ಬಾಗಲಕೋಟೆ: ಆಕ್ಸಿಜನ್ ಬೆಡ್ ಸಿಗದೆ ಕೋವಿಡ್ನಿಂದ ಅಣ್ಣನನ್ನು ಕಳೆದುಕೊಂಡ ವ್ಯಕ್ತಿಯೊಬ್ಬ ಶಾಸಕರಿಗೆ ಕರೆ ಮಾಡಿದರೆ, ಅವರಿಗೆ ಸಮಾಧಾನ ಹೇಳುವ ಬದಲು ‘ನಾಲಾಯಕ್ ಇಡು ಫೋನ್.. ದೊಡ್ಡ ಕಿಸಾಮತಿ ಮಾಡ್ತಿ’ ಎಂದು ಬೈದಿರುವ ಆಡಿಯೋ ವೈರಲ್ ಆಗಿದೆ.
ಅಶೋಕ ದೊಂಡಿಬಾಗ ಗಾಯಕವಾಡ ಎಂಬುವರ ಸಹೋದರ ಕೋವಿಡ್ಗೆ ಬಲಿಯಾಗಿದ್ದಾರೆ. ನಿಗದಿತ ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಸಿಗದೆ ತನ್ನ ಅಣ್ಣನನ್ನು ಕಳೆದುಕೊಂಡ ದುಃಖದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಅವರಿಗೆ ಫೋನ್ ಮಾಡಿದ್ದ ಅಶೋಕ, ‘ನೀವು ಶಾಸಕರು ಇದ್ದೀರಿ. ಆಕ್ಸಿಜನ್ ವ್ಯವಸ್ಥೆ ಮಾಡಬೇಕು, ಸರ್ಕಾರಿ ದವಾಖಾನೆ ಮುಂದೆ ಕೂರಬೇಕು. ಮನೆಯಲ್ಲಿ ಕೂರಲಿ ಎಂದು ನಿಮ್ಮನ್ನು ಆರಿಸಿ ಕಳಿಸಿಲ್ಲ’ ಎನ್ನುತ್ತಿದ್ದಂತೆ ಗರಂ ಆದ ಶಾಸಕರು, ‘ಶಾಣ್ಯಾ ಅದಿ ಫೋನ್ ಇಡು, ನಾಲಾಯಕ್ ಇಡು ಪೋನ್, ದೊಡ್ಡ ಕಿಸಾಮತಿ ಮಾಡ್ತಿ…’ ಎಂದು ಬೈದಿದ್ದಾರೆ.
ಅಶೋಕ ದೊಂಡಿಬಾಗ ಅವರ ಅಣ್ಣ ಸಂಜಯ್ ದೊಂಡಿಬಾಗ(41) ಕೋವಿಡ್ನಿಂದ ಶನಿವಾರ ಮೃತಪಟ್ಟಿದ್ದರು. ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ನಿವಾಸಿ ಆಗಿದ್ದ ಸಂಜಯ್ಗೆ ಆಕ್ಸಿಜನ್ ಬೆಡ್ ಸಿಕ್ಕಿರಲಿಲ್ಲ. ಬೆಡ್ಗಾಗಿ ಸಂಜಯ್ ಕುಟುಂಬ ಬಾಗಲಕೋಟೆ, ಜಮಖಂಡಿ, ವಿಜಯಪುರ ಎಲ್ಲೆಡೆ ಅಲೆದಾಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೂ ಆಕ್ಸಿಜನ್ ಸಿಗದೆ ವಿಜಯಪುರದಲ್ಲಿ ಸಂಜಯ್ ಮೃತಪಟ್ಟಿದ್ದರು. ಮೃತರಿಗೆ ಇಬ್ಬರು ಮಕ್ಕಳಿದ್ದಾರೆ. ಇದೇ ಕಾರಣಕ್ಕೆ ಮೃತನ ಸಹೋದರ ಶಾಸಕರಿಗೆ ಈ ಅವ್ಯವಸ್ಥೆಯಿಂದ ನನ್ನಣ್ಣ ಸತ್ತ ಎಂದು ಹೇಳಲು ಪೋನ್ ಮಾಡಿದ್ದ. ಶಾಸಕರು ಸಮಾಧಾನಿಸುವ ಬದಲು ಸಿಡುಮಿಡಿಗೊಂಡು ಬೈದಾಡಿದ್ದಾರೆ.
ಕೋವಿಡ್ನಿಂದ ಮೃತಪಟ್ಟವನ ಸಹೋದರನಿಗೆ ಶಾಸಕರ ಬೈಗುಳ ಆಡಿಯೋ ವೈರಲ್ ಆಗಿದೆ. ಅದೆಂಥಾ ಮಾತು ಹೇಳಿಬಿಟ್ಟಿರಿ ಶಾಸಕರೇ? ನಿಮ್ಮನ್ನು ಆಯ್ಕೆ ಮಾಡಿದ್ದಕ್ಕೂ ಸಾರ್ಥಕ ಆಯ್ತು ಬಿಡಿ. ಸಾವಿನ ಮನೆಯ ದುಃಖ ಅನುಭವಿಸೋರಿಗೆ ಗೊತ್ತು ಎಂದು ಶಾಸಕರ ನಡೆಯನ್ನ ಸಾರ್ವಜನಿಕರು ಟೀಕಿಸಿದ್ದಾರೆ.