವಿ

‘ಲೋ ಬಜೆಟ್ ಸಿನಿಮಾಗಳು ನಿರ್ಮಾಣ ಆಗಬೇಕು. ಆ ಸಿನಿಮಾಗಳಲ್ಲಿ ಅವರಿಗೂ ಅವಕಾಶ ನೀಡಬೇಕು. ವೀಕ್ಷಕರಲ್ಲೂ ಮನವಿ ಮಾಡಿಕೊಳ್ಳುತ್ತೇನೆ ಇಂಥ ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ಇಂಥ ಪ್ರತಿಭೆಗಳಿಂದ ನಾವು ವಿದೇಶಿ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತೀವೆ’ ಎಂದು ಹೇಳಿದ್ದಾರೆ.

Advertisement
Share this on...