ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ಬಹುತೇಕ ಪೂರ್ಣಗೊಂಡಿದೆ. ಕೊನೆಯ ಹಂತದ ಸಿದ್ಧತೆಗಳು ನಡೆಯುತ್ತಿದ್ದು, ಇದೇ ಜನವರಿ 22ರಂದು ಭವ್ಯ ರಾಮಮಂದಿರ (Ayodhya Ram Mandir) ಲೋಕಾರ್ಪಣೆಗೊಳ್ಳಲಿದೆ.
ದೇಶಾದ್ಯಂತ ಗಣ್ಯಾತಿಗಣ್ಯರಿಗೆ ಅಯೋಧ್ಯಾ ರಾಮಮಂದಿರದ ಉದ್ಘಾಟನೆಗೆ ಆಹ್ವಾನ ನೀಡಲಾಗುತ್ತಿದ್ದು, ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನೂ ರಾಮಮಂದಿರದ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅವರಿಗೆ ಆಹ್ವಾನ ಕಳುಹಿಸಿದೆ ಎಂದು ಮೂಲಗಳು ತಿಳಿಸಿದ್ದು, ಆದರೆ ಅಯೋಧ್ಯಾ ರಾಮಮಂದಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ನ ಹಿರಿಯ ನಾಯಕರು ಭಾಗವಹಿಸ್ತಾರಾ ಇಲ್ವಾ ಅನ್ನೋದನ್ನು ಕಾದು ನೋಡಬೇಕಿದೆ.
ಈ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರು ಈ ಕಾರ್ಯಕ್ರಮಕ್ಕೆ ಹೋದರೆ ಇದು ಒಂದು ಧಾರ್ಮಿಕ ಕಾರ್ಯಕ್ರಮಕ್ಕೆ ಹೋದಂತಾಗುತ್ತೆ, ತಾವು ಜಾತ್ಯಾತೀತರು ಅಂದಮೇಲೆ ಇಂತಹ ಕಾರ್ಯಕ್ರಮಗಳಿಗೆ ಹೋದರೆ ತಮ್ಮ ಸೆಕ್ಯೂಲರಿಸಮ್ಮಿಗೆ ಧಕ್ಕೆ ಬಂದು ಅಲ್ಪಸಂಖ್ಯಾತರ ಮತ ಬರದಿದ್ದರೆ ಹೇಗೆ ಎಂಬ ಲೆಕ್ಕಾಚಾರವೂ ನಡೆಯುತ್ತಿದ್ದು ರಾಮಮಂದಿರ ಉದ್ಘಾಟನೆಗೆ ಹೋಗದಿರಲು ನಿರ್ಧರಿಸಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ, ಲೋಕಸಭೆಯ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಅವರಿಗೆ ವೈಯಕ್ತಿಕ ಆಹ್ವಾನ ಕಳುಹಿಸಲಾಗಿದ್ದು ಮಾತ್ರವಲ್ಲದೇ ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್, ಎಚ್.ಡಿ ದೇವೇಗೌಡ ಅವರಿಗೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.
ಅಯೋಧ್ಯಾ ರಾಮಜನ್ಮಭೂಮಿ ಟ್ರಸ್ಟ್ಗೆ ಸಂಬಂಧಿಸಿದ ನಿಯೋಗವು ಈ ಆಹ್ವಾನಗಳನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಇತರ ವಿರೋಧ ಪಕ್ಷದ ನಾಯಕರಿಗೂ ಆಹ್ವಾನ ಕಳುಹಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ವಿವಿಧ ಧರ್ಮಗಳ ಪೂಜ್ಯ ಸಂತರಲ್ಲದೆ, ವಿವಿಧ ಕ್ಷೇತ್ರಗಳಲ್ಲಿ ದೇಶಕ್ಕೆ ಕೀರ್ತಿ ತಂದ ಎಲ್ಲ ಪ್ರಮುಖರಿಗೆ ಆಹ್ವಾನ ನೀಡಲಾಗುವುದು ಎಂದು ಟ್ರಸ್ಟ್ ತಿಳಿಸಿದೆ. ವಿವಿಧ ಪಂಗಡಗಳ ಸುಮಾರು 4,000 ಸಂತರನ್ನು ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.
ಇನ್ನು ಅಯೋಧ್ಯಾ ಮಂದಿರದ ಲೋಕಾರ್ಪಣೆ ವೇಳೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಹೊಸ ತೀರ್ಥ ಕ್ಷೇತ್ರ ಪುರಂನಲ್ಲಿ (ಬಾಗ್ ಬಿಜೈಸಿ) ‘ಟೆಂಟ್ ಸಿಟಿ’ ಸ್ಥಾಪಿಸಲಾಗಿದೆ. ಇದರಲ್ಲಿ ಆರು ಕೊಳವೆ ಬಾವಿಗಳು, ಆರು ಅಡುಗೆ ಕೋಣೆಗಳು ಮತ್ತು 10 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ ಎಂದು ಟ್ರಸ್ಟ್ ಹೇಳಿದೆ.
ಇನ್ನು ದೇಶಾದ್ಯಂತ ಸುಮಾರು 150 ವೈದ್ಯರು ಈ ಆಸ್ಪತ್ರೆಯಲ್ಲಿ ತಮ್ಮ ಸೇವೆಯನ್ನು ಸರದಿ ಆಧಾರದ ಮೇಲೆ ಒದಗಿಸಲು ಒಪ್ಪಿಕೊಂಡಿದ್ದಾರೆ.