ಮೊರಾದಾಬಾದ್ ಸೇರಿದಂತೆ ಇತರೆ ಜಿಲ್ಲೆಗಳಿಂದ ಸುಮಾರು ಎಂಟು ದಂಪತಿಗಳು ತಮಗೆ ಇರುವ ಜೀವ ಬೆದರಿಕೆಯನ್ನು ಉಲ್ಲೇಖಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸರಳ್ ಶ್ರೀವಾಸ್ತವ ಅವರು ಈ ಆದೇಶ ನೀಡಿದ್ದಾರೆ.
ಅಲಹಾಬಾದ್: ಭದ್ರತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ಹಿಂದೂ ಮುಸ್ಲಿಂ ದಂಪತಿಳಿಗೆ ಅಲಹಾಬಾದ್ ಹೈಕೋರ್ಟ್ (Allahabad High Court) ಅರ್ಜಿಯನ್ನು ತಿರಸ್ಕರಿಸುವ ಮೂಲಕ ಶಾಕ್ ನೀಡಿದೆ.
ಹಿಂದೂ-ಮುಸ್ಲಿಂ ದಂಪತಿ ಭದ್ರತೆ ಕೋರಿ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಈ ದಂಪತಿಗಳ ವಿವಾಹವು ಉತ್ತರ ಪ್ರದೇಶದ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆಯ ನಿಬಂಧನೆಗಳಿಗೆ ಅನುಗುಣವಾಗಿಲ್ಲ ಎಂದು ಹೇಳುವ ಮೂಲಕ ಹೈಕೋರ್ಟ್ ವಿವಾಹವನ್ನು ಅಮಾನ್ಯಗೊಳಿಸಿ ರಕ್ಷಣೆ ನೀಡಲು ನಿರಾಕರಿಸಿದೆ.
ಮೊರಾದಾಬಾದ್ ಸೇರಿದಂತೆ ಇತರೆ ಜಿಲ್ಲೆಗಳಿಂದ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸರಳ್ ಶ್ರೀವಾಸ್ತವ ಅವರು ಈ ಆದೇಶ ನೀಡಿದ್ದಾರೆ. ಸುಮಾರು ಎಂಟು ದಂಪತಿಗಳು ತಮಗೆ ಇರುವ ಜೀವ ಬೆದರಿಕೆಯನ್ನು ಉಲ್ಲೇಖಿಸಿ ತಮಗೆ ಬದುಕಲು ರಕ್ಷಣೆಯನ್ನು ನೀಡುವಂತೆ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಕೇಳಿದ್ದರು. ವೈವಾಹಿಕ ಜೀವನದಲ್ಲಿ ಯಾರ ಹಸ್ತಕ್ಷೇಪವನ್ನೂ ನಿಷೇಧಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿತ್ತು.
ಆದರೆ ಇದು ವಿರುದ್ಧ ಧರ್ಮದ ಜೋಡಿಗಳ ವಿವಾಹ ಪ್ರಕರಣಗಳು ಎಂದು ಅಲಹಾಬಾದ್ ನ್ಯಾಯಾಲಯ ಹೇಳಿದ್ದು, ವಿವಾಹದ ಮೊದಲು ಧಾರ್ಮಿಕ ಮತಾಂತರದ ಕಾನೂನು ಪ್ರಕ್ರಿಯೆಯನ್ನು ಅನುಸರಿಸಲಾಗಿಲ್ಲ, ಆದ್ದರಿಂದ ಈ ವಿವಾಹಗಳು ಕಾನೂನಿನ ಅಡಿಯಲ್ಲಿ ಮಾನ್ಯವಾಗಿಲ್ಲ. ಈ ಮದುವೆಗಳಲ್ಲಿ ಮತಾಂತರ ವಿರೋಧಿ ಕಾನೂನುಗಳನ್ನು ಅನುಸರಿಸಲಾಗಿಲ್ಲ. ಆದಾಗ್ಯೂ, ಅರ್ಜಿದಾರರು ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿ ಮದುವೆಯಾದರೆ, ಅವರು ಹೊಸದಾಗಿ ರಕ್ಷಣೆ ಪಡೆಯಬಹುದು ಎಂದು ಹೈಕೋರ್ಟ್ ಹೇಳಿದೆ.
2021ರಲ್ಲಿ ಅಂಗೀಕರಿಸಲಾದ ಮತಾಂತರ ವಿರೋಧಿ ಕಾನೂನು ತಪ್ಪು ನಿರೂಪಣೆ, ಬಲವಂತ, ವಂಚನೆ, ಅನಗತ್ಯ ಪ್ರಭಾವ, ಬಲವಂತ ಮತ್ತು ಪ್ರಚೋದನೆಯಿಂದ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಅಕ್ರಮವಾಗಿ ಮತಾಂತರವಾಗುವುದನ್ನು ನಿಷೇಧಿಸುತ್ತದೆ ಎಂದು ಅಲಹಾಬಾದ್ ನ್ಯಾಯಾಲಯ ಹೇಳಿದೆ.
ಒಟ್ಟು ಎಂಟು ಅರ್ಜಿಗಳ ಪೈಕಿ ಐವರು ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಮದುವೆಯಾಗಿದ್ದರು. ಆದರೆ ಮೂವರು ಹಿಂದೂ ಯುವಕರು ತಮ್ಮ ಧರ್ಮವನ್ನು ಕಾನೂನುಬದ್ಧವಾಗಿ ಪರಿವರ್ತಿಸದೆ ಮುಸ್ಲಿಂ ಮಹಿಳೆಯರನ್ನು ವಿವಾಹವಾಗಿದ್ದರು.
ಮಧ್ಯಪ್ರದೇಶ, ಗುಜರಾತ್, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಉತ್ತರಪ್ರದೇಶ ರಾಜ್ಯಗಳ ಮತಾಂತರ ವಿರೋಧಿ ಕಾನೂನುಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿವೆ, ಈ ಕುರಿತು ಸುಪ್ರೀಂ ಕೋರ್ಟ್‌ನಿಂದ ಇನ್ನೂ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ.